Old/New Testament
ದುಷ್ಟರು ತಮ್ಮ ಜೀವಿತವನ್ನು ಬದಲಾಯಿಸಬೇಕು
59 ಇಗೋ, ನಿಮ್ಮನ್ನು ರಕ್ಷಿಸಲು ಯೆಹೋವನು ಶಕ್ತನಾಗಿದ್ದಾನೆ. ನೀವು ಸಹಾಯಕ್ಕಾಗಿ ಪ್ರಾರ್ಥಿಸುವಾಗ ಆತನು ನಿಮ್ಮನ್ನು ಆಲೈಸುವನು. 2 ಆದರೆ ನಿಮ್ಮ ಪಾಪಗಳೇ ನಿಮ್ಮನ್ನು ದೇವರಿಂದ ದೂರ ಮಾಡಿರುತ್ತವೆ. ಯೆಹೋವನು ತನ್ನ ಮುಖವನ್ನು ಮರೆಮಾಡಿಕೊಳ್ಳುವಂತೆ ನೀವು ಪಾಪಗಳನ್ನು ಮಾಡಿದ್ದರಿಂದ, ಆತನು ನಿಮಗೆ ಕಿವಿಗೊಡುವುದಿಲ್ಲ. 3 ನಿಮ್ಮ ಕೈಗಳು ಮಲಿನವಾಗಿವೆ; ಅವು ರಕ್ತಮಯವಾಗಿವೆ. ನಿಮ್ಮ ಬೆರಳುಗಳು ಅಪರಾಧಗಳಿಂದ ಅಶುದ್ಧವಾಗಿವೆ. ನಿಮ್ಮ ಬಾಯಿಗಳಿಂದ ನೀವು ಸುಳ್ಳಾಡುತ್ತೀರಿ. ನಿಮ್ಮ ನಾಲಿಗೆಯು ಕೆಟ್ಟ ಮಾತುಗಳನ್ನಾಡುತ್ತದೆ. 4 ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ. 5 ವಿಷದ ಹಾವಿನ ಮೊಟ್ಟೆಯಿಂದ ವಿಷದ ಹಾವಿನ ಮರಿಗಳು ಹೊರಬರುವಂತೆ ಅವರ ದುಷ್ಟತನವು ಹೊರಬರುವದು. ಆ ಮೊಟ್ಟೆಯನ್ನು ನೀವು ತಿಂದರೆ ಸಾಯುವಿರಿ. ಆ ಮೊಟ್ಟೆಯನ್ನು ಒಡೆದರೆ ವಿಷದ ಹಾವು ಹೊರಬರುವದು.
ಜನರು ಹೇಳುವ ಸುಳ್ಳು, ಜೇಡರ ಬಲೆಯಂತಿರುವದು. 6 ಜೇಡರ ಬಲೆಗಳ ನೂಲಿನಿಂದ ಬಟ್ಟೆ ನೇಯಲಾಗದು. ಆ ಬಲೆಯಿಂದ ನಿಮ್ಮ ಶರೀರವನ್ನು ಮುಚ್ಚಲಾಗುವದಿಲ್ಲ.
ಕೆಲವರು ತಮ್ಮ ಕೈಗಳಿಂದ ಇತರರಿಗೆ ಕೇಡುಮಾಡುವರು. 7 ಅವರು ತಮ್ಮ ಕಾಲುಗಳಿಂದ ಓಡುತ್ತಾ ದುಷ್ಕೃತ್ಯಗಳನ್ನು ಮಾಡುವರು; ನಿರಪರಾಧಿಗಳನ್ನು ಕೊಲ್ಲಲು ಆತುರಪಡುವರು. ಅವರ ಆಲೋಚನೆಯು ಕೆಟ್ಟದ್ದೇ. ದೊಂಬಿ, ಲೂಟಿಗಳೇ ಅವರ ಜೀವನಶೈಲಿಯಾಗಿವೆ. 8 ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು.
ಇಸ್ರೇಲರ ಪಾಪವೇ ಸಂಕಟಕ್ಕೆ ಕಾರಣ
9 ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ.
ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ
ನಾವು ಬೆಳಕಿಗಾಗಿ ಕಾಯಬೇಕಾಗಿದೆ.
ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ
ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.
10 ನಾವು ಕಣ್ಣಿಲ್ಲದವರಂತಿದ್ದೇವೆ.
ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ.
ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ.
ಹಗಲಿನಲ್ಲಿಯೂ ನಮಗೆ ಕಾಣದು.
ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ.
11 ನಾವೆಲ್ಲಾ ಗುಣುಗುಟ್ಟುತ್ತೇವೆ.
ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರಿವಾಳಗಳಂತೆ ಮೂಲುಗುತ್ತಿದ್ದೇವೆ.
ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ.
ಆದರೆ ಧರ್ಮವೇ ಇಲ್ಲ.
ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ.
ಆದರೆ ರಕ್ಷಣೆಯು ಬಹುದೂರವಿದೆ.
12 ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ.
ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ.
ಹೌದು, ನಾವು ಈ ಕಾರ್ಯಗಳನ್ನು
ಮಾಡಿ ದೋಷಿಗಳಾಗಿದ್ದೇವೆ.
13 ನಾವು ಪಾಪಮಾಡಿ
ಯೆಹೋವನಿಂದ ದೂರ ಹೋಗಿದ್ದೇವೆ.
ಆತನಿಂದ ದೂರವಾಗಿ
ಆತನನ್ನು ತೊರೆದುಬಿಟ್ಟಿದ್ದೇವೆ.
ನಾವು ದುಷ್ಟತನವನ್ನೂ
ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ.
ನಮ್ಮ ಹೃದಯಗಳಲ್ಲಿ
ದುಷ್ಟಯೋಜನೆಗಳನ್ನು ಹಾಕಿರುತ್ತೇವೆ.
14 ನ್ಯಾಯವು ನಮ್ಮಿಂದ ತೊಲಗಿಹೋಗಿದೆ.
ಸತ್ಯವು ಬೀದಿ ಪಾಲಾಗಿದೆ.
ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು.
15 ಸತ್ಯವು ಹೊರಟುಹೋಯಿತು.
ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ.
ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು
ಯೆಹೋವನು ಬೇಸರಗೊಂಡಿದ್ದಾನೆ.
16 ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು
ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ.
ಆದ್ದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ
ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು.
17 ಯೆಹೋವನು ಯುದ್ಧ ಸನ್ನದ್ಧನಾದನು.
ಆತನು ಒಳ್ಳೆಯತನವೆಂಬ ಕವಚ,
ರಕ್ಷಣೆಯೆಂಬ ಶಿರಸ್ತ್ರಾಣ,
ಶಿಕ್ಷೆಯೆಂಬ ಬಟ್ಟೆ ಮತ್ತು
ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ.
18 ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು.
ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು.
19 ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು.
ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು.
ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ
ಯೆಹೋವನು ಬೇಗನೆ ಬರುವನು.
20 ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು.
ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.
21 ಯೆಹೋವನು ಹೇಳುವುದೇನೆಂದರೆ: “ನಾನಂತೂ ಆ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವೆನು. ನನ್ನ ವಾಗ್ದಾನದ ಮಾತುಗಳೂ ನಾನು ಇರಿಸಿದ ನನ್ನ ಆತ್ಮವೂ ನಿಮ್ಮಿಂದ ಎಂದಿಗೂ ತೊಲಗದು. ಅವು ನಿಮ್ಮ ಮೊಮ್ಮಕ್ಕಳ ತನಕವೂ ಇರುವವು. ಅವು ನಿನ್ನೊಂದಿಗೆ ಈಗಲೂ ಸದಾಕಾಲವೂ ಇರುವವು.
ದೇವರ ಆಗಮನ
60 “ಜೆರುಸಲೇಮೇ, ಏಳು, ಪ್ರಕಾಶಿಸು!
ನಿನ್ನ ಪ್ರಕಾಶವೆಂಬಾತನು ಬರುತ್ತಾನೆ.
ಯೆಹೋವನ ಮಹಿಮೆಯು ನಿನ್ನ ಮೇಲೆ ಪ್ರಕಾಶಿಸುವುದು.
2 ಕತ್ತಲೆಯು ಈಗ ಭೂಮಿಯನ್ನು ಕವಿದಿದೆ.
ಜನರು ಕತ್ತಲೆಯಲ್ಲಿದ್ದಾರೆ.
ಆದರೆ ಯೆಹೋವನ ಪ್ರಕಾಶವು ನಿನ್ನ ಮೇಲಿರುವದು.
ಆತನ ಮಹಿಮೆಯು ನಿನ್ನ ಮೇಲೆ ಬರುವದು.
3 ಜನಾಂಗಗಳು ನಿನ್ನ ಬೆಳಕಿನ ಕಡೆಗೆ ಬರುವರು.
ಅರಸರುಗಳು ನಿನ್ನ ಪ್ರಕಾಶಮಾನವಾದ ಬೆಳಕಿನತ್ತ ಬರುವರು.
4 ನಿನ್ನ ಸುತ್ತಲೂ ನೋಡು.
ಜನರು ಸುತ್ತಲೂ ನಿನ್ನ ಬಳಿಗೆ ಬಂದು ಸೇರುವದನ್ನು ನೋಡು.
ಅವರು ದೂರ ಪ್ರಾಂತ್ಯದಿಂದ ಬರುವ ನಿನ್ನ ಗಂಡುಮಕ್ಕಳಾಗಿದ್ದಾರೆ.
ನಿನ್ನ ಕುಮಾರಿಯರು ಅವರೊಂದಿಗೆ ಬರುತ್ತಿದ್ದಾರೆ.
5 “ಆಗ ನೀನು ನಿನ್ನ ಜನರನ್ನು ನೋಡುವೆ.
ನಿನ್ನ ಮುಖವು ಸಂತೋಷದಿಂದ ಪ್ರಕಾಶಿಸುವದು.
ಮೊದಲು ನೀನು ಭಯಪಡುವೆ.
ಆ ಬಳಿಕ ನೀನು ಉತ್ಸಾಹಪಡುವೆ.
ಸಮುದ್ರದಾಚೆ ಇರುವ ಐಶ್ವರ್ಯವು ನಿನ್ನ ಮುಂದೆ ರಾಶಿ ಹಾಕಲ್ಪಡುವದು.
ಜನಾಂಗಗಳ ನಿಕ್ಷೇಪವು ನಿನಗೆ ದೊರೆಯುವುದು.
6 ಮಿದ್ಯಾನಿನ ಮತ್ತು ಏಫದ ಒಂಟೆಗಳ ಹಿಂಡು
ರಾಜ್ಯವನ್ನು ದಾಟುವವು.
ಶೆಬ ರಾಜ್ಯದ ಒಂಟೆಗಳ ಸಾಲು
ಚಿನ್ನ ಮತ್ತು ಧೂಪವನ್ನು ಹೊತ್ತುಕೊಂಡು ನಿನ್ನ ಬಳಿಗೆ ಬರುವವು.
ಜನರು ಯೆಹೋವನಿಗೆ ಸ್ತೋತ್ರಗಾನ ಹಾಡುವರು.
7 ಜನರು ಕೇದಾರಿನ ಎಲ್ಲಾ ಕುರಿಗಳನ್ನು ಒಟ್ಟುಗೂಡಿಸಿ ನಿನಗೆ ಕೊಡುವರು.
ನೆಬಾಯೋತಿನಿಂದ ಟಗರುಗಳನ್ನು ನಿನಗೆ ತರುವರು.
ನೀನು ನಿನ್ನ ವೇದಿಕೆಯ ಮೇಲೆ ಅವುಗಳನ್ನು ಯಜ್ಞಮಾಡುವೆ.
ಆಗ ನಾನು ಸ್ವೀಕರಿಸುವೆನು.
ನನ್ನ ಸುಂದರವಾದ ಆಲಯವನ್ನು
ಇನ್ನೂ ಸೌಂದರ್ಯಗೊಳಿಸುವೆನು.
8 ಜನರನ್ನು ನೋಡು!
ಆಕಾಶದ ಮೋಡವು ಹಾರಿಹೋಗುವಂತೆ ಅವರು ನಿನ್ನ ಬಳಿಗೆ ತ್ವರಿತವಾಗಿ ಬರುತ್ತಿದ್ದಾರೆ.
ತಮ್ಮ ಗೂಡುಗಳಿಗೆ ಹಾರುವ ಪಾರಿವಾಳಗಳಂತೆ ಅವರಿರುತ್ತಾರೆ.
9 ದೂರ ಪ್ರಾಂತ್ಯಗಳು ನನಗಾಗಿ ಕಾದಿವೆ.
ದೊಡ್ಡ ಸರಕು ಸಾಗಿಸುವ ಹಡಗುಗಳು ಹೊರಡಲು ತಯಾರಾಗಿವೆ.
ಈ ಹಡಗುಗಳು ದೂರ ಪ್ರಾಂತ್ಯದಲ್ಲಿರುವ ನಿನ್ನ ಮಕ್ಕಳನ್ನು ಕರೆತರಲು ತಯಾರಾಗಿವೆ.
ಅವರು ಬೆಳ್ಳಿಬಂಗಾರಗಳನ್ನು ತಮ್ಮೊಂದಿಗೆ ತಂದು
ಇಸ್ರೇಲಿನ ಪರಿಶುದ್ಧನಾದ ಯೆಹೋವನನ್ನು ಘನಪಡಿಸುವರು.
ಯೆಹೋವನು ನಿನಗೆ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುವನು.
10 ಬೇರೆ ದೇಶದ ಮಕ್ಕಳು ನಿನ್ನ ಗೋಡೆಗಳನ್ನು ಮತ್ತೆ ಕಟ್ಟುವರು.
ಅವರ ಅರಸರುಗಳು ನಿನ್ನ ಸೇವೆ ಮಾಡುವರು.
“ನಾನು ಕೋಪಗೊಂಡಾಗ ನಿನ್ನನ್ನು ಬಾಧಿಸಿದೆನು.
ಆದರೆ ಈಗ ನಿನಗೆ ಕರುಣೆ ತೋರುವೆನು.
ನಿನ್ನನ್ನು ಆದರಿಸುವೆನು.
11 ನಿನ್ನ ದ್ವಾರಗಳು ಯಾವಾಗಲೂ ತೆರೆಯಲ್ಪಡುತ್ತವೆ.
ಅವು ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಮುಚ್ಚಲ್ಪಡುವದಿಲ್ಲ.
ರಾಜ್ಯಗಳೂ ರಾಜರುಗಳೂ ತಮ್ಮ ಐಶ್ವರ್ಯವನ್ನು ನಿನ್ನ ಬಳಿಗೆ ತರುವರು.
12 ನಿನ್ನ ಸೇವೆಮಾಡದ ಯಾವ ರಾಜ್ಯವಾಗಲಿ ನಾಶಮಾಡಲ್ಪಡುವದು.
ಹೌದು, ಆ ರಾಜ್ಯಗಳು ಸರ್ವನಾಶವಾಗುವವು.
13 ಲೆಬನೋನಿನ ಎಲ್ಲಾ ಅಮೂಲ್ಯವಸ್ತುಗಳನ್ನು ನಿನಗೆ ಕೊಡಲಾಗುವುದು.
ಜನರು ದೇವದಾರು ಮರಗಳನ್ನೂ ಇತರ ವಿಶೇಷ ಮರಗಳನ್ನೂ ನಿನಗೆ ತಂದುಕೊಡುವರು.
ಈ ಮರಗಳಿಂದ ತೊಲೆಗಳನ್ನು ಮಾಡಿ
ನನ್ನ ಪವಿತ್ರ ಆಲಯವನ್ನು ಸೌಂದರ್ಯಗೊಳಿಸುವರು.
ಅದು ನನ್ನ ಸಿಂಹಾಸನದ ಮುಂದಿರುವ ಪಾದಪೀಠದಂತಿರುವದು.
ಅದಕ್ಕೆ ನಾನು ಹೆಚ್ಚಾದ ಗೌರವ ಕೊಡುವೆನು.
14 ಹಿಂದಿನ ದಿವಸಗಳಲ್ಲಿ ಜನರು ನಿನಗೆ ಹಿಂಸೆ ಕೊಟ್ಟರು.
ಆ ಜನರು ಈಗ ನಿನ್ನ ಮುಂದೆ ಅಡ್ಡಬೀಳುವರು.
ಗತಿಸಿದ ದಿವಸಗಳಲ್ಲಿ ಜನರು ನಿನ್ನನ್ನು ದ್ವೇಷಿಸಿದರು.
ಆದರೆ ಈಗ ಅವರು ನಿನ್ನ ಕಾಲಿನ ಮುಂದೆ ಬೀಳುವರು.
ಅವರು ನಿನ್ನನ್ನು ‘ಯೆಹೋವನ ಪಟ್ಟಣ,’ ‘ಇಸ್ರೇಲಿನ ಪರಿಶುದ್ಧನಾದ ಯೆಹೋವನ ಚೀಯೋನ್’ ಎಂದು ಕರೆಯುವರು.
15 “ನೀನು ಮತ್ತೆಂದಿಗೂ ಒಬ್ಬಂಟಿಗಳಾಗಿರುವದಿಲ್ಲ.
ನೀನು ಮತ್ತೆಂದಿಗೂ ದ್ವೇಷಿಸಲ್ಪಡುವದಿಲ್ಲ.
ನೀನು ತಿರುಗಿ ಬರಿದಾಗುವುದಿಲ್ಲ.
ನಿನ್ನನ್ನು ಶಾಶ್ವತವಾದ ಮಹೋನ್ನತಳನ್ನಾಗಿ ಮಾಡುವೆನು.
ನೀನು ನಿತ್ಯಕಾಲಕ್ಕೂ ಸಂತೋಷದಲ್ಲಿರುವೆ.
16 ಜನಾಂಗಗಳು ನಿನಗೆ ಬೇಕಾದದ್ದೆಲ್ಲವನ್ನು ಕೊಡುವರು.
ಒಂದು ಮಗು ಹೇಗೆ ತಾಯಿಯ ಹಾಲನ್ನು ಕುಡಿಯುವದೋ
ಅದೇ ರೀತಿಯಲ್ಲಿ ಅರಸರುಗಳಿಂದ ನೀನು ಧನವನ್ನು ಕುಡಿಯುವಿ.
ಆಗ ಯೆಹೋವನಾದ ನಾನೇ ನಿನ್ನನ್ನು ರಕ್ಷಿಸಿದೆನೆಂದು ತಿಳಿದುಕೊಳ್ಳುವಿ.
ಆಗ ಯಾಕೋಬ್ಯರ ಮಹಾದೇವರು ನಿಮ್ಮನ್ನು ಕಾಪಾಡುವನೆಂದು ತಿಳಿದುಕೊಳ್ಳುವಿರಿ.
17 “ಈಗ ನಿನ್ನಲ್ಲಿ ತಾಮ್ರವಿದೆ.
ನಾನು ನಿನಗೆ ಬಂಗಾರವನ್ನು ತರುವೆನು.
ಈಗ ನಿನ್ನಲ್ಲಿ ಕಬ್ಬಿಣವಿದೆ.
ನಾನು ನಿನಗೆ ಬೆಳ್ಳಿಯನ್ನು ತರುವೆನು.
ನಿನ್ನ ಮರವನ್ನು ತಾಮ್ರವನ್ನಾಗಿ ಪರಿವರ್ತಿಸುವೆನು.
ನಿನ್ನ ಕಲ್ಲುಬಂಡೆಗಳನ್ನು ಕಬ್ಬಿಣವನ್ನಾಗಿ ಮಾಡುವೆನು.
ನಿಮ್ಮ ಶಿಕ್ಷೆಯನ್ನು ಸಮಾಧಾನವನ್ನಾಗಿ ಮಾಡುವೆನು.
ಈಗ ನಿನ್ನನ್ನು ಹಿಂಸಿಸುವ ಜನರು
ನಿನಗೆ ಸಹಾಯ ಮಾಡುವರು.
18 ಇನ್ನು ಮುಂದೆ ಮತ್ತೆ ಹಿಂಸಾಚಾರದ ವರ್ತಮಾನವು ನಿನ್ನಲ್ಲಿರುವದಿಲ್ಲ.
ಜನರು ಇನ್ನೆಂದಿಗೂ
ನಿನ್ನ ಮೇಲೆರಗಿ ನಿನ್ನನ್ನು ದೋಚುವದಿಲ್ಲ.
ನಿನ್ನ ಗೋಡೆಗಳಿಗೆ ‘ರಕ್ಷಣೆ’ ಎಂದೂ
ದ್ವಾರಗಳಿಗೆ ‘ಸ್ತೋತ್ರ’ವೆಂದೂ ಹೆಸರಿಡುವಿ.
19 “ಇನ್ನು ಮುಂದೆ ಹಗಲು ಹೊತ್ತಿನಲ್ಲಿ ಸೂರ್ಯನು ನಿನಗೆ ಬೆಳಕಾಗಿರುವದಿಲ್ಲ;
ರಾತ್ರಿಕಾಲದಲ್ಲಿ ಚಂದ್ರನ ಪ್ರಕಾಶವು ನಿನಗೆ ಬೆಳಕಾಗಿರುವದಿಲ್ಲ.
ಯಾಕೆಂದರೆ ಯೆಹೋವನೇ ನಿನ್ನ ನಿತ್ಯಕಾಲದ ಬೆಳಕಾಗಿರುವನು.
ನಿನ್ನ ದೇವರು ನಿನ್ನ ಮಹಿಮೆಯಾಗಿರುವನು.
20 ನಿನ್ನ ಸೂರ್ಯನು ಮತ್ತೆ ಅಸ್ತಮಾನವಾಗುವದಿಲ್ಲ.
ನಿನ್ನ ಚಂದ್ರನು ಮತ್ತೆಂದಿಗೂ ಕಪ್ಪಾಗುವದಿಲ್ಲ.
ಯಾಕೆಂದರೆ ಯೆಹೋವನು ನಿನ್ನ ನಿರಂತರದ ಬೆಳಕಾಗಿರುವನು.
ನಿನ್ನ ದುಃಖದ ಕಾಲವು ಅಂತ್ಯವಾಗುವದು.
21 “ನಿನ್ನ ಜನರೆಲ್ಲಾ ನೀತಿಯಲ್ಲಿ ಜೀವಿಸುವರು.
ಅವರು ಭೂಮಿಗೆ ಶಾಶ್ವತವಾದ ಬಾಧ್ಯಸ್ತರಾಗುವರು.
ಆ ಜನರನ್ನು ನಾನೇ ನಿರ್ಮಿಸಿದೆನು.
ನಾನು ನನ್ನ ಸ್ವಂತ ಕೈಗಳಿಂದ ನಿರ್ಮಿಸಿದ ಆಶ್ಚರ್ಯಕರವಾದ ಸಸಿಗಳಂತೆ ಅವರಿರುವರು.
22 ಅತ್ಯಂತ ಚಿಕ್ಕ ಕುಟುಂಬವು ದೊಡ್ಡ ಕುಲವಾಗುವದು.
ಅತ್ಯಂತ ಎಳೆಯ ಕುಟುಂಬವು ಬಲಾಢ್ಯವಾದ ಜನಾಂಗವಾಗುವದು.
ತಕ್ಕ ಕಾಲದಲ್ಲಿ ಯೆಹೋವನಾದ ನಾನು ಬೇಗನೆ ಬರುವೆನು.
ಇವುಗಳೆಲ್ಲಾ ನೆರವೇರುವಂತೆ ಮಾಡುವೆನು.”
ಯೆಹೋವನ ಸ್ವಾತಂತ್ರ್ಯ ಸಂದೇಶ
61 ಯೆಹೋವನ ಸೇವಕನು ಹೇಳುವುದೇನೆಂದರೆ, “ಒಡೆಯನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ. ಬಡವರಿಗೆ ಸುವಾರ್ತೆಯನ್ನು ತಿಳಿಸಲೂ ದುಃಖಿಸುವವರನ್ನು ಸಂತೈಸಲೂ ಆತನು ನನ್ನನ್ನು ಆರಿಸಿರುತ್ತಾನೆ. ಸೆರೆಹಿಡಿಯಲ್ಪಟ್ಟಿರುವವರನ್ನು ಸ್ವತಂತ್ರರಾದರೆಂದು ಹೇಳಲೂ ಕೈದಿಗಳನ್ನು ಬಿಡುಗಡೆ ಮಾಡಲ್ಪಟ್ಟವರೆಂದು ಹೇಳಲೂ ದೇವರು ನನ್ನನ್ನು ಕಳುಹಿಸಿದನು. 2 ಯೆಹೋವನು ತಾನು ಕರುಣೆ ತೋರುವ ಸಮಯದ ಕುರಿತಾಗಿ ಸಾರುವಂತೆ ನನ್ನನ್ನು ಕಳುಹಿಸಿದನು. ದುಷ್ಟರನ್ನು ಶಿಕ್ಷಿಸುವ ಸಮಯವನ್ನು ಸಾರಲು ದೇವರು ನನ್ನನ್ನು ಕಳುಹಿಸಿದನು. ದುಃಖಪಡುವ ಜನರನ್ನು ಸಂತೈಸಲು ದೇವರು ನನ್ನನ್ನು ಕಳುಹಿಸಿದನು. 3 ಚೀಯೋನಿನಲ್ಲಿ ದುಃಖಿಸುವ ಜನರ ಬಳಿಗೆ ನನ್ನನ್ನು ಕಳುಹಿಸಿದನು. ನಾನು ಅವರನ್ನು ಉತ್ಸವಕ್ಕಾಗಿ ಸಿದ್ಧಪಡಿಸುವೆನು. ಅವರ ತಲೆಯ ಮೇಲಿರುವ ಬೂದಿಯನ್ನು ತೆಗೆದುಹಾಕಿ ಅದರ ಬದಲಾಗಿ ಕಿರೀಟವನ್ನು ತೊಡಿಸುವೆನು. ಅವರ ದುಃಖವನ್ನು ತೆಗೆದುಹಾಕಿ ಅವರಿಗೆ ತೈಲವೆಂಬ ಸಂತೋಷವನ್ನು ಅನುಗ್ರಹಿಸುವೆನು. ಅವರ ದುಃಖವನ್ನೆಲ್ಲಾ ನಿವಾರಿಸಿ ಉತ್ಸವಕ್ಕಾಗಿ ಅವರಿಗೆ ಬಟ್ಟೆಯನ್ನು ತೊಡಿಸುವೆನು. ಅವರನ್ನು ಒಳ್ಳೆಯ ಮರಗಳೆಂತಲೂ ದೇವರ ಆಶ್ಚರ್ಯಕರವಾದ ಸಸಿಯೆಂತಲೂ ಕರೆಯುವದಕ್ಕಾಗಿ ದೇವರೇ ನನ್ನನ್ನು ಕಳುಹಿಸಿದನು.”
4 ಆ ಸಮಯದಲ್ಲಿ ಹಾಳುಬಿದ್ದ ಹಳೇ ಪಟ್ಟಣಗಳು ಮತ್ತೆ ಕಟ್ಟಲ್ಪಡುವವು. ಅವುಗಳು ಮುಂಚೆ ಹೇಗಿದ್ದವೋ ಹಾಗೆಯೇ ಹೊಸದಾಗಿ ಕಾಣಿಸುವವು. ಹಲವು ವರ್ಷಗಳ ಕಾಲ ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳು ಹೊಸದಾಗಿ ಕಾಣಿಸುವವು.
5 ಆಗ ನಿಮ್ಮ ವೈರಿಗಳು ನಿಮ್ಮ ಬಳಿಗೆ ಬಂದು ನಿಮ್ಮ ಕುರಿಮಂದೆಯನ್ನು ಮೇಯಿಸುವರು. ನಿಮ್ಮ ವೈರಿಗಳ ಮಕ್ಕಳು ನಿಮ್ಮ ಹೊಲಗದ್ದೆಗಳಲ್ಲಿಯೂ ತೋಟಗಳಲ್ಲಿಯೂ ಕೆಲಸ ಮಾಡುವರು. 6 ಆಗ ನಿಮ್ಮನ್ನು “ಯೆಹೋವನ ಯಾಜಕರು” ಎಂತಲೂ “ದೇವರ ಸಹಾಯಕರು” ಎಂತಲೂ ಕರೆಯುವರು. ಭೂಲೋಕದ ಎಲ್ಲಾ ದೇಶಗಳ ಐಶ್ವರ್ಯವು ನಿಮ್ಮ ಕೈಸೇರುವುದರಿಂದ ನೀವು ಹೆಚ್ಚಳಪಡುವಿರಿ.
7 ಗತಿಸಿದ ದಿವಸಗಳಲ್ಲಿ ಜನರು ನಿಮ್ಮನ್ನು ನಾಚಿಕೆಗೆ ಗುರಿಪಡಿಸಿದರು; ಕೆಟ್ಟಮಾತುಗಳನ್ನಾಡಿದರು; ಬೇರೆ ಜನರಿಗಿಂತ ನೀವು ಹೆಚ್ಚಾಗಿ ನಾಚಿಕೆಗೆ ಒಳಗಾದಿರಿ. ಅದಕ್ಕಾಗಿ ನಿಮ್ಮ ಭೂಮಿಯಲ್ಲಿ ಬೇರೆ ಸ್ಥಳಗಳಿಗಿಂತ ಎರಡರಷ್ಟು ಹೆಚ್ಚು ಕೊಯಿಲು ಮಾಡುವಿರಿ. ನೀವು ಶಾಶ್ವತವಾದ ಸಂತೋಷವನ್ನು ಪಡೆದುಕೊಳ್ಳುವಿರಿ. 8 ಯಾಕೆಂದರೆ ನಾನೇ ಯೆಹೋವನು. ನಾನು ನ್ಯಾಯದಲ್ಲಿ ಸಂತೋಷಿಸುವೆನು. ನಾನು ಕದಿಯುವದನ್ನೂ ಎಲ್ಲಾ ದುಷ್ಟತ್ವಗಳನ್ನೂ ದ್ವೇಷಿಸುತ್ತೇನೆ. ಅದಕ್ಕಾಗಿ ನಾನು ಅಂಥಾ ಜನರಿಗೆ ದೊರಕಬೇಕಾದ ಶಿಕ್ಷೆಯನ್ನು ಕೊಡುವೆನು. ನನ್ನ ಜನರೊಂದಿಗೆ ನಿತ್ಯಕಾಲದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. 9 ಎಲ್ಲಾ ಜನಾಂಗಗಳವರು ನನ್ನ ಜನರನ್ನೂ ನನ್ನ ದೇಶದ ಮಕ್ಕಳನ್ನೂ ತಿಳಿದುಕೊಳ್ಳುವರು. ಅವರನ್ನು ಜನರು ನೋಡಿದಾಗ ಯೆಹೋವನು ಅವರನ್ನು ಆಶೀರ್ವದಿಸುತ್ತಿದ್ದಾನೆ ಎಂದು ತಿಳಿಯುವರು.
ದೇವರ ಸೇವಕನು ರಕ್ಷಣೆಯನ್ನು ತರುತ್ತಾನೆ
10 ಯೆಹೋವನು ನನ್ನನ್ನು ಸಂತೋಷಭರಿತನನ್ನಾಗಿ ಮಾಡುತ್ತಾನೆ.
ನನ್ನ ಸಂಪೂರ್ಣ ವ್ಯಕ್ತಿತ್ವವು ನನ್ನ ದೇವರಲ್ಲಿ ಸಂತೋಷಿಸುತ್ತದೆ.
ಯೆಹೋವನು ರಕ್ಷಣೆಯೆಂಬ ವಸ್ತ್ರವನ್ನು ನನಗೆ ತೊಡಿಸಿದ್ದಾನೆ.
ಮದುವೆಯಲ್ಲಿ ಮದುಮಗನು ಧರಿಸಿಕೊಳ್ಳುವ ಬಟ್ಟೆಯಂತೆ ಅದು ನಯವಾಗಿದೆ.
ಯೆಹೋವನು ನನಗೆ ನೀತಿಯೆಂಬ ನಿಲುವಂಗಿಯನ್ನು ತೊಡಿಸಿರುತ್ತಾನೆ.
ಅದು ಮದುಮಗಳು ಮದುವೆಯಲ್ಲಿ ಧರಿಸಿಕೊಳ್ಳುವ ಬಟ್ಟೆಯಂತಿದೆ.
11 ಭೂಮಿಯು ಸಸಿಗಳನ್ನು ಬೆಳೆಸುತ್ತದೆ.
ಜನರು ತೋಟದಲ್ಲಿ ಬೀಜ ಬಿತ್ತುವರು.
ತೋಟವು ಬೀಜವನ್ನು ಬೆಳೆಸುತ್ತದೆ.
ಅದೇ ರೀತಿಯಲ್ಲಿ ಯೆಹೋವನು ಎಲ್ಲಾ ಜನಾಂಗಗಳಲ್ಲಿ ನೀತಿಯನ್ನೂ ಸ್ತೋತ್ರವನ್ನೂ ಬೆಳೆಸುತ್ತಾನೆ.
ನಮಗೋಸ್ಕರ ಪ್ರಾರ್ಥಿಸಿ
3 ಸಹೋದರ ಸಹೋದರಿಯರೇ, ನಮಗೋಸ್ಕರ ಪ್ರಾರ್ಥಿಸಿರಿ. ಪ್ರಭುವಿನ ಉಪದೇಶವು ತ್ವರಿತಗತಿಯಲ್ಲಿ ಹಬ್ಬಲೆಂದು ಪ್ರಾರ್ಥಿಸಿ. ನಿಮ್ಮಂತೆಯೇ ಇತರ ಜನರು ಈ ಉಪದೇಶವನ್ನು ಗೌರವಿಸುವಂತೆ ಪ್ರಾರ್ಥಿಸಿ. 2 ಕೆಟ್ಟವರಾದ ಮತ್ತು ದುಷ್ಟರಾದ ಜನರ ಕೈಯಿಂದ ನಮ್ಮನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ. (ಪ್ರಭುವಿನಲ್ಲಿ ಜನರೆಲ್ಲರೂ ನಂಬಿಕೆಯಿಟ್ಟಿಲ್ಲ.)
3 ಆದರೆ ಪ್ರಭುವು ನಂಬಿಗಸ್ತನು. ಆತನು ನಿಮ್ಮನ್ನು ಬಲಗೊಳಿಸುವನು ಮತ್ತು ಕೆಡುಕನಿಂದ (ಸೈತಾನನಿಂದ) ನಿಮ್ಮನ್ನು ರಕ್ಷಿಸುವನು. 4 ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ. 5 ದೇವರ ಪ್ರೀತಿಯ ಕಡೆಗೂ ಮತ್ತು ಕ್ರಿಸ್ತನ ತಾಳ್ಮೆಯ ಕಡೆಗೂ ನಿಮ್ಮ ಹೃದಯಗಳನ್ನು ಪ್ರಭುವೇ ಮುನ್ನಡೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ಪ್ರತಿಯೊಬ್ಬರು ದುಡಿಯಲಿ
6 ಸಹೋದರ ಸಹೋದರಿಯರೇ, ಕೆಲಸ ಮಾಡದ ವಿಶ್ವಾಸಿಯಿಂದ ನೀವು ದೂರವಿರಬೇಕೆಂದು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಧಿಕಾರದಿಂದ ನಿಮಗೆ ಆಜ್ಞಾಪಿಸುತ್ತಿದ್ದೇವೆ. ನಾವು ನೀಡಿದ ಉಪದೇಶವನ್ನು ಅವರು ಅನುಸರಿಸುವುದಿಲ್ಲ. 7 ನಾವು ಜೀವಿಸುವಂತೆಯೇ ನೀವೂ ಜೀವಿಸಬೇಕೆಂದು ನಿಮಗೆ ಗೊತ್ತಿದೆ. ನಾವು ನಿಮ್ಮ ಜೊತೆಯಲ್ಲಿದ್ದಾಗ ಸೋಮಾರಿಗಳಾಗಿರಲಿಲ್ಲ; 8 ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು. 9 “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು. 10 ನಾವು ನಿಮ್ಮ ಸಂಗಡವಿದ್ದಾಗ, “ಕೆಲಸ ಮಾಡದವನು ಊಟವನ್ನೂ ಮಾಡಕೂಡದು” ಎಂಬ ನಿಯಮವನ್ನು ವಿಧಿಸಿದೆವು.
11 ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ. 12 ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ. 13 ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.
14 ಈ ಪತ್ರದ ಮೂಲಕ ನಿಮಗೆ ತಿಳಿಸಿರುವ ಮಾತುಗಳಿಗೆ ಯಾವನಾದರೂ ವಿಧೇಯನಾಗದಿದ್ದರೆ, ಅವನು ಯಾರೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಅವನ ಸಹವಾಸಮಾಡಬೇಡಿ. ಆಗ ಅವನಿಗೆ ನಾಚಿಕೆ ಆಗಬಹುದು. 15 ಆದರೆ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿ ಹೇಳಿರಿ.
ಕೊನೆಯ ಮಾತುಗಳು
16 ಶಾಂತಿದಾಯಕನಾದ ಪ್ರಭುವು ಎಲ್ಲಾ ಕಾಲಗಳಲ್ಲಿಯೂ ಮತ್ತು ಎಲ್ಲಾ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭುವು ನಿಮ್ಮೆಲ್ಲರೊಂದಿಗಿರಲಿ.
17 ಪೌಲನಾದ ನಾನು ಈಗ ನನ್ನ ಕೈಬರಹದಿಂದ ಈ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ. ನನ್ನ ಪತ್ರಗಳಿಗೆಲ್ಲಾ ಇದೇ ನನ್ನ ಗುರುತು. ಇದೇ ನನ್ನ ಕೈ ಬರಹ.
18 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International