Old/New Testament
16 ಜನರು ತಾವು ಹೇಳಬೇಕಾದದ್ದನ್ನು ಆಲೋಚಿಸಿಕೊಂಡರೂ ನಾಲಿಗೆಗೆ ತಕ್ಕ ಮಾತುಗಳನ್ನು ಕೊಡುವವನು ಯೆಹೋವನೇ.
2 ಜನರು ತಮ್ಮ ಕಾರ್ಯಗಳೆಲ್ಲಾ ಸರಿಯೆಂದು ಆಲೋಚಿಸಿಕೊಂಡರೂ ಅವುಗಳ ಉದ್ದೇಶಕ್ಕನುಸಾರವಾಗಿ ತೀರ್ಪು ಕೊಡುವವನು ಯೆಹೋವನೇ.
3 ನಿಮ್ಮ ಕಾರ್ಯಗಳನ್ನು ಯೆಹೋವನಿಗೆ ವಹಿಸಿರಿ; ಆಗ ನಿಮ್ಮ ಯೋಜನೆಗಳೆಲ್ಲಾ ಸಫಲವಾಗುವವು.
4 ಯೆಹೋವನು ಪ್ರತಿಯೊಂದನ್ನು ತನ್ನ ಉದ್ದೇಶಕ್ಕನುಸಾರವಾಗಿ ಮಾಡಿದ್ದಾನೆ. ಆತನು ಕೆಡುಕರನ್ನು ನಾಶನದ ದಿನಕ್ಕಾಗಿ ಇಟ್ಟಿದ್ದಾನೆ.
5 ಗರ್ವಿಷ್ಠರು ಯೆಹೋವನಿಗೆ ಅಸಹ್ಯ. ಆ ಗರ್ವಿಷ್ಠರಿಗೆ ಯೆಹೋವನ ದಂಡನೆ ಖಂಡಿತ.
6 ಪ್ರೀತಿ ಮತ್ತು ನಂಬಿಗಸ್ತಿಕೆಗಳು ದೋಷಕ್ಕೆ ಪ್ರಾಯಶ್ಚಿತ್ತವಾಗಿವೆ. ಯೆಹೋವನಲ್ಲಿ ಭಯಭಕ್ತಿಯಿಂದಿರಿ, ಆಗ ನೀವು ದುಷ್ಟತನದಿಂದ ದೂರವಾಗುವಿರಿ.
7 ಯೆಹೋವನ ಚಿತ್ತಕ್ಕನುಸಾರವಾಗಿ ಜೀವಿಸುವವನು ತನ್ನ ವೈರಿಗಳೊಡನೆಯೂ ಸಮಾಧಾನದಿಂದಿರುವನು.
8 ಅನ್ಯಾಯದಿಂದ ಹೆಚ್ಚು ಸಂಪಾದಿಸುವುದಕ್ಕಿಂತ ನ್ಯಾಯವಾಗಿ ಸ್ವಲ್ಪ ಸಂಪಾದಿಸುವುದೇ ಉತ್ತಮ.
9 ಒಬ್ಬನು ಅನೇಕ ಯೋಜನೆಗಳನ್ನು ಮಾಡಿಕೊಂಡರೂ ಭವಿಷ್ಯತ್ತನ್ನು ನಿರ್ಧರಿಸುವವನು ಯೆಹೋವನೇ.
10 ರಾಜನ ಮಾತು ದೇವರಿಂದ ಬಂದ ಸಂದೇಶದಂತಿದೆ. ಅವನ ತೀರ್ಮಾನ ಯಾವಾಗಲೂ ನ್ಯಾಯವಾಗಿರಬೇಕು.
11 ಎಲ್ಲಾ ನ್ಯಾಯವಾದ ಅಳತೆಮಾಪಕಗಳು ಮತ್ತು ತಕ್ಕಡಿಗಳು ಯೆಹೋವನಿಗೆ ಇಷ್ಟ. ನ್ಯಾಯವಾದ ಒಪ್ಪಂದವು ಆತನಿಗೆ ಇಷ್ಟ.
12 ರಾಜನು ಕೆಟ್ಟದ್ದನ್ನು ಸಹಿಸಲಾರನು; ಯಾಕೆಂದರೆ ಒಳ್ಳೆಯದರಿಂದಲೇ ಅವನ ರಾಜ್ಯಕ್ಕೆ ಬಲ.
13 ರಾಜರಿಗೆ ಸತ್ಯವನ್ನು ಕೇಳಲು ಇಷ್ಟ, ಸುಳ್ಳಾಡದ ಜನರೂ ಇಷ್ಟ.
14 ರಾಜನು ಕೋಪದಿಂದಿರುವಾಗ ಯಾರನ್ನಾದರೂ ಕೊಂದರೂ ಕೊಲ್ಲಬಹುದು. ಆದರೆ ಜ್ಞಾನಿಯು ಆತನ ಕೋಪವನ್ನು ಶಮನಗೊಳಿಸಬಲ್ಲನು.
15 ರಾಜನು ಸಂತೋಷದಿಂದಿರುವಾಗ ಎಲ್ಲರ ಜೀವನವು ಉತ್ತಮವಾಗಿರುವುದು. ರಾಜನು ನಿನ್ನನ್ನು ಮೆಚ್ಚಿಕೊಂಡರೆ, ಅದು ನಿನ್ನ ಪಾಲಿಗೆ ಮೋಡದಿಂದ ಸುರಿಯುವ ಮುಂಗಾರು ಮಳೆಯಂತಿರುವುದು.
16 ಜ್ಞಾನ ಸಂಪಾದನೆಯು ಬಂಗಾರ ಸಂಪಾದನೆಗಿಂತಲೂ ಶ್ರೇಷ್ಠ. ವಿವೇಕ ಸಂಪಾದನೆಯು ಬೆಳ್ಳಿ ಸಂಪಾದನೆಗಿಂತಲೂ ಉತ್ತಮ.
17 ನೀತಿವಂತನ ಜೀವಿತವು ದುಷ್ಟತನದಿಂದ ದೂರವಾಗಿರುವುದು. ತನ್ನ ಜೀವಿತದ ಬಗ್ಗೆ ಎಚ್ಚರಿಕೆಯುಳ್ಳವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವನು.
18 ಅಹಂಕಾರಿಯು ನಾಶನದ ಅಪಾಯದಲ್ಲಿದ್ದಾನೆ. ದುರಾಭಿಮಾನಿಯು ಸೋಲಿನ ಅಪಾಯದಲ್ಲಿದ್ದಾನೆ.
19 ಗರ್ವಿಷ್ಠರೊಡನೆ ಐಶ್ವರ್ಯವನ್ನು ಹಂಚಿಕೊಳ್ಳುವದಕ್ಕಿಂತ ದೀನರಾಗಿದ್ದು ಬಡಜನರೊಡನೆ ವಾಸಿಸುವುದೇ ಉತ್ತಮ.
20 ಉಪದೇಶವನ್ನು ಗಮನವಿಟ್ಟು ಕೇಳುವವನು ಅದರ ಲಾಭ ಹೊಂದುವನು; ಯೆಹೋವನಲ್ಲಿ ಭರವಸೆ ಇಡುವವನು ಆಶೀರ್ವಾದ ಹೊಂದುವನು.
21 ಜ್ಞಾನಿಯನ್ನು ಅವನ ಜ್ಞಾನದಿಂದಲೇ ಜನರು ಗುರುತಿಸುವರು. ಎಚ್ಚರಿಕೆಯಿಂದ ಮಾತಾಡುವವನು ಒಡಂಬಡಿಸುವನು.
22 ವಿವೇಕವು ವಿವೇಕಿಗಳಿಗೆ ನಿಜಜೀವವನ್ನು ಕೊಡುತ್ತದೆ. ಆದರೆ ಮೂಢರು ತಮ್ಮ ಮೂಢತನದಿಂದಲೇ ದಂಡಿಸಲ್ಪಡುವರು.
23 ಜ್ಞಾನಿಯ ಹೃದಯವು ಅವನ ಬಾಯಿಗೆ ಮಾರ್ಗದರ್ಶನ. ಅವನ ಮಾತುಗಳು ಒಳ್ಳೆಯದಾಗಿವೆ; ಕೇಳಲು ಯೋಗ್ಯವಾಗಿವೆ.
24 ಸವಿನುಡಿಗಳು ಜೇನಿನಂತಿವೆ. ಅವು ಸ್ವೀಕಾರಕ್ಕೆ ಸುಲಭ; ಆರೋಗ್ಯಕ್ಕೆ ಉಪಯುಕ್ತ.
25 ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ಮಾರ್ಗವಿದೆ; ಆದರೆ ಅದರ ಅಂತ್ಯವು ಮರಣ.
26 ಕೆಲಸಗಾರನನ್ನು ಅವನ ಹೊಟ್ಟೆಯೇ ದುಡಿಮೆಯಲ್ಲಿ ತೊಡಗಿಸುತ್ತದೆ. ಅವನ ಹಸಿವೇ ಊಟಕ್ಕಾಗಿ ಅವನನ್ನು ದುಡಿಸುತ್ತದೆ.
27 ನೀಚನು ಕೆಟ್ಟಕಾರ್ಯಗಳನ್ನು ಆಲೋಚಿಸಿಕೊಳ್ಳುವನು. ಅವನ ಮಾತುಗಳು ಬೆಂಕಿಯಂತೆ ನಾಶಕರ.
28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.
29 ಕೆಡುಕನು ತನ್ನ ಸ್ನೇಹಿತರನ್ನೇ ಮೋಸಗೊಳಿಸಿ ನಾಶನಕ್ಕೆ ನಡೆಸುವನು.
30 ಕಣ್ಣುಮಿಟುಕಿಸಿ ನಗುವವನು ತಪ್ಪಾದ ಹಾಗೂ ಕೆಟ್ಟಕಾರ್ಯವೆಸಗಲು ಯೋಜಿಸುತ್ತಿರುವನು.
31 ಒಳ್ಳೆಯವರಿಗೆ ಅವರ ನರೆಕೂದಲೇ ವೈಭವದ ಕಿರೀಟ.
32 ಶೂರನಾಗಿರುವುದಕ್ಕಿಂತ ತಾಳ್ಮೆಯಿಂದಿರುವುದೇ ಶ್ರೇಷ್ಠ; ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಿಂತ ನಿಮ್ಮ ಕೋಪವನ್ನು ಸ್ವಾಧೀನದಲ್ಲಿಟ್ಟುಕೊಳ್ಳವುದೇ ಉತ್ತಮ.
33 ಜನರು ಚೀಟುಹಾಕಿ ನಿರ್ಧಾರ ಮಾಡಿದರೂ ಆ ನಿರ್ಧಾರಗಳು ಬರುವುದು ಯೆಹೋವನಿಂದಲೇ.
17 ಜಗಳದ ಮನೆಯಲ್ಲಿ ಮೃಷ್ಠಾನ್ನ ತಿನ್ನುವುದಕ್ಕಿಂತಲೂ ಸಮಾಧಾನದ ಮನೆಯಲ್ಲಿ ಒಣರೊಟ್ಟಿಯನ್ನು ತಿನ್ನುವುದೇ ಮೇಲು.
2 ಜ್ಞಾನಿಯಾದ ಸೇವಕನು ತನ್ನ ಯಜಮಾನನ ಅಯೋಗ್ಯ ಮಗನನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನು; ಅವನ ಸಹೋದರರೊಂದಿಗೂ ಆಸ್ತಿಯಲ್ಲಿ ಪಾಲು ಹೊಂದುವನು.
3 ಜನರು ಬೆಳ್ಳಿಬಂಗಾರವನ್ನು ಬೆಂಕಿಗೆ ಹಾಕಿ ಶುದ್ಧಮಾಡುವರು. ಆದರೆ ಮನುಷ್ಯರ ಹೃದಯಗಳನ್ನು ಶುದ್ಧಮಾಡುವವನು ಯೆಹೋವನೇ.
4 ಕೆಟ್ಟಮಾತುಗಳಿಗೆ ಕಿವಿಗೊಡುವವನು ಕೆಡುಕನಿಗೆ ಸಮಾನ. ಚಾಡಿಗೆ ಕಿವಿಗೊಡುವವನು ಸುಳ್ಳುಗಾರನಿಗೆ ಸಮಾನ.
5 ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.
6 ಮೊಮ್ಮಕ್ಕಳು ವೃದ್ಧರಿಗೆ ಸಂತೋಷ. ಮಕ್ಕಳಿಗೆ ತಮ್ಮ ತಂದೆತಾಯಿಗಳ ಬಗ್ಗೆ ಹೆಮ್ಮೆ.
7 ವಾಕ್ಚಾತುರ್ಯವು ಮೂಢನಿಗೆ ವಿರುದ್ಧ; ಸುಳ್ಳು ಮಾತು ಗಣ್ಯನಿಗೆ ಇನ್ನೂ ವಿರುದ್ಧ.
8 ಲಂಚವು ಅದೃಷ್ಟ ಎಂದು ಭಾವಿಸಿಕೊಳ್ಳುವವರಿಗೆ, ಅವರು ಹೋದಲ್ಲೆಲ್ಲಾ ಅದೇ ಕಾರ್ಯಸಾಧಕದಂತೆ ಕಾಣುತ್ತದೆ.
9 ನಿನಗೆ ತಪ್ಪು ಮಾಡಿದವನನ್ನು ನೀನು ಕ್ಷಮಿಸಿದರೆ ನೀನು ಸ್ನೇಹಿತನಾಗುವಿ. ಆದರೆ ನೀನು ಆ ವಿಷಯವನ್ನು ಬೇರೆಯವರಿಗೆ ಮತ್ತೆ ಹೇಳಿದರೆ ನಿಮ್ಮ ಗೆಳೆತನವು ಒಡೆದು ಹೋಗುವುದು.
10 ಮೂಢನಿಗೆ ಮನವರಿಕೆ ಮಾಡಲು ನೂರು ಏಟುಗಳು ಬೇಕಾದರೂ ಜ್ಞಾನಿಗೆ ಒಂದೇ ಗದರಿಕೆಯು ಸಾಕು.
11 ದುಷ್ಟನಿಗೆ ದೇವರ ವಿರುದ್ಧ ದಂಗೆ ಏಳುವುದಕ್ಕೆ ಇಷ್ಟ. ಕೊನೆಯಲ್ಲಿ ದೇವರು ತನ್ನ ದೂತನನ್ನು ಕಳುಹಿಸಿ ಅವನನ್ನು ದಂಡಿಸುವನು.
12 ಮೂಢಕಾರ್ಯಗಳಲ್ಲಿ ನಿರತನಾಗಿರುವ ಮೂಢನನ್ನು ಭೇಟಿಯಾಗುವುದಕ್ಕಿಂತ ತನ್ನ ಮರಿಗಳನ್ನು ಕಳೆದುಕೊಂಡು ಕೋಪದಿಂದಿರುವ ತಾಯಿಕರಡಿಗೆ ಎದುರಾಗುವುದೇ ಮೇಲು.
13 ನಿನಗೆ ಉಪಕಾರ ಮಾಡುವವರಿಗೆ ಅಪಕಾರ ಮಾಡಬೇಡ. ಇಲ್ಲವಾದರೆ ನಿನ್ನ ಜೀವಮಾನವೆಲ್ಲಾ ಕಷ್ಟಪಡುವೆ.
14 ವಾದವು ಜಲಾಶಯದ ಕಟ್ಟೆಯಲ್ಲಿ ಮಾಡುವ ರಂಧ್ರಕ್ಕೆ ಸಮಾನ. ಅದು ಹೆಚ್ಚೆಚ್ಚು ದೊಡ್ಡದಾಗುವುದಕ್ಕಿಂತ ಮೊದಲೇ ನಿಲ್ಲಿಸು.
15 ನಿರಪರಾಧಿಗಾಗುವ ದಂಡನೆಯೂ ಅಪರಾಧಿಗಾಗುವ ಬಿಡುಗಡೆಯೂ ಯೆಹೋವನಿಗೆ ಅಸಹ್ಯ.
16 ಮೂಢನಲ್ಲಿ ಹಣವಿದ್ದರೂ ಪ್ರಯೋಜನವಿಲ್ಲ. ಯಾಕೆಂದರೆ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಅವನ ಹಣ ನಿಷ್ಪ್ರಯೋಜಕ.
17 ಸ್ನೇಹಿತನು ಯಾವಾಗಲೂ ಪ್ರೀತಿಸುವನು. ಕಷ್ಟದ ಸಮಯಗಳಲ್ಲಿ ಸಹೋದರನು ಸಹಾಯಮಾಡುವನು.
18 ಮೂಢನು ಬೇರೊಬ್ಬನ ಸಾಲಕ್ಕೆ ಜಾಮೀನುಗಾರನಾಗುವನು.
19 ಜಗಳದಲ್ಲಿ ಸಂತೋಷಿಸುವವನು ಪಾಪದಲ್ಲಿಯೂ ಸಂತೋಷಿಸುವನು. ಜಂಬಕೊಚ್ಚಿಕೊಳ್ಳುವುದು ಕೇಡನ್ನು ಕರೆಯುವುದಕ್ಕೆ ಸಮಾನ.
20 ಕೆಡುಕನಿಗೆ ಲಾಭವೆಂದೂ ಆಗದು. ಸುಳ್ಳುಗಾರನಿಗೆ ತೊಂದರೆಯೇ ಗತಿ.
21 ಮೂಢಮಗನನ್ನು ಪಡೆದಿರುವ ತಂದೆಗೆ ಬಹು ವ್ಯಥೆ. ಅವನ ತಂದೆಯು ಸಂತೋಷದಿಂದರಲಾರನು.
22 ಸಂತೋಷವು ಒಳ್ಳೆಯ ಔಷಧಿಯಂತಿದೆ. ಆದರೆ ದುಃಖವು ಕಾಯಿಲೆಯಂತಿದೆ.
23 ದುಷ್ಟನು ನ್ಯಾಯ ದೊರೆಯದಂತೆ ಮಾಡಲು ಗುಟ್ಟಾಗಿ ಲಂಚ ತೆಗೆದುಕೊಳ್ಳುವನು.
24 ವಿವೇಕಿಯು ಜ್ಞಾನದ ಮೇಲೆ ಮನಸ್ಸಿಡುತ್ತಾನೆ. ಆದರೆ ಮೂಢನು ಬಹುದೂರದ ಸ್ಥಳಗಳ ಬಗ್ಗೆ ಕನಸು ಕಾಣುತ್ತಲೇ ಇರುವನು.
25 ಮೂಢಮಗನಿಂದ ತಂದೆಗೆ ದುಃಖ; ಹೆತ್ತತಾಯಿಗೆ ವ್ಯಥೆ.
26 ನಿರಪರಾಧಿಯನ್ನು ಶಿಕ್ಷಿಸುವುದು ತಪ್ಪು. ನ್ಯಾಯವಂತರಾದ ನಾಯಕರಿಗೆ ಹೊಡೆಯುವುದು ತಪ್ಪು.
27 ಜ್ಞಾನಿಯು ಎಚ್ಚರಿಕೆಯಿಂದ ಮಾತಾಡುವನು. ವಿವೇಕಿಯು ಬೇಗನೆ ಕೋಪಗೊಳ್ಳುವುದಿಲ್ಲ.
28 ಮೌನವಾಗಿದ್ದರೆ ಮೂಢನು ಸಹ ಜ್ಞಾನಿಯಂತೆ ಕಾಣುವನು; ಮಾತಾಡದಿದ್ದರೆ ವಿವೇಕಿಯಂತೆ ಕಾಣುವನು.
18 ಸ್ನೇಹಭಾವವಿಲ್ಲದವನು ಮಾಡುವುದೆಲ್ಲ ಸ್ವಾರ್ಥತೆಯಿಂದಲೇ, ಪ್ರತಿಯೊಂದು ಒಳ್ಳೆಯದರ ವಿರುದ್ಧವಾಗಿ ಅವನು ವಾದಿಸುತ್ತಾನೆ.
2 ಮೂಢನಿಗೆ ಅರ್ಥಮಾಡಿಕೊಳ್ಳಲು ಇಷ್ಟವಿಲ್ಲ. ಅವನು ತನ್ನ ಆಲೋಚನೆಗಳನ್ನೇ ಹೇಳಬಯಸುತ್ತಾನೆ.
3 ನೀನು ಕೇಡುಮಾಡಿದರೆ ಜನರು ನಿನ್ನನ್ನು ಇಷ್ಟಪಡುವುದಿಲ್ಲ; ನಾಚಿಕೆಕರವಾದದ್ದನ್ನು ಮಾಡಿದರೆ ನಿನ್ನನ್ನು ಪರಿಹಾಸ್ಯ ಮಾಡುವರು.
4 ಬಾಯಿಮಾತುಗಳು ಆಳವಾದ ನೀರಿನಂತಿರಲು ಸಾಧ್ಯ; ಆದರೆ ಜ್ಞಾನದ ಮೂಲವು ನುಗ್ಗಿಬರುವ ತೊರೆಯಂತಿದೆ.
5 ಅಪರಾಧಿಗೆ ಪಕ್ಷಪಾತ ಮಾಡುವುದು ಸರಿಯಲ್ಲ; ನಿರಪರಾಧಿಗೆ ಅನ್ಯಾಯ ಮಾಡುವುದು ಸರಿಯಲ್ಲ.
6 ಮೂಢನು ವಾದಕ್ಕೆ ಇಳಿಯುತ್ತಾನೆ; ಅವನ ಮಾತುಗಳು ಜಗಳವನ್ನು ಎಬ್ಬಿಸಿ, ಏಟಿಗಾಗಿ ಕೇಳಿಕೊಳ್ಳುತ್ತವೆ.
7 ಮೂಢನು ಮಾತಿನಲ್ಲಿ ತನ್ನನ್ನೇ ನಾಶಪಡಿಸಿಕೊಳ್ಳುವನು. ಅವನ ಮಾತುಗಳೇ ಅವನಿಗೆ ಬಲೆಯಾಗುತ್ತವೆ.
8 ಜನರಿಗೆ ಹರಟೆಮಾತನ್ನು ಕೇಳಲು ಇಷ್ಟ. ಹರಟೆ ಮಾತುಗಳು ರುಚಿಕರವಾದ ಆಹಾರದಂತಿವೆ.
9 ಸೋಮಾರಿಯು ನಾಶಮಾಡುವ ವ್ಯಕ್ತಿಯಂತಿದ್ದಾನೆ.
10 ಯೆಹೋವನ ಹೆಸರು ಬಲವಾದ ಗೋಪುರದಂತಿದೆ. ಒಳ್ಳೆಯವರು ಅದರೊಳಗೆ ಓಡಿಹೋಗಿ ಸುರಕ್ಷಿತವಾಗಿರುವರು.
11 ಐಶ್ವರ್ಯವು ತಮ್ಮನ್ನು ಬಲವಾದ ಕೋಟೆಯಂತೆ ಕಾಪಾಡುತ್ತದೆ ಎಂಬುದು ಐಶ್ವರ್ಯವಂತರ ಭಾವನೆ.
12 ಗರ್ವಿಯು ಬೇಗನೆ ಹಾಳಾಗುವನು; ದೀನನಾದರೋ ಸನ್ಮಾನವನ್ನು ಹೊಂದುವನು.
13 ಗಮನವಿಟ್ಟು ಕೇಳದೆ ಉತ್ತರಿಸುವವನು ಮೂಢನೇ ಸರಿ; ಅವನು ನಾಚಿಕೆಗೆ ಒಳಗಾಗುವನು.
14 ಅಸ್ವಸ್ಥನನ್ನು ಅವನ ಮನಸ್ಸು ಜೀವಂತವಾಗಿಡಬಲ್ಲದು. ಆದರೆ ಮುರಿದ ಆತ್ಮವನ್ನು ಯಾರು ಸಹಿಸಿಕೊಳ್ಳಬಲ್ಲರು?
15 ಜ್ಞಾನಿಗೆ ಹೆಚ್ಚು ಕಲಿತುಕೊಳ್ಳುವುದಕ್ಕೆ ಇಷ್ಟ; ಆದ್ದರಿಂದ ಅವನು ಗಮನವಿಟ್ಟು ಕೇಳುವನು.
16 ಪ್ರಮುಖನನ್ನು ಭೇಟಿಯಾಗಬೇಕಿದ್ದರೆ, ಅವನಿಗೆ ಒಂದು ಉಡುಗೊರೆಯನ್ನು ಕೊಡು. ಆಗ ನೀನು ಅವನನ್ನು ಸುಲಭವಾಗಿ ಭೇಟಿಯಾಗಬಹುದು.
17 ಮೊದಲು ತನ್ನ ವಾದವನ್ನು ಮಂಡಿಸುವವನು ಯಾವಾಗಲೂ ನೀತಿವಂತನಂತೆ ಕಾಣುತ್ತಾನೆ. ಆದರೆ ಪ್ರತಿವಾದಿ ಎದ್ದಮೇಲೆ ಅವನ ನಿಜಪರೀಕ್ಷೆ ಆಗುವುದು.
18 ಬಲಿಷ್ಠರಾದ ಇಬ್ಬರು ವಾದಮಾಡುತ್ತಿರುವಾಗ ನಿರ್ಧಾರಕ್ಕಾಗಿ ಚೀಟುಹಾಕಿದರೆ ಅವರ ಜಗಳ ಶಮನವಾಗುತ್ತದೆ.
19 ಅವಮಾನಿತನಾದ ಸಹೋದರನನ್ನು ಗೆದ್ದುಕೊಳ್ಳುವುದು ಕೋಟೆಯುಳ್ಳ ಪಟ್ಟಣವನ್ನು ಗೆದ್ದುಕೊಳ್ಳುವುದಕ್ಕಿಂತಲೂ ಕಷ್ಟ, ಜಗಳಗಳು ಅರಮನೆಯ ಬಾಗಿಲಿನಂತೆ ಜನರನ್ನು ಪ್ರತ್ಯೇಕಗೊಳಿಸುತ್ತದೆ.
20 ಒಬ್ಬನು ತಾನು ಹೇಳಿದ ಒಳ್ಳೆಯದಕ್ಕೇ ಆಗಲಿ ಕೆಟ್ಟದ್ದಕ್ಕೇ ಆಗಲಿ ಪ್ರತಿಫಲವನ್ನು ಪಡೆಯಲೇಬೇಕು.
21 ಒಬ್ಬನ ಮಾತುಗಳು ಜೀವವನ್ನು ಉಳಿಸಬಲ್ಲವು ಅಥವಾ ಮರಣವನ್ನು ತರಬಲ್ಲವು. ಜನರು ತಮ್ಮ ಮಾತಿನ ಫಲವನ್ನು ಅನುಭವಿಸಲೇಬೇಕು.
22 ಹೆಂಡತಿಯುಳ್ಳವನು ಸಂತೋಷವನ್ನೇ ಪಡೆದುಕೊಂಡಿದ್ದಾನೆ; ಯೆಹೋವನು ಅವನ ಬಗ್ಗೆ ಸಂತೋಷಪಡುವನು.
23 ಬಡವನು ವಿನಯದಿಂದ ಬೇಡಿಕೊಳ್ಳುವನು; ಐಶ್ವರ್ಯವಂತನು ಬಿರುಸಾಗಿ ಉತ್ತರಕೊಡುವನು.
24 ಒಬ್ಬನಿಗೆ ಬಹಳ ಮಂದಿ ಸ್ನೇಹಿತರಿದ್ದರೆ, ಅದು ಅವನನ್ನು ನಾಶಮಾಡಬಹುದು. ಆದರೆ ನಿಜವಾದ ಸ್ನೇಹಿತನು ಸಹೋದರನಿಗಿಂತಲೂ ನಂಬಿಗಸ್ತನಾಗಿರುವನು.
6 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. 2 ದೇವರು ಹೀಗೆನ್ನುತ್ತಾನೆ:
“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)
ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”
3 ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. 4 ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. 6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ 7 ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.
8 ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. 9 ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.
ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ
14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:
“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(B)
17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(C)
18 “ನಾನು ನಿಮ್ಮ ತಂದೆಯಾಗಿರುವೆನು
ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(D)
Kannada Holy Bible: Easy-to-Read Version. All rights reserved. © 1997 Bible League International