Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 20-21

ಚೋಫರನ ಉತ್ತರ

20 ಬಳಿಕ ನಾಮಾಥ ದೇಶದ ಚೋಫರನು ಉತ್ತರಕೊಟ್ಟನು:

“ಯೋಬನೇ, ನಿನ್ನ ಆಲೋಚನೆಗಳು ಗಲಿಬಿಲಿಗೊಂಡಿವೆ; ಆದ್ದರಿಂದ ನಾನು ನಿನಗೆ ಉತ್ತರ ಕೊಡಲೇಬೇಕು.
    ನನ್ನ ಆಲೋಚನೆಗಳನ್ನು ನಿನಗೆ ಬೇಗನೆ ತಿಳಿಸಬೇಕು.
ನಿನ್ನ ಉತ್ತರಗಳಿಂದ ನೀನು ನನಗೆ ಅವಮಾನ ಮಾಡಿರುವೆ!
    ಆದರೆ ನಾನು ಜ್ಞಾನಿಯಾಗಿದ್ದೇನೆ; ನಿನಗೆ ಹೇಗೆ ಉತ್ತರ ಕೊಡಬೇಕೆಂಬುದು ನನಗೆ ಗೊತ್ತಿದೆ.

4-5 “ದುಷ್ಟನ ಆನಂದವು ಬಹುಕಾಲ ಇರುವಂಥದ್ದಲ್ಲ ಎಂಬುದು ನಿನಗೆ ಗೊತ್ತೇ ಇದೆ.
    ಆದಾಮನನ್ನು ಸೃಷ್ಟಿಸಿದ ಕಾಲದಿಂದಲೂ ಇದು ಸತ್ಯ.
    ದೇವರನ್ನು ತಿರಸ್ಕರಿಸುವವನು ಅಲ್ಪಕಾಲ ಮಾತ್ರ ಸಂತೋಷದಿಂದಿರುವನು.
ದುಷ್ಟನ ಅಹಂಕಾರವು ಆಕಾಶವನ್ನು ತಲುಪಬಹುದು;
    ಅವನ ತಲೆಯು ಮೋಡಗಳಿಗೆ ತಗುಲಬಹುದು.
ಆದರೆ ಅವನು ತನ್ನ ಮಲದ ಹಾಗೆ ನಿತ್ಯನಾಶವಾಗುವನು.
    ಅವನನ್ನು ಬಲ್ಲವರು, ‘ಅವನೆಲ್ಲಿ?’ ಎಂದು ಕೇಳುವರು.
ಅವನು ಕನಸಿನಂತೆ ಹಾರಿಹೋಗುವನು, ಯಾರೂ ಅವನನ್ನು ಮತ್ತೆ ನೋಡುವುದಿಲ್ಲ,
    ರಾತ್ರಿಯ ಕೆಟ್ಟ ಕನಸಿನಂತೆ ಅವನನ್ನು ಅಟ್ಟಿಬಿಡಲಾಗುವುದು.
ಅವನನ್ನು ಕಂಡ ಜನರು, ಅವನನ್ನು ಮತ್ತೆ ನೋಡುವುದಿಲ್ಲ,
    ಅವನ ಕುಟುಂಬವು ಅವನನ್ನು ಮತ್ತೆಂದಿಗೂ ನೋಡುವುದಿಲ್ಲ.
10 ದುಷ್ಟನು ಬಡವರಿಂದ ಕಸಿದುಕೊಂಡದ್ದನ್ನು ಅವನ ಮಕ್ಕಳು ಕೊಡಬೇಕಾಗುವುದು.
    ದುಷ್ಟನ ಸ್ವಂತ ಕೈಗಳೇ ಅವನ ಐಶ್ವರ್ಯವನ್ನು ಹಿಂದಕ್ಕೆ ಕೊಡಬೇಕಾಗುವುದು.
11 ಅವನು ಯುವಕನಾಗಿದ್ದಾಗ ಅವನ ಎಲುಬುಗಳು ಬಲವಾಗಿದ್ದವು;
    ಆದರೆ ದೇಹದ ಉಳಿದ ಅಂಗಗಳೊಡನೆ ಅವೂ ಧೂಳುಪಾಲಾಗುತ್ತವೆ.

12 “ದುಷ್ಟನ ಬಾಯಿಗೆ ಕೆಟ್ಟತನವು ಸಿಹಿಯಾಗಿರುವುದು.
    ಅವನು ಅದನ್ನು ತನ್ನ ನಾಲಿಗೆಯ ಕೆಳಗೆ ಅಡಗಿಸಿಕೊಳ್ಳುವನು.
13 ಅವನು ಆ ಕೆಟ್ಟತನವನ್ನು ಪಟ್ಟಾಗಿ ಹಿಡಿದುಕೊಂಡು ಸಂತೋಷಪಡುವನು.
    ಅದನ್ನು ತನ್ನ ಬಾಯಿಯಲ್ಲಿ ಸಿಹಿತಿನಿಸಿನಂತೆ ಇಟ್ಟುಕೊಂಡಿರುವನು.
14 ಆದರೆ ಅದು ಅವನ ಹೊಟ್ಟೆಯಲ್ಲಿ
    ಹಾವಿನ ವಿಷದ ಹಾಗೆ ಕಹಿಯಾದ ವಿಷವಾಗುವುದು.
15 ದುಷ್ಟನು ಐಶ್ವರ್ಯವನ್ನು ನುಂಗಿಕೊಂಡಿದ್ದರೂ ಅದನ್ನು ಕಕ್ಕಿಬಿಡುವನು.
    ಹೌದು, ದೇವರು ಅದನ್ನು ದುಷ್ಟನ ಹೊಟ್ಟೆಯೊಳಗಿಂದ ಕಕ್ಕಿಸಿಬಿಡುವನು.
16 ದುಷ್ಟನ ಪಾನೀಯವು ಹಾವಿನ ವಿಷದಂತಿದೆ.
    ಹಾವಿನ ನಾಲಿಗೆಯು ಅವನನ್ನು ಕೊಲ್ಲುವುದು.
17 ಆ ದುಷ್ಟನು ಹಾಲೂಜೇನೂ ಹರಿಯುವ ನದಿಗಳನ್ನು
    ನೋಡುವುದೇ ಇಲ್ಲ.
18 ದುಷ್ಟನು ಗಳಿಸಿದ ಲಾಭಗಳು ಬೇರೆಯವರ ಪಾಲಾಗುವುದು.
    ತನ್ನ ಲಾಭವನ್ನು ಅನುಭವಿಸಲು ಅವನಿಗೆ ಸಾಧ್ಯವಾಗದು.
19 ಯಾಕೆಂದರೆ ದುಷ್ಟನು ಬಡವರನ್ನು ಕಡೆಗಣಿಸಿದ್ದಾನೆ;
    ಬೇರೊಬ್ಬನು ಕಟ್ಟಿದ ಮನೆಗಳನ್ನು ಕಿತ್ತುಕೊಂಡಿದ್ದಾನೆ.

20 “ಅವನಿಗೆ ತೃಪ್ತಿಯೇ ಇಲ್ಲ.
    ಅವನ ಐಶ್ವರ್ಯವು ಅವನನ್ನು ರಕ್ಷಿಸಲಾರದು.
21 ಅವನು ತಿಂದ ಮೇಲೆ ಏನೂ ಉಳಿದುರುವುದಿಲ್ಲ.
    ಅವನ ಅಭಿವೃದ್ಧಿಯು ನಿಂತುಹೋಗುವುದು.
22 ದುಷ್ಟನು ಸಮೃದ್ಧಿಯಿಂದಿರುವಾಗಲೇ ಇಕ್ಕಟ್ಟಿನಿಂದ ಕುಗ್ಗಿಸಲ್ಪಡುವನು;
    ಅವನ ಕಷ್ಟಗಳು ಅವನ ಮೇಲೆ ಬೀಳುವವು!
23 ದುಷ್ಟನು ತನ್ನ ಇಷ್ಟಾನುಸಾರ ತಿಂದಮೇಲೆ
    ದೇವರು ತನ್ನ ದಹಿಸುವ ಕೋಪವನ್ನು ತೋರಿ
    ಅವನ ಮೇಲೆ ದಂಡನೆಯ ಮಳೆ ಸುರಿಸುವನು.
24 ದುಷ್ಟನು ಕಬ್ಬಿಣದ ಖಡ್ಗದಿಂದ ಓಡಿಹೋಗುವನು;
    ಆದರೆ ತಾಮ್ರದ ಬಾಣವು ಅವನನ್ನು ಹೊಡೆದುರುಳಿಸುವುದು.
25 ಅವನು ಅದನ್ನು ಕೀಳಲು
    ಅದು ಬೆನ್ನಿನಿಂದ ಬರುವುದು;
ಥಳಥಳಿಸುವ ಬಾಣದ ತುದಿಯು ಪಿತ್ತಕೋಶದೊಳಗಿಂದ ಬರುವುದು.
    ಅವನು ಅಪಾಯದಿಂದ ದಿಗ್ಭ್ರಾಂತನಾಗುವನು.
26 ಅವನ ಭಂಡಾರಗಳೆಲ್ಲಾ ನಾಶವಾಗುತ್ತವೆ.
    ಯಾರೂ ಹೊತ್ತಿಸದ ಬೆಂಕಿಯಿಂದ ಅವನು ನಾಶವಾಗುವನು.
    ಅವನ ಗುಡಾರದಲ್ಲಿ ಉಳಿದಿರುವುದೆಲ್ಲವನ್ನು ಬೆಂಕಿಯು ನಾಶಮಾಡುವುದು.
27 ದುಷ್ಟನು ಅಪರಾಧಿಯೆಂದು ಪರಲೋಕವು ನಿರೂಪಿಸುತ್ತದೆ.
    ಭೂಮಿಯು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತದೆ.
28 ಅವನ ಮನೆಯಲ್ಲಿರುವ ಪ್ರತಿಯೊಂದನ್ನು
    ದೇವರ ಕೋಪದ ಪ್ರವಾಹವು ಕೊಚ್ಚಿಕೊಂಡುಹೋಗುವುದು.
29 ದುಷ್ಟರಿಗೆ ದೇವರು ಮಾಡುವುದು ಇದನ್ನೇ.
    ಅವರಿಗೆ ದೇವರು ಕೊಡುವುದೂ ಇದನ್ನೇ.”

ಯೋಬನ ಉತ್ತರ

21 ಬಳಿಕ ಯೋಬನು ಉತ್ತರಕೊಟ್ಟನು:

“ನಾನು ಹೇಳುವುದನ್ನು ಕೇಳಿ.
    ನಿಮ್ಮಿಂದ ನನಗಾಗಬೇಕಾದ ಆದರಣೆ ಇಷ್ಟೇ.
ನಾನು ಮಾತಾಡುವಾಗ ತಾಳ್ಮೆಯಿಂದಿರಿ.
    ನಾನು ಮಾತಾಡಿದ ಮೇಲೆ ನೀವು ನನ್ನನ್ನು ಗೇಲಿ ಮಾಡಿದರೂ ಮಾಡಿರಿ.

“ನಾನು ಮನುಷ್ಯನ ವಿರೋಧವಾಗಿ ದೂರು ಹೇಳುತ್ತಿಲ್ಲ.
    ನನ್ನಲ್ಲಿ ತಾಳ್ಮೆಯಿಲ್ಲದಿರುವುದಕ್ಕೆ ಒಂದು ಒಳ್ಳೆಯ ಕಾರಣವಿದೆ.
ನನ್ನನ್ನು ನೋಡಿ ಬೆರಗಾಗಿ
    ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ, ಗಾಬರಿಯಿಂದ ನನ್ನನ್ನೇ ದೃಷ್ಟಿಸಿ ನೋಡಿರಿ!
ನನಗೆ ಸಂಭವಿಸಿದ ಬಗ್ಗೆ ನಾನು ಯೋಚಿಸುವಾಗ
    ನನಗೆ ಭಯವಾಗುತ್ತದೆ; ನನ್ನ ದೇಹವು ನಡುಗುತ್ತದೆ.
ದುಷ್ಟರು ದೀರ್ಘಕಾಲ ಜೀವಿಸುವುದೇಕೆ?
    ಅವರು ವೃದ್ಧರಾಗುವವರೆಗೂ ಅಭಿವೃದ್ಧಿಯಾಗುತ್ತಾ ಬಾಳುವುದೇಕೆ?
ದುಷ್ಟರ ಮಕ್ಕಳು ತಮ್ಮ ತಂದೆತಾಯಿಗಳೊಂದಿಗಿದ್ದು ಬೆಳೆಯುವರು;
    ದುಷ್ಟರು ತಮ್ಮ ಮೊಮ್ಮಕ್ಕಳನ್ನೂ ನೋಡುವರು.
ಅವರ ಕುಟುಂಬಗಳು ಸುರಕ್ಷಿತವಾಗಿರುವುದರಿಂದ ಅವರಿಗೆ ಭಯವಿಲ್ಲ.
    ದೇವರು ದುಷ್ಟರನ್ನು ತನ್ನ ದೊಣ್ಣೆಯಿಂದ ದಂಡಿಸುವುದಿಲ್ಲ.
10 ಅವರ ಹೋರಿಗಳು ತಪ್ಪದೆ ಸಂಗಮಿಸುತ್ತವೆ.
    ಅವರ ಹಸುಗಳು ಕರುಗಳನ್ನು ಈಯುತ್ತವೆ.
11 ದುಷ್ಟರು ತಮ್ಮ ಮಕ್ಕಳನ್ನು ಕುರಿಮರಿಗಳಂತೆ ಆಟವಾಡಲು ಹೊರಗೆ ಕಳುಹಿಸುವರು.
    ಅವರ ಮಕ್ಕಳು ಸುತ್ತಮುತ್ತ ಕುಣಿದಾಡುವರು.
12 ಅವರು ತಂಬೂರಿಗಳನ್ನೂ ಹಾರ್ಪ್‌ವಾದ್ಯಗಳನ್ನೂ ಬಾರಿಸುತ್ತಾ ಹಾಡುವರು; ಕೊಳಲುಗಳ ಧ್ವನಿಗೆ ಉಲ್ಲಾಸಪಡುವರು.
13 ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು.
    ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.
14 ಆದರೆ ದುಷ್ಟರು ದೇವರಿಗೆ, ‘ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಕೊಡು!
    ನಿನ್ನ ಮಾರ್ಗದ ತಿಳುವಳಿಕೆಯೇ ನಮಗೆ ಬೇಡ’ ಎನ್ನುವರು.
15 ದುಷ್ಟರು, ‘ಸರ್ವಶಕ್ತನಾದ ದೇವರು ಯಾರು?
    ನಾವು ಆತನ ಸೇವೆಮಾಡುವ ಅಗತ್ಯವಿಲ್ಲ!
    ಆತನಿಗೆ ಪ್ರಾರ್ಥಿಸುವುದರಿಂದ ಪ್ರಯೋಜನವೇನೂ ಇಲ್ಲ’ ಎಂದು ಹೇಳುವರು.

16 “ತಮ್ಮ ಏಳಿಗೆಗೆ ಕಾರಣ ತಾವೇ ಎಂದು ದುಷ್ಟರು ಯೋಚಿಸಿಕೊಂಡಿದ್ದಾರೆ.
    ಆದರೆ ಅವರ ಆಲೋಚನೆಗಳನ್ನು ನಾನು ತಿರಸ್ಕರಿಸುವೆ.
17 ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು?
    ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು?
    ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?
18 ಗಾಳಿಯು ಹುಲ್ಲನ್ನೂ ಬಿರುಗಾಳಿಯು ಹೊಟ್ಟನ್ನೂ ಬಡಿದುಕೊಂಡು ಹೋಗುವಂತೆ
    ದೇವರು ದುಷ್ಟರನ್ನು ಎಷ್ಟು ಸಲ ಬಡಿದುಕೊಂಡು ಹೋಗುವನು?
19 ‘ದುಷ್ಟನ ಮಕ್ಕಳಿಗೆ ದೇವರು ದಂಡನೆಯನ್ನು ಶೇಖರಿಸಿಡುತ್ತಾನೆ’ ಎಂದು ನೀವು ಹೇಳುತ್ತೀರಿ.
    ಇಲ್ಲ! ದೇವರು ದುಷ್ಟನನ್ನೇ ದಂಡಿಸಲಿ.
    ಆಗ, ತನ್ನ ಸ್ವಂತ ಪಾಪಗಳಿಗಾಗಿ ತನಗೆ ದಂಡನೆಯಾಯಿತೆಂದು
    ಅವನು ತಿಳಿದುಕೊಳ್ಳುವನು.
20 ದುಷ್ಟನು ತನ್ನ ಸ್ವಂತ ನಾಶನವನ್ನು ತಾನೇ ನೋಡಲಿ;
    ಸರ್ವಶಕ್ತನಾದ ದೇವರ ಕೋಪವನ್ನು ಅನುಭವಿಸಲಿ.
21 ದುಷ್ಟನ ಜೀವಿತವು ಮುಗಿದುಹೋದ ಮೇಲೆ,
    ತಾನು ಬಿಟ್ಟುಹೋಗಿರುವ ತನ್ನ ಕುಟುಂಬದ ಬಗ್ಗೆ ಅವನು ಚಿಂತಿಸುವುದಿಲ್ಲ.

22 “ದೇವರಿಗೆ ಜ್ಞಾನವನ್ನು ಉಪದೇಶಿಸಲು ಯಾರಿಂದಲೂ ಆಗದು.
    ಮೇಲಿನ ಲೋಕದಲ್ಲಿರುವ ಜನರಿಗೂ ಸಹ ದೇವರು ನ್ಯಾಯತೀರಿಸುವನು.
23 ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು.
    ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.
24 ಅವನ ದೇಹವು ಚೆನ್ನಾಗಿ ಪೋಷಿಸಲ್ಪಟ್ಟಿತು,
    ಅವನ ಎಲುಬುಗಳು ಮಜ್ಜೆಯಿಂದ ಇನ್ನೂ ಸಾರವಾಗಿರುವುದು.
25 ಆದರೆ ಮತ್ತೊಬ್ಬನು ಕಷ್ಟಕರವಾದ ಜೀವನದ ನಂತರ ಮನಗುಂದಿದವನಾಗಿ ಸಾಯುವನು.
    ಅವನು ಯಾವ ಸುಖವನ್ನೂ ಅನುಭವಿಸಲಿಲ್ಲ.
26 ಕೊನೆಯಲ್ಲಿ ಅವರಿಬ್ಬರೂ ಧೂಳಿನಲ್ಲಿ ಒಟ್ಟಿಗೆ ಮಲಗಿಕೊಳ್ಳುವರು.
    ಹುಳಗಳು ಅವರಿಬ್ಬರನ್ನೂ ಮುತ್ತಿಕೊಳ್ಳುವವು.

27 “ಆದರೆ, ನಿಮ್ಮ ಆಲೋಚನೆಗಳನ್ನು ಬಲ್ಲೆ,
    ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ನಾನು ಬಲ್ಲೆ.
28 ‘ನೀತಿವಂತನ ಮನೆಯು ಎಲ್ಲಿದೆ?
    ದುಷ್ಟನು ವಾಸವಾಗಿರುವುದು ಎಲ್ಲಿ?’ ಎಂದು ನೀವು ಕೇಳಬಹುದು.

29 “ನೀವು ಖಂಡಿತವಾಗಿಯೂ ಪ್ರಯಾಣಿಕರನ್ನು ಕೇಳಿದ್ದೀರಿ.
    ನೀವು ಖಂಡಿತವಾಗಿಯೂ ಅವರ ವರದಿಯನ್ನು ಒಪ್ಪಿಕೊಳ್ಳುವಿರಿ.
30 ಅಪಾಯ ಬಂದಾಗ ದುಷ್ಟನು ಪಾರಾಗುವನು;
    ದೇವರ ಕೋಪವು ತೋರಿಬರುವ ದಿನದಲ್ಲಿ ಅವನು ತಪ್ಪಿಸಿಕೊಳ್ಳುವನು.
31 ದುಷ್ಟನ ಕೆಟ್ಟಕಾರ್ಯದ ಬಗ್ಗೆ ಅವನ ಮುಖದೆದುರಿನಲ್ಲಿ ಯಾರೂ ಟೀಕಿಸುವುದಿಲ್ಲ.
    ಅವನು ಮಾಡಿದ ಕೇಡಿಗಾಗಿ ಯಾರೂ ಅವನನ್ನು ದಂಡಿಸುವುದಿಲ್ಲ.
32 ದುಷ್ಟನನ್ನು ಸಮಾಧಿಗೆ ಹೊತ್ತುಕೊಂಡು ಹೋದಾಗ
    ಅವನ ಸಮಾಧಿಯ ಸಮೀಪದಲ್ಲಿ ಕಾವಲುಗಾರರು ನಿಂತುಕೊಳ್ಳುವರು.
33 ಆ ದುಷ್ಟನಿಗೆ ಕಣಿವೆಯ ಮಣ್ಣು ಸಿಹಿಯಾಗಿರುವುದು.
    ಅವನ ಶವಸಂಸ್ಕಾರದ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಳ್ಳುವರು.

34 “ಆದ್ದರಿಂದ ನೀವು ನಿಮ್ಮ ಬರಿದಾದ ಮಾತುಗಳಿಂದ ನನ್ನನ್ನು ಸಂತೈಸಲಾರಿರಿ.
    ನಿಮ್ಮ ಉತ್ತರಗಳು ಕೇವಲ ಸುಳ್ಳೇ ಆಗಿವೆ.”

ಅಪೊಸ್ತಲರ ಕಾರ್ಯಗಳು 10:24-48

24 ಮರುದಿನ ಅವರು ಸೆಜರೇಯ ಪಟ್ಟಣವನ್ನು ತಲುಪಿದರು. ಕೊರ್ನೇಲಿಯನು ಅವರಿಗೋಸ್ಕರ ಕಾಯುತ್ತಿದ್ದನು. ಅವನು ತನ್ನ ಸಂಬಂಧಿಕರನ್ನು ಮತ್ತು ಆಪ್ತಸ್ನೇಹಿತರನ್ನು ಆಗಲೇ ತನ್ನ ಮನೆಗೆ ಆಹ್ವಾನಿಸಿದ್ದನು.

25 ಪೇತ್ರನು ಮನೆಯನ್ನು ಪ್ರವೇಶಿಸುತ್ತಿರಲು ಕೊರ್ನೇಲಿಯನು ಅವನನ್ನು ಎದುರುಗೊಂಡನು. ಕೊರ್ನೇಲಿಯನು ಪೇತ್ರನ ಪಾದಕ್ಕೆ ಅಡ್ಡಬಿದ್ದು ನಮಸ್ಕಾರ ಮಾಡಿದನು. 26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದುನಿಲ್ಲು! ನಾನೂ ನಿನ್ನಂತೆಯೇ ಕೇವಲ ಒಬ್ಬ ಮನುಷ್ಯನು” ಎಂದು ಹೇಳಿದನು. 27 ಪೇತ್ರನು ಕೊರ್ನೇಲಿಯನೊಂದಿಗೆ ಮಾತನ್ನು ಮುಂದುವರಿಸಿದನು. ಬಳಿಕ ಪೇತ್ರನು ಒಳಗೆ ಹೋದಾಗ, ಅಲ್ಲಿ ನೆರೆದು ಬಂದಿದ್ದ ಜನರ ದೊಡ್ಡ ಗುಂಪನ್ನು ಕಂಡನು.

28 ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದಾಗಲಿ ಅವರನ್ನು ಭೇಟಿಮಾಡುವುದಾಗಲಿ ನಮ್ಮ ಯೆಹೂದ್ಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತೇ ಇದೆ. ಆದರೆ ಯಾವ ವ್ಯಕ್ತಿಯನ್ನೂ ಅಪವಿತ್ರನೆಂದಾಗಲಿ ಅಶುದ್ಧನೆಂದಾಗಲಿ ಕರೆಯಕೂಡದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. 29 ಆದ್ದರಿಂದ, ನನ್ನನ್ನು ಇಲ್ಲಿಗೆ ಬರಬೇಕೆಂದು ಕರೆದ ಜನರೊಂದಿಗೆ ನಾನು ವಾದಮಾಡಲಿಲ್ಲ. ಆದರೆ ನೀವು ನನ್ನನ್ನು ಯಾಕೆ ಕರೆಸಿದಿರೆಂದು ದಯವಿಟ್ಟು ಈಗ ಹೇಳಿರಿ” ಎಂದನು.

30 ಆಗ ಕೊರ್ನೇಲಿಯನು, “ನಾಲ್ಕು ದಿನಗಳ ಹಿಂದೆ, ನಾನು ನನ್ನ ಮನೆಯಲ್ಲಿ ಪ್ರಾರ್ಥಿಸುತ್ತಿದ್ದೆನು. ಆಗ ಮಧ್ಯಾಹ್ನದ ಸುಮಾರು ಮೂರು ಗಂಟೆ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಮನುಷ್ಯನು ನನ್ನ ಮುಂದೆ ನಿಂತನು. ಅವನು ಧರಿಸಿಕೊಂಡಿದ್ದ ಬಟ್ಟೆಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. 31 ಆ ಮನುಷ್ಯನು, ‘ಕೊರ್ನೇಲಿಯನೇ! ದೇವರು ನಿನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ. ನೀನು ಬಡಜನರಿಗೆ ಕೊಡುವಂಥವುಗಳನ್ನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 32 ಆದ್ದರಿಂದ ಕೆಲವು ಜನರನ್ನು ಜೊಪ್ಪಪಟ್ಟಣಕ್ಕೆ ಕಳುಹಿಸಿ ಸೀಮೋನ್ ಪೇತ್ರನನ್ನು ಬರಬೇಕೆಂದು ಕೇಳಿಕೊ. ಪೇತ್ರನು ಚರ್ಮಕಾರನಾದ ಸೀಮೋನ ಎಂಬವನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ’ ಎಂದನು. 33 ಆದ್ದರಿಂದ, ನಾನು ತಕ್ಷಣ ನಿನಗೆ ಕರೆಕಳುಹಿಸಿದೆ. ನೀನು ಇಲ್ಲಿಗೆ ಬಂದದ್ದು ಉಪಕಾರವಾಯಿತು. ನಮಗೆ ತಿಳಿಸಬೇಕೆಂದು ಪ್ರಭುವು ನಿನಗೆ ಆಜ್ಞಾಪಿಸಿರುವ ಪ್ರತಿಯೊಂದನ್ನು ಕೇಳಲು ನಾವೆಲ್ಲರು ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ” ಎಂದು ಹೇಳಿದನು.

ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ

34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!

37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.

39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.

42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.

ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ

44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International