Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 7-9

ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
    ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
    ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.

ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
    ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
    ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
    ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.

ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
    ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
    ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
    ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
ಜನರಿಗೆ ನ್ಯಾಯತೀರಿಸು.
    ಯೆಹೋವನೇ, ನನಗೆ ನ್ಯಾಯತೀರಿಸು.
    ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
ಕೆಟ್ಟವರನ್ನು ದಂಡಿಸು,
    ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
    ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.

10 ನನ್ನ ಗುರಾಣಿಯು ದೇವರೇ.
    ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
    ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]

14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
    ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
    ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
    ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
    ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.

17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
    ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.

ರಚನೆಗಾರ: ದಾವೀದ.

ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
    ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.

ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
    ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.

ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
    ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
    ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
    ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?

ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
    ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
    ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
    ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
    ದೊರೆತನ ಮಾಡುವರು.
ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.

ರಚನೆಗಾರ: ದಾವೀದ.

ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
ದೇವರೇ, ನಿನ್ನಲ್ಲಿ ನಾನು ಸಂತೋಷಿಸುತ್ತಾ ಉಲ್ಲಾಸಪಡುವೆನು.
    ಮಹೋನ್ನತನೇ, ನಿನ್ನ ಹೆಸರನ್ನೇ ಸಂಕೀರ್ತಿಸುವೆನು.
ನನ್ನ ವೈರಿಗಳು ನಿನ್ನ ಎದುರಿನಿಂದ ಹಿಂತಿರುಗಿ ಓಡಿಹೋದರು.
    ಆದರೆ ಅವರು ಬಿದ್ದು ನಾಶವಾದರು.

ನೀನು ನೀತಿವಂತನಾದ ನ್ಯಾಯಾಧಿಪತಿ.
    ಸಿಂಹಾಸನದ ಮೇಲೆ ಕುಳಿತು ನೀನು ನ್ಯಾಯತೀರಿಸುವೆ.
    ನೀನು ನನ್ನ ಮೊಕದ್ದಮೆಯನ್ನು ಕೇಳಿ ನನ್ನ ವಿಷಯದಲ್ಲಿ ತೀರ್ಪು ಮಾಡಿರುವೆ.
ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ.
    ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ.
ವೈರಿಗಳು ಇಲ್ಲವಾದರು.
    ನೀನು ಅವರ ನಗರಗಳನ್ನು ನಾಶಮಾಡಿದೆ!
    ಈಗ ಹಾಳಾದ ಕಟ್ಟಡಗಳು ಮಾತ್ರ ಉಳಿದಿವೆ; ದುಷ್ಟರನ್ನು ಜ್ಞಾಪಕಕ್ಕೆ ತರುವ ಯಾವುದೂ ಉಳಿದಿಲ್ಲ.

ಯೆಹೋವನಾದರೋ ಶಾಶ್ವತವಾಗಿ ಆಳುವನು.
    ಆತನು ಭೂಲೋಕಕ್ಕೆ ನ್ಯಾಯದೊರಕಿಸುವುದಕ್ಕಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ್ದಾನೆ.
ಆತನು ಭೂನಿವಾಸಿಗಳಿಗೆಲ್ಲಾ ನ್ಯಾಯವಾಗಿ ತೀರ್ಪುಮಾಡುವನು.
    ಆತನು ಜನಾಂಗಗಳಿಗೆಲ್ಲಾ ಯಥಾರ್ಥವಾಗಿ ತೀರ್ಪುಮಾಡುವನು.
ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
    ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.

10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
    ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.

11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
    ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.

13 “ಯೆಹೋವನೇ, ನನ್ನನ್ನು ಕನಿಕರಿಸು.
    ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
    ‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
    ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.

15 ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು;
    ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು.
16 ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ
    ಆತನ ನೀತಿಯು ಪ್ರಖ್ಯಾತವಾಯಿತು.

17 ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು.
    ಅವರು ಮರಣದ ಸ್ಥಳಕ್ಕೆ ಹೋಗುವರು.
18 ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ;
    ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ
    ದೇವರು ಅವರನ್ನು ಮರೆತುಬಿಡುವುದಿಲ್ಲ.

19 ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು.
    ಅವರು ಬಲಿಷ್ಠರಾಗಕೂಡದು.
20 ಯೆಹೋವನೇ, ಅವರಿಗೆ ಭಯಹುಟ್ಟಿಸು;
    ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ.

ಅಪೊಸ್ತಲರ ಕಾರ್ಯಗಳು 18

ಕೊರಿಂಥದಲ್ಲಿ ಪೌಲನು

18 ತರುವಾಯ ಪೌಲನು ಅಥೆನ್ಸನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು. ಕೊರಿಂಥದಲ್ಲಿ ಪೌಲನು ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅಕ್ವಿಲನು ಪೊಂತ ಎಂಬ ನಾಡಿನವನು. ಆದರೆ ಅಕ್ವಿಲ ಮತ್ತು ಅವನ ಹೆಂಡತಿ ಪ್ರಿಸ್ಕಿಲ್ಲ ಇಟಲಿಯಿಂದ ಕೊರಿಂಥಕ್ಕೆ ಇತ್ತೀಚಿಗೆ ಬಂದಿದ್ದರು. ಎಲ್ಲಾ ಯೆಹೂದ್ಯರು ರೋಮನ್ನು ಬಿಟ್ಟುಹೋಗಬೇಕೆಂದು ಕ್ಲಾಡಿಯಸನು[a] ಆಜ್ಞಾಪಿಸಿದ್ದರಿಂದ ಅವರು ಇಟಲಿಯನ್ನು ಬಿಟ್ಟುಬಂದಿದ್ದರು. ಪೌಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾಗಲು ಹೋದನು. ಅವರು ಪೌಲನಂತೆ ಗುಡಾರ ತಯಾರಕರಾಗಿದ್ದರು. ಪೌಲನು ಅವರಲ್ಲೇ ತಂಗಿದ್ದು, ಅವರೊಂದಿಗೆ ಕೆಲಸ ಮಾಡುತ್ತಿದ್ದನು.

ಪ್ರತಿ ಸಬ್ಬತ್‌ದಿನದಂದು ಪೌಲನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ಗ್ರೀಕರೊಂದಿಗೂ ಚರ್ಚಿಸುತ್ತಾ ಯೇಸುವಿನಲ್ಲಿ ನಂಬಿಕೆ ಇಡುವಂತೆ ಅವರನ್ನು ಪ್ರೋತ್ಸಾಹಿಸಿದನು. ಕೊರಿಂಥದಲ್ಲಿದ್ದ ಪೌಲನ ಬಳಿಗೆ ಸೀಲ ತಿಮೊಥೆಯರು ಮಕೆದೋನಿಯದಿಂದ ಬಂದರು. ಅನಂತರ, ಜನರಿಗೆ ಸುವಾರ್ತೆಯನ್ನು ತಿಳಿಸುವುದರಲ್ಲೇ ಪೌಲನು ತನ್ನ ಸಮಯವನ್ನೆಲ್ಲ ಕಳೆದನು. ಯೇಸುವೇ ಕ್ರಿಸ್ತನೆಂಬುದನ್ನು ಅವನು ಯೆಹೂದ್ಯರಿಗೆ ತೋರಿಸಿಕೊಟ್ಟನು. ಆದರೆ ಯೆಹೂದ್ಯರು ಪೌಲನ ಉಪದೇಶವನ್ನು ತಿರಸ್ಕರಿಸಿ ದೂಷಣೆ ಮಾಡಿದರು. ಆದ್ದರಿಂದ ಪೌಲನು ತನ್ನ ಬಟ್ಟೆಗಳ ಧೂಳನ್ನು ಝಾಡಿಸಿ ಯೆಹೂದ್ಯರಿಗೆ, “ನೀವು ರಕ್ಷಣೆ ಹೊಂದದಿದ್ದರೆ, ಅದು ನಿಮ್ಮ ಸ್ವಂತ ತಪ್ಪು. ನನ್ನಿಂದ ಸಾಧ್ಯವಾದದ್ದನ್ನೆಲ್ಲ ನಾನು ಮಾಡಿದ್ದೇನೆ. ಇನ್ನು ಮೇಲೆ ನಾನು ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇನೆ!” ಎಂದು ಹೇಳಿದನು.

ಪೌಲನು ಸಭಾಮಂದಿರವನ್ನು ಬಿಟ್ಟು ತೀತಯುಸ್ತ ಎಂಬುವನ ಮನೆಗೆ ಹೋದನು. ಈ ಮನುಷ್ಯನು ನಿಜದೇವರನ್ನು ಆರಾಧಿಸುತ್ತಿದ್ದನು. ಇವನ ಮನೆ ಸಭಾಮಂದಿರದ ಪಕ್ಕದಲ್ಲಿತ್ತು. ಕ್ರಿಸ್ಪನು ಸಭಾಮಂದಿರದ ಅಧ್ಯಕ್ಷನಾಗಿದ್ದನು. ಕ್ರಿಸ್ಪನು ಮತ್ತು ಅವನ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ಪ್ರಭುವಿನಲ್ಲಿ ನಂಬಿಕೆಯಿಟ್ಟರು. ಕೊರಿಂಥದಲ್ಲಿ ಇತರ ಅನೇಕ ಜನರು ಪೌಲನಿಗೆ ಕಿವಿಗೊಟ್ಟರು ಮತ್ತು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.

ಒಂದು ರಾತ್ರಿ ಪೌಲನಿಗೆ ದರ್ಶನವಾಯಿತು. ಪ್ರಭುವು ಅವನಿಗೆ, “ಭಯಪಡಬೇಡ! ಜನರಿಗೆ ಬೋಧಿಸುತ್ತಲೇ ಇರು, ನಿಲ್ಲಿಸಬೇಡ! 10 ನಾನು ನಿನ್ನೊಂದಿಗಿದ್ದೇನೆ. ನಿನಗೆ ಕೇಡುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಅನೇಕ ಜನರು ಈ ಪಟ್ಟಣದಲ್ಲಿ ಇದ್ದಾರೆ” ಎಂದು ಹೇಳಿದನು. 11 ಪೌಲನು ದೇವರ ಸತ್ಯವನ್ನು ಜನರಿಗೆ ಉಪದೇಶಿಸುತ್ತಾ ಅಲ್ಲಿ ಒಂದೂವರೆ ವರ್ಷದವರೆಗೆ ಇದ್ದನು.

ಗಲ್ಲಿಯೋನನ ಮುಂದೆ ಪೌಲ

12 ಅಖಾಯ ನಾಡಿಗೆ ಗಲ್ಲಿಯೋನನು ರಾಜ್ಯಪಾಲನಾದಾಗ ಕೆಲವು ಯೆಹೂದ್ಯರು ಪೌಲನಿಗೆ ವಿರೋಧವಾಗಿ ಸೇರಿಬಂದರು. ಅವರು ಪೌಲನನ್ನು ನ್ಯಾಯಾಲಯಕ್ಕೆ ಕರದೊಯ್ದು, 13 ರಾಜ್ಯಪಾಲನಿಗೆ, “ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಇವನು ಜನರಿಗೆ ಉಪದೇಶಿಸುತ್ತಿದ್ದಾನೆ!” ಎಂದು ಹೇಳಿದರು.

14 ಪೌಲನು ಮಾತಾಡುವುದಕ್ಕೆ ಸಿದ್ಧನಾಗಿದ್ದನು. ಆದರೆ ಗಲ್ಲಿಯೋನ ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧವಾಗಲಿ ದುಷ್ಕೃತ್ಯವಾಗಲಿ ನಡೆದಿದ್ದರೆ ನಾನು ನಿಮ್ಮ ದೂರು ಕೇಳುತ್ತಿದ್ದೆನು. 15 ನಿಮ್ಮ ಅಪವಾದಗಳು ಕೇವಲ ಪದಗಳಿಗೂ ಹೆಸರುಗಳಿಗೂ ಮತ್ತು ನಿಮ್ಮ ಸ್ವಂತ ಧರ್ಮಶಾಸ್ತ್ರಕ್ಕೂ ಸಂಬಂಧಪಟ್ಟಿವೆ. ಆದ್ದರಿಂದ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಂಗತಿಗಳಿಗೆ ನ್ಯಾಯಾಧೀಶನಾಗಿರಲು ನನಗೆ ಇಷ್ಟವಿಲ್ಲ!” ಎಂದು ಹೇಳಿ, 16 ಅವರನ್ನು ನ್ಯಾಯಾಲಯದಿಂದ ಹೊರಡಿಸಿದನು.

17 ಬಳಿಕ ಅವರೆಲ್ಲರೂ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಾಲಯದ ಮುಂದೆಯೇ ಹೊಡೆದರು. (ಸೋಸ್ಥೆನನು ಆಗ ಸಭಾಮಂದಿರದ ಅಧ್ಯಕ್ಷನಾಗಿದ್ದನು.) ಆದರೆ ಗಲ್ಲಿಯೋನ ಅದನ್ನು ತನ್ನ ಗಮನಕ್ಕೆ ತೆಗೆದುಕೊಳ್ಳಲಿಲ್ಲ.

ಅಂತಿಯೋಕ್ಯಕ್ಕೆ ಪೌಲನ ಮರುಪ್ರಯಾಣ

18 ಪೌಲನು ಅನೇಕ ದಿನಗಳವರೆಗೆ ಸಹೋದರರೊಂದಿಗೆ ಇದ್ದನು. ಬಳಿಕ ಅವನು ಅಲ್ಲಿಂದ ಸಿರಿಯಕ್ಕೆ ನೌಕಾಯಾನ ಮಾಡಿದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಅವನೊಂದಿಗಿದ್ದರು. ಕೆಂಖ್ರೆ ಎಂಬ ಸ್ಥಳದಲ್ಲಿ ಪೌಲನು ತನ್ನ ತಲೆಕೂದಲನ್ನು ಕತ್ತರಿಸಿಕೊಂಡನು. ಅವನು ದೇವರಿಗೆ ಹರಕೆಯನ್ನು ಮಾಡಿಕೊಂಡಿದ್ದನೆಂಬುದನ್ನು ಅದು ಸೂಚಿಸುತ್ತಿತ್ತು. 19 ಬಳಿಕ ಅವರು ಎಫೆಸ ಪಟ್ಟಣಕ್ಕೆ ಹೋದರು. ಪ್ರಿಸ್ಕಿಲ್ಲ ಮತ್ತು ಅಕ್ವಿಲರನ್ನು ಪೌಲನು ಬಿಟ್ಟಿಹೋದದ್ದು ಇಲ್ಲಿಯೇ. ಪೌಲನು ಎಫೆಸದಲ್ಲಿದ್ದಾಗ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚಿಸಿದನು. 20 ಆ ಯೆಹೂದ್ಯರು ಇನ್ನೂ ಸ್ವಲ್ಪಕಾಲ ಇರಬೇಕೆಂದು ಪೌಲನನ್ನು ಕೇಳಿಕೊಂಡರು. ಆದರೆ ಅವನು ಒಪ್ಪಲಿಲ್ಲ. 21 ಪೌಲನು ಅವರಿಗೆ, “ದೇವರು ಬಯಸುವುದಾದರೆ, ನಾನು ನಿಮ್ಮ ಬಳಿಗೆ ಮತ್ತೆ ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟನು. ಹೀಗೆ ಪೌಲನು ಎಫೆಸದಿಂದ ನೌಕಾಯಾನ ಮಾಡಿದನು.

22 ಪೌಲನು ಸೆಜರೇಯ ಪಟ್ಟಣಕ್ಕೆ ಹೋದನು. ಅಲ್ಲಿಂದ ಜೆರುಸಲೇಮಿಗೆ ಹೋಗಿ ಸಭೆಯವರನ್ನು ವಂದಿಸಿದನು. ಅನಂತರ ಪೌಲನು ಅಂತಿಯೋಕ್ಯ ಪಟ್ಟಣಕ್ಕೆ ಹೋದನು. 23 ಅಲ್ಲಿ ಅವನು ಸ್ವಲ್ಪಕಾಲವಿದ್ದನು. ಬಳಿಕ ಅಲ್ಲಿಂದ ಹೊರಟು ಗಲಾತ್ಯ ಮತ್ತು ಫ್ರಿಜಿಯ ನಾಡುಗಳಲ್ಲಿ ಸಂಚರಿಸುತ್ತಾ ಯೇಸುವಿನ ಶಿಷ್ಯರೆಲ್ಲರನ್ನು ಬಲಪಡಿಸಿದನು.

ಎಫೆಸದಲ್ಲಿ ಮತ್ತು ಅಖಾಯದಲ್ಲಿ ಅಪೊಲ್ಲೋಸನು

24 ಅಲೆಕ್ಸಾಂಡ್ರಿಯಾ ಪಟ್ಟಣದಿಂದ ಅಪೊಲ್ಲೋಸನೆಂಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಿದ್ಯಾವಂತನಾಗಿದ್ದನು ಮತ್ತು ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದನು. 25 ಅಪೊಲ್ಲೋಸನು ಯಾವಾಗಲೂ ಬಹು ಉತ್ಸುಕತೆಯಿಂದ ಯೇಸುವಿನ ಬಗ್ಗೆ ಜನರಿಗೆ ಉಪದೇಶಿಸುತ್ತಿದ್ದನು. ಯೇಸುವಿನ ಬಗ್ಗೆ ಅಪೊಲ್ಲೋಸನು ಹೇಳಿದ ಸಂಗತಿಗಳು ಸರಿಯಾಗಿದ್ದವು. ಆದರೆ ಸ್ನಾನಿಕ ಯೋಹಾನನ ದೀಕ್ಷಾಸ್ನಾನವೊಂದೇ ಇವನಿಗೆ ಗೊತ್ತಿತ್ತು. 26 ಅಪೊಲ್ಲೋಸನು ಸಭಾಮಂದಿರದಲ್ಲಿ ಬಹು ಧೈರ್ಯವಾಗಿ ಮಾಡಿದ ಉಪದೇಶವನ್ನು ಕೇಳಿದ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ದೇವರ ಮಾರ್ಗವನ್ನು ಆಳವಾಗಿ ಗ್ರಹಿಸಿಕೊಳ್ಳಲು ನೆರವು ನೀಡಿದರು.

27 ಅಪೊಲ್ಲೋಸನು ಅಖಾಯ ಪ್ರಾಂತ್ಯಕ್ಕೆ ಹೋಗಲು ಅಪೇಕ್ಷಿಸಿದಾಗ ಎಫೆಸದ ಸಹೋದರರು ಅವನನ್ನು ಪ್ರೋತ್ಸಾಹಿಸಿದರು. ಅಲ್ಲದೆ ಅಖಾಯದಲ್ಲಿದ್ದ ಯೇಸುವಿನ ಶಿಷ್ಯರಿಗೆ ಅವರು ಪತ್ರವನ್ನು ಬರೆದು, ಅಪೊಲ್ಲೋಸನನ್ನು ಸ್ವೀಕರಿಸಿಕೊಳ್ಳಬೇಕೆಂದು ಅವರನ್ನು ಕೇಳಿಕೊಂಡರು. ಅಖಾಯದಲ್ಲಿ ಈ ಶಿಷ್ಯರು ದೇವರ ಕೃಪೆಯಿಂದಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. ಅಪೊಲ್ಲೋಸನು ಅಲ್ಲಿಗೆ ಹೋಗಿ ಅವರಿಗೆ ಬಹಳ ನೆರವು ನೀಡಿದನು. 28 ಅವನು ಜನರೆಲ್ಲರ ಮುಂದೆ ಯೆಹೂದ್ಯರ ವಿರುದ್ಧ ಬಹು ಬಲವಾಗಿ ವಾದಿಸಿ, ಪವಿತ್ರ ಗ್ರಂಥವನ್ನು ಆಧಾರವಾಗಿ ತೆಗೆದುಕೊಂಡು ಯೇಸುವೇ ಕ್ರಿಸ್ತನೆಂಬುದನ್ನು ಸ್ಪಷ್ಟವಾಗಿ ನಿರೂಪಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International