Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 13-15

13 ಜ್ಞಾನಿಯಾದ ಮಗನು ತನ್ನ ತಂದೆಯ ಮಾತುಗಳನ್ನು ಎಚ್ಚರಿಕೆಯಿಂದ ಕೇಳುತ್ತಾನೆ. ಆದರೆ ದುರಾಭಿಮಾನಿಯು ಕೇಳುವುದಿಲ್ಲ.

ಒಳ್ಳೆಯವರು ತಮ್ಮ ಮಾತುಗಳಿಗೆ ಪ್ರತಿಫಲ ಹೊಂದುವರು. ಕೆಡುಕರು ಯಾವಾಗಲೂ ಕೆಟ್ಟದ್ದನ್ನು ಮಾಡಬಯಸುತ್ತಾರೆ.

ಎಚ್ಚರಿಕೆಯಿಂದ ಮಾತಾಡುವವನು ತನ್ನ ಜೀವವನ್ನು ಕಾಪಾಡಿಕೊಳ್ಳುವನು. ಯೋಚಿಸದೆ ಮಾತಾಡುವವನು ನಾಶವಾಗುವನು.

ಸೋಮಾರಿಯ ಆಸೆಗಳೆಲ್ಲಾ ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ. ಕಷ್ಟಪಟ್ಟು ದುಡಿಯುವವನು ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವನು.

ಶಿಷ್ಟರು ಸುಳ್ಳನ್ನು ದ್ವೇಷಿಸುತ್ತಾರೆ. ದುಷ್ಟರು ನಾಚಿಕೆಕರವಾದ ಕೆಲಸ ಮಾಡುವರು.

ನೀತಿಯು ಯಥಾರ್ಥವಂತನನ್ನು ಕಾಪಾಡುವುದು. ಕೆಡುಕತನವು ಪಾಪವನ್ನು ಪ್ರೀತಿಸುವವನನ್ನು ಸೋಲಿಸುವುದು.

ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು.

ಐಶ್ವರ್ಯವಂತರು ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಈಡುಕೊಡಬೇಕಾಗುವುದು. ಆದರೆ ಬಡವನಿಗೆ ಅಂಥಾ ಯಾವ ಬೆದರಿಕೆಗಳೂ ಇರುವುದಿಲ್ಲ.

ಶಿಷ್ಟನು ಪ್ರಕಾಶಮಾನವಾದ ಬೆಳಕಿನಂತಿರುವನು. ದುಷ್ಟನಾದರೋ ನಂದಿಹೋಗುತ್ತಿರುವ ಬೆಳಕಿನಂತಿರುವನು.

10 ದುರಾಭಿಮಾನವು ಕೇವಲ ಜಗಳಕ್ಕೆ ಕಾರಣ. ಬುದ್ಧಿವಾದವನ್ನು ಕೇಳುವವರು ವಿವೇಕಿಗಳಾಗಿದ್ದಾರೆ.

11 ಮೋಸದಿಂದ ಸಂಪಾದಿಸಿದ ಹಣವು ಕ್ಷಯಿಸಿ ಹೋಗುವುದು. ದುಡಿದು ಸಂಪಾದಿಸಿದ ಹಣ ಹೆಚ್ಚುತ್ತಾ ಹೋಗುವುದು.

12 ನಿರೀಕ್ಷೆಯು ನೆರವೇರದಿದ್ದರೆ ಹೃದಯವು ವ್ಯಸನವಾಗಿರುವುದು. ಬಯಸಿದ್ದು ನೆರವೇರಿದರೆ ಆನಂದವು ತುಂಬಿಕೊಳ್ಳುವುದು.

13 ಬುದ್ಧಿಮಾತನ್ನು ಕೇಳದವನು ತನಗೆ ತೊಂದರೆಯನ್ನು ಬರಮಾಡಿಕೊಳ್ಳುವನು. ಬುದ್ಧಿವಾದವನ್ನು ಗೌರವಿಸುವವನು ಪ್ರತಿಫಲವನ್ನು ಹೊಂದುವನು.

14 ಜ್ಞಾನಿಯ ಉಪದೇಶಗಳು ಜೀವದ ಬುಗ್ಗೆಯಾಗಿವೆ; ಮರಣಕರವಾದ ಬಲೆಗಳಿಗೆ ಸಿಕ್ಕಿಕೊಳ್ಳದಂತೆ ಅವು ಸಹಾಯಮಾಡುತ್ತವೆ.

15 ಜನರು ಜಾಣನನ್ನು ಗೌರವಿಸುತ್ತಾರೆ. ಆದರೆ ನಂಬಿಕೆಗೆ ಯೋಗ್ಯನಲ್ಲದವನು ತೊಂದರೆಗೆ ಒಳಗಾಗುವನು.

16 ಜ್ಞಾನಿಯು ವಿವೇಚಿಸಿ ಕಾರ್ಯಮಾಡುವನು; ಮೂಢನಾದರೋ ತನ್ನ ಕಾರ್ಯಗಳಿಂದಲೇ ತನ್ನ ಮೂಢತನವನ್ನು ತೋರಿಸಿಕೊಳ್ಳುತ್ತಾನೆ.

17 ಅಪನಂಬಿಗಸ್ತನಾದ ರಾಯಭಾರಿಯ ಸುತ್ತಲೂ ಕೇಡುಗಳಿವೆ. ನಂಬಿಗಸ್ತನಾದ ರಾಯಭಾರಿಗೆ ಸಮಾಧಾನವಿರುವುದು.

18 ಶಿಕ್ಷೆಯನ್ನು ಕಡೆಗಣಿಸುವವನು ಬಡವನಾಗುವನು; ಅವಮಾನ ಹೊಂದುವನು. ತಿದ್ದುಪಡಿಯನ್ನು ಸ್ವೀಕರಿಸಿಕೊಳ್ಳುವವನು ಗೌರವವನ್ನೂ ಐಶ್ವರ್ಯವನ್ನೂ ಪಡೆದುಕೊಳ್ಳುವನು.

19 ಒಬ್ಬನು ತಾನು ಅಪೇಕ್ಷಿಸಿದ್ದನ್ನು ಪಡೆದುಕೊಂಡರೆ, ಅದರ ಮೇಲೆ ಅವನಿಗೆ ಬಹಳ ಇಷ್ಟವಿರುವುದು. ಮೂಢರು ಕೇಡಿಗೆ ವಿಮುಖರಾಗಲು ಅಸಹ್ಯಪಡುತ್ತಾರೆ.

20 ಜ್ಞಾನಿಗಳೊಂದಿಗೆ ಸ್ನೇಹದಿಂದಿರಿ. ಆಗ ನೀವೂ ಜ್ಞಾನಿಗಳಾಗುವಿರಿ. ಆದರೆ ನೀವು ಜ್ಞಾನಹೀನರನ್ನು ನಿಮ್ಮ ಸ್ನೇಹಿತರನ್ನಾಗಿ ಆಯ್ದುಕೊಂಡರೆ, ನಿಮಗೆ ತೊಂದರೆ ಉಂಟಾಗುವುದು.

21 ಪಾಪಿಗಳು ಹೋದಲ್ಲೆಲ್ಲಾ ಕೇಡು ಅವರನ್ನು ಹಿಂಬಾಲಿಸುವುದು. ಸಜ್ಜನರಿಗಾದರೋ ಒಳ್ಳೆಯದೇ ಆಗುತ್ತದೆ.

22 ಒಳ್ಳೆಯವನಲ್ಲಿ ತನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಕೊಡಲು ಐಶ್ವರ್ಯವಿರುವುದು. ಕಟ್ಟಕಡೆಯಲ್ಲಿ, ಕೆಡುಕರು ಹೊಂದಿರುವದೆಲ್ಲಾ ಒಳ್ಳೆಯವರ ಪಾಲಾಗುವುದು.

23 ಬಡವನ ಭೂಮಿಯು ಯಥೇಚ್ಛವಾಗಿ ಫಲಿಸಬಹುದು. ಆದರೆ ಅನ್ಯಾಯವು ಅದನ್ನು ಕೊಚ್ಚಿಕೊಂಡು ಹೋಗುವುದು.

24 ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸದ ತಂದೆಯು ಅವರಿಗೆ ಶತ್ರುವಿನಂತಿದ್ದಾನೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವ ತಂದೆಯು ಅವರಿಗೆ ಮಿತ್ರನಂತಿದ್ದಾನೆ.

25 ಶಿಷ್ಟನು ತೃಪ್ತಿಯಾಗುವಷ್ಟು ತಿನ್ನುವನು. ಆದರೆ ದುಷ್ಟನು ಹಸಿವೆಯಿಂದಿರುವನು.

14 ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಆದರೆ ಜ್ಞಾನಹೀನಳು ತನ್ನ ಕೈಯಿಂದಲೇ ಅದನ್ನು ಬೀಳಿಸುವಳು.

ಸನ್ಮಾರ್ಗಿಯು ಯೆಹೋವನಲ್ಲಿ ಭಯಭಕ್ತಿಯಿಂದಿರುವನು. ವಕ್ರಮಾರ್ಗಿಯು ಆತನನ್ನು ಕಡೆಗಣಿಸುವನು.

ಮೂಢನ ಮಾತುಗಳು ಅವನಿಗೇ ತೊಂದರೆಯನ್ನು ಉಂಟುಮಾಡುತ್ತವೆ. ಜ್ಞಾನಿಯ ಮಾತುಗಳಾದರೋ ಅವನನ್ನು ಕಾಪಾಡುತ್ತವೆ.

ಎತ್ತುಗಳಿಲ್ಲದಿದ್ದರೆ ಕೊಟ್ಟಿಗೆ ಬರಿದಾಗಿರುವುದು. ದೊಡ್ಡ ಸುಗ್ಗಿಪಡೆಯಲು ಎತ್ತಿನ ಶಕ್ತಿ ಜನರಿಗೆ ಅಗತ್ಯ.

ಸತ್ಯಸಾಕ್ಷಿಯು ಸುಳ್ಳು ಹೇಳುವುದಿಲ್ಲ. ಆದರೆ ಸುಳ್ಳು ಸಾಕ್ಷಿಯು ಸುಳ್ಳನ್ನೇ ಹೇಳುವುದು.

ಜ್ಞಾನದೂಷಕನು ಜ್ಞಾನಕ್ಕಾಗಿ ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ. ಆದರೆ ವಿವೇಕಿಯು ತಿಳುವಳಿಕೆಯನ್ನು ಸರಾಗವಾಗಿ ಕಂಡುಕೊಳ್ಳುವನು.

ಅಜ್ಞಾನಿಯೊಡನೆ ಸ್ನೇಹ ಬೆಳಸಬೇಡಿ; ನಿಮಗೆ ಉಪದೇಶಿಸಲು ಅವನಲ್ಲೇನೂ ಇಲ್ಲ.

ಜಾಣರು ಜ್ಞಾನಿಗಳಾಗಿದ್ದಾರೆ; ಅವರು ವಿವೇಚಿಸಿ ಕಾರ್ಯಗಳನ್ನು ಮಾಡುತ್ತಾರೆ, ಮೂಢರು ಬುದ್ಧಿಹೀನರಾಗಿದ್ದಾರೆ; ತಾವು ಮೋಸದಿಂದ ಬದುಕಬಲ್ಲೆವು ಎಂದು ಅವರು ಯೋಚಿಸಿಕೊಂಡಿದ್ದಾರೆ.

ಮೂಢರಿಗೆ ಪ್ರಾಯಶ್ಚಿತ್ತವು ಹಾಸ್ಯಾಸ್ಪದವಾಗಿದೆ; ಯಥಾರ್ಥವಂತರು ಕ್ಷಮೆಗಾಗಿ ಶ್ರಮಿಸುವರು.

10 ಅವನವನ ವ್ಯಥೆಯು ಅವನವನಿಗೆ ಮಾತ್ರ ತಿಳಿದಿದೆ. ಹಾಗೆಯೇ ಅವನವನ ಸಂತೋಷವು ಅವನವನಿಗೆ ಮಾತ್ರ ತಿಳಿದಿರುತ್ತದೆ.

11 ದುಷ್ಟನ ಮನೆ ನಾಶಕರ; ಶಿಷ್ಟನ ಮನೆ ಅಭಿವೃದ್ಧಿಕರ.

12 ಒಳ್ಳೆಯದೆಂದು ಜನರು ಭಾವಿಸಿಕೊಂಡಿರುವ ಮಾರ್ಗವೊಂದುಂಟು. ಆದರೆ ಅದರ ಅಂತ್ಯ ಮರಣವೇ.

13 ಒಬ್ಬನು ನಗುತ್ತಿರುವಾಗಲೂ ವ್ಯಸನದಿಂದಿರಲು ಸಾಧ್ಯ. ಅಂತೆಯೇ ಆನಂದವೂ ದುಃಖದಲ್ಲಿ ಅಂತ್ಯವಾಗಬಹುದು.

14 ದುಷ್ಟರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ಸಂಪೂರ್ಣವಾಗಿ ದಂಡನೆ ಅನುಭವಿಸುವರು. ಆದರೆ ಸಜ್ಜನರು ತಮ್ಮ ಒಳ್ಳೆಯಕಾರ್ಯಗಳಿಗೆ ಸಂಪೂರ್ಣವಾಗಿ ಪ್ರತಿಫಲ ಪಡೆಯುವರು.

15 ಮೂಢನು ತಾನು ಕೇಳಿದ್ದನ್ನೆಲ್ಲ ನಂಬುವನು. ಆದರೆ ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.

16 ಜ್ಞಾನಿಯು ಎಚ್ಚರವಾಗಿದ್ದು ಆಪತ್ತಿನಿಂದ ದೂರವಿರುತ್ತಾನೆ. ಜ್ಞಾನಹೀನನಾದರೋ ಸೊಕ್ಕಿನಿಂದ ಯೋಚಿಸದೆ ಕಾರ್ಯಗಳನ್ನು ಮಾಡುತ್ತಾನೆ.

17 ಮುಂಗೋಪಿಯು ಮೂಢಕಾರ್ಯಗಳನ್ನು ಮಾಡುವನು. ಕುತಂತ್ರಿಗಳನ್ನು ಜನರು ದ್ವೇಷಿಸುವರು.

18 ದಡ್ಡರಿಗೆ ಮೂಢತನವೇ ಪ್ರತಿಫಲ. ಜಾಣರಾದರೋ ಜ್ಞಾನವೆಂಬ ಕಿರೀಟವನ್ನು ಹೊಂದುವರು.

19 ಕೊನೆಯಲ್ಲಿ ಕೆಟ್ಟವರ ಮೇಲೆ ಒಳ್ಳೆಯವರು ಜಯಗಳಿಸುವರು. ಕೆಟ್ಟವರು ಬಲವಂತದಿಂದ ಒಳ್ಳೆಯವರ ಮುಂದೆ ತಲೆಬಾಗುವರು.

20 ಬಡವನು ತನ್ನ ನೆರೆಯವನಿಂದಲೂ ತಿರಸ್ಕರಿಸಲ್ಪಡುವನು. ಐಶ್ವರ್ಯವಂತನಿಗಾದರೋ ಅನೇಕ ಮಂದಿ ಸ್ನೇಹಿತರು.

21 ನೆರೆಯವರನ್ನು ತಿರಸ್ಕರಿಸುವುದು ತಪ್ಪು. ನೀವು ಸಂತೋಷದಿಂದ ಇರಬೇಕಾದರೆ ಬಡವರಿಗೆ ದಯೆತೋರಿಸಿ.

22 ದುರ್ಮಾರ್ಗಿಯು ದಾರಿ ತಪ್ಪುವನು. ಒಳ್ಳೆಯದನ್ನು ಮಾಡಲು ಪ್ರಯತ್ನಿಸುವವನು ಪ್ರೀತಿಗೂ ಭರವಸೆಗೂ ಪಾತ್ರನಾಗುವನು.

23 ಕಷ್ಟಪಟ್ಟು ದುಡಿದರೆ, ಸಮೃದ್ಧಿಯಿರುವುದು. ಕೇವಲ ಮಾತಾಡಿದರೆ ಬಡತನ ಬರುವುದು.

24 ಜ್ಞಾನಿಗಳಿಗೆ ದೊರೆಯುವ ಪ್ರತಿಫಲ ಐಶ್ವರ್ಯ. ಜ್ಞಾನಹೀನರಿಗೆ ದೊರೆಯುವ ಪ್ರತಿಫಲ ಮೂಢತನ.

25 ಸತ್ಯವನ್ನಾಡುವವನು ಬೇರೆಯವರಿಗೆ ಸಹಾಯಿಸುತ್ತಾನೆ. ಸುಳ್ಳುಗಾರನಾದರೋ ಮತ್ತೊಬ್ಬನಿಗೆ ನೋವನ್ನುಂಟು ಮಾಡುತ್ತಾನೆ.

26 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಕ್ಷೇಮವಾಗಿರುವನು; ಅವನ ಮಕ್ಕಳು ಸಹ ಕ್ಷೇಮವಾಗಿರುವರು.

27 ಯೆಹೋವನಲ್ಲಿರುವ ಭಯಭಕ್ತಿ ಜೀವದ ಬುಗ್ಗೆ. ಅದು ಮನುಷ್ಯನನ್ನು ಮರಣದ ಬಲೆಯಿಂದ ಕಾಪಾಡುತ್ತದೆ.

28 ಅಧಿಕ ಜನಸಂಖ್ಯೆಯು ರಾಜನಿಗೆ ಗೌರವ. ಪ್ರಜೆಗಳೇ ಇಲ್ಲದಿದ್ದರೆ ರಾಜನಿಗೆ ಬೆಲೆಯೇ ಇಲ್ಲ.

29 ತಾಳ್ಮೆಯುಳ್ಳವನು ತುಂಬಾ ಜಾಣ. ಮುಂಗೋಪಿಯು ತಾನು ಮೂಢ ಎಂಬುದನ್ನು ತೋರಿಸಿಕೊಳ್ಳುತ್ತಾನೆ.

30 ಮನಶ್ಯಾಂತಿಯುಳ್ಳವನ ದೇಹವು ಆರೋಗ್ಯದಿಂದಿರುವುದು. ಹೊಟ್ಟೆಕಿಚ್ಚು ದೇಹಕ್ಕೆ ಕಾಯಿಲೆಯನ್ನು ಬರಮಾಡುವುದು.

31 ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನಿಗೇ ಅವಮಾನ ಮಾಡುತ್ತಾನೆ. ಬಡವರಿಗೆ ಕರುಣೆ ತೋರುವವನು ತನ್ನ ಸೃಷ್ಟಿಕರ್ತನನ್ನೇ ಸನ್ಮಾನಿಸುತ್ತಾನೆ.

32 ದುಷ್ಟನು ತನ್ನ ಕೆಡುಕಿನಿಂದಲೇ ಸೋತುಹೋಗುವನು; ಆದರೆ ಒಳ್ಳೆಯವನು ಮರಣದ ಸಮಯದಲ್ಲೂ ಜಯಶಾಲಿಯಾಗುವನು.

33 ವಿವೇಕಿಯು ಯಾವಾಗಲೂ ಜ್ಞಾನದ ಕಾರ್ಯಗಳನ್ನು ಆಲೋಚಿಸುವನು. ಮೂಢನಿಗಾದರೋ ಜ್ಞಾನದ ಬಗ್ಗೆ ಏನೂ ತಿಳಿಯದು.

34 ಒಳ್ಳೆತನವು ದೇಶದ ಏಳಿಗೆಗೆ ಕಾರಣ. ಪಾಪವು ದೇಶಕ್ಕೆ ಅವಮಾನಕರ.

35 ಬುದ್ಧಿವಂತ ನಾಯಕನನ್ನು ಹೊಂದಿರುವ ರಾಜನು ಸಂತೋಷವಾಗಿರುವನು. ಅಯೋಗ್ಯನಾದ ಸೇವಕನ ಮೇಲೆ ರಾಜನು ಕೋಪಗೊಳ್ಳುವನು.

15 ಸಮಾಧಾನದ ಉತ್ತರ ಕೋಪವನ್ನು ಕಡಿಮೆ ಮಾಡುವುದು; ಒರಟು ಉತ್ತರ ಕೋಪವನ್ನು ಹೆಚ್ಚಿಸುವುದು.

ಜ್ಞಾನಿಯ ಮಾತನ್ನು ಜನರು ಕೇಳಬಯಸುತ್ತಾರೆ. ಮೂಢನು ಕೇವಲ ಮೂರ್ಖತನವನ್ನೇ ಮಾತಾಡುವನು.

ಯೆಹೋವನ ದೃಷ್ಟಿಗೆ ಪ್ರತಿಯೊಂದೂ ಕಾಣುತ್ತದೆ. ಆತನು ಕೆಡುಕರನ್ನೂ ಒಳ್ಳೆಯವರನ್ನೂ ಗಮನಿಸುತ್ತಿದ್ದಾನೆ.

ಹಿತನುಡಿಗಳು ಜೀವವುಳ್ಳ ಮರದಂತಿವೆ. ಸುಳ್ಳು ಮಾತುಗಳು ಮನುಷ್ಯನ ಆತ್ಮವನ್ನು ಜಜ್ಜಿಹಾಕುತ್ತವೆ.

ಮೂರ್ಖನು ತಂದೆಯ ಬುದ್ಧಿಮಾತನ್ನು ತಿರಸ್ಕರಿಸುವನು. ಬುದ್ಧಿಮಾತನ್ನು ಸ್ವೀಕರಿಸಿಕೊಳ್ಳುವವನು ಜ್ಞಾನಿಯಾಗುತ್ತಾನೆ.

ಒಳ್ಳೆಯವರ ಮನೆಗಳಲ್ಲಿ ಬಹಳ ಐಶ್ವರ್ಯವಿರುತ್ತದೆ. ಕೆಡುಕರ ಸಂಪಾದನೆಯಾದರೋ ಆಪತ್ತನ್ನು ಬರಮಾಡುತ್ತದೆ.

ಜ್ಞಾನಿಯ ಮಾತುಗಳು ತಿಳುವಳಿಕೆಯನ್ನು ಹರಡುತ್ತವೆ. ಮೂಢರ ಮಾತುಗಳು ಕೇಳಲು ಯೋಗ್ಯವಲ್ಲ.

ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.

ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.

10 ನೀತಿಮಾರ್ಗವನ್ನು ತೊರೆದವನಿಗೆ ಮಹಾದಂಡನೆಯಾಗುವುದು; ಶಿಕ್ಷಣ, ಗದರಿಕೆಯನ್ನು ದ್ವೇಷಿಸುವವನು ನಾಶವಾಗುವನು.

11 ಮೃತ್ಯುಲೋಕದಲ್ಲಿ ನಡೆಯುತ್ತಿರುವುದು ಯೆಹೋವನಿಗೆ ತಿಳಿದಿದೆ. ಜನರ ಹೃದಯಗಳಲ್ಲಿರುವ ಆಲೋಚನೆಗಳು ಸಹ ಆತನಿಗೆ ಗೊತ್ತಿವೆ.

12 ಮೂಢನು ತನ್ನ ತಪ್ಪನ್ನು ಬೇರೆಯವರಿಂದ ಕೇಳಲು ಇಷ್ಟಪಡನು. ಮೂಢನು ಉಪದೇಶಕ್ಕಾಗಿ ಜ್ಞಾನಿಗಳ ಬಳಿಗೆ ಹೋಗುವುದಿಲ್ಲ.

13 ಸಂತೋಷವಾಗಿರುವವನ ಮುಖದಲ್ಲಿ ಆನಂದ ಎದ್ದುಕಾಣುವುದು. ದುಃಖಗೊಂಡಿರುವವನ ಆತ್ಮದಲ್ಲಿ ವ್ಯಥೆ ಎದ್ದುಕಾಣುವುದು.

14 ವಿವೇಕಿಯು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವನು. ಮೂಢನು ಮತ್ತಷ್ಟು ಮೂಢತನವನ್ನು ಬಯಸುತ್ತಾನೆ.

15 ಬಡಜನರ ದಿನಗಳೆಲ್ಲಾ ದುಃಖಕರ. ಸಂತೋಷದ ಹೃದಯದಲ್ಲಿ ಸದಾ ಔತಣ.

16 ಬಹಳ ಐಶ್ವರ್ಯವನ್ನು ಹೊಂದಿದ್ದು ಸಮಾಧಾನವಿಲ್ಲದೆ ಇರುವುದಕ್ಕಿಂತ ಸ್ವಲ್ಪ ಐಶ್ವರ್ಯವನ್ನು ಹೊಂದಿದ್ದು ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಮೇಲು.

17 ದ್ವೇಷವಿರುವಲ್ಲಿ ಹೆಚ್ಚಾಗಿ ತಿನ್ನುವುದಕ್ಕಿಂತಲೂ ಪ್ರೀತಿಯಿರುವಲ್ಲಿ ಸ್ವಲ್ಪ ತಿನ್ನುವುದೇ ಉತ್ತಮ.

18 ಮುಂಗೋಪಿಯು ಜಗಳವನ್ನು ಎಬ್ಬಿಸುವನು. ತಾಳ್ಮೆಯುಳ್ಳವನು ಶಾಂತಿಯನ್ನು ಸ್ಥಾಪಿಸುವನು.

19 ಸೋಮಾರಿಗೆ ಎಲ್ಲೆಲ್ಲೂ ತೊಂದರೆ, ಯಥಾರ್ಥವಂತನಿಗೆ ಜೀವನ ಸರಾಗ.

20 ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದರೋ ತನ್ನ ತಾಯಿಯನ್ನು ಕಡೆಗಣಿಸುವನು.

21 ಮೂಢನಿಗೆ ಮೂಢತನದಲ್ಲಿ ಸಂತೋಷ. ಜ್ಞಾನಿಯು ಎಚ್ಚರಿಕೆಯಿಂದಿದ್ದು ಒಳ್ಳೆಯದನ್ನು ಮಾಡುವನು.

22 ಆಲೋಚನೆಯಿಲ್ಲದ ಯೋಜನೆಗಳು ವಿಫಲವಾಗುತ್ತವೆ. ಆಲೋಚಿಸಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ.

23 ಸಮರ್ಪಕವಾದ ಉತ್ತರ ಸಂತೋಷವನ್ನು ಉಂಟುಮಾಡುವುದು; ತಕ್ಕ ಸಮಯದಲ್ಲಿ ಸಮಯೋಚಿತವಾದ ಮಾತು ಅತ್ಯುತ್ತಮ.

24 ಜ್ಞಾನಿಯ ಕಾರ್ಯಗಳು ಅವನನ್ನು ಯಶಸ್ಸಿಗೆ ನಡೆಸುತ್ತವೆ; ಅವು ಅವನನ್ನು ಮರಣದ ಹಾದಿಯಿಂದ ತಪ್ಪಿಸುತ್ತವೆ.

25 ಅಹಂಕಾರಿಗಳ ಆಸ್ತಿಯನ್ನು ಯೆಹೋವನು ನಾಶಗೊಳಿಸುತ್ತಾನೆ; ಆದರೆ ವಿಧವೆಯರ ಆಸ್ತಿಯನ್ನು ಕಾಪಾಡುವನು.

26 ಯೆಹೋವನು ದುರಾಲೋಚನೆಗಳನ್ನು ದ್ವೇಷಿಸುವನು; ಕನಿಕರದ ಮಾತುಗಳಲ್ಲಾದರೋ ಸಂತೋಷಪಡುವನು.

27 ದುರಾಶೆಪಡುವವನು ತನ್ನ ಕುಟುಂಬಕ್ಕೆ ಆಪತ್ತನ್ನು ಬರಮಾಡಿಕೊಳ್ಳುವನು. ಲಂಚ ತೆಗೆದುಕೊಳ್ಳದವನಿಗೆ ಯಾವ ಸಮಸ್ಯೆಯೂ ಇರುವುದಿಲ್ಲ.

28 ಒಳ್ಳೆಯವರು ಎಚ್ಚರಿಕೆಯಿಂದ ಯೋಚಿಸಿ ಉತ್ತರ ಕೊಡುವರು. ದುಷ್ಟರಾದರೋ ಯೋಚಿಸದೆ ಮಾತಾಡುವರು; ಅದರಿಂದ ಜನರಿಗೆ ಕೇವಲ ತೊಂದರೆಯಷ್ಟೇ.

29 ಯೆಹೋವನು ದುಷ್ಟರಿಗೆ ಬಹುದೂರ. ಶಿಷ್ಟರ ಪ್ರಾರ್ಥನೆಯನ್ನಾದರೋ ಆತನು ಯಾವಾಗಲೂ ಕೇಳುತ್ತಾನೆ.

30 ನಗುಮುಖವು ಜನರನ್ನು ಸಂತೋಷಗೊಳಿಸುವುದು; ಒಳ್ಳೆಯ ಸುದ್ದಿಯಿಂದ ಜನರ ಆರೋಗ್ಯ ಹೆಚ್ಚುವುದು.

31 ತನ್ನ ತಪ್ಪನ್ನು ಎಚ್ಚರಿಕೆಯಿಂದ ಕೇಳುವವನು ಬಹು ಜ್ಞಾನಿ.

32 ಶಿಕ್ಷೆಯನ್ನು ಒಪ್ಪದವನು ತನಗೇ ಕೇಡುಮಾಡಿಕೊಳ್ಳುತ್ತಾನೆ. ಗದರಿಕೆಯನ್ನು ಕೇಳುವವನು ತಿಳುವಳಿಕೆಯನ್ನು ಪಡೆದುಕೊಳ್ಳುವನು.

33 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಜ್ಞಾನಿಯಾಗುತ್ತಿದ್ದಾನೆ. ಸನ್ಮಾನ ಹೊಂದಬೇಕೆನ್ನುವವನು ಮೊದಲು ದೀನನಾಗಿರಬೇಕು.

2 ಕೊರಿಂಥದವರಿಗೆ 5

ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ. ಆದರೆ ಈಗ ನಾವು ಈ ದೇಹದಲ್ಲಿ ಬಳಲಿ ಹೋಗಿದ್ದೇವೆ. ಪರಲೋಕದಲ್ಲಿರುವ ನಮ್ಮ ಮನೆಯನ್ನು ದೇವರು ನಮಗೆ ಯಾವಾಗ ಕೊಡುವನೊ ಎಂದು ಹಾತೊರೆಯುತ್ತಿದ್ದೇವೆ. ನಾವು ಅದನ್ನು ಧರಿಸಿಕೊಂಡಾಗ ಬೆತ್ತಲೆಯಾಗಿರುವುದಿಲ್ಲ. ಈ ಗುಡಾರದಲ್ಲಿರುವ ತನಕ ನಮಗೆ ಭಾರವಾದ ಹೊರೆಗಳಿವೆ ಮತ್ತು ನಾವು ನರಳುತ್ತೇವೆ. ಬೆತ್ತಲೆಯಾಗಿರಲು ನಾವು ಇಷ್ಟಪಡದೆ ಪರಲೋಕದ ಮನೆಯನ್ನು ಧರಿಸಿಕೊಳ್ಳಲು ಇಷ್ಟಪಡುತ್ತೇವೆ. ಸತ್ತುಹೋಗುವ ಈ ದೇಹವನ್ನು ಜೀವವು ಪೂರ್ಣವಾಗಿ ಆವರಿಸಿಕೊಳ್ಳುವುದು. ಇದಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾನೆ ಮತ್ತು ಇದನ್ನು ಖಚಿತಪಡಿಸಲು ಪವಿತ್ರಾತ್ಮನನ್ನೇ ನಮಗೆ ಅನುಗ್ರಹಿಸಿದ್ದಾನೆ.

ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವ ತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ. ನಾವು ಯಾವುದನ್ನು ನೋಡುತ್ತಿದ್ದೇವೋ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೋ ಅದರಿಂದ ಜೀವಿಸುತ್ತಿದ್ದೇವೆ. ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ. ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ. 10 ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.

ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ

11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ. 14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.

16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು. 18 ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 19 ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International