Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಪರಮ ಗೀತ 6-8

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ನಿನ್ನ ಪ್ರಿಯನು ಎಲ್ಲಿಗೆ ಹೋದನು?
    ನೀನು ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿ.
ನಿನ್ನ ಪ್ರಿಯನು ಯಾವ ಕಡೆಗೆ ಹೋದನು?
    ನೀನು ಹೇಳಿದರೆ, ನಾವು ನಿನಗೋಸ್ಕರ ಅವನನ್ನು ಹುಡುಕುವೆವು.

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

ನನ್ನ ಪ್ರಿಯನು ತನ್ನ ತೋಟದಲ್ಲಿರುವ
    ಸುಗಂಧಸಸ್ಯಗಳ ದಿಬ್ಬಗಳಿಗೆ ಹೋಗಿದ್ದಾನೆ;
ತೋಟಗಳಲ್ಲಿ ಮಂದೆಯನ್ನು ಮೇಯಿಸುವುದಕ್ಕೂ
    ನೆಲದಾವರೆಗಳನ್ನು ಕೊಯ್ಯುವುದಕ್ಕೂ ಹೋಗಿದ್ದಾನೆ.
ನನ್ನ ಪ್ರಿಯನು ನನ್ನವನೇ; ನಾನು ಅವನವಳೇ.
    ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

ಪ್ರಿಯಕರನು ಪ್ರಿಯತಮೆಗೆ

ನನ್ನ ಪ್ರಿಯಳೇ, ನೀನು ತಿರ್ಚ ಪಟ್ಟಣದಂತೆ ಸುಂದರಿ.
    ನೀನು ಜೆರುಸಲೇಮಿನಂತೆ ರೂಪವತಿ;
    ಜಯಧ್ವಜವೆತ್ತಿರುವ ಸೈನ್ಯದಂತೆ ಪ್ರಭಾವವುಳ್ಳವಳು.
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು;
    ಅವು ನನ್ನನ್ನು ಉದ್ರೇಕಗೊಳಿಸುತ್ತವೆ.
ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ
    ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
ನಿನ್ನ ಹಲ್ಲುಗಳು
    ಉಣ್ಣೆ ಕತ್ತಿರಿಸಿದ ನಂತರ ಸ್ನಾನ ಮಾಡಿಕೊಂಡು
ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ
    ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.
ಮುಸುಕಿನೊಳಗಿರುವ ನಿನ್ನ ಕೆನ್ನೆಗಳು
    ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.

ಅರವತ್ತು ಮಂದಿ ರಾಣಿಯರೂ
    ಎಂಭತ್ತು ಮಂದಿ ಉಪಪತ್ನಿಯರೂ
    ಲೆಕ್ಕವಿಲ್ಲದಷ್ಟು ಯುವತಿಯರೂ ನನಗಿದ್ದಾರೆ.
ಆದರೆ ನನ್ನ ಪಾರಿವಾಳವೂ ನಿರ್ಮಲೆಯೂ
    ಒಬ್ಬಳೇ ಒಬ್ಬಳು.
ಆಕೆಯು ತನ್ನ ತಾಯಿಗೆ ಅಚ್ಚುಮೆಚ್ಚಿನವಳು.
    ಯುವತಿಯರು ಆಕೆಯನ್ನು ಕಂಡು ಹೊಗಳುವರು.
ಹೌದು, ರಾಣಿಯರೂ ಉಪಪತ್ನಿಯರೂ
    ಆಕೆಯನ್ನು ಹೊಗಳುವರು.

ಪ್ರಿಯತಮೆಗೆ ಸ್ತ್ರೀಯರ ಪ್ರಶಂಸೆ

10 ಸೂರ್ಯೋದಯದಂತೆ ಪ್ರಕಾಶಿಸುತ್ತಿರುವ
    ಈ ಯುವತಿ ಯಾರು?
ಚಂದ್ರನಂತೆ ಸೌಮ್ಯಳೂ
    ಸೂರ್ಯನಂತೆ ಶುಭ್ರಳೂ
ಜಯಧ್ವಜವೆತ್ತಿರುವ ಸೈನ್ಯದಂತೆ
    ಪ್ರಭಾವವುಳ್ಳವಳೂ ಆಗಿರುವ ಇವಳಾರು?

ಪ್ರಿಯಕರನು ಪ್ರಿಯತಮೆಗೆ

11 ಕಣಿವೆಯ ಸಸ್ಯಗಳು ಹಣ್ಣುಬಿಟ್ಟಿವೆಯೋ
    ದ್ರಾಕ್ಷಿಬಳ್ಳಿಗಳು ಚಿಗುರಿದೆಯೋ
ದಾಳಿಂಬರಗಳು ಹೂ ಬಿಟ್ಟಿವೆಯೋ ಎಂದು ನೋಡಲು
    ಬಾದಾಮಿ ಮರಗಳ ತೋಟಕ್ಕೆ ಹೋದೆನು.
12 ನಾನು ಅದನ್ನು ಗ್ರಹಿಸಿಕೊಳ್ಳುವುದಕ್ಕಿಂತ ಮೊದಲೇ,
    ನನ್ನ ಮನಸ್ಸು ದೇಶದ ಪ್ರಧಾನರ ರಥಗಳ ನಡುವೆ ನನ್ನನ್ನು ಕುಳ್ಳರಿಸಿತು.

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

13 ಶೂಲಾಮಿತಳೇ, ಹಿಂತಿರುಗಿ ಬಾ, ಹಿಂತಿರುಗಿ ಬಾ!
    ಹಿಂತಿರುಗಿ ಬಾ, ಹಿಂತಿರುಗಿ ಬಾ, ನಾವು ನಿನ್ನನ್ನು ನೋಡಬೇಕು!

ಮಹನಯಿಮ್ ನೃತ್ಯವನ್ನು[a] ನೋಡುವಂತೆ
    ಶೂಲಾಮಿತಳನ್ನೇಕೆ ನೀವು ದೃಷ್ಟಿಸಿ ನೋಡುತ್ತಿರುವಿರಿ?

ಪ್ರಿಯಕರನ ಪ್ರಶಂಸೆ

ರಾಜಕುಮಾರಿಯೇ, ಪಾದರಕ್ಷೆಗಳಲ್ಲಿರುವ ನಿನ್ನ ಪಾದಗಳು ಎಷ್ಟೋ ಸುಂದರವಾಗಿವೆ.
    ನಿನ್ನ ದುಂಡಾದ ತೊಡೆಗಳು ಶಿಲ್ಪಿಯು ಮಾಡಿದ ಆಭರಣಗಳಂತಿವೆ.
ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ
    ಗುಂಡು ಬಟ್ಟಲಿನಂತಿದೆ.[b]
ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ
    ಗೋಧಿಯ ರಾಶಿಯಂತಿದೆ.
ನಿನ್ನ ಸ್ತನಗಳು ಪ್ರಾಯದ ಸಾರಂಗದ
    ಎರಡು ಅವಳಿ ಮರಿಗಳಂತಿವೆ.
ನಿನ್ನ ಕೊರಳು ದಂತಗೋಪುರದಂತಿದೆ.
ನಿನ್ನ ಕಣ್ಣುಗಳು ಬತ್‌ರಬ್ಬೀಮ್‌ನ ಬಾಗಿಲ ಬಳಿಯಲ್ಲಿರುವ
    ಹೆಷ್ಬೋನಿನ ಸರೋವರಗಳಂತಿವೆ.
ನಿನ್ನ ಮೂಗು ದಮಸ್ಕದ ಕಡೆಗಿರುವ
    ಲೆಬನೋನಿನ ಗೋಪುರದಂತಿದೆ.
ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ.
    ನಿನ್ನ ತಲೆಕೂದಲು ರೇಷ್ಮೆಯಂತಿದೆ.
ನಿನ್ನ ಉದ್ದವಾದ, ಸುಂದರವಾದ ಕೂದಲು
    ರಾಜನನ್ನು ಸಹ ಆಕರ್ಷಿಸುತ್ತದೆ!
ಪ್ರಿಯಳೇ, ನೀನೆಷ್ಟೋ ಸೌಂದರ್ಯವತಿ.
    ನಿನ್ನ ರೂಪ ಮನೋಹರ; ನಿನ್ನ ಪ್ರೇಮವು ಆನಂದ ಪೂರ್ಣವಾಗಿದೆ.
ನೀನು ಖರ್ಜೂರದ ಮರದಂತೆ ಎತ್ತರವಾಗಿರುವೆ.
    ನಿನ್ನ ಸ್ತನಗಳು ಖರ್ಜೂರ ಮರದ ಹಣ್ಣಿನ ಗೊಂಚಲುಗಳಂತಿವೆ.
ನಾನು ಖರ್ಜೂರದ ಮರವನ್ನು ಹತ್ತುವೆನು.
    ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು.

ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ.
    ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.
ನಿನ್ನ ಬಾಯಿ ಉತ್ತಮವಾದ ದ್ರಾಕ್ಷಾರಸದಂತಿರಲಿ.
    ನನ್ನ ಪ್ರಿಯೆಗಾಗಿ ಈ ದ್ರಾಕ್ಷಾರಸವು ಮೆಲ್ಲನೆ ಇಳಿದುಹೋಗುವುದು.
    ನಿದ್ರಿಸುವವರ ತುಟಿಗಳಲ್ಲಿ ಅದು ಸರಾಗವಾಗಿ ಹರಿದುಹೋಗುವುದು.

ಪ್ರಿಯತಮೆ ಪ್ರಿಯಕರನಿಗೆ

10 ನಾನು ನನ್ನ ಪ್ರಿಯನವಳೇ.
    ಅವನಿಗೆ ನನ್ನ ಮೇಲೇ ಆಸೆ.
11 ನನ್ನ ಪ್ರಿಯನೇ, ಬಾ!
    ನಾವು ತೋಟಕ್ಕೆ ಹೋಗೋಣ,
    ನಾವು ಹಳ್ಳಿಗಳಲ್ಲಿ ಇರೋಣ.
12 ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ.
    ದ್ರಾಕ್ಷೆಯು ಚಿಗುರಿದೆಯೋ
ಅದರ ಹೂವು ಅರಳಿದೆಯೋ
    ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ.
    ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.

13 ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ.
    ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ
ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು
    ನಮ್ಮ ಬಾಗಿಲ ಬಳಿಯಲ್ಲಿವೆ.

ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
    ನಾನು ನಿನ್ನನ್ನು ಹೊರಗೆ ಕಂಡು
ನಿನಗೆ ಮುದ್ದಿಡುತ್ತಿದ್ದೆನು;
    ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ!
ನಾನು ನಿನ್ನನ್ನು ನಡೆಸಿಕೊಂಡು
    ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು.
ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು,
    ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು.

ಪ್ರಿಯತಮೆ ಸ್ತ್ರೀಯರಿಗೆ

ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ
    ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು.

ಜೆರುಸಲೇಮಿನ ಸ್ತ್ರೀಯರೇ,
    ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು
    ನನಗೆ ಪ್ರಮಾಣ ಮಾಡಿರಿ.

ಜೆರುಸಲೇಮಿನ ಸ್ತ್ರೀಯರು

ತನ್ನ ಪ್ರಿಯನನ್ನು ಒರಗಿಕೊಂಡು
    ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು?

ಪ್ರಿಯತಮೆ ಪ್ರಿಯಕರನಿಗೆ

ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು.
    ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ.
    ನೀನು ಹುಟ್ಟಿದ್ದೂ ಅಲ್ಲಿಯೇ.
ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ,
    ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ.
ಪ್ರೀತಿಯು ಮರಣದಷ್ಟೇ ಬಲಿಷ್ಠ;
    ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ.
ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ.
    ಅದು ಅತಿ ತೀಕ್ಷ್ಣವಾದ ಅಗ್ನಿಯೇ.
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು;
    ನದಿಗಳು ಪ್ರೀತಿಯನ್ನು ಮುಳುಗಿಸಲಾರವು.
ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ
    ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.

ಪ್ರಿಯತಮೆಯ ಸಹೋದರರು

ನಮಗೆ ಚಿಕ್ಕ ತಂಗಿಯಿದ್ದಾಳೆ,
    ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ.
ಆಕೆಯ ನಿಶ್ಚಿತಾರ್ಥ ದಿನದಲ್ಲಿ
    ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು?

ಆಕೆ ಕೋಟೆಯಾಗಿದ್ದರೆ
    ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು.
ಆಕೆ ಬಾಗಿಲಾಗಿದ್ದರೆ,
    ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು.

ಪ್ರಿಯತಮೆಯು ಸಹೋದರರಿಗೆ ಕೊಡುವ ಉತ್ತರ

10 ನಾನು ಕೋಟೆ;
    ನನ್ನ ಸ್ತನಗಳೇ ಅದರ ಗೋಪುರಗಳು.
    ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು.

ಪ್ರಿಯಕರ

11 ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿತೋಟವಿತ್ತು.
    ಅವನು ಅದನ್ನು ರೈತರಿಗೆ ಒಪ್ಪಿಸಿದನು.
ಪ್ರತಿಯೊಬ್ಬನು ಹಣ್ಣಿಗಾಗಿ
    ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು.

12 ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ.
    ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ.
    ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ.

ಪ್ರಿಯಕರ ಪ್ರಿಯತಮೆಗೆ

13 ಉದ್ಯಾನವನಗಳಲ್ಲಿ ವಾಸಿಸುವವಳೇ,
    ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ.

ಪ್ರಿಯತಮೆ ಪ್ರಿಯಕರನಿಗೆ

14 ನನ್ನ ಪ್ರಿಯನೇ, ತ್ವರೆಪಡು.
    ಸುಗಂಧಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು.

ಗಲಾತ್ಯದವರಿಗೆ 4

ನಾನು ಮತ್ತೆ ಹೇಳುವುದೇನೆಂದರೆ: ಬಾಧ್ಯಸ್ತನು ಬಾಲಕನಾಗಿರುವಾಗ ಅವನಿಗೂ ಗುಲಾಮನಿಗೂ ಯಾವ ವ್ಯತ್ಯಾಸವೂ ಇಲ್ಲ. ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಅವನು ಗುಲಾಮನಂತಿರುವನು. ಏಕೆಂದರೆ ಅವನಿನ್ನೂ ಬಾಲಕನಾಗಿರುವಾಗ ಪರಿಪಾಲಕರಿಗೆ ಮತ್ತು ನಿರ್ವಾಹಕರಿಗೆ ವಿಧೇಯನಾಗಿರಬೇಕು. ಆದರೆ ತನ್ನ ತಂದೆಯು ಗೊತ್ತುಪಡಿಸಿದ ವಯಸ್ಸನ್ನು ತಲುಪಿದಾಗ ಆ ಬಾಲಕನು ಸ್ವತಂತ್ರನಾಗುವನು. ಅದೇ ರೀತಿಯಲ್ಲಿ ನಾವು ಮೊದಲು ಮಕ್ಕಳಂತಿದ್ದೆವು. ಈ ಪ್ರಪಂಚದ ಉಪಯೋಗವಿಲ್ಲದ ನಿಯಮಗಳಿಗೆ ನಾವು ಗುಲಾಮರಾಗಿದ್ದೆವು. ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು. ಧರ್ಮಶಾಸ್ತ್ರದ ಅಧೀನದಲ್ಲಿದ್ದ ನಮ್ಮನ್ನು ಬಿಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂಬುದೇ ದೇವರ ಉದ್ದೇಶವಾಗಿತ್ತು.

ನೀವು ದೇವರ ಮಕ್ಕಳು. ಆದಕಾರಣವೇ ದೇವರು ತನ್ನ ಆತ್ಮವನ್ನು ನಿಮ್ಮ ಹೃದಯಗಳಿಗೆ ಕಳುಹಿಸಿದನು. “ತಂದೆಯೇ, ಅಪ್ಪಾ ತಂದೆಯೇ” ಎಂದು ಆತ್ಮನು ಕೂಗುತ್ತಾನೆ. ಆದ್ದರಿಂದ ಈಗ ನೀನು ಮೊದಲಿನಂತೆ ಗುಲಾಮನಲ್ಲ. ನೀನು ದೇವರ ಮಗನು. ನೀನು ದೇವರ ಮಗನಾಗಿರುವುದರಿಂದ ಆತನು ನಿನ್ನನ್ನು ಬಾಧ್ಯಸ್ತನನ್ನಾಗಿಯೂ ಮಾಡಿದ್ದಾನೆ.

ಗಲಾತ್ಯ ಕ್ರೈಸ್ತರ ಮೇಲೆ ಪೌಲನ ಪ್ರೀತಿ

ಪೂರ್ವಕಾಲದಲ್ಲಿ ನೀವು ದೇವರನ್ನು ತಿಳಿಯದೆ ಸುಳ್ಳು ದೇವರುಗಳಿಗೆ ಗುಲಾಮರಾಗಿದ್ದಿರಿ. ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? 10 ವಿಶೇಷವಾದ ದಿನಗಳ, ಮಾಸಗಳ, ಕಾಲಮಾನಗಳ ಮತ್ತು ವರ್ಷಗಳ ಕುರಿತು ಧರ್ಮಶಾಸ್ತ್ರವು ಹೇಳುವ ಉಪದೇಶವನ್ನು ಇನ್ನೂ ಅನುಸರಿಸುತ್ತಿದ್ದೀರಿ. 11 ನಿಮ್ಮ ವಿಷಯದಲ್ಲಿ ನನಗೆ ಭಯವಾಗಿದೆ. ನಿಮಗೋಸ್ಕರ ನಾನು ಪಟ್ಟ ಪ್ರಯಾಸವು ವ್ಯರ್ಥವಾಗುವುದೆಂಬ ಭಯ ನನಗಿದೆ.

12 ಸಹೋದರ ಸಹೋದರಿಯರೇ, ನಾನೂ ನಿಮ್ಮಂತಿದ್ದೆನು. ಆದ್ದರಿಂದ ದಯವಿಟ್ಟು ನನ್ನಂತೆ ಆಗಿರಿ. 13 ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ. 14 ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ. 15 ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ. 16 ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ಈಗ ನಿಮ್ಮ ಶತ್ರುವಾಗಿದ್ದೇನೋ?

17 ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು. 18 ಆದರೆ ಅವರ ಉದ್ದೇಶವು ಒಳ್ಳೆಯದಾಗಿದ್ದಾಗ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ. ಇದು ಸತ್ಯ. ನಾನು ನಿಮ್ಮೊಂದಿಗಿರುವಾಗಲೂ ನಿಮ್ಮಿಂದ ದೂರವಿರುವಾಗಲೂ ಇದು ಸತ್ಯ. 19 ನನ್ನ ಪ್ರಿಯ ಮಕ್ಕಳೇ, ಪ್ರಸವವೇದನೆಪಡುವ ತಾಯಿಯಂತೆ ನಾನು ನಿಮ್ಮ ವಿಷಯದಲ್ಲಿ ನೋವುಳ್ಳವನಾಗಿದ್ದೇನೆ. ನೀವು ನಿಜವಾಗಿಯೂ ಕ್ರಿಸ್ತನಂತಾಗುವ ತನಕ ನನಗೆ ಈ ನೋವಿರುತ್ತದೆ. 20 ಈಗ ನಾನು ನಿಮ್ಮೊಂದಿಗಿದ್ದಿದ್ದರೆ ಬೇರೊಂದು ರೀತಿಯಲ್ಲಿ ತಿಳಿಸಬಹುದಾಗಿತ್ತು. ನಿಮ್ಮ ವಿಷಯದಲ್ಲಿ ಈಗ ಏನು ಮಾಡಬೇಕೊ ನನಗೆ ತಿಳಿಯದು.

ಹಾಗರಳ ಮತ್ತು ಸಾರಳ ಉದಾಹರಣೆ

21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.

24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
    ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
    ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
    ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)

28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International