Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 60-62

ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
    ನಮ್ಮನ್ನು ನಾಶಗೊಳಿಸಿರುವೆ.
    ನಮ್ಮನ್ನು ಪುನರ್‌ಸ್ಥಾಪಿಸು.
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
    ನಮ್ಮ ದೇಶವು ಕುಸಿದುಬೀಳುತ್ತಿದೆ;
    ಅದನ್ನು ಸರಿಪಡಿಸು.
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
    ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
    ಈಗ ಅವರು ಶತ್ರುಗಳಿಂದ ಪಾರಾಗಬಹುದು.

ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
    ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!

ದೇವರು ತನ್ನ ಆಲಯದೊಳಗೆ ಹೀಗೆಂದನು:
    “ನಾನು ಅವರಿಗೆ ಶೆಕೆಮನ್ನು ಕೊಡುವೆನು;
    ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
    ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣ.
    ಯೆಹೂದ ನನ್ನ ರಾಜದಂಡ.
    ಮೋವಾಬ್ ನನ್ನ ಸ್ನಾನಪಾತ್ರೆ.
    ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
    ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”

9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
    ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
    ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
    ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

ರಚನೆಗಾರ: ದಾವೀದ.

61 ದೇವರೇ, ನನ್ನ ಮೊರೆಯನ್ನು ಕೇಳು.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
    ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
ನೀನೇ ನನ್ನ ಆಶ್ರಯಸ್ಥಾನ;
    ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.

ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
    ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
    ಅವನು ಸದಾಕಾಲ ಜೀವಿಸಲಿ!
ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
    ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
    ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.

ರಚನೆಗಾರ: ದಾವೀದ.

62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
    ಆತನಿಂದಲೇ ನನಗೆ ರಕ್ಷಣೆಯಾಗುವುದು.
ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
    ನಾನೆಂದಿಗೂ ಕದಲೆನು.

ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
    ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
    ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
    ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

ರೋಮ್ನಗರದವರಿಗೆ 5

ನೀತಿನಿರ್ಣಯ

ಹೀಗಿರಲಾಗಿ, ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ. ಆದಕಾರಣ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿದೆ. ಈಗ ನಾವು ಆನಂದಿಸುತ್ತಿರುವ ದೇವರ ಕೃಪಾಶ್ರಯಕ್ಕೆ ಕ್ರಿಸ್ತನೇ ನಮ್ಮನ್ನು ನಮ್ಮ ನಂಬಿಕೆಯ ಮೂಲಕ ತಂದಿದ್ದಾನೆ. ದೇವರ ಮಹಿಮೆಯನ್ನು ಹೊಂದುವೆವು ಎಂಬ ನಿರೀಕ್ಷೆಯು ನಮಗಿರುವುದರಿಂದ ನಾವು ಬಹು ಸಂತೋಷವಾಗಿದ್ದೇವೆ. ಅಲ್ಲದೆ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷವಾಗಿದ್ದೇವೆ. ಏಕೆಂದರೆ, ಈ ಕಷ್ಟಸಂಕಟಗಳು ನಮ್ಮಲ್ಲಿ ಹೆಚ್ಚು ತಾಳ್ಮೆಯನ್ನು ಉಂಟುಮಾಡುತ್ತವೆ. ನಾವು ಬಲಶಾಲಿಗಳಾಗಿದ್ದೇವೆ ಎಂಬುದಕ್ಕೆ ಈ ತಾಳ್ಮೆಯೇ ಆಧಾರ. ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಈ ಆಧಾರವೇ. ನಮ್ಮ ಈ ನಿರೀಕ್ಷೆಯು ನಮ್ಮನ್ನು ಎಂದಿಗೂ ನಿರಾಶರನ್ನಾಗಿ ಮಾಡುವುದಿಲ್ಲ. ಅದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ದೇವರು ನಮಗೆ ಉಡುಗೊರೆಯಾಗಿ ಕೊಟ್ಟಿರುವ ಪವಿತ್ರಾತ್ಮನ ಮೂಲಕ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾನೆ.

ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು. ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.

ನಾವು ಕ್ರಿಸ್ತನ ರಕ್ತದ ಮೂಲಕವಾಗಿ ನೀತಿವಂತರಾಗಿದ್ದೇವೆ. ಆದ್ದರಿಂದ ಆತನ ಮೂಲಕ ದೇವರ ಕೋಪದಿಂದ ಖಂಡಿತವಾಗಿ ತಪ್ಪಿಸಿಕೊಳ್ಳುತ್ತೇವೆ. 10 ಅಂದರೆ, ನಾವು ದೇವರ ಶತ್ರುಗಳಾಗಿದ್ದಾಗಲೇ, ದೇವರು ತನ್ನ ಮಗನ ಮರಣದ ಮೂಲಕವಾಗಿ ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ. ಈಗ ನಾವು ದೇವರ ಸ್ನೇಹಿತರಾಗಿರುವುದರಿಂದ ದೇವರು ತನ್ನ ಮಗನ ಪ್ರಾಣದ ಮೂಲಕ ನಮ್ಮನ್ನು ರಕ್ಷಿಸುವುದು ಮತ್ತಷ್ಟು ನಿಶ್ಚಯವಾಗಿದೆ. 11 ಇಷ್ಟು ಮಾತ್ರವಲ್ಲದೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಾವು ದೇವರಲ್ಲಿ ಹರ್ಷಿಸುತ್ತೇವೆ. ಈಗ ನಾವು ದೇವರ ಸ್ನೇಹಿತರಾಗಿರುವುದು ಯೇಸುವಿನಿಂದಲೇ.

ಆದಾಮ ಮತ್ತು ಕ್ರಿಸ್ತನು

12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಆ ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ. 13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ. 14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಆ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು.

ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು. 15 ಆದರೆ ದೇವರ ಉಚಿತ ಕೊಡುಗೆಯು ಆದಾಮನ ಪಾಪದಂತಿಲ್ಲ. ಆ ಒಬ್ಬನು ಮಾಡಿದ ಪಾಪದ ದೆಸೆಯಿಂದಾಗಿ ಅನೇಕ ಜನರು ಸತ್ತರು. ಆದರೆ ಜನರು ದೇವರಿಂದ ಪಡೆದುಕೊಂಡ ಕೃಪೆಯು ಅದಕ್ಕಿಂತ ಬಹು ದೊಡ್ಡದಾಗಿದೆ. ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯ ಮೂಲಕ ದೇವರು ಉಚಿತವಾಗಿ ಕೊಡುವ “ಜೀವ”ವನ್ನು ಅನೇಕ ಜನರು ಹೊಂದಿಕೊಂಡರು. 16 ಆದಾಮನು ಒಮ್ಮೆ ಪಾಪಮಾಡಿದ ಮೇಲೆ ಅವನಿಗೆ ಅಪರಾಧಿ ಎಂದು ತೀರ್ಪು ನೀಡಲಾಯಿತು. ಆದರೆ ದೇವರ ಉಚಿತವಾದ ಕೊಡುಗೆ ಅದಕ್ಕೆ ತದ್ವಿರುದ್ಧವಾಗಿದೆ. ಅನೇಕ ಪಾಪಗಳ ದೆಸೆಯಿಂದ ದೇವರ ಉಚಿತವಾದ ಕೊಡುಗೆ ಬಂದಿತು. ಆ ಉಚಿತ ಕೊಡುಗೆ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಒಬ್ಬನು ಪಾಪ ಮಾಡಿದನು, ಆ ಒಬ್ಬನ ದೆಸೆಯಿಂದ ಮರಣವು ಎಲ್ಲಾ ಜನರ ಮೇಲೆ ಆಳ್ವಿಕೆ ನಡೆಸಿತು. ಆದರೆ ಈಗ ಕೆಲವು ಜನರು ದೇವರ ಪೂರ್ಣ ಕೃಪೆಯನ್ನು ಮತ್ತು ನೀತಿವಂತರನ್ನಾಗಿ ಮಾಡುವ ಆತನ ಉಚಿತವಾದ ಮಹಾ ಕೊಡುಗೆಯನ್ನು ಸ್ವೀಕರಿಸಿಕೊಳ್ಳುವರು. ನಿಶ್ಚಯವಾಗಿಯು ಅವರು ಯೇಸು ಕ್ರಿಸ್ತನೆಂಬ ಆ ಒಬ್ಬ ಪುರುಷನ ಮೂಲಕ, ನಿಜವಾದ ಜೀವವನ್ನು ಹೊಂದಿಕೊಳ್ಳುವರು ಮತ್ತು ಆಳುವರು.

18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಆ ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ. 19 ಒಬ್ಬನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಜನರು ಪಾಪಿಗಳಾದರು. ಆದರೆ ಅದೇ ರೀತಿಯಲ್ಲಿ, ಒಬ್ಬನು ದೇವರಿಗೆ ವಿಧೇಯನಾದ್ದರಿಂದ ಎಲ್ಲರೂ ನೀತಿವಂತರಾಗುವರು. 20 ಧರ್ಮಶಾಸ್ತ್ರ ಬಂದದ್ದರಿಂದ ಜನರಲ್ಲಿ ಹೆಚ್ಚು ಪಾಪಗಳು ಕಂಡುಬಂದವು. ಆದರೆ ಜನರು ಹೆಚ್ಚು ಪಾಪಗಳನ್ನು ಮಾಡಿದಾಗ, ದೇವರು ಅವರಿಗೆ ಹೆಚ್ಚು ಕೃಪೆಯನ್ನು ದಯಪಾಲಿಸಿದನು. 21 ಒಂದು ಕಾಲದಲ್ಲಿ ಪಾಪವು ಮರಣದ ಮೂಲಕ ನಮ್ಮ ಮೇಲೆ ಆಳ್ವಿಕೆ ನಡೆಸಿತು. ಆದರೆ ದೇವರು ಜನರನ್ನು ನೀತಿವಂತರನ್ನಾಗಿ ಮಾಡಬೇಕೆಂದು ತನ್ನ ಕೃಪೆಯನ್ನು ಹೆಚ್ಚಾಗಿ ಅನುಗ್ರಹಿಸಿದನು. ಈ ಕೃಪೆಯು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ನಿತ್ಯಜೀವವನ್ನು ತರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International