Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 33-34

33 ನೀತಿವಂತರೇ, ಯೆಹೋವನಲ್ಲಿ ಉಲ್ಲಾಸಪಡಿರಿ.
    ಯಥಾರ್ಥವಂತರು ಆತನನ್ನು ಸ್ತುತಿಸುವುದು ಯೋಗ್ಯವಾಗಿದೆ.
ಲೈರ್‌[a] ವಾದ್ಯವನ್ನು ನುಡಿಸುತ್ತಾ ಯೆಹೋವನನ್ನು ಸ್ತುತಿಸಿರಿ!
    ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ಆತನನ್ನು ಕೊಂಡಾಡಿರಿ.
ಆತನಿಗೆ ಹೊಸ ಹಾಡನ್ನು[b] ಹಾಡಿರಿ!
    ಹಾರ್ಪ್‌ವಾದ್ಯಗಳನ್ನು ಇಂಪಾಗಿ ನುಡಿಸುತ್ತಾ ಆನಂದದಿಂದ ಆರ್ಭಟಿಸಿರಿ.
ಯೆಹೋವನ ವಾಕ್ಯವು ಸತ್ಯವಾದದ್ದು!
    ಆತನ ಕಾರ್ಯಗಳೆಲ್ಲಾ ಭರವಸೆಗೆ ಯೋಗ್ಯವಾಗಿವೆ.
ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವನು.
    ಯೆಹೋವನ ಶಾಶ್ವತವಾದ ಪ್ರೀತಿಯು ಭೂಲೋಕವನ್ನೆಲ್ಲಾ ತುಂಬಿಕೊಂಡಿದೆ.
ಯೆಹೋವನು ಆಜ್ಞಾಪಿಸಲು ಆಕಾಶವು ಸೃಷ್ಟಿಯಾಯಿತು!
    ಆತನ ಉಸಿರು ಭೂಮಿಯ ಮೇಲಿರುವ ಸಮಸ್ತವನ್ನು ಸೃಷ್ಟಿಸಿತು.
ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು;
    ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.[c]
ಭೂಲೋಕದವರೆಲ್ಲರೂ ಯೆಹೋವನಲ್ಲಿ ಭಯಭಕ್ತಿಯಿಂದಿರಲಿ.
    ಭೂನಿವಾಸಿಗಳೆಲ್ಲರೂ ಆತನಿಗೆ ಭಯಪಡಲಿ.
ಯಾಕೆಂದರೆ ಆತನು ನುಡಿದಾಗ ಭೂಲೋಕವು ಸೃಷ್ಟಿಯಾಯಿತು;
    ಆತನು ಆಜ್ಞಾಪಿಸಿದಾಗ ಸಮಸ್ತವು ಉಂಟಾಯಿತು.
10 ಯೆಹೋವನು ಜನಾಂಗಗಳ ಉದ್ದೇಶಗಳನ್ನು ವ್ಯರ್ಥಗೊಳಿಸಬಲ್ಲನು;
    ಅವರ ಆಲೋಚನೆಗಳನ್ನು ನಿಷ್ಪಲ ಮಾಡಬಲ್ಲನು.
11 ಆದರೆ ಯೆಹೋವನ ಯೋಜನೆಗಳು ಶಾಶ್ವತವಾಗಿವೆ.
    ಆತನ ಆಲೋಚನೆಗಳು ಸದಾಕಾಲಕ್ಕೂ ಒಳ್ಳೆಯದಾಗಿವೆ.
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
    ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
    ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
    ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
    ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
    ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
    ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
    ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
    ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
    ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
    ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
    ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.

ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

[d]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
    ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
    ಕೇಳಿ ಸಂತೋಷಪಡಿರಿ.
ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
    ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
    ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[e]
    ಅವರಿಗೆ ಆಶಾಭಂಗವಾಗದು.
ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
    ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
ಯೆಹೋವನ ಭಕ್ತರ ಸುತ್ತಲೂ ಆತನ ದೂತನು
    ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
    ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

ಅಪೊಸ್ತಲರ ಕಾರ್ಯಗಳು 24

ಪೌಲನ ಮೇಲೆ ಯೆಹೂದ್ಯರ ದೋಷಾರೋಪಣೆ

24 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು. ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು:

“ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ. ನಾವು ಇವುಗಳನ್ನು ಬಹು ಕೃತಜ್ಞತೆಯಿಂದ ಎಲ್ಲಾ ಸ್ಥಳಗಳಲ್ಲಿ ಯಾವಾಗಲೂ ಒಪ್ಪಿಕೊಳ್ಳುತ್ತೇವೆ. ಆದರೆ ನಾನು ನಿನ್ನ ಸಮಯವನ್ನು ಇನ್ನೂ ಹೆಚ್ಚಿಗೆ ತೆಗೆದುಕೊಳ್ಳಬಯಸದೆ, ಕೆಲವೇ ಮಾತುಗಳಲ್ಲಿ ಹೇಳುವೆ. ದಯವಿಟ್ಟು ತಾಳ್ಮೆಯಿಂದಿರು. ಈ ಮನುಷ್ಯನು (ಪೌಲನು) ಗಲಭೆ ಮಾಡುತ್ತಿದ್ದಾನೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಇವನು ಗಲಭೆಯನ್ನು ಎಬ್ಬಿಸುತ್ತಾನೆ. ಇವನು ‘ನಜರೇನ’ ಪಂಗಡದ ನಾಯಕನಾಗಿದ್ದಾನೆ. ಅಲ್ಲದೆ, ಇವನು ದೇವಾಲಯವನ್ನು ಅಶುದ್ಧಗೊಳಿಸಲು ಪ್ರಯತ್ನಿಸಿದನು, ಆದರೆ ನಾವು ಇವನನ್ನು ತಡೆದೆವು. [a] ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.” ಉಳಿದ ಯೆಹೂದ್ಯರು, “ಈ ಸಂಗತಿಗಳು ನಿಜವಾಗಿಯೂ ಸತ್ಯವಾದುವುಗಳು!” ಎಂದರು.

ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ

10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.

14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.

17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”

22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.

ಫೇಲಿಕ್ಸ ಮತ್ತು ಅವನ ಪತ್ನಿಯ ಮುಂದೆ ಪೌಲನು

24 ಕೆಲವು ದಿನಗಳಾದ ಮೇಲೆ ಫೇಲಿಕ್ಸನು ತನ್ನ ಹೆಂಡತಿಯಾದ ದ್ರೂಸಿಲ್ಲಳೊಂದಿಗೆ ಬಂದನು. ಆಕೆ ಯೆಹೂದ್ಯಳು. ಫೇಲಿಕ್ಸನು ಪೌಲನನ್ನು ಕರೆಯಿಸಿದನು. ಕ್ರಿಸ್ತನಾದ ಯೇಸುವಿನಲ್ಲಿ ನಂಬಿಕೆ ಇಡುವುದರ ಬಗ್ಗೆ ಪೌಲನು ಹೇಳಿದ್ದನ್ನು ಅವನು ಆಲಿಸಿದನು. 25 ಆದರೆ ನೀತಿಯಬಾಳ್ವೆ, ಇಂದ್ರಿಯನಿಗ್ರಹ ಮತ್ತು ಮುಂದೆ ಬರಲಿರುವ ನ್ಯಾಯತೀರ್ಪುಗಳ ಬಗ್ಗೆ ಪೌಲನು ಮಾತಾಡಿದಾಗ ಅವನು ಭಯಗೊಂಡು, “ಈಗ ನೀನು ಹೋಗು! ನನಗೆ ಹೆಚ್ಚು ಸಮಯವಿರುವಾಗ ನಿನ್ನನ್ನು ಕರೆಯಿಸುತ್ತೇನೆ” ಎಂದು ಹೇಳಿದನು. 26 ಆದರೆ ಪೌಲನು ಲಂಚ ಕೊಡಬಹುದೆಂದು ಅವನು ನಿರೀಕ್ಷಿಸಿಕೊಂಡಿದ್ದರಿಂದ ಅವನು ಅನೇಕ ಸಲ ಪೌಲನನ್ನು ಕರೆಯಿಸಿ ಅವನೊಂದಿಗೆ ಮಾತಾಡಿದನು.

27 ಆದರೆ ಎರಡು ವರ್ಷಗಳ ನಂತರ ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ರಾಜ್ಯಪಾಲನಾದನು. ಆದರೆ ಫೇಲಿಕ್ಸನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International