Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 1-2

ಮುನ್ನುಡಿ

ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಸೊಲೊಮೋನನು ಇಸ್ರೇಲರ ರಾಜನಾಗಿದ್ದನು. ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೂ ಬುದ್ಧಿವಾದವನ್ನು ಗ್ರಹಿಸಿಕೊಳ್ಳುವುದಕ್ಕೂ ಈ ಜ್ಞಾನೋಕ್ತಿಗಳು ಸಹಾಯಕವಾಗಿವೆ. ಈ ಜ್ಞಾನೋಕ್ತಿಗಳು ಯೋಗ್ಯವಾರ್ಗದಲ್ಲಿ ಜೀವಿಸಲು ಅಂದರೆ ಯಥಾರ್ಥವಾಗಿಯೂ ನ್ಯಾಯವಾಗಿಯೂ ಮತ್ತು ಒಳ್ಳೆಯವರಾಗಿಯೂ ಇರಲು ಉಪದೇಶಿಸುತ್ತವೆ. ಈ ಜ್ಞಾನೋಕ್ತಿಗಳು ಸಾಮಾನ್ಯರಿಗೆ ಜಾಣತನವನ್ನು ಯೌವನಸ್ಥರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುತ್ತವೆ. ಈ ಜ್ಞಾನೋಕ್ತಿಗಳಿಗೆ ಕಿವಿಗೊಡುವುದರ ಮೂಲಕ ಜ್ಞಾನಿಗಳು ತಮ್ಮ ಪಾಂಡಿತ್ಯವನ್ನೂ ವಿವೇಕಿಗಳು ತಮ್ಮ ಉಚಿತಾಲೋಚನೆಗಳನ್ನೂ ಹೆಚ್ಚಿಸಿಕೊಳ್ಳಲಿ. ಆಗ ಅವರು ಗಾದೆಗಳನ್ನು, ಸಾಮತಿಗಳನ್ನು, ಜ್ಞಾನದ ನುಡಿಗಳನ್ನು ಮತ್ತು ಒಗಟುಗಳನ್ನು ಅರ್ಥಮಾಡಿಕೊಳ್ಳುವರು.

ಯೆಹೋವನಲ್ಲಿಟ್ಟಿರುವ ಭಯಭಕ್ತಿಯೇ ಜ್ಞಾನದ ಮೂಲ. ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ದ್ವೇಷಿಸುವರು.

ಸೊಲೊಮೋನನು ತನ್ನ ಮಗನಿಗೆ ಮಾಡಿದ ಉಪದೇಶ

ನನ್ನ ಮಗನೇ, ನಿನ್ನ ತಂದೆಯ ಬುದ್ಧಿಮಾತಿಗೆ ಕಿವಿಗೊಡು; ನಿನ್ನ ತಾಯಿಯ ಉಪದೇಶವನ್ನು ಅಲಕ್ಷಿಸಬೇಡ. ನಿನ್ನ ತಂದೆತಾಯಿಗಳ ಮಾತುಗಳು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟದಂತೆಯೂ ನಿನ್ನ ಕೊರಳಿಗೆ ಸುಂದರವಾದ ಹಾರದಂತೆಯೂ ಇವೆ.

10 ನನ್ನ ಮಗನೇ, ಪಾಪ ಮಾಡಬಯಸುವವರು ನಿನಗೆ ದುಷ್ಪ್ರೇರಣೆ ಮಾಡಿದರೆ ಅವರನ್ನು ಹಿಂಬಾಲಿಸಕೂಡದು. 11 ನಿನಗೆ, “ನಮ್ಮ ಜೊತೆ ಬಾ! ನಾವು ಅಲ್ಲಿ ಅವಿತುಕೊಂಡಿದ್ದು ಯಾರನ್ನಾದರೂ ಕೊಲೆಮಾಡೋಣ; ಕೆಲವು ನಿರಪರಾಧಿಗಳ ಮೇಲೆ ನಿಷ್ಕಾರಣವಾಗಿ ಆಕ್ರಮಣ ಮಾಡಿ 12 ಅವರನ್ನು ಜೀವಂತವಾಗಿ ನುಂಗೋಣ; ಪಾತಾಳವು ನುಂಗುವಂತೆ ಸಂಪೂರ್ಣವಾಗಿ ನುಂಗಿಬಿಡೋಣ. 13 ಬೆಲೆಬಾಳುವ ಎಲ್ಲಾ ಬಗೆಯ ವಸ್ತುಗಳನ್ನು ಕದ್ದು ನಮ್ಮ ಮನೆಗಳಲ್ಲಿ ತುಂಬಿಸಿಕೊಳ್ಳೋಣ. 14 ಅವುಗಳಲ್ಲಿ ನಿನಗೆ ಸಮಪಾಲು ದೊರೆಯುವುದು, ಬಂದು ನಮ್ಮೊಂದಿಗೆ ಸೇರಿಕೊ” ಎಂದು ಆ ಪಾಪಿಗಳು ಹೇಳಬಹುದು.

15 ನನ್ನ ಮಗನೇ, ಅವರ ಜೀವಿತವನ್ನು ಅನುಸರಿಸಬೇಡ. ಅವರ ಜೀವಿತಮಾರ್ಗದಲ್ಲಿ ಮೊದಲನೆ ಹೆಜ್ಜೆಯನ್ನೂ ಇಡಬೇಡ. 16 ಅವರು ಕೇಡುಮಾಡುವುದಕ್ಕೆ ಯಾವಾಗಲೂ ಸಿದ್ಧರಾಗಿದ್ದಾರೆ. ಜನರನ್ನು ಕೊಲ್ಲುವುದಕ್ಕೆ ಯಾವಾಗಲೂ ಆತುರಪಡುತ್ತಾರೆ.

17 ಪಕ್ಷಿಗಳ ಕಣ್ಣೆದುರಿನಲ್ಲಿ ಬಲೆಹಾಕುವುದರಿಂದ ಪ್ರಯೋಜನವೇನೂ ಇಲ್ಲ. 18 ಅವರಾದರೋ ಬೇರೊಬ್ಬನನ್ನು ಕೊಲ್ಲಲು ಅವಿತುಕೊಂಡು ಕಾಯುತ್ತಾರೆ; ಆದರೆ ಅವರು ತಮ್ಮ ಸಂಚಿನಿಂದ ತಮ್ಮನ್ನೇ ನಾಶಪಡಿಸಿಕೊಳ್ಳುತ್ತಾರೆ. 19 ದುರಾಶೆಯುಳ್ಳವರು ತಾವು ದೋಚಿಕೊಳ್ಳುವ ವಸ್ತುಗಳಿಂದಲೇ ನಾಶವಾಗುವರು.

ಜ್ಞಾನವೆಂಬಾಕೆ

20 ಜ್ಞಾನವು ಬೀದಿಗಳಲ್ಲಿ ಕೂಗುವ ಸ್ತ್ರೀಯಂತಿದೆ. ಆಕೆಯು ಬಹಿರಂಗ ಸ್ಥಳಗಳಲ್ಲಿ ಕೂಗಿ ಕರೆಯುತ್ತಾಳೆ. 21 ಆಕೆಯು ಜನಸಂದಣಿಯ ರಸ್ತೆಚೌಕಗಳಲ್ಲಿ ಕರೆಯುತ್ತಾಳೆ. ಪಟ್ಟಣದ ಬಾಗಿಲುಗಳ ಬಳಿಯಲ್ಲಿ ಆಕೆಯು ಜನರೊಂದಿಗೆ ಮಾತಾಡುತ್ತಾಳೆ:

22 “ನೀವು ಮೂಢಜನರು. ಇನ್ನೆಷ್ಟುಕಾಲ ನೀವು ನಿಮ್ಮ ಮೂಢತನದಲ್ಲಿ ಆನಂದಿಸುವಿರಿ? ಇನ್ನೆಷ್ಟುಕಾಲ ನೀವು ವಿವೇಕವನ್ನು ಹಾಸ್ಯಮಾಡಬೇಕೆಂದಿದ್ದೀರಿ? ಇನ್ನೆಷ್ಟುಕಾಲ ನೀವು ಜ್ಞಾನವನ್ನು ದ್ವೇಷ ಮಾಡಬೇಕೆಂದಿದ್ದೀರಿ? 23 ನೀವು ನನ್ನ ಗದರಿಕೆಗೆ ಕಿವಿಗೊಟ್ಟರೆ, ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ತಿಳಿಸುವೆನು; ನನ್ನ ಆಲೋಚನೆಗಳನ್ನು ನಿಮಗೆ ಗೊತ್ತುಪಡಿಸುವೆನು.

24 “ಆದರೆ ನೀವು ನನಗೆ ಗಮನಕೊಡಲಿಲ್ಲ. ನಾನು ಸಹಾಯಮಾಡಲು ಪ್ರಯತ್ನಿಸಿದೆ. ನಾನು ಕೈಚಾಚಿದೆ; ಆದರೆ ನೀವು ನನ್ನ ಸಹಾಯವನ್ನು ತೆಗೆದುಕೊಳ್ಳದೆ ತಿರಸ್ಕರಿಸಿದಿರಿ. 25 ನೀವು ನನಗೆ ಮುಖ ತಿರುವಿಕೊಂಡಿರಿ; ನನ್ನ ಸಲಹೆಗಳನ್ನೆಲ್ಲ ಕಡೆಗಣಿಸಿದಿರಿ; ನನ್ನ ತಿದ್ದುಪಾಟನ್ನು ತಿರಸ್ಕರಿಸಿದಿರಿ. 26 ಆದ್ದರಿಂದ ನಿಮ್ಮ ಕಷ್ಟದಲ್ಲಿ ನಾನು ನಗುವೆನು; ಅಪಾಯವು ನಿಮಗೆ ಬಡಿಯುವಾಗ ನಿಮ್ಮನ್ನು ಗೇಲಿ ಮಾಡುವೆನು. 27 ಮಹಾ ಸಂಕಷ್ಟವು ಕೆಟ್ಟ ಬಿರುಗಾಳಿಯಂತೆ ನಿಮಗೆ ಬರುವುದು. ತೊಂದರೆಗಳು ಬಲವಾದ ಗಾಳಿಯಂತೆ ನಿಮಗೆ ಬಡಿಯುವುದು. ನಿಮ್ಮ ಕಷ್ಟಗಳು ಮತ್ತು ದುಃಖಗಳು ನಿಮ್ಮ ಮೇಲೆ ಬಹು ಭಾರವಾಗಿರುತ್ತವೆ.

28 “ಇವೆಲ್ಲಾ ನಿಮಗೆ ಸಂಭವಿಸುವಾಗ ನೀವು ಸಹಾಯಕ್ಕಾಗಿ ನನ್ನನ್ನು ಕೇಳುವಿರಿ; ಆದರೆ ನಾನು ನಿಮಗೆ ಸಹಾಯ ಮಾಡುವುದಿಲ್ಲ. ನೀವು ನನಗಾಗಿ ಹುಡುಕುವಿರಿ. ಆದರೆ ನಾನು ನಿಮಗೆ ಸಿಕ್ಕುವುದಿಲ್ಲ. 29 ನಾನು ನಿಮಗೆ ಸಹಾಯ ಮಾಡುವುದಿಲ್ಲ; ಏಕೆಂದರೆ ನೀವೆಂದೂ ನನ್ನ ಜ್ಞಾನವನ್ನು ಬಯಸಲಿಲ್ಲ. ನೀವು ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿರ್ಧರಿಸಲಿಲ್ಲ. 30 ನೀವು ನನ್ನ ಗದರಿಕೆಯ ಮಾತುಗಳನ್ನು ತಿರಸ್ಕರಿಸಿದಿರಿ. ನಾನು ನಿಮಗೆ ಸರಿಯಾದ ದಾರಿಯನ್ನು ತೋರಿಸಿದಾಗ ನೀವು ನನಗೆ ಕಿವಿಗೊಡಲಿಲ್ಲ. 31 ಆದ್ದರಿಂದ ನೀವು ನಿಮ್ಮ ದುರ್ನಡತೆಯ ಫಲಗಳನ್ನು ಅನುಭವಿಸುವಿರಿ. ನೀವು ಬೇರೆಯವರಿಗೆ ಮಾಡಿದ ಕುಯುಕ್ತಿಗಳನ್ನೇ ಹೊಂದುವಿರಿ.

32 “ಮೂಢರು ಜ್ಞಾನವನ್ನು ತಿರಸ್ಕರಿಸುವುದರಿಂದ ಸಾವಿಗೀಡಾಗುವರು; ಅವರ ಉದಾಸೀನತೆಯೇ ಅವರನ್ನು ನಾಶಪಡಿಸುವುದು. 33 ಆದರೆ ನನಗೆ ವಿಧೇಯನಾಗುವವನು ಕ್ಷೇಮವಾಗಿಯೂ ಸುಖವಾಗಿಯೂ ಬದುಕುವನು. ಅವನು ಅಪಾಯಕ್ಕೆ ಭಯಪಡುವ ಅವಶ್ಯವಿಲ್ಲ.”

ಜ್ಞಾನದ ಮೌಲ್ಯ

ನನ್ನ ಮಗನೇ, ನಾನು ಹೇಳುವ ಈ ಮಾತುಗಳನ್ನು ಸ್ವೀಕಾರಮಾಡಿಕೊ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೊ. ಜ್ಞಾನಕ್ಕೆ ಕಿವಿಗೊಡು; ಅದನ್ನು ಅರ್ಥಮಾಡಿಕೊಳ್ಳಲು ನಿನ್ನಿಂದಾದಷ್ಟು ಪ್ರಯತ್ನಿಸು. ಬುದ್ಧಿಗಾಗಿ ಮೊರೆಯಿಡು! ವಿವೇಕಕ್ಕಾಗಿ ಕೂಗಿಕೊ! ಬೆಳ್ಳಿಯನ್ನು ಹುಡುಕುವಂತೆ ವಿವೇಕವನ್ನು ಹುಡುಕು. ಅಡಗಿರುವ ಭಂಡಾರದಂತೆ ಅದನ್ನು ಹುಡುಕು. ಆಗ ನೀನು ಯೆಹೋವನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವೆ; ದೈವಜ್ಞಾನವನ್ನು ಹೊಂದಿಕೊಳ್ಳುವೆ.

ಜ್ಞಾನವನ್ನು ಕೊಡುವಾತನು ಯೆಹೋವನೇ. ವಿವೇಕ ಮತ್ತು ತಿಳುವಳಿಕೆ ಆತನ ಬಾಯಿಂದ ಬರುತ್ತವೆ. ಆತನು ನೀತಿವಂತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು; ನಿರ್ದೋಷಿಗಳಿಗೆ ಗುರಾಣಿಯಂತಿರುವನು. ಆತನು ನ್ಯಾಯವಂತರನ್ನು ಕಾಪಾಡುತ್ತಾನೆ; ತನ್ನ ಪವಿತ್ರ ಜನರಿಗೆ ಕಾವಲಾಗಿರುತ್ತಾನೆ.

ಆಗ ನೀನು ಒಳ್ಳೆಯದನ್ನೂ ನ್ಯಾಯನೀತಿಗಳನ್ನೂ ಸನ್ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವೆ. 10 ಆಗ ಜ್ಞಾನವು ನಿನ್ನ ಹೃದಯದ ಒಳಗೆ ಬರುವುದು; ನಿನ್ನ ಆತ್ಮವು ತಿಳುವಳಿಕೆಯೊಡನೆ ಸಂತೋಷವಾಗಿರುವುದು.

11 ವಿವೇಕವು ನಿನ್ನನ್ನು ಕಾಪಾಡುವುದು; ಬುದ್ಧಿಯು ನಿನಗೆ ಕಾವಲಾಗಿರುವುದು; 12 ಹೀಗೆ ನೀನು ದುರ್ಮಾರ್ಗಗಳಿಂದಲೂ ಸುಳ್ಳುಗಾರರಿಂದಲೂ ತಪ್ಪಿಸಿಕೊಳ್ಳುವೆ. 13 ಅವರಾದರೋ ನೀತಿಮಾರ್ಗವನ್ನು ಬಿಟ್ಟು ಪಾಪವೆಂಬ ಕತ್ತಲೆಯಲ್ಲಿ ಜೀವಿಸುತ್ತಿದ್ದಾರೆ. 14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ. 15 ಅವರ ಮಾರ್ಗಗಳು ವಕ್ರವಾಗಿವೆ; ಅವರ ನಡತೆಗಳು ದುರ್ನಡತೆಗಳಾಗಿವೆ.

16 ವ್ಯಭಿಚಾರಿಣಿಯು ನಿನ್ನೊಡನೆ ಸವಿಮಾತುಗಳನ್ನಾಡಿ ತನ್ನೊಡನೆ ಪಾಪ ಮಾಡುವಂತೆ ನಿನ್ನನ್ನು ಒತ್ತಾಯಿಸಬಹುದು. 17 ಯೌವನಪ್ರಾಯದಲ್ಲಿ ಮದುವೆಮಾಡಿಕೊಂಡ ಅವಳು ತನ್ನ ಗಂಡನನ್ನು ಬಿಟ್ಟುಬಿಟ್ಟಿದ್ದಾಳೆ; ಮದುವೆಯಲ್ಲಿ ದೇವರ ಮುಂದೆ ಮಾಡಿದ ವಾಗ್ದಾನಗಳನ್ನು ಮೀರಿದ್ದಾಳೆ. 18 ನೀನು ಅವಳ ಮನೆಯೊಳಗೆ ಹೋದರೆ, ನಾಶನದ ಕಡೆಗೆ ಮೊದಲನೆ ಹೆಜ್ಜೆ ಹಾಕುತ್ತಿರುವೆ. ನೀವು ಅವಳನ್ನು ಹಿಂಬಾಲಿಸಿದರೆ, ಅವಳು ನಿನ್ನನ್ನು ಸಮಾಧಿಗೆ ನಡೆಸುವಳು. 19 ಅವಳು ಸಮಾಧಿಯಂತೆ ಇದ್ದಾಳೆ. ಅವಳ ಬಳಿಗೆ ಹೋಗುವವನು ಎಂದಿಗೂ ಹಿಂತಿರುಗಿ ಬರುವುದಿಲ್ಲ; ಅವನ ಜೀವನವು ಮೊದಲಿನಂತಿರುವುದಿಲ್ಲ.

20 ಆದ್ದರಿಂದ ನೀನು ಒಳ್ಳೆಯವರ ಮಾದರಿಯನ್ನು ಅನುಸರಿಸಬೇಕು. ನೀತಿವಂತರ ಮಾರ್ಗದಲ್ಲಿ ಜೀವಿಸಬೇಕು. 21 ಯಥಾರ್ಥವಂತರು ಸ್ವದೇಶದಲ್ಲಿ ವಾಸಿಸುವರು. ನಿರ್ದೋಷಿಗಳು ಸ್ವದೇಶದಲ್ಲಿ ನೆಲೆಸುವರು. 22 ದುಷ್ಟರಾದರೋ ಸ್ವದೇಶದಿಂದ ತೆಗೆದುಹಾಕಲ್ಪಡುವರು; ದ್ರೋಹಿಗಳು ನಿರ್ಮೂಲವಾಗುವರು.

1 ಕೊರಿಂಥದವರಿಗೆ 16

ಇತರ ವಿಶ್ವಾಸಿಗಳಿಗಾಗಿ ಹಣ ಸಂಗ್ರಹಣೆ

16 ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಈಗ ನಾನು ಬರೆಯುತ್ತೇನೆ. ನಾನು ಗಲಾತ್ಯ ಸಭೆಗಳಿಗೆ ಹೇಳಿಕೊಟ್ಟಂತೆ ನೀವೂ ಮಾಡಿರಿ. ನಿಮ್ಮಲ್ಲಿ ಪ್ರತಿಯೊಬ್ಬನು ತನಗಾದ ಅಭಿವೃದ್ಧಿಗೆ ತಕ್ಕಂತೆ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಪ್ರತಿವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ, ವಿಶೇಷವಾದ ಸ್ಥಳವೊಂದರಲ್ಲಿ ಇಟ್ಟಿರಬೇಕು. ಆಗ ನಾನು ನಿಮ್ಮಲ್ಲಿಗೆ ಬಂದ ನಂತರ ಹಣವನ್ನು ಸಂಗ್ರಹಿಸುವ ಅವಶ್ಯಕತೆಯಿರುವುದಿಲ್ಲ. ನಾನು ಬಂದಾಗ, ನಿಮ್ಮ ಕೊಡುಗೆಯನ್ನು ಕೆಲವರ ಮೂಲಕ ಜೆರುಸಲೇಮಿಗೆ ಕಳುಹಿಸುವೆನು. ನೀವೆಲ್ಲರೂ ಯಾರನ್ನು ಇಷ್ಟಪಡುತ್ತೀರೋ ಅವರಿಗೆ ನಾನು ಪರಿಚಯದ ಪತ್ರಗಳನ್ನು ಕೊಟ್ಟು ಕಳುಹಿಸುವೆನು. ಒಂದುವೇಳೆ, ನಾನು ಸಹ ಹೋಗುವುದು ಒಳ್ಳೆಯದೆನಿಸಿದರೆ, ಆ ಜನರು ನನ್ನೊಂದಿಗೆ ಬರಲಿ.

ಪೌಲನ ಯೋಜನೆಗಳು

ನಾನು ಮಕೆದೋನಿಯದ ಮೂಲಕ ಹೋಗಬೇಕೆಂದಿರುವೆ. ಆದ್ದರಿಂದ ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ನಿಮ್ಮಲ್ಲಿಗೆ ಬರುವೆನು. ನಾನು ನಿಮ್ಮೊಂದಿಗೆ ಸ್ವಲ್ಪಕಾಲ ಇಳಿದುಕೊಳ್ಳಬಹುದು. ಒಂದುವೇಳೆ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಬಳಿಕ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು. ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ. ಆದರೆ ನಾನು ಪಂಚಾಶತ್ತಮ ಹಬ್ಬದವರೆಗೆ ಎಫೆಸದಲ್ಲಿ ಇರುತ್ತೇನೆ. ಯಾಕೆಂದರೆ ಮಹತ್ವವಾದ ಮತ್ತು ಫಲಭರಿತವಾದ ಸೇವೆಯನ್ನು ಮಾಡಲು ಇಲ್ಲಿ ನನಗೆ ಒಳ್ಳೆಯ ಅವಕಾಶಗಳಿವೆ. ಆದರೂ ಇಲ್ಲಿ ನನಗೆ ಅನೇಕ ವಿರೋಧಿಗಳಿದ್ದಾರೆ.

10 ತಿಮೊಥೆಯನು ನಿಮ್ಮ ಬಳಿಗೆ ಬರಬಹುದು. ಅವನು ನಿಮ್ಮೊಂದಿಗಿರುವಾಗ ಅವನಿಗೆ ಚಿಂತೆಯಾಗದಂತೆ ನೋಡಿಕೊಳ್ಳಿರಿ. ನಾನು ಪ್ರಭುವಿಗೋಸ್ಕರ ಕೆಲಸ ಮಾಡುತ್ತಿರುವಂತೆ ಅವನು ಸಹ ಮಾಡುತ್ತಿದ್ದಾನೆ. 11 ಆದ್ದರಿಂದ ನಿಮ್ಮಲ್ಲಿ ಯಾರೂ ಅವನನ್ನು ತಿರಸ್ಕರಿಸಬಾರದು. ಅವನನ್ನು ನನ್ನ ಬಳಿಗೆ ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ.

12 ನಮ್ಮ ಸಹೋದರನಾದ ಅಪೊಲ್ಲೋಸನ ಬಗ್ಗೆ ನಾನು ಹೇಳುವುದೇನೆಂದರೆ, ಇತರ ಸಹೋದರರೊಂದಿಗೆ ನಿಮ್ಮನ್ನು ಸಂದರ್ಶಿಸಲು ನಾನು ಅವನನ್ನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ಆದರೆ ಈಗ ಬರುವುದಕ್ಕೆ ಅವನಿಗೆ ನಿಶ್ಚಯವಾಗಿ ಇಷ್ಟವಿರಲಿಲ್ಲ. ಆದರೆ ಅವಕಾಶ ಸಿಕ್ಕಿದಾಗ ಅವನು ನಿಮ್ಮ ಬಳಿಗೆ ಬರುವನು.

ಅಂತಿಮ ಮಾತುಗಳು

13 ಜಾಗರೂಕರಾಗಿರಿ, ನಂಬಿಕೆಯಲ್ಲಿ ದೃಢವಾಗಿರಿ. ಧೈರ್ಯದಿಂದಿರಿ ಮತ್ತು ಬಲಿಷ್ಠರಾಗಿರಿ. 14 ಪ್ರತಿಯೊಂದನ್ನು ಪ್ರೀತಿಯಿಂದ ಮಾಡಿರಿ.

15 ಅಖಾಯದಲ್ಲಿ ಪ್ರಥಮ ವಿಶ್ವಾಸಿಗಳಾದ ಸ್ತೆಫನನನ್ನು ಮತ್ತು ಅವನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ದೇವರ ಸೇವೆಗಾಗಿ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, 16 ಈ ರೀತಿಯ ಮುಂದಾಳುಗಳನ್ನು ಮತ್ತು ಅವರೊಂದಿಗೆ ಕೆಲಸ ಮಾಡುವವರನ್ನು ಹಾಗೂ ಸೇವೆ ಮಾಡುವವರನ್ನು ಹಿಂಬಾಲಿಸಿರಿ.

17 ಸ್ತೆಫನನು, ಪೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. 18 ಅವರು ನನ್ನ ಆತ್ಮಕ್ಕೂ ನಿಮ್ಮ ಆತ್ಮಗಳಿಗೂ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇಂಥ ಜನರ ಮೌಲ್ಯವನ್ನು ನೀವು ಗುರುತಿಸಬೇಕು.

19 ಏಷ್ಯಾದ ಸಭೆಗಳವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ಅಕ್ವಿಲನು ಮತ್ತು ಪ್ರಿಸ್ಕಿಲ್ಲಳು ಪ್ರಭುವಿನ ಹೆಸರಿನಲ್ಲಿ ನಿಮಗೆ ಬಹಳ ವಂದನೆಗಳನ್ನು ತಿಳಿಸಿದ್ದಾರೆ. ಅವರ ಮನೆಯಲ್ಲಿ ಸೇರಿಬರುವ ಸಭೆಯವರು ಸಹ ನಿಮಗೆ ವಂದನೆ ತಿಳಿಸಿದ್ದಾರೆ. 20 ಇಲ್ಲಿರುವ ಎಲ್ಲಾ ಸಹೋದರ ಸಹೋದರಿಯರು ನಿಮಗೆ ವಂದನೆ ತಿಳಿಸಿದ್ದಾರೆ. ನೀವು ಒಬ್ಬರನ್ನೊಬ್ಬರು ಭೇಟಿಯಾಗುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ.

21 ಪೌಲನಾದ ನಾನು ನನ್ನ ಕೈಯಾರೆ ಈ ವಂದನೆಗಳನ್ನು ಬರೆಯುತ್ತಿದ್ದೇನೆ.

22 ಯಾವನಾದರೂ ಪ್ರಭುವನ್ನು ಪ್ರೀತಿಸದಿದ್ದರೆ, ಅವನು ಜೀವದಿಂದ ಬೇರ್ಪಟ್ಟು ನಿತ್ಯನಾಶನ ಹೊಂದಲಿ!

ಪ್ರಭುವೇ ಬಾ!

23 ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

24 ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿಯಿರಲಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International