Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 57-59

ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ

57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
    ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
    ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
ಆತನು ಪರಲೋಕದಿಂದ ನನಗೆ ಸಹಾಯಮಾಡಿ,
    ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.

ನನ್ನ ಪ್ರಾಣವು ಅಪಾಯದಲ್ಲಿದೆ.
    ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
    ಅವರ ಹಲ್ಲುಗಳು ಬಾಣಗಳಂತಿವೆ;
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.

ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನನ್ನನ್ನು ಬಂಧಿಸಲು
    ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
    ಆದರೆ ಅವರೇ ಅದರಲ್ಲಿ ಬಿದ್ದುಹೋದರು.

ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
    ನಾನು ವಾದ್ಯ ಬಾರಿಸುತ್ತಾ ಹಾಡುವೆನು.
ನನ್ನ ಮನವೇ, ಎಚ್ಚರಗೊಳ್ಳು!
    ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
    ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
    ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
    ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.

ರಚನೆಗಾರ: ದಾವೀದ.

58 ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
    ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
    ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
    ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.[a]
    ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
    ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.

ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
    ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
ಹರಿದು ಕಾಣದೆಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
    ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
    ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
    ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.

10 ದುಷ್ಟರಿಗಾಗುವ ಪ್ರತಿದಂಡನೆಯನ್ನು
    ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
    ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.

ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
    ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
ಆ ದುಷ್ಟರಿಂದ ನನ್ನನ್ನು ವಿಮೋಚಿಸು.
    ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
    ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
    ಯೆಹೋವನೇ, ಸ್ವತಃ ನೀನೇ ಬಂದು ನೋಡು!
ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
    ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.

ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
    ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
    ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.

ಯೆಹೋವನೇ, ಅವರನ್ನು ನೋಡಿ ನಗು.
    ಅವರೆಲ್ಲರನ್ನು ಅಪಹಾಸ್ಯ ಮಾಡು.
ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
    ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
    ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
    ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
    ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
    ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
    ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.

14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
    ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
    ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
    ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
    ನನ್ನನ್ನು ಪ್ರೀತಿಸುವ ದೇವರು ನೀನೇ!

ರೋಮ್ನಗರದವರಿಗೆ 4

ಅಬ್ರಹಾಮನ ಉದಾಹರಣೆ

ಹಾಗಾದರೆ, ನಮ್ಮ ಪಿತೃವಾದ ಅಬ್ರಹಾಮನ ಬಗ್ಗೆ ನಾವು ಏನು ಹೇಳೋಣ? ಅವನು ನಂಬಿಕೆಯ ಬಗ್ಗೆ ಏನು ಕಲಿತುಕೊಂಡನು? ಅವನು ತನ್ನ ಕ್ರಿಯೆಗಳಿಂದ ನೀತಿವಂತನಾಗಿದ್ದರೆ ಹೊಗಳಿಕೊಳ್ಳಲು ಅವನಿಗೆ ಕಾರಣವಿರುತ್ತಿತ್ತು. ಆದರೆ ಅಬ್ರಹಾಮನು ದೇವರ ಮುಂದೆ ಹೊಗಳಿಕೊಳ್ಳಲು ಆಗಲಿಲ್ಲ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಇದು ಅಬ್ರಹಾಮನನ್ನು ನೀತಿವಂತನನ್ನಾಗಿ ಮಾಡಿತು”(A) ಎಂದು ಪವಿತ್ರ ಗ್ರಂಥವು ಹೇಳುತ್ತದೆ.

ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ. ಆದರೆ ಒಬ್ಬನು ತಾನು ಮಾಡುವ ಯಾವುದೇ ಕಾರ್ಯದ ಮೂಲಕವಾಗಲಿ ತನ್ನನ್ನು ನೀತಿವಂತನನ್ನಾಗಿ ಮಾಡಿಕೊಳ್ಳಲಾರನು. ಆದ್ದರಿಂದ ಆ ವ್ಯಕ್ತಿ ದೇವರಲ್ಲಿ ನಂಬಿಕೆ ಇಡಲೇಬೇಕು. ಆಗ ದೇವರು ಆ ವ್ಯಕ್ತಿಯ ನಂಬಿಕೆಯನ್ನು ಸ್ವೀಕರಿಸಿಕೊಂಡು ಅವನನ್ನು ನೀತಿವಂತನನ್ನಾಗಿ ಮಾಡುವನು. ದೇವರು ದುಷ್ಟರನ್ನು ಸಹ ನೀತಿವಂತರನ್ನಾಗಿ ಮಾಡುವನು. ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:

“ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ
    ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ
    ಅವರು ನಿಜವಾಗಿಯೂ ಭಾಗ್ಯವಂತರು!
ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ
    ಅವನು ನಿಜವಾಗಿಯೂ ಭಾಗ್ಯವಂತನು!”(B)

ಈ ಭಾಗ್ಯವಿರುವುದು ಸುನ್ನತಿ[a] ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. 10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ. 11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. 12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.

ವಾಗ್ದಾನವನ್ನು ಹೊಂದಿಕೊಳ್ಳಲು ನಂಬಿಕೆಯೇ ಮಾರ್ಗ

13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು. 14 ದೇವರು ವಾಗ್ದಾನ ಮಾಡಿದವುಗಳನ್ನು ಜನರು ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಹೊಂದಿಕೊಳ್ಳಬಲ್ಲವರಾಗಿದ್ದರೆ, ನಂಬಿಕೆಯು ನಿಷ್ಪ್ರಯೋಜಕವಾಗಿದೆ. ಅಲ್ಲದೆ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವೂ ನಿಷ್ಪ್ರಯೋಜಕವಾಗಿದೆ. 15 ಏಕೆಂದರೆ ಧರ್ಮಶಾಸ್ತ್ರಕ್ಕೆ ವಿಧೇಯರಾಗದೆ ಹೋದಾಗ, ಧರ್ಮಶಾಸ್ತ್ರವು ದೇವರ ಕೋಪವನ್ನು ಮಾತ್ರ ತರುತ್ತದೆ. ಆದರೆ ಧರ್ಮಶಾಸ್ತ್ರವು ಇಲ್ಲದಿದ್ದರೆ ಅವಿಧೇಯರಾಗುವುದಕ್ಕೆ ಏನೂ ಇರುವುದಿಲ್ಲ.

16 ಆದಕಾರಣ ಜನರು ನಂಬಿಕೆಯ ಮೂಲಕವಾಗಿ ದೇವರ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವು ಉಚಿತ ಕೊಡುಗೆಯಾಗಬೇಕೆಂತಲೇ ಹೀಗಾಯಿತು. ವಾಗ್ದಾನವು ಉಚಿತ ಕೊಡುಗೆಯಾಗಿದ್ದರೆ, ಅಬ್ರಹಾಮನ ಜನರೆಲ್ಲರೂ ಆ ವಾಗ್ದಾನವನ್ನು ಹೊಂದಿಕೊಳ್ಳುವರು. ಈ ವಾಗ್ದಾನವನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವ ಜನರಿಗೆ ಮಾತ್ರವಲ್ಲ, ಅಬ್ರಹಾಮನಂತೆ ನಂಬಿಕೆಯಲ್ಲಿ ಜೀವಿಸುವ ಎಲ್ಲರಿಗೂ ಕೊಡಲಾಗಿದೆ. ಅಬ್ರಹಾಮನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ. 17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ”(C) ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.

18 ಅಬ್ರಹಾಮನಿಗೆ ಮಕ್ಕಳಾಗುವ ಆಸ್ಪದವೇ ಇರಲಿಲ್ಲ. ಆದರೂ ಅವನು ದೇವರನ್ನು ನಂಬಿ ತನ್ನ ನಿರೀಕ್ಷೆಯಲ್ಲಿಯೇ ಮುಂದುವರೆದನು. ಆದಕಾರಣವೇ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. ದೇವರು ಅವನಿಗೆ, “ನೀನು ಅನೇಕ ಜನಾಂಗಗಳನ್ನು ಪಡೆಯುವೆ”(D) ಎಂದು ಹೇಳಿದ್ದಂತೆಯೇ ಇದಾಯಿತು. 19 ಅಬ್ರಹಾಮನು ಸುಮಾರು ನೂರು ವರ್ಷದವನಾಗಿದ್ದರಿಂದ ಅವನ ದೇಹವು ದುರ್ಬಲವಾಗಿತ್ತು. ಆದಕಾರಣ ಅವನು ಮಕ್ಕಳನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಸಾರಳಿಗೂ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಅಬ್ರಹಾಮನು ಇದರ ಬಗ್ಗೆ ಆಲೋಚಿಸಿದನು. ಆದರೂ ದೇವರ ಮೇಲೆ ಅವನಿಗಿದ್ದ ನಂಬಿಕೆಯು ಬಲಹೀನವಾಗಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಸಂಶಯಪಡಲಿಲ್ಲ ಮತ್ತು ತನ್ನ ನಂಬಿಕೆಯನ್ನು ಕೊನೆಗೊಳಿಸಲಿಲ್ಲ. ಅವನು ತನ್ನ ನಂಬಿಕೆಯಲ್ಲಿ ಬಲವಾಗಿ ಬೆಳೆದನು ಮತ್ತು ದೇವರಿಗೆ ಸ್ತೋತ್ರ ಸಲ್ಲಿಸಿದನು. 21 ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು. 22 ಆದ್ದರಿಂದ, “ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಅದು ಅವನನ್ನು ನೀತಿವಂತನನ್ನಾಗಿ ಮಾಡಿತು.” 23 ಆ ಮಾತುಗಳು ಬರೆಯಲ್ಪಟ್ಟಿರುವುದು ಅಬ್ರಹಾಮನಿಗೆ ಮಾತ್ರವಲ್ಲ. 24 ನಮಗಾಗಿಯೂ ಬರೆಯಲ್ಪಟ್ಟಿವೆ. ನಾವು ನಂಬುವುದರಿಂದ ದೇವರು ನಮ್ಮನ್ನು ಸಹ ಸ್ವೀಕರಿಸಿಕೊಳ್ಳುವನು. ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನಲ್ಲಿ (ದೇವರಲ್ಲಿ) ನಾವು ನಂಬಿಕೆ ಇಡುತ್ತೇವೆ. 25 ನಮ್ಮ ಪಾಪಗಳ ದೆಸೆಯಿಂದ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು. ನಮ್ಮನ್ನು ನೀತಿವಂತರನ್ನಾಗಿ ಮಾಡುವುದಕ್ಕಾಗಿ ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International