Old/New Testament
ಯಾರು ಮೇಲು? ಸತ್ತವರೋ? ಬದುಕಿರುವವರೋ?
4 ನಾನು ದೃಷ್ಟಿಸಿ ನೋಡಿದಾಗ, ಅನೇಕ ಜನರು ಹಿಂಸೆಗೆ ಒಳಗಾಗಿರುವುದನ್ನು ಕಂಡೆನು. ಅವರ ಕಣ್ಣೀರನ್ನೂ ನೋಡಿದೆನು. ದುಃಖದಲ್ಲಿದ್ದ ಅವರನ್ನು ಸಂತೈಸಲು ಒಬ್ಬರೂ ಇರಲಿಲ್ಲ. ಹಿಂಸಕರು ಎಲ್ಲಾ ಅಧಿಕಾರವನ್ನು ಹೊಂದಿದ್ದರು; ಅವರಿಂದ ಹಿಂಸೆಗೆ ಒಳಗಾದವರನ್ನು ಸಂತೈಸಲು ಯಾರೂ ಇರಲಿಲ್ಲ. 2 ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ನಿರ್ಧರಿಸಿದೆನು. 3 ಹುಟ್ಟುವಾಗಲೇ ಸತ್ತು ಹೋದವರಿಗೆ ಒಳ್ಳೆಯದೇ ಆಯಿತು! ಯಾಕೆಂದರೆ ಈ ಲೋಕದಲ್ಲಿ ನಡೆಯುವ ಕೆಟ್ಟದ್ದನ್ನು ಅವರು ನೋಡಲೇ ಇಲ್ಲ.
ಕಷ್ಟಪಟ್ಟು ದುಡಿಯುವುದೇಕೆ?
4 ಆಮೇಲೆ ನಾನು, “ಜನರು ಪ್ರಯಾಸಪಟ್ಟು ಕೆಲಸ ಮಾಡುವುದೇಕೆ?” ಎಂದು ಆಲೋಚಿಸಿದೆ. ಜನರು ಏಳಿಗೆ ಹೊಂದಲು ಮತ್ತು ಬೇರೆಯವರಿಗಿಂತ ಹೆಚ್ಚು ಅಭಿವೃದ್ಧಿಯಾಗಲು ಪ್ರಯತ್ನಿಸುವರು; ಅದಕ್ಕೆ ಅವರ ಮತ್ಸರವೇ ಕಾರಣ. ಇದೂ ಗಾಳಿಯನ್ನು ಹಿಂದಟ್ಟಿದ್ದ ಹಾಗೆ ವ್ಯರ್ಥ.
5 ಕೆಲವರು ಹೇಳುವಂತೆ, “ಏನೂ ಮಾಡದೆ ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಮೂಢತನ. ದುಡಿಯದವನು ಹಸಿವೆಯಿಂದ ಸಾಯುವನು.” 6 ಇದೇನೊ ನಿಜವಿರಬಹುದು. ಆದರೆ ದುರಾಶೆಪಡುವುದಕ್ಕಿಂತ ಇರುವುದರಲ್ಲಿ ತೃಪ್ತರಾಗಿರುವುದೇ ಮೇಲು.
7 ಲೋಕದಲ್ಲಿ ಮತ್ತೊಂದು ವ್ಯರ್ಥವನ್ನು ಕಂಡೆನು. 8 ಸ್ವಂತ ಕುಟುಂಬವನ್ನು ಹೊಂದಿಲ್ಲದವನು ಅಂದರೆ ಅಣ್ಣತಮ್ಮಂದಿರಾಗಲಿ ಮಕ್ಕಳಾಗಲಿ ಇಲ್ಲದವನು ಸಹ ಪ್ರಯಾಸಪಟ್ಟು ದುಡಿಯುವನು. ಅವನಿಗೂ ತನ್ನ ಆಸ್ತಿಯಲ್ಲಿ ತೃಪ್ತಿಯಿಲ್ಲ. ಅವನು ಬಿಡುವಿಲ್ಲದೆ ಪ್ರಯಾಸಪಟ್ಟು ದುಡಿಯುವನು. “ನಾನೇಕೆ ಪ್ರಯಾಸಪಟ್ಟು ದುಡಿಯುತ್ತಿರುವೆ? ನಾನೇಕೆ ಜೀವನದ ಸುಖವನ್ನು ಅನುಭವಿಸುತ್ತಿಲ್ಲ?” ಎಂದು ಅವನು ಆಲೋಚಿಸುವುದೇ ಇಲ್ಲ. ಇದು ಸಹ ಕೆಟ್ಟದ್ದೂ ವ್ಯರ್ಥವಾದದ್ದೂ ಆಗಿದೆ.
ಒಗಟ್ಟಿನಲ್ಲಿ ಬಲವಿದೆ
9 ಇಬ್ಬರು ಒಬ್ಬನಿಗಿಂತಲೂ ಉತ್ತಮ. ಇಬ್ಬರು ಒಟ್ಟಾಗಿ ದುಡಿದರೆ ಹೆಚ್ಚು ಗಳಿಸುವರು.
10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಬಿದ್ದಾಗ ಒಬ್ಬಂಟಿಗನಾಗಿದ್ದರೆ ಎತ್ತಲು ಯಾರೂ ಇಲ್ಲದಿರುವುದರಿಂದ ಅವನಿಗೆ ದುರ್ಗತಿಯಾಗುವುದು.
11 ಇಬ್ಬರು ಒಟ್ಟಿಗೆ ಮಲಗಿಕೊಂಡರೆ ಅವರಿಬ್ಬರಿಗೂ ಬೆಚ್ಚಗಾಗುವುದು; ಆದರೆ ಒಬ್ಬಂಟಿಗನಿಗೆ ಬೆಚ್ಚಗಾಗುವುದಿಲ್ಲ.
12 ವೈರಿಯೊಬ್ಬನು ಒಬ್ಬನನ್ನು ಸೋಲಿಸಬಹುದು; ಆದರೆ ಇಬ್ಬರನ್ನು ಸೋಲಿಸಲು ಅವನಿಗೆ ಕಷ್ಟವಾಗುವುದು; ಒಂದುವೇಳೆ ಮೂವರಿದ್ದರೆ ಅವರು ಮೂರೆಳೆಯ ಹಗ್ಗದಂತೆ ಇರುವುದರಿಂದ ಅವನಿಗೆ ಮತ್ತಷ್ಟು ಕಷ್ಟವಾಗುವುದು.
ಜನರು, ರಾಜಕೀಯ ಮತ್ತು ಪ್ರಖ್ಯಾತಿ
13 ಜ್ಞಾನಿಯಾದ ಬಡಯುವಕನು ಎಚ್ಚರದ ಮಾತಿಗೆ ಕಿವಿಗೊಡದ ಮೂಢ ವೃದ್ಧರಾಜನಿಗಿಂತ ಉತ್ತಮ. 14 ಆ ಬಡಯುವಕನು ದೇಶದ ಒಂದು ಬಡಕುಟುಂಬದಲ್ಲಿ ಹುಟ್ಟಿದ್ದಿರಬಹುದು ಅಥವಾ ದೇಶವನ್ನು ಆಳುವುದಕ್ಕಾಗಿ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟಿರಬಹುದು. 15 ಆದರೆ ನಾನು ಗಮನಿಸಿದ ಪ್ರಕಾರ ಜನರು ಆ ಯೌವನಸ್ಥನ ಪಕ್ಷವಹಿಸುವರು. ಅವನು ಹೊಸರಾಜನಾಗುವನು. 16 ಅನೇಕಾನೇಕ ಜನರು ಆ ಯೌವನಸ್ಥನಿಗೆ ಬೆಂಬಲನೀಡುವರು. ಆದರೆ ಕೊನೆಗಾಲದಲ್ಲಿ ಅವರೇ ಅವನನ್ನು ಇಷ್ಟಪಡುವುದಿಲ್ಲ. ಇದು ಸಹ ಗಾಳಿಯನ್ನು ಹಿಂದಟ್ಟಿದಂತೆ ವ್ಯರ್ಥ.
ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ
5 ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ. 2 ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:
3 “ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ
ಮೂಢನು ಅನೇಕ ಮಾತುಗಳನ್ನಾಡುವನು.”
4 ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ. 5 ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ. 6 ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು. 7 ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
ಯಾವನೂ ಸರ್ವಾಧಿಪತಿಯಲ್ಲ
8 ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು. 9 ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ.
ಐಶ್ವರ್ಯವು ಸಂತೋಷವನ್ನು ಖರೀದಿ ಮಾಡಲಾರದು
10 ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ.
11 ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ.
12 ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೋ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.
13 ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ. 14 ಬಳಿಕ ಅವನು ಯಾವುದೋ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ.
15 ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು. 16 ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು? 17 ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ.
ನಿನ್ನ ಜೀವನದ ಕೆಲಸದಲ್ಲಿ ಆನಂದಿಸು
18 ನಾನು ಕಂಡುಕೊಂಡದ್ದೇನೆಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು.
19 ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ. 20 ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪುಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ.
ಐಶ್ವರ್ಯವು ಸಂತೋಷವನ್ನು ಕೊಡಲಾರದು
6 ಈ ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ. 2 ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ.
3 ಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ಸುಖತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ. 4 ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು. 5 ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. 6 ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಆ ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು.
7 ಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ. 8 ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು, 9 ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ.
10-11 ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.
12 ಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು.
ಪೌಲನ ಜೀವಿತದಲ್ಲಾದ ವಿಶೇಷ ಆಶೀರ್ವಾದ
12 ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ನನಗೆ ಅವಶ್ಯವಾಗಿದೆ. ಆದ್ದರಿಂದ ನನಗೆ ಪ್ರಭುವಿನಿಂದಾದ ದರ್ಶನಗಳ ಮತ್ತು ಪ್ರಕಟಣೆಗಳ ಬಗ್ಗೆ ಹೇಳುತ್ತೇನೆ. 2 ಮೂರನೆಯ ಆಕಾಶಕ್ಕೆ ಒಯ್ಯಲ್ಪಟ್ಟಿದ್ದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆನು. ಇದು ಸಂಭವಿಸಿ ಹದಿನಾಲ್ಕು ವರ್ಷಗಳಾದವು. ಆ ವ್ಯಕ್ತಿಯು ದೇಹಸಹಿತವಾಗಿ ಹೋಗಿದ್ದನೊ ಅಥವಾ ದೇಹರಹಿತನಾಗಿ ಹೋಗಿದ್ದನೊ ನನಗೆ ಗೊತ್ತಿಲ್ಲ. ದೇವರಿಗೆ ಗೊತ್ತು. 3-4 ಈ ವ್ಯಕ್ತಿಯು ಪರದೈಸಿಗೆ ಒಯ್ಯಲ್ಪಟ್ಟದ್ದು ನನಗೆ ಗೊತ್ತಿದೆ. ಅವನು ನುಡಿಯಲಶಕ್ಯವಾದ ಮತ್ತು ಹೇಳಕೂಡದಂಥ ಮಾತುಗಳನ್ನು ಕೇಳಿದನು. 5 ಅಂಥವನ ಬಗ್ಗೆ ನಾನು ಹೊಗಳಿಕೊಳ್ಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳದೆ, ನನ್ನ ಬಲಹೀನತೆಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.
6 ನನ್ನ ಬಗ್ಗೆ ಹೊಗಳಿಕೊಳ್ಳಬೇಕೆಂದಿದ್ದರೂ ಬುದ್ಧಿಹೀನನಾಗುವುದಿಲ್ಲ, ಏಕೆಂದರೆ ಸತ್ಯವನ್ನೇ ಹೇಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳುವುದಿಲ್ಲ, ಏಕೆಂದರೆ ಜನರು ನನ್ನಲ್ಲಿ ನೋಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ.
7 ಆದರೆ ನನಗೆ ತೋರಿಸಲ್ಪಟ್ಟ ಆಶ್ಚರ್ಯಕರವಾದ ಸಂಗತಿಗಳ ಬಗ್ಗೆ ನಾನು ಬಹು ಹೆಮ್ಮೆಪಡಕೂಡದು. ಆದ್ದರಿಂದಲೇ ಬಾಧೆಯ ಸಮಸ್ಯೆಯೊಂದು ನನಗೆ ಕೊಡಲ್ಪಟ್ಟಿತು. ಸೈತಾನನಿಂದ ಬಂದ ದೂತನೇ ಈ ಸಮಸ್ಯೆ. ಬಹಳವಾಗಿ ಹೆಮ್ಮೆಪಡದಂತೆ ನನ್ನನ್ನು ಹೊಡೆಯುವುದಕ್ಕಾಗಿ ಅದನ್ನು ಕಳುಹಿಸಲಾಗಿತ್ತು. 8 ನನ್ನಿಂದ ಅದನ್ನು ತೆಗೆದುಹಾಕಬೇಕೆಂದು ನಾನು ಮೂರು ಸಲ ಪ್ರಭುವನ್ನು ಬೇಡಿಕೊಂಡೆನು. 9 ಆದರೆ ಪ್ರಭುವು ನನಗೆ, “ನನ್ನ ಕೃಪೆಯೇ ನಿನಗೆ ಸಾಕು, ನೀನು ಬಲಹೀನನಾಗಿರುವಾಗ ನನ್ನ ಶಕ್ತಿಯು ನಿನ್ನಲ್ಲಿ ಪರಿಪೂರ್ಣವಾಗಿರುತ್ತದೆ” ಎಂದು ಹೇಳಿದನು. 10 ಆದ್ದರಿಂದ ನನ್ನಲ್ಲಿ ಬಲಹೀನತೆಗಳಿರುವಾಗ, ಜನರು ನನ್ನ ಬಗ್ಗೆ ಕೆಟ್ಟಸಂಗತಿಗಳನ್ನು ಹೇಳುವಾಗ, ಜನರು ನನ್ನನ್ನು ಹಿಂಸಿಸುವಾಗ, ನನಗೆ ಸಮಸ್ಯೆಗಳಿರುವಾಗ ಸಂತೋಷಿಸುತ್ತೇನೆ. ಇವುಗಳೆಲ್ಲಾ ಕ್ರಿಸ್ತನಿಗೋಸ್ಕರವಾಗಿಯೆ. ಇವುಗಳ ಬಗ್ಗೆ ಸಂತೋಷಪಡುತ್ತೇನೆ, ಏಕೆಂದರೆ ಬಲಹೀನನಾಗಿರುವಾಗಲೇ ನಿಜವಾಗಿಯೂ ಶಕ್ತಿಶಾಲಿಯಾಗಿರುತ್ತೇನೆ.
ಕೊರಿಂಥದ ಕ್ರೈಸ್ತರ ಮೇಲೆ ಪೌಲನಿಗಿರುವ ಪ್ರೀತಿ
11 ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ. ಅದಕ್ಕೆ ನೀವೇ ಕಾರಣರು. ನೀವೇ ನನ್ನ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳಬೇಕು. ನನಗೆ ಯಾವ ಬೆಲೆಯೂ ಇಲ್ಲ. ನಾನು ಕೇವಲ ಅಲ್ಪನಾಗಿದ್ದೇನೆ, ಆದರೆ ಆ “ಮಹಾಅಪೊಸ್ತಲರು” ನನಗಿಂತ ಯಾವುದರಲ್ಲಿಯೂ ಮಿಗಿಲಾಗಿಲ್ಲ. 12 ನಾನು ನಿಮ್ಮೊಂದಿಗಿದ್ದಾಗ ನಾನೂ ಅಪೊಸ್ತಲನೆಂಬುದನ್ನು ನಿರೂಪಿಸುವಂಥ ಸೂಚಕಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡಿದೆನು. 13 ನಾನು ಈ ಕಾರ್ಯಗಳನ್ನು ಬಹು ತಾಳ್ಮೆಯಿಂದ ಮಾಡಿದೆನು. ಆದ್ದರಿಂದ ಇತರ ಸಭೆಗಳಿಗೆ ದೊರೆತವುಗಳೆಲ್ಲ ನಿಮಗೂ ದೊರೆತವು. ಒಂದೇ ಒಂದು ವ್ಯತ್ಯಾಸವೇನೆಂದರೆ, ನಾನು ನಿಮಗೆ ಭಾರವಾಗಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿರಿ.
14 ಈಗ ನಿಮ್ಮನ್ನು ಮೂರನೆ ಸಲ ಸಂದರ್ಶಿಸಲು ಸಿದ್ಧನಾಗಿದ್ದೇನೆ, ಆದರೆ ನಾನು ನಿಮಗೆ ಭಾರವಾಗಿರುವುದಿಲ್ಲ. ನಿಮ್ಮ ಸ್ವತ್ತುಗಳಲ್ಲಿ ಯಾವುದೂ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ನೀವೇ. ಮಕ್ಕಳು ತಂದೆತಾಯಿಗಳಿಗೋಸ್ಕರ ಹಣವನ್ನು ಉಳಿಸಿ ಕೊಡಬೇಕಾಗಿಲ್ಲ. ತಂದೆತಾಯಿಗಳು ಹಣವನ್ನು ಉಳಿಸಿ ಮಕ್ಕಳಿಗೆ ಕೊಡಬೇಕು. 15 ಆದ್ದರಿಂದ ನನ್ನಲ್ಲಿರುವುದನ್ನೆಲ್ಲಾ ನಿಮಗೆ ಕೊಡಲು ಸಂತೋಷಿಸುತ್ತೇನೆ. ನನ್ನನ್ನೇ ನಿಮಗೆ ಕೊಟ್ಟುಬಿಡುತ್ತೇನೆ. ನಾನು ನಿಮ್ಮನ್ನು ಬಹಳವಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?
16 ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ. 17 ನಾನು ನಿಮ್ಮ ಬಳಿಗೆ ಕಳುಹಿಸಿದ ಜನರಲ್ಲಿ ಯಾರ ಮೂಲಕವಾದರೂ ನಿಮ್ಮನ್ನು ಮೋಸಗೊಳಿಸಿದೆನೇ? ಇಲ್ಲ! ನಾನು ಮೋಸಗೊಳಿಸಲಿಲ್ಲ ಎಂಬುದು ನಿಮಗೆ ಗೊತ್ತಿದೆ. 18 ನಿಮ್ಮ ಬಳಿಗೆ ಹೋಗಬೇಕೆಂದು ತೀತನನ್ನು ಕೇಳಿಕೊಂಡೆನು. ಅಲ್ಲದೆ ನಮ್ಮ ಸಹೋದರನನ್ನು ಅವನೊಂದಿಗೆ ಕಳುಹಿಸಿದೆನು. ಅವನು ನಿಮ್ಮನ್ನು ಮೋಸಗೊಳಿಸಲಿಲ್ಲ. ಅವನು ಮೋಸ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಪ್ರೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೆವು.
19 ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ. 20 ಕಾರಣವೇನೆಂದರೆ, ನಾನು ಬಂದಾಗ ನನ್ನ ಅಪೇಕ್ಷೆಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭೆಯಲ್ಲಿ ವಾದ, ಹೊಟ್ಟೆಕಿಚ್ಚು, ಕೋಪ, ಸ್ವಾರ್ಥಪರವಾದ ಹೋರಾಟ, ಕೆಟ್ಟಮಾತು, ಸುಳ್ಳುಸುದ್ದಿ, ಗರ್ವ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ. 21 ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ. ನಿಮ್ಮಲ್ಲಿ ಪಾಪಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಏಕೆಂದರೆ, ಆ ಜನರು ತಮ್ಮ ದುಷ್ಟಜೀವಿತದ ಬಗ್ಗೆ, ತಮ್ಮ ಲೈಂಗಿಕ ಪಾಪಗಳ ಬಗ್ಗೆ ಮತ್ತು ನಾಚಿಕೆಕರವಾದ ಕಾರ್ಯಗಳ ಬಗ್ಗೆ ದುಃಖಪಟ್ಟಿಲ್ಲ ಮತ್ತು ತಮ್ಮ ಹೃದಯಗಳನ್ನು ಮಾರ್ಪಾಟು ಮಾಡಿಕೊಂಡಿಲ್ಲ.
Kannada Holy Bible: Easy-to-Read Version. All rights reserved. © 1997 Bible League International