Old/New Testament
ಯಾಕೆಯ ಮಾಗನಾದ ಅಗೂರನ ಜ್ಞಾನೋಕ್ತಿಗಳು
30 ಮಾಸ್ಸಾದ ಯಾಕೆ ಎಂಬವನ ಮಗನಾದ ಅಗೂರನ ನುಡಿಗಳಿವು. ಇಥಿಯೇಲನಿಗೂ ಉಕ್ಕಾಲನಿಗೂ ಇವನು ನೀಡಿದ ಸಂದೇಶವಿದು:
2 ನಾನು ಬೇರೆಯವರಿಗಿಂತ ದಡ್ಡನಾಗಿರುವೆ. ಸರ್ವಸಾಮಾನ್ಯವಾದ ಬುದ್ಧಿಯೂ ನನಗಿಲ್ಲ. 3 ನಾನು ಜ್ಞಾನವನ್ನು ಕಲಿತವನಲ್ಲ; ಪರಿಶುದ್ಧನಾದ ದೇವರ ಬಗ್ಗೆಯೂ ಗೊತ್ತಿಲ್ಲ. 4 ಎಂದಾದರೂ ಪರಲೋಕಕ್ಕೆ ಏರಿಹೋಗಿ ಇಳಿದುಬಂದವನು ಯಾರು? ಗಾಳಿಯನ್ನು ತನ್ನ ಕೈಯಲ್ಲಿ ಹಿಡಿದವನು ಯಾರು? ತನ್ನ ಉಡುಪಿನಲ್ಲಿ ಸಮುದ್ರವನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಮೇರೆಗಳನ್ನು ಹಾಕಿದವನು ಯಾರು? ಈ ಕಾರ್ಯಗಳನ್ನು ಯಾವನಾದರೂ ಮಾಡಿದ್ದರೆ, ಅವನು ಯಾರು? ಅವನು ಕುಟುಂಬ ಎಲ್ಲಿದೆ?
5 ದೇವರು ಹೇಳುವ ಪ್ರತಿಯೊಂದು ಮಾತೂ ನಂಬಿಕೆಗೆ ಯೋಗ್ಯವಾಗಿದೆ. ತನ್ನ ಬಳಿಗೆ ಬರುವ ಜನರಿಗೆ ದೇವರು ಆಶ್ರಯದುರ್ಗವಾಗಿದ್ದಾನೆ. 6 ಆದ್ದರಿಂದ ದೇವರು ಹೇಳುವ ಸಂಗತಿಗಳಿಗೆ ಏನನ್ನೂ ಸೇರಿಸಬೇಡ. ನೀನು ಬದಲಾಯಿಸಿದರೆ, ಆತನು ನಿನ್ನನ್ನು ಶಿಕ್ಷಿಸುವನು ಮತ್ತು ನಿನ್ನನ್ನು ಸುಳ್ಳುಗಾರನೆಂದು ರುಜುವಾತು ಮಾಡುವನು.
7 ಯೆಹೋವನೇ, ನಾನು ಸಾಯುವ ಮೊದಲು ನೀನು ನನಗೋಸ್ಕರ ಎರಡು ಕಾರ್ಯಗಳನ್ನು ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುವೆ. 8 ಸುಳ್ಳುಹೇಳದಂತೆ ನನಗೆ ಸಹಾಯಮಾಡು. ನನ್ನನ್ನು ತುಂಬ ಐಶ್ವರ್ಯವಂತನನ್ನಾಗಿಯೂ ಮಾಡಬೇಡ; ತುಂಬ ಬಡವನನ್ನಾಗಿಯೂ ಮಾಡಬೇಡ; ಅನುದಿನಕ್ಕೆ ಬೇಕಾದವುಗಳನ್ನು ಮಾತ್ರ ಕೊಡು. 9 ನನಗೆ ಹೆಚ್ಚಾಗಿದ್ದರೆ, ನಿನ್ನನ್ನೇ ತಿರಸ್ಕರಿಸಿ, “ನನಗೆ ಯೆಹೋವನ ಅಗತ್ಯವಿಲ್ಲ” ಎಂದು ಹೇಳುವೆನು. ನಾನು ಬಡವನಾಗಿದ್ದರೆ, ಕಳವುಮಾಡಿ ನಿನ್ನ ಹೆಸರಿಗೆ ಅವಮಾನ ಮಾಡುವೆನು.
10 ಸೇವಕನ ಬಗ್ಗೆ ಯಜಮಾನನಿಗೆ ಚಾಡಿ ಹೇಳಬೇಡ. ನೀನು ಹೇಳಿದರೆ, ಅವನು ನಿನ್ನನ್ನು ಶಪಿಸುವನು; ಆ ಶಾಪದಿಂದ ನೀನು ಸಂಕಟಪಡುವೆ.
11 ಕೆಲವರು ತಮ್ಮ ತಂದೆಗಳನ್ನು ಶಪಿಸುವರು. ತಮ್ಮ ತಾಯಂದಿರನ್ನು ಆಶೀರ್ವದಿಸುವುದಿಲ್ಲ.
12 ಕೆಲವರು ತಮ್ಮನ್ನು ಶುದ್ಧರೆಂದು ಯೋಚಿಸುವರು. ಆದರೆ ಅವರು ತಮ್ಮ ಹೊಲಸಿನಿಂದ ಶುದ್ಧೀಕರಿಸಲ್ಪಟ್ಟಿಲ್ಲ.
13 ಕೆಲವರು ಬಹಳ ದುರಾಭಿಮಾನಿಗಳಾಗಿದ್ದಾರೆ. ತಾವು ಬೇರೆಯವರಿಗಿಂತ ಎಷ್ಟೋ ಉತ್ತಮರೆಂಬುದು ಅವರ ಭಾವನೆ.
14 ಖಡ್ಗಗಳಂತಿರುವ ಹಲ್ಲುಗಳನ್ನು ಹೊಂದಿರುವ ಜನರಿದ್ದಾರೆ. ಅವರ ಕೋರೆಗಳು ಕತ್ತಿಗಳಂತಿವೆ. ಅವರು ಬಡಜನರಲ್ಲಿ ಇರುವುದನ್ನೆಲ್ಲಾ ತಮ್ಮಿಂದಾದಷ್ಟು ದೋಚಿಕೊಳ್ಳಲು ತಮ್ಮ ಸಮಯವನ್ನು ಉಪಯೋಗಿಸುವರು.
15 ಕೆಲವರು ರಕ್ತ ಕುಡಿಯುವ ಜಿಗಣೆಗಳಂತಿದ್ದಾರೆ. ಅವರು, “ನನಗೆ ಕೊಡು, ನನಗೆ ಕೊಡು, ನನಗೆ ಕೊಡು” ಎಂದು ಹೇಳುತ್ತಾರೆ. ಎಂದಿಗೂ ತೃಪ್ತಿಯಾಗದ ಮೂರು ಸಂಗತಿಗಳಿವೆ. ನಿಜವಾಗಿಯೂ ನಾಲ್ಕು ಸಂಗತಿಗಳು ಎಂದಿಗೂ ಸಾಕು ಎನ್ನವು: 16 ಮರಣದ ಸ್ಥಳ, ಮಕ್ಕಳಿಲ್ಲದ ಹೆಂಗಸು, ಸತತವಾಗಿ ನೀರಿನ ಅಗತ್ಯವಿರುವ ಭೂಮಿ ಮತ್ತು ಆರದ ಬೆಂಕಿ!
17 ತನ್ನ ತಂದೆಯನ್ನು ಗೇಲಿಮಾಡುವವನಾಗಲಿ ವೃದ್ಧ ತಾಯಿಯನ್ನು ಕಡೆಗಣಿಸುವವನಾಗಲಿ ದಂಡನೆ ಹೊಂದುವನು. ಕಾಗೆಗಳೂ ಕ್ರೂರಪಕ್ಷಿಗಳೂ ಅವನ ಕಣ್ಣುಗಳನ್ನು ತಿನ್ನುವಂತಿರುವುದು ಆ ದಂಡನೆ.
18 ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾದ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ನಾನು ಅರ್ಥಮಾಡಿಕೊಳ್ಳಲಾರೆ: 19 ಆಕಾಶದಲ್ಲಿ ಹಾರುವ ಹದ್ದಿನ ರೀತಿ, ಬಂಡೆಯ ಮೇಲೆ ಹರಿದಾಡುವ ಹಾವು, ಸಮುದ್ರದ ಮೇಲೆ ಸಂಚರಿಸುವ ಹಡಗು ಮತ್ತು ಹೆಂಗಸನ್ನು ಪ್ರೇಮಿಸುತ್ತಿರುವ ಗಂಡಸು.
20 ವ್ಯಭಿಚಾರಿಣಿಯ ನಡತೆಯು ಇದೇ. ಆಕೆ ಊಟ ಮಾಡುವಳು, ಬಾಯಿ ಒರಸಿಕೊಳ್ಳುವಳು ಮತ್ತು ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುವಳು.
21 ಭೂಮಿಯ ಮೇಲೆ ಕೇಡುಮಾಡುವ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ಭೂಮಿಯು ತಾಳಲಾಗದು: 22 ರಾಜನಾದ ಸೇವಕ, ತನಗೆ ಅಗತ್ಯವಿರುವ ಪ್ರತಿಯೊಂದನ್ನು ಪಡೆದಿರುವ ಮೂಢ, 23 ಪ್ರೀತಿಯನ್ನು ಕಂಡಿಲ್ಲದಿದ್ದರೂ ಮದುವೆಯಾಗುವ ಸ್ತ್ರೀ ಮತ್ತು ತನ್ನ ಯಜಮಾನಿಯ ಸ್ಥಾನವನ್ನು ಕಸಿದುಕೊಳ್ಳುವ ಸೇವಕಿ.
24 ಭೂಮಿಯ ಮೇಲೆ ನಾಲ್ಕು ಪ್ರಾಣಿಗಳಿವೆ. ಆದರೆ ಈ ಪ್ರಾಣಿಗಳು ತುಂಬ ವಿವೇಕವುಳ್ಳವುಗಳಾಗಿವೆ.
25 ಇರುವೆಗಳು ಸಣ್ಣಗಿವೆ ಮತ್ತು ಬಲಹೀನವಾಗಿವೆ. ಆದರೆ ಅವು ಸುಗ್ಗೀಕಾಲದಲ್ಲಿ ತಮ್ಮ ಆಹಾರವನ್ನು ಕೂಡಿಸಿಟ್ಟುಕೊಳ್ಳುತ್ತವೆ.
26 ಬೆಟ್ಟದ ಮೊಲ ಬಲಿಷ್ಠವಾದ ಪ್ರಾಣಿಯಾಗಿಲ್ಲದಿದ್ದರೂ ಅವು ಬಂಡೆಗಳಲ್ಲಿ ತಮಗೆ ಮನೆಗಳನ್ನು ಮಾಡಿಕೊಳ್ಳಬಲ್ಲವು.
27 ಮಿಡತೆಗಳಿಗೆ ರಾಜನಿಲ್ಲದಿದ್ದರೂ ಅವು ಗುಂಪುಗುಂಪಾಗಿ ಹೋಗುತ್ತವೆ.
28 ಹಲ್ಲಿಗಳನ್ನು ನಿಮ್ಮ ಕೈಗಳಲ್ಲಿ ಹಿಡಿದುಕೊಳ್ಳಬಹುದು. ಅವು ಅಷ್ಟು ಸಣ್ಣವು. ಆದರೆ ಅವು ರಾಜನ ಮನೆಗಳಲ್ಲಿಯೂ ವಾಸಿಸುತ್ತವೆ.
29 ಮೂರು ಪ್ರಾಣಿಗಳಿವೆ: ಅವು ನಡೆಯುವಾಗ ಗಂಭೀರತೆಯು ಎದ್ದುಕಾಣುತ್ತದೆ. ನಿಜವಾಗಿಯೂ ನಾಲ್ಕು ಇವೆ:
30 ಸಿಂಹವು ಎಲ್ಲಾ ಪ್ರಾಣಿಗಳಲ್ಲಿ ಅತಿ ಬಲಿಷ್ಠವಾದದ್ದು; ಅದು ಯಾವುದಕ್ಕೂ ಭಯಪಡುವುದಿಲ್ಲ.
31 ಬಹು ಹೆಮ್ಮೆಯಿಂದ ನಡೆಯುವ ಬೇಟೆನಾಯಿ;
ಹೋತ ಮತ್ತು
ತನ್ನ ಜನರ ನಡುವೆ ಇರುವ ರಾಜ.
32 ನೀನು ನಿನ್ನನ್ನು ಹೆಚ್ಚಿಸಿಕೊಂಡು ಮೂಢನಾಗಿದ್ದರೆ, ಕೆಡುಕನ್ನು ಆಲೋಚಿಸುತ್ತಿದ್ದರೆ, ಸ್ವಲ್ಪ ಯೋಚಿಸು.
33 ಹಾಲನ್ನು ಕರೆಯುವವನು ಬೆಣ್ಣೆಮಾಡುವನು. ಮತ್ತೊಬ್ಬನ ಮೂಗನ್ನು ಹೊಡೆದರೆ ರಕ್ತ ಬರುವುದು. ಅಂತೆಯೇ, ನೀನು ಜನರನ್ನು ಕೋಪಗೊಳಿಸಿದರೆ, ಜಗಳವನ್ನು ಎಬ್ಬಿಸುವೆ.
ಮಸ್ಸಾದ ಲೆಮೂವೇಲನ ಜ್ಞಾನೋಕ್ತಿಗಳಿವು
31 ಇವು ರಾಜನಾದ ಲೆಮೂವೇಲನ ಜ್ಞಾನದ ನುಡಿಗಳು. ಅವನ ತಾಯಿಯು ಅವನಿಗೆ ಇವುಗಳನ್ನು ಉಪದೇಶಿಸಿದ್ದಳು.
2 ನೀನು ನನ್ನ ಮಗನು: ನನ್ನ ಪ್ರಿಯ ಮಗನು: ನಾನು ಪ್ರಾರ್ಥಿಸಿ ಪಡೆದುಕೊಂಡ ಮಗನು ನೀನೇ. 3 ನಿನ್ನ ಶಕ್ತಿಯನ್ನು ಹೆಂಗಸರಲ್ಲಿ ವ್ಯರ್ಥಮಾಡಿಕೊಳ್ಳಬೇಡ. ರಾಜನನ್ನು ನಾಶಮಾಡುವವರು ಹೆಂಗಸರುಗಳೇ. ನಿನ್ನನ್ನು ಅವರಲ್ಲಿ ಹಾಳುಮಾಡಿಕೊಳ್ಳಬೇಡ. 4 ಲೆಮೂವೇಲನೇ, ರಾಜರುಗಳು ಮದ್ಯವನ್ನು ಕುಡಿಯುವುದು ಒಳ್ಳೆಯದಲ್ಲ. ಮದ್ಯಪಾನ ಆಳುವವರಿಗೆ ಒಳ್ಳೆಯದಲ್ಲ. 5 ಅವರು ಅತಿಯಾಗಿ ಕುಡಿದು ಕಟ್ಟಳೆಗಳನ್ನು ಮರೆತು ಬಡವರ ಹಕ್ಕುಗಳನ್ನೆಲ್ಲ ರದ್ದುಮಾಡುವರು. 6 ಸಾಯುವವರಿಗೆ ಮದ್ಯವನ್ನು ಕೊಡು. ವ್ಯಥೆಯಲ್ಲಿರುವವರಿಗೆ ಮದ್ಯವನ್ನು ಕೊಡು. 7 ಆಗ ಅವರು ಕುಡಿದು, ತಮ್ಮ ಬಡತನವನ್ನು ಮರೆತುಬಿಡುವರು, ಅವರು ಕುಡಿದು ತಮ್ಮ ಕಷ್ಟಗಳನ್ನೆಲ್ಲಾ ಮರೆತುಬಿಡುವರು.
8 ತಮಗೋಸ್ಕರ ಮಾತಾಡಲಾರದ ಜನರಿಗೋಸ್ಕರ ಮಾತಾಡು. ಕಷ್ಟದಲ್ಲಿರುವ ಜನರೆಲ್ಲರ ಹಕ್ಕುಗಳಿಗಾಗಿ ಮಾತಾಡು. 9 ಸತ್ಯವಾದವುಗಳ ಪರವಾಗಿ ನಿಂತುಕೋ. ಜನರಿಗೆಲ್ಲಾ ನ್ಯಾಯವಾದ ತೀರ್ಪನ್ನು ಮಾಡು. ಬಡಜನರ ಮತ್ತು ಕೊರತೆಯಲ್ಲಿರುವವರ ಹಕ್ಕುಗಳನ್ನು ಕಾಪಾಡು.
ಯೋಗ್ಯಳಾದ ಹೆಂಡತಿ
10 ಒಳ್ಳೆಯ ಹೆಂಡತಿಯನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ.
ಆಭರಣಕ್ಕಿಂತಲೂ ಹೆಚ್ಚು ಬೆಲೆಬಾಳುವಳು.
11 ಗಂಡನ ನಂಬಿಕೆಗೆ ಆಕೆ ಪಾತ್ರಳು.
ಗಂಡ ಬಡವನಾಗುವುದೇ ಇಲ್ಲ.
12 ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ತನ್ನ ಜೀವಮಾನವೆಲ್ಲಾ ಒಳ್ಳೆಯದನ್ನು ಮಾಡುವಳು.
ಅವನಿಗೆಂದಿಗೂ ತೊಂದರೆ ಮಾಡುವುದಿಲ್ಲ.
13 ಅವಳು ಬಟ್ಟೆ ತಯಾರಿಸಲು ಉಣ್ಣೆಯನ್ನು
ಸೆಣಬಿನ ನಾರನ್ನು ಯಾವಾಗಲೂ ಶೇಖರಿಸುವಳು.
14 ವ್ಯಾಪಾರದ ಹಡಗುಗಳಂತೆ ದೂರದಿಂದ ಬೇಕಾದ ಆಹಾರವನ್ನು
ದೂರದಿಂದ ಮನೆಗೆ ತರುವಳು.
15 ಇನ್ನೂ ಕತ್ತಲಿರುವಾಗಲೇ ಆಕೆ ಎದ್ದೇಳುವಳು.
ತನ್ನ ಕುಟುಂಬದವರಿಗೂ ತನ್ನ ಸೇವಕಿಯರಿಗೂ ಊಟ ಕೊಡುವಳು.
16 ಆಕೆ ಜಮೀನನ್ನು ಕೊಂಡುಕೊಳ್ಳುವಳು;
ಗಳಿಸಿದ ಹಣವನ್ನು ದ್ರಾಕ್ಷಿತೋಟಕ್ಕೆ ಉಪಯೋಗಿಸುವಳು.
17 ಆಕೆ ತುಂಬ ಕಷ್ಟಪಟ್ಟು ಕೆಲಸಮಾಡುವಳು.
ಬಲವಾಗಿದ್ದಾಳೆ; ತನ್ನ ಕೆಲಸಗಳನ್ನೆಲ್ಲಾ ಮಾಡಲು ಶಕ್ತಳಾಗಿದ್ದಾಳೆ.
18 ಆಕೆ ತಾನು ತಯಾರಿಸಿದ ವಸ್ತುಗಳನ್ನು ಒಳ್ಳೆಯ ಲಾಭಕ್ಕೆ ಮಾರುವಳು.
ಬಹುಹೊತ್ತಿನವರೆಗೂ ಆಕೆ ಕೆಲಸ ಮಾಡುವಳು.
19 ಆಕೆ ತಾನೇ ದಾರವನ್ನು ತಯಾರಿಸುವಳು;
ಬಟ್ಟೆಯನ್ನು ನೇಯುವಳು.
20 ಆಕೆ ಯಾವಾಗಲೂ ಬಡವರಿಗೆ ಕೊಡುವಳು;
ಕೊರತೆಯಲ್ಲಿರುವ ಜನರಿಗೆ ಸಹಾಯ ಮಾಡುವಳು.
21 ಹಿಮ ಸುರಿಯುವಾಗ, ಆಕೆ ತನ್ನ ಕುಟುಂಬದ ಬಗ್ಗೆ ಚಿಂತಿಸಬೇಕಿಲ್ಲ;
ಆಕೆ ಅವರೆಲ್ಲರಿಗೆ ಬೆಚ್ಚಗಿರುವ ಬಟ್ಟೆಗಳನ್ನು ಕೊಟ್ಟಿದ್ದಾಳೆ.
22 ಆಕೆ ಹೊದಿಕೆಗಳನ್ನು ತಯಾರಿಸುವಳು.
ಆಕೆಯು ಶ್ರೇಷ್ಠವಾದ ನಾರಗಸೆಯ ದಾರದಿಂದ ಮಾಡಿದ ಬಟ್ಟೆಗಳನ್ನು ಧರಿಸಿಕೊಳ್ಳುವಳು.
23 ಜನರು ಆಕೆಯ ಗಂಡನನ್ನು ಗೌರವಿಸುವರು.
ಅವನು ದೇಶದ ಹಿರಿಯರುಗಳಲ್ಲಿ ಒಬ್ಬನಾಗಿರುವನು.
24 ಆಕೆ ಒಳ್ಳೆಯ ವ್ಯಾಪಾರ ಮಾಡುವಳು;
ಉಡುಪುಗಳನ್ನೂ ನಡುಪಟ್ಟಿಗಳನ್ನೂ ತಯಾರಿಸಿ ಮಾರುವಳು.
25 ಆಕೆಯು ಶಕ್ತಿಯನ್ನೂ ಗಾಂಭೀರ್ಯವನ್ನೂ ಪ್ರದರ್ಶಿಸುವಳು;
ಹರ್ಷದಿಂದ ಭವಿಷ್ಯತ್ತನ್ನು ಎದುರುನೋಡುವಳು.
26 ಆಕೆಯು ಜ್ಞಾನದಿಂದ ಮಾತಾಡುವಳು;
ಪ್ರೀತಿಯಿಂದ ಸದುಪದೇಶ ಮಾಡುವಳು.
27 ಆಕೆಯು ಚಟುವಟಿಕೆಯಿಂದಿದ್ದು
ಗೃಹಕಾರ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
28 ಮಕ್ಕಳು ಎದ್ದುನಿಂತು ಆಕೆಯನ್ನು ಅಭಿನಂದಿಸುವರು.
ಗಂಡನು ಅವಳನ್ನು ಹೊಗಳುವನು.
29 “ಅನೇಕ ಹೆಂಗಸರು ಮೆಚ್ಚಿಕೆಗೆ ಪಾತ್ರವಾದ ಕಾರ್ಯಗಳನ್ನು ಮಾಡಿದ್ದಾರೆ.
ಆದರೆ ನೀನು ಅವರೆಲ್ಲರಿಗಿಂತಲೂ ಅತ್ಯುತ್ತಮಳು” ಎಂದು ಆಕೆಯ ಗಂಡನು ಹೊಗಳುವನು.
30 ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು.
ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು.
31 ಆಕೆ ತನಗೆ ಯೋಗ್ಯವಾದ ಪ್ರತಿಫಲವನ್ನು ಹೊಂದಬೇಕು.
ಆಕೆಯ ಕಾರ್ಯಗಳಿಗಾಗಿ ಜನರೆಲ್ಲರೂ ಆಕೆಯನ್ನು ಬಹಿರಂಗವಾಗಿ ಸನ್ಮಾನಿಸಬೇಕು.
ಪೌಲನು ಮತ್ತು ಸುಳ್ಳು ಅಪೊಸ್ತಲರು
11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ. 2 ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ. 3 ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ. 4 ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.
5 ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ. 6 ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.
7 ನಾನು ನಿಮಗೆ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರನ್ನಾಗಿ ಮಾಡಲು ನನ್ನನ್ನು ತಗ್ಗಿಸಿಕೊಂಡೆನು. ಅದು ತಪ್ಪೆಂದು ಭಾವಿಸುತ್ತೀರೋ? 8 ನಾನು ಇತರ ಸಭೆಗಳಿಂದ ನಿಮ್ಮ ಮಧ್ಯದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತೆಗೆದುಕೊಂಡೆನು. 9 ನಾನು ನಿಮ್ಮಲ್ಲಿದ್ದಾಗ ನನ್ನ ಯಾವ ಕೊರತೆಯಲ್ಲಿಯೂ ನಿಮಗೆ ತೊಂದರೆ ಕೊಡಲಿಲ್ಲ. ಮಕೆದೋನಿಯದಿಂದ ಬಂದಿದ್ದ ಸಹೋದರರು ನನಗೆ ಬೇಕಾಗಿದ್ದದ್ದನ್ನೆಲ್ಲ ಕೊಟ್ಟರು. ನಾನು ನಿಮಗೆ ಯಾವ ರೀತಿಯಲ್ಲಿಯೂ ಭಾರವಾಗದಂತೆ ನೋಡಿಕೊಂಡೆನು. ಇನ್ನು ಮುಂದೆಯೂ ನಾನು ನಿಮಗೆ ಭಾರವಾಗಿರುವುದಿಲ್ಲ. 10 ಈ ವಿಷಯದಲ್ಲಿ ನಾನು ಹೆಮ್ಮೆಪಡುವುದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಕ್ರಿಸ್ತನ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. 11 ನಾನು ನಿಮಗೆ ಭಾರವಾಗದಿರುವುದು ನಿಮ್ಮ ಮೇಲೆ ನನಗೆ ಪ್ರೀತಿಯಿಲ್ಲದಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ.
12 ಈಗ ನಾನು ಮಾಡುತ್ತಿರುವುದನ್ನು ಮುಂದುವರೆಸುತ್ತೇನೆ. ಆ ಜನರಿಗೆ ಹೊಗಳಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ. 13 ಅವರು ನಿಜ ಅಪೊಸ್ತಲರಲ್ಲ. ಅವರು ಮೋಸಗಾರರಾದ ಕೆಲಸಗಾರರು. ತಾವು ಕ್ರಿಸ್ತನ ಅಪೊಸ್ತಲರಲ್ಲದಿದ್ದರೂ ಜನರು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತಿಳಿದುಕೊಳ್ಳುವಂತೆ ನಟಿಸುತ್ತಾರೆ. 14 ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ. 15 ಹೀಗಿರಲು ಸೈತಾನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆಯಾಗುವುದು.
Kannada Holy Bible: Easy-to-Read Version. All rights reserved. © 1997 Bible League International