Old/New Testament
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
112 ಯೆಹೋವನಿಗೆ ಸ್ತೋತ್ರವಾಗಲಿ!
ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
2 ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
3 ಅವನ ಕುಟುಂಬದವರು ಐಶ್ವರ್ಯವಂತರಾಗುವರು.
ಅವನ ನೀತಿಯು ಶಾಶ್ವತವಾಗಿರುವುದು.
4 ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
5 ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
6 ಅವನೆಂದಿಗೂ ಬೀಳುವುದಿಲ್ಲ.
ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
7 ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
8 ಅವನ ಮನಸ್ಸು ದೃಢವಾಗಿರುವುದರಿಂದ
ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
9 ಅವನು ಬಡವರಿಗೆ ಉದಾರವಾಗಿ ಕೊಡುವನು.
ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
ಅವರ ದುರಾಶೆಯು ಈಡೇರದು.
ಸಭೆಯಲ್ಲಿ ನೈತಿಕ ಸಮಸ್ಯೆ
5 ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ. 2 ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು. 3 ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ. 4 ನಮ್ಮ ಪ್ರಭುವಾದ ಯೇಸುವಿನ ಹೆಸರಿನಲ್ಲಿ ಒಟ್ಟಾಗಿ ಸೇರಿಬನ್ನಿ. ನಾನು ಆತ್ಮದಲ್ಲಿ ನಿಮ್ಮೊಂದಿಗಿರುವೆನು. ನಮ್ಮ ಪ್ರಭುವಾದ ಯೇಸುವಿನ ಶಕ್ತಿಯೂ ನಿಮ್ಮೊಂದಿಗೆ ಇರುವುದು. 5 ಆ ಮನುಷ್ಯನ ಪಾಪಸ್ವಭಾವವು ನಾಶವಾಗುವುದಕ್ಕಾಗಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಿರಿ. ಆಗ ಪ್ರಭುವಿನ ದಿನದಂದು ಅವನ ಜೀವಾತ್ಮವು ರಕ್ಷಣೆಹೊಂದಲು ಸಾಧ್ಯವಾಗುವುದು.
6 ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ. 7 ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ. 8 ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ. 11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ”(A) ಎಂದು ಪವಿತ್ರ ಗ್ರಂಥ ಹೇಳುತ್ತದೆ.
Kannada Holy Bible: Easy-to-Read Version. All rights reserved. © 1997 Bible League International