Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 1-3

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
    ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
ಅವುಗಳ ರಾಜರುಗಳೂ ನಾಯಕರುಗಳೂ
    ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
“ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
    ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
    ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
    ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
    ಆಗ ಅವರೆಲ್ಲರೂ ಭಯಗೊಳ್ಳುವರು.

ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
    ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
    ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
    ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.

10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
    ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
    ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
    ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
    ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!

ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ.
    ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ.
ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.

ಆದರೆ ಯೆಹೋವನೇ, ನೀನೇ ನನ್ನ ಗುರಾಣಿ.
    ನೀನೇ ನನ್ನ ಗೌರವಕ್ಕೆ ಆಧಾರ.
    ನನ್ನನ್ನು ಜಯವೀರನನ್ನಾಗಿ ಮಾಡು.

ನಾನು ಯೆಹೋವನಿಗೆ ಪ್ರಾರ್ಥಿಸಲು,
    ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.

ಯೆಹೋವನು ನನ್ನನ್ನು ಕಾಪಾಡುವುದರಿಂದ
    ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು.
ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ
    ನನಗೆ ಭಯವಿಲ್ಲ.

ಯೆಹೋವನೇ, ಎದ್ದೇಳು!
    ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು!
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ
    ಅವರ ಹಲ್ಲುಗಳು ಉದುರಿಹೋಗುತ್ತವೆ.

ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು.
    ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.

ಅಪೊಸ್ತಲರ ಕಾರ್ಯಗಳು 17:1-15

ಥೆಸಲೋನಿಕದಲ್ಲಿ ಪೌಲ ಸೀಲರು

17 ಪೌಲ ಸೀಲರು ಆಂಫಿಪೊಲಿ ಮತ್ತು ಅಪೊಲೋನಿಯ ಮಾರ್ಗವಾಗಿ ಪ್ರಯಾಣ ಮಾಡಿ ಥೆಸಲೋನಿಕ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. ಪೌಲನು ಎಂದಿನಂತೆ ಯೆಹೂದ್ಯರನ್ನು ಭೇಟಿಯಾಗಲು ಈ ಸಭಾಮಂದಿರದೊಳಗೆ ಹೋದನು. ಅವನು ಮೂರು ವಾರಗಳವರೆಗೆ ಪ್ರತಿ ಸಬ್ಬತ್‌ದಿನದಂದು ಯೆಹೂದ್ಯರೊಂದಿಗೆ ಪವಿತ್ರ ಗ್ರಂಥದ ಆಧಾರದೊಡನೆ ಚರ್ಚಿಸಿ ವಿವರಿಸಿದನು. ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಎದ್ದು ಬರಲೇಬೇಕಿತ್ತು ಎಂಬುದನ್ನು ತೋರಿಸಿಕೊಟ್ಟನು. “ನಾನು ನಿಮಗೆ ತಿಳಿಸುತ್ತಿರುವ ಈ ಯೇಸುವೇ ಕ್ರಿಸ್ತನು” ಎಂದು ಪೌಲನು ಸ್ಪಷ್ಟಪಡಿಸಿದನು. ನಿಜದೇವರನ್ನು ಪ್ರೀತಿಸುತ್ತಿದ್ದ ಕೆಲವು ಮಂದಿ ಗ್ರೀಕರು ಮತ್ತು ಕೆಲವು ಮಂದಿ ಪ್ರಮುಖ ಸ್ತ್ರೀಯರು ಅಲ್ಲಿದ್ದರು. ಅವರಲ್ಲಿ ಅನೇಕರಿಗೆ ಮನವರಿಕೆಯಾಗಿ ಪೌಲ ಸೀಲರನ್ನು ಸೇರಿಕೊಂಡರು.

ಆದರೆ ನಂಬದೆಹೋದ ಯೆಹೂದ್ಯರು ಅಸೂಯೆಗೊಂಡರು. ಅವರು ಪಟ್ಟಣದಲ್ಲಿದ್ದ ಕೆಲವು ಕೆಡುಕರಿಗೆ ಹಣಕೊಟ್ಟು ಕರೆದುಕೊಂಡು ಬಂದರು. ಈ ಕೆಡುಕರು ಅನೇಕ ಜನರನ್ನು ಒಟ್ಟುಗೂಡಿಸಿ, ಪಟ್ಟಣದಲ್ಲಿ ಗಲಭೆ ಮಾಡಿದರು. ಜನರು ಪೌಲ ಸೀಲರನ್ನು ಹುಡುಕುತ್ತಾ ಯಾಸೋನನ ಮನೆಗೆ ಹೋದರು. ಅವರು ಪೌಲ ಸೀಲರನ್ನು ಜನರ ಮುಂದೆ ಹೊರಗೆ ಎಳೆದುಕೊಂಡು ಬರಬೇಕೆಂದಿದ್ದರು. ಆದರೆ ಅವರು ಪೌಲ ಸೀಲರನ್ನು ಅಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ಯಾಸೋನನನ್ನೂ ಕೆಲವು ವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುಕೊಂಡು ಬಂದು, “ಈ ಜನರು (ಪೌಲ ಸೀಲರು) ಪ್ರಪಂಚದ ಎಲ್ಲಾ ಕಡೆಗಳಲ್ಲೂ ಗಲಭೆಯನ್ನು ಉಂಟುಮಾಡಿ ಈಗ ಇಲ್ಲಿಗೂ ಬಂದಿದ್ದಾರೆ! ಯಾಸೋನನು ಇವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಇವರೆಲ್ಲರೂ ಸೀಸರನ ಕಾನೂನುಗಳನ್ನು ಉಲ್ಲಂಘಿಸುತ್ತಾರೆ ಮತ್ತು ‘ಯೇಸು’ ಎಂಬ ಮತ್ತೊಬ್ಬ ರಾಜನಿರುವನೆಂದು ಹೇಳುತ್ತಾರೆ” ಎಂದು ಕೂಗಿ ಹೇಳಿದರು.

ಈ ಸಂಗತಿಗಳನ್ನು ಕೇಳಿದ ನಗರಾಧಿಕಾರಿಗಳು ಮತ್ತು ಇತರರು ಬಹು ಗಲಿಬಿಲಿಗೊಂಡರು. ಅವರು ಯಾಸೋನನಿಂದಲೂ ಇತರ ವಿಶ್ವಾಸಿಗಳಿಂದಲೂ ಜಾಮೀನು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಿದರು.

ಪೌಲ ಸೀಲರ ಪ್ರಯಾಣ

10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಈ ಯೆಹೂದ್ಯರು ಥೆಸಲೋನಿಕದ ಯೆಹೂದ್ಯರಿಗಿಂತಲೂ ಉತ್ತಮರಾಗಿದ್ದರು. ಪೌಲ ಸೀಲರು ಹೇಳಿದ ಸಂಗತಿಗಳನ್ನು ಇವರು ಬಹಳ ಸಂತೋಷದಿಂದ ಕೇಳಿದರು. ಮತ್ತು ಈ ಸಂಗತಿಗಳು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಪವಿತ್ರ ಗ್ರಂಥವನ್ನು ಪ್ರತಿದಿನವೂ ಅಧ್ಯಯನ ಮಾಡಿದರು. 12 ಈ ಯೆಹೂದ್ಯರಲ್ಲಿ ಅನೇಕರು ನಂಬಿದರು. ಅತಿ ಪ್ರಮುಖರಾದ ಗ್ರೀಕ್ ಸ್ತ್ರೀಯರು ಮತ್ತು ಪುರುಷರು ನಂಬಿಕೊಂಡರು.

13 ಆದರೆ ಪೌಲನು ಬೆರೋಯದಲ್ಲಿ ದೇವರ ವಾಕ್ಯವನ್ನು ಹೇಳುತ್ತಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಥೆಸಲೋನಿಕದ ಯೆಹೂದ್ಯರು ಬೆರೋಯಕ್ಕೂ ಬಂದು ಅಲ್ಲಿಯ ಜನರನ್ನು ಗಲಿಬಿಲಿಗೊಳಿಸಿ ಗಲಭೆ ಮಾಡಿದರು. 14 ಆದ್ದರಿಂದ ವಿಶ್ವಾಸಿಗಳು ಪೌಲನನ್ನು ಸಮುದ್ರತೀರಕ್ಕೆ ಆ ಕೂಡಲೇ ಕಳುಹಿಸಿದರು. ಆದರೆ ಸೀಲ ತಿಮೊಥೆಯರು ಬೆರೋಯದಲ್ಲಿ ಉಳಿದುಕೊಂಡರು. 15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International