Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 32-33

ಎಲೀಹುವಿನ ವಾದ

32 ಯೋಬನು ತಾನು ನಿರಪರಾಧಿಯೆಂದು ನಂಬಿದ್ದರಿಂದ ಅವನ ಮೂವರು ಗೆಳೆಯರು ಮತ್ತೆ ವಾದ ಮಾಡಲಿಲ್ಲ. ಅಲ್ಲಿ ಯೌವನಸ್ಥನಾದ ಎಲೀಹು ಸಹ ಇದ್ದನು. ಎಲೀಹು ಬರಕೇಲನ ಮಗನು. ಬರಕೇಲನು ಬೂಜ್ ಕುಲದವನು. ಎಲೀಹು, ರಾಮ್ ಸಂತಾನಕ್ಕೆ ಸೇರಿದವನು. ಎಲೀಹುವಿಗೆ ಯೋಬನ ಮೇಲೆ ಬಹು ಕೋಪಬಂದಿತು. ಯಾಕೆಂದರೆ ಯೋಬನು ತಾನು ದೇವರಿಗಿಂತಲೂ ನೀತಿವಂತನೆಂದು ಪ್ರತಿಪಾದಿಸುತ್ತಿದ್ದನು. ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು. ಅಲ್ಲಿದ್ದವರೆಲ್ಲರಲ್ಲಿ ಎಲೀಹು ಚಿಕ್ಕವನಾಗಿದ್ದನು. ಆದ್ದರಿಂದ ಪ್ರತಿಯೊಬ್ಬರು ಮಾತಾಡಿ ಮುಗಿಸುವವರೆಗೆ ಅವನು ಕಾದುಕೊಂಡಿದ್ದನು. ಬಳಿಕ ಅವನಿಗೆ ತಾನೂ ಮಾತಾಡಬಹುದೆನಿಸಿತು. ಯೋಬನ ಮೂವರು ಸ್ನೇಹಿತರ ಬಾಯಲ್ಲಿ ಉತ್ತರವಿಲ್ಲದಿರುವುದನ್ನು ಕಂಡು ಎಲೀಹು ಕೋಪಗೊಂಡನು. ಆದ್ದರಿಂದ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಎಲೀಹು ಮಾತಾಡಲಾರಂಭಿಸಿ ಹೀಗೆಂದನು:

“ನಾನು ವಯಸ್ಸಿನಲ್ಲಿ ಚಿಕ್ಕವನು, ನೀವು ವೃದ್ಧರು.
    ಆದಕಾರಣ, ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸಲು ಹಿಂಜರಿದೆನು ಮತ್ತು ಹೆದರಿಕೊಂಡಿದ್ದೆನು.
‘ವೃದ್ಧರು ಮೊದಲು ಮಾತಾಡಬೇಕು.
    ಅನೇಕ ವರ್ಷಗಳ ಕಾಲ ಬದುಕಿದ ಜನರು ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕು’ ಎಂದು ನಾನು ನನ್ನೊಳಗೆ ಆಲೋಚಿಸಿಕೊಂಡೆನು.
ಆದರೆ ಮನುಷ್ಯರಲ್ಲಿರುವ ದೇವರಾತ್ಮನು
    ಅಂದರೆ ಸರ್ವಶಕ್ತನಾದ ದೇವರ ‘ಉಸಿರು’ ಮನುಷ್ಯರಿಗೆ ಜ್ಞಾನವನ್ನು ಕೊಡುತ್ತದೆ.
ವೃದ್ದರು ಮಾತ್ರ ಜ್ಞಾನಿಗಳಲ್ಲ,
    ಕೇವಲ ವಯಸ್ಸಾದವರು ಮಾತ್ರ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳುವವರಲ್ಲ.

10 “ಆದಕಾರಣ ಎಲೀಹು ಎಂಬ ನಾನು ಹೇಳುವೆ, ನನಗೆ ಕಿವಿಗೊಡಿರಿ!
    ನಾನು ಸಹ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವೆನು.
11 ನೀವು ಮಾತಾಡುತ್ತಿದ್ದಾಗ ನಾನು ತಾಳ್ಮೆಯಿಂದ ಕಾದುಕೊಂಡಿದ್ದೆನು.
    ನೀವು ಹೇಳಲು ಪದಗಳಿಗಾಗಿ ಆಲೋಚಿಸುತ್ತಿರುವಾಗ ನಾನು ನಿಮ್ಮ ವಾದಗಳನ್ನು ಆಲಿಸಿದೆನು.
12 ನಾನು ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನವಿಟ್ಟು ಕೇಳಿದೆನು.
    ಆದರೆ ಯೋಬನು ತಪ್ಪಿತಸ್ಥನೆಂಬುದನ್ನು ನೀವು ನಿರೂಪಿಸಲಿಲ್ಲ.
    ನಿಮ್ಮಲ್ಲಿ ಒಬ್ಬರೂ ಯೋಬನ ವಾದಗಳಿಗೆ ಉತ್ತರಕೊಡಲಿಲ್ಲ.
13 ನೀವು ಮೂವರು, ‘ನಾವು ಜ್ಞಾನವನ್ನು ಕಂಡುಕೊಂಡಿದ್ದೇವೆ,
    ಯೋಬನ ವಾದಗಳಿಗೆ ಉತ್ತರವನ್ನು ದೇವರು ಕೊಡಬೇಕೇ ಹೊರತು ಮನುಷ್ಯರಲ್ಲ’ ಎಂದು ಹೇಳಬೇಡಿ.
14 ಯೋಬನು ನನ್ನ ವಿರುದ್ಧವಾಗಿ ಹೇಳಿಕೆಗಳನ್ನು ಹೊರಡಿಸಲಿಲ್ಲ.
    ಆದರೆ ನಾನು ಅವನಿಗೆ ನಿಮ್ಮ ವಾದಗಳಿಂದ ಉತ್ತರ ನೀಡುವುದಿಲ್ಲ.

15 “ಯೋಬನೇ, ನಿನ್ನ ಮೂವರು ಸ್ನೇಹಿತರು ವಾದ ಮಾಡಲು ವಿಫಲರಾಗಿದ್ದಾರೆ.
    ಹೆಚ್ಚಿಗೆ ಹೇಳಲು ಅವರಲ್ಲಿ ಏನೂ ಉಳಿದಿಲ್ಲ.
    ಅವರಲ್ಲಿ ಯಾವ ಉತ್ತರಗಳೂ ಇಲ್ಲ.
16 ಈ ಮೂವರು ಮೌನವಾಗಿ ಅಲ್ಲಿ ನಿಂತಿದ್ದಾರೆ;
    ಅವರಲ್ಲಿ ಉತ್ತರವಿಲ್ಲ.
    ಹೀಗಿರಲು ನಾನಿನ್ನೂ ಕಾಯುತ್ತಲೇ ಇರಬೇಕೇ?
17 ಇಲ್ಲ! ನಾನು ಸಹ ನನ್ನ ಉತ್ತರವನ್ನು ಕೊಡುವೆನು.
    ನಾನು ಸಹ ನನ್ನ ಅಭಿಪ್ರಾಯವನ್ನು ನಿನಗೆ ತಿಳಿಸುವೆನು.
18 ಯಾಕೆಂದರೆ ನನ್ನಲ್ಲಿ ಹೇಳಲು ಬೇಕಾದಷ್ಟಿದೆ.
    ನನ್ನ ಅಂತರಾತ್ಮವು ಮಾತಾಡಲು ನನ್ನನ್ನು ಒತ್ತಾಯಿಸುತ್ತಿದೆ.
19 ಆಹಾ, ದ್ರಾಕ್ಷಾರಸವನ್ನು ತುಂಬಿ ಬಾಯಿಕಟ್ಟಿದ ಹೊಸ ಬುದ್ದಲಿಯಂತೆ
    ನನ್ನ ಹೊಟ್ಟೆಯು ಒಡೆದುಹೋಗುವ ಸ್ಥಿತಿಯಲ್ಲಿದೆ.
20 ಆದ್ದರಿಂದ ನಾನು ಮಾತಾಡಲೇಬೇಕು; ಆಗ ನನಗೆ ಉಪಶಮನವಾಗುತ್ತದೆ.
    ನನ್ನ ತುಟಿಗಳನ್ನು ತೆರೆದು ಯೋಬನ ದೂರುಗಳಿಗೆ ಉತ್ತರ ಕೊಡಲೇಬೇಕು.
21 ಈ ವಾದದಲ್ಲಿ ನಾನು ಮುಖದಾಕ್ಷಿಣ್ಯ ಮಾಡುವುದಿಲ್ಲ;
    ಯಾರ ಮುಖಸ್ತುತಿಯನ್ನೂ ಮಾಡುವುದಿಲ್ಲ.
22 ಮುಖಸ್ತುತಿ ಮಾಡುವುದೇ ನನಗೆ ತಿಳಿದಿಲ್ಲ.
    ಮುಖಸುತ್ತಿ ಮಾಡುವುದು ನನಗೆ ಗೊತ್ತಿದ್ದರೆ, ನನ್ನ ಸೃಷ್ಟಿಕರ್ತನು ನನ್ನನ್ನು ಬಹು ಬೇಗನೆ ಶಿಕ್ಷಿಸುವನು.

33 “ಈಗಲಾದರೋ ಯೋಬನೇ, ನನ್ನ ಸಂದೇಶಕ್ಕೆ ಕಿವಿಗೊಡು.
    ನನ್ನ ಮಾತುಗಳಿಗೆ ಗಮನ ಕೊಡು.
ಈಗ ನಾನು ನನ್ನ ಬಾಯಿ ತೆರೆಯುವೆನು; ನಾನು ಮಾತಾಡಲು ಸಿದ್ಧನಾಗಿದ್ದೇನೆ.
ನನ್ನ ಹೃದಯವು ಯಥಾರ್ಥವಾಗಿದೆ; ಆದ್ದರಿಂದ ನಾನು ಯಥಾರ್ಥವಾದ ಮಾತುಗಳನ್ನು ಹೇಳುವೆನು,
    ನನಗೆ ತಿಳಿದಿರುವ ಸಂಗತಿಗಳ ಬಗ್ಗೆ ಸತ್ಯವನ್ನು ಹೇಳುವೆನು.
ದೇವರಾತ್ಮನು ನನ್ನನ್ನು ನಿರ್ಮಿಸಿದನು.
    ಸರ್ವಶಕ್ತನಾದ ದೇವರ ಉಸಿರು ನನಗೆ ಜೀವವನ್ನು ಕೊಟ್ಟಿತು.
ಯೋಬನೇ, ಕಿವಿಗೊಡು! ನಿನಗೆ ಸಾಧ್ಯವೆನಿಸಿದರೆ ನನಗೆ ಉತ್ತರಕೊಡು.
    ನಿನ್ನ ವಾದವನ್ನು ಸಿದ್ಧಪಡಿಸಿಕೊ; ನನ್ನೆದುರಿನಲ್ಲಿ ನಿನ್ನ ಪರವಾಗಿ ಪ್ರತಿವಾದಿಸು!
ನೀನು ಮತ್ತು ನಾನು ದೇವರ ಎದುರಿನಲ್ಲಿ ಒಂದೇ ರೀತಿಯಲ್ಲಿದ್ದೇವೆ.
    ದೇವರು ನಮ್ಮಿಬ್ಬರನ್ನು ಮಣ್ಣಿನಿಂದ ನಿರ್ಮಿಸಿದನು.
ಯೋಬನೇ, ನನಗೆ ಭಯಪಡಬೇಡ.
    ನಾನು ನಿನ್ನನ್ನು ಸೋಲಿಸುವುದಿಲ್ಲ.

“ಆದರೆ ಯೋಬನೇ,
    ನೀನು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
‘ಯೋಬನಾದ ನಾನು ಪರಿಶುದ್ಧನು; ನಾನು ನಿರಪರಾಧಿ;
    ನಾನು ಯಾವ ತಪ್ಪನ್ನೂ ಮಾಡಲಿಲ್ಲ; ನಾನು ದೋಷಿಯಲ್ಲ!
10 ನಾನು ತಪ್ಪು ಮಾಡಿಲ್ಲದಿದ್ದರೂ ದೇವರು ನನಗೆ ವಿರೋಧವಾಗಿದ್ದಾನೆ.
    ದೇವರು ನನ್ನನ್ನು ತನ್ನ ವೈರಿಯೆಂದು ಪರಿಗಣಿಸಿದ್ದಾನೆ;
11 ದೇವರು ನನ್ನ ಕಾಲುಗಳನ್ನು ಸರಪಣಿಯಿಂದ ಕಟ್ಟಿದ್ದಾನೆ;
    ನಾನು ಮಾಡುವ ಪ್ರತಿಯೊಂದನ್ನೂ ದೇವರು ಗಮನಿಸುತ್ತಿದ್ದಾನೆ.’

12 “ಆದರೆ ಯೋಬನೇ, ಈ ವಿಷಯದಲ್ಲಿ ನೀನು ತಪ್ಪಿತಸ್ಥನಾಗಿರುವೆ. ನಾನು ಅದನ್ನು ನಿರೂಪಿಸುವೆ.
    ದೇವರು ಮನುಷ್ಯನಿಗಿಂತ ದೊಡ್ಡವನು.
13 ಯೋಬನೇ, ನೀನು ದೇವರೊಂದಿಗೆ ವಾದಿಸುವುದೇಕೆ?
    ದೇವರು ನಿನಗೆ ಪ್ರತಿಯೊಂದನ್ನೂ ವಿವರಿಸಬೇಕೆಂದು ಭಾವಿಸಿಕೊಂಡಿರುವೆಯೋ?
14 ಒಂದುವೇಳೆ ದೇವರು ತನ್ನ ಕಾರ್ಯದ ಕುರಿತಾಗಿ ವಿವರಿಸಬಹುದು.
    ಒಂದುವೇಳೆ ನಮಗೆ ಅರ್ಥವಾಗದ ರೀತಿಯಲ್ಲಿ ಆತನು ಮಾತಾಡಬಹುದು.
15 ಜನರು ಗಾಢನಿದ್ರೆಯಲ್ಲಿರುವಾಗ
    ದೇವರು ಕನಸಿನ ಮೂಲಕವಾಗಲಿ ದರ್ಶನದ ಮೂಲಕವಾಗಲಿ ಮಾತಾಡಬಹುದು.
16 ಆತನು ಅವರ ಕಿವಿಗಳಲ್ಲಿ ಮಾತಾಡಬಹುದು.
    ಆಗ ಅವರು ದೇವರ ಎಚ್ಚರಿಕೆಗಳಿಂದ ಬಹು ಭಯಗೊಳ್ಳುವರು.
17 ಜನರು ತಪ್ಪು ಮಾಡಬಾರದೆಂದೂ ಅಹಂಕಾರಿಗಳಾಗಿರಬಾರದೆಂದೂ
    ದೇವರು ಅವರಿಗೆ ಎಚ್ಚರಿಕೆ ಕೊಡುತ್ತಾನೆ.
18 ಮರಣದ ಸ್ಥಳಕ್ಕೆ ಹೋಗುತ್ತಿರುವ ಜನರನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಕೆ ಕೊಡುತ್ತಾನೆ.
    ನಾಶವಾಗುತ್ತಿರುವವನನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಸುತ್ತಾನೆ.

19 “ಇದಲ್ಲದೆ ಒಬ್ಬನು ದೇವರ ಶಿಕ್ಷೆಯಿಂದ ಹಾಸಿಗೆಹಿಡಿದು ಸಂಕಟಪಡುತ್ತಿರುವಾಗ ದೇವರ ಸ್ವರಕ್ಕೆ ಕಿವಿಗೊಟ್ಟರೂ ಕೊಡಬಹುದು.
    ದೇವರು ಅವನನ್ನು ಎಲುಬುಗಳೆಲ್ಲಾ ಬಾಧಿಸುವಂಥ ನೋವಿನಿಂದ ಎಚ್ಚರಿಸುತ್ತಾನೆ.
20 ಅವನಿಗೆ ಊಟಮಾಡಲೂ ಸಾಧ್ಯವಿಲ್ಲ.
    ಅವನು ಅತ್ಯಧಿಕವಾದ ನೋವಿನಿಂದ ಬಳಲುತ್ತಿರುವುದರಿಂದ ಮೃಷ್ಠಾನ್ನಕ್ಕೂ ಅಸಹ್ಯಪಡುವನು.
21 ಅವನು ಆಸ್ತಿಪಂಜರದಂತೆ ಕ್ಷೀಣವಾಗುವನು.
    ಕಾಣದಿದ್ದ ಅವನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡು ಅವು ಹೊರತೋರುತ್ತವೆ.
22 ಅವನಿಗೆ ಸಾವು ಸಮೀಪವಾಗಿದೆ;
    ಅವನ ಜೀವವು ಪಾತಾಳಕ್ಕೆ ಹತ್ತಿರವಾಗಿದೆ.
23 ಒಂದುವೇಳೆ ದೇವರ ದೂತರಲ್ಲೊಬ್ಬನು ಮಧ್ಯಸ್ಥಗಾರನಾಗಿ ಬಂದು
    ಅವನ ನೀತಿಕಾರ್ಯಗಳನ್ನು ದೃಢಪಡಿಸಿ ಅವನ ಮೇಲೆ ಪ್ರೀತಿಯುಳ್ಳವನಾಗಿ,
24 ‘ಇವನನ್ನು ಪಾತಾಳದಿಂದ ರಕ್ಷಿಸು!
    ಇವನಿಗೋಸ್ಕರ ಪ್ರಾಯಶ್ಚಿತ್ತದ ಮಾರ್ಗವೊಂದನ್ನು ಕಂಡುಕೊಂಡಿದ್ದೇನೆ’ ಎಂದು ಹೇಳಿದರೆ
25 ಅವನ ದೇಹವು ಬಾಲ್ಯದಂತೆ ಕೋಮಲವಾಗುವುದು;
    ಯೌವನಪ್ರಾಯದಂತೆ ದೃಢಕಾಯವಾಗುವುದು.
26 ಆಗ ಅವನು ದೇವರಿಗೆ ಪ್ರಾರ್ಥಿಸಲು ಆತನು ಅವನ ಪ್ರಾರ್ಥನೆಗೆ ಉತ್ತರಕೊಡುವನು.
    ಅವನು ಆನಂದ ಧ್ವನಿಗೈದು ದೇವರನ್ನು ಆರಾಧಿಸುವನು;
    ಆತನ ಮುಂದೆ ನೀತಿವಂತನಾಗಿ ಜೀವಿಸುವನು.
27 ಬಳಿಕ ಅವನು ಜನರ ಮುಂದೆ ನಿಂತುಕೊಂಡು, ‘ನಾನು ಪಾಪಮಾಡಿದೆನು;
    ಒಳ್ಳೆಯದನ್ನು ಕೆಟ್ಟದ್ದನ್ನಾಗಿ ಮಾಡಿದೆನು.
    ಆದರೆ ದೇವರು ಅದಕ್ಕೆ ತಕ್ಕಂತೆ ನನ್ನನ್ನು ದಂಡಿಸಲಿಲ್ಲ!
28 ದೇವರು ನನ್ನ ಆತ್ಮವನ್ನು ಪಾತಾಳಕ್ಕೆ ಹೋಗದಂತೆ ರಕ್ಷಿಸಿದನು.
    ಆದ್ದರಿಂದ ನಾನು ಜೀವನದಲ್ಲಿ ಮತ್ತೆ ಸುಖಪಡುವಂತಾಯಿತು’ ಎಂದು ಅರಿಕೆಮಾಡಿಕೊಳ್ಳುವನು.

29-30 “ಅವನನ್ನು ಎಚ್ಚರಿಸಿ ಅವನ ಆತ್ಮವನ್ನು ಪಾತಾಳದಿಂದ ರಕ್ಷಿಸಬೇಕೆಂದೂ ಜೀವನದ ಸುಖವನ್ನು ಅವನು ಮತ್ತೆ ಅನುಭವಿಸಲೆಂದೂ
    ದೇವರು ಈ ಕಾರ್ಯಗಳನ್ನು ಪದೇಪದೇ ಮಾಡುವನು.

31 “ಯೋಬನೇ, ನನ್ನ ಮಾತುಗಳಿಗೆ ಗಮನಕೊಟ್ಟು ಕೇಳು, ಮೌನವಾಗಿರು.
    ನಾನು ಮಾತಾಡುವೆನು.
32 ಯೋಬನೇ, ನೀನು ಏನಾದರೂ ಹೇಳಬೇಕೆಂದಿದ್ದರೆ, ಅದನ್ನು ನಾನು ಕೇಳುವಂತಾಗಲಿ.
    ಮುನ್ನಡೆದು ಮಾತಾಡು,
    ಯಾಕೆಂದರೆ ನಿನ್ನನ್ನು ನೀತಿವಂತನೆಂದು ಸ್ಥಾಪಿಸಲು ನನಗೆ ಸಂತೋಷ.
33 ಯೋಬನೇ, ಹೇಳುವುದಕ್ಕೆ ನಿನ್ನಲ್ಲಿ ಏನೂ ಇಲ್ಲದಿದ್ದರೆ ನನಗೆ ಕಿವಿಗೊಟ್ಟು ಮೌನವಾಗಿರು.
    ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”

ಅಪೊಸ್ತಲರ ಕಾರ್ಯಗಳು 14

ಇಕೋನಿಯಾದಲ್ಲಿ ಪೌಲ ಮತ್ತು ಬಾರ್ನಬ

14 ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು. ಆದರೆ ಯೆಹೂದ್ಯರಲ್ಲಿ ನಂಬದೆ ಹೋದ ಕೆಲವರು ಯೆಹೂದ್ಯರಲ್ಲದವರನ್ನು ಪ್ರಚೋಧಿಸಿ ಸಹೋದರರ ವಿರುದ್ಧ ಜನರನ್ನು ಎಬ್ಬಿಸಿದರು.

ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು. ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಯೆಹೂದ್ಯರಲ್ಲದವರಲ್ಲಿ ಮತ್ತು ಯೆಹೂದ್ಯರಲ್ಲಿ ಕೆಲವರು ತಮ್ಮ ನಾಯಕರೊಡನೆ ಸೇರಿಕೊಂಡು ಪೌಲ ಬಾರ್ನಬರನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಇದನ್ನು ಅರಿತುಕೊಂಡ ಪೌಲ ಬಾರ್ನಬರು ಆ ಪಟ್ಟಣವನ್ನು ಬಿಟ್ಟು ಲುಕವೋನಿಯಾದ ಪಟ್ಟಣಗಳಾದ ಲುಸ್ತ್ರ ಮತ್ತು ದರ್ಬೆಗಳಿಗೂ ಹಾಗೂ ಆ ಪಟ್ಟಣಗಳ ಸುತ್ತಮುತ್ತಲಿದ್ದ ಪ್ರದೇಶಗಳಿಗೂ ಹೋದರು. ಅವರು ಅಲ್ಲಿಯೂ ಸುವಾರ್ತೆ ತಿಳಿಸಿದರು.

ಲುಸ್ತ್ರ ಮತ್ತು ದರ್ಬೆಗಳಲ್ಲಿ ಪೌಲನು

ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ. ಈ ಮನುಷ್ಯನು ತಾನು ಕುಳಿತಲ್ಲೇ ಪೌಲನ ಮಾತನ್ನು ಆಲಿಸುತ್ತಿದ್ದನು. ಪೌಲನು ಅವನನ್ನು ದೃಷ್ಟಿಸಿ ನೋಡಿದನು. ದೇವರು ಗುಣಪಡಿಸಬಲ್ಲನೆಂಬ ನಂಬಿಕೆ ಅವನಲ್ಲಿರುವುದನ್ನು ಪೌಲನು ಕಂಡು, 10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.

11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. 12 ಜನರು ಬಾರ್ನಬನನ್ನು “ಜೆಯುಸ್”[a] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ”[b] ದೇವರೆಂದೂ ಕರೆದರು. 13 ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.

14 ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು[c] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು: 15 “ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.

16 “ಹಿಂದಿನ ಕಾಲದಲ್ಲಿ ದೇವರು ಎಲ್ಲಾ ಜನಾಂಗಗಳನ್ನು ಅವುಗಳ ಇಷ್ಟಕ್ಕನುಸಾರವಾಗಿ ನಡೆಯಲು ಬಿಟ್ಟುಕೊಟ್ಟನು. 17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”

18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು.

19 ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು. 20 ಆದರೆ, ಯೇಸುವಿನ ಶಿಷ್ಯರು ಅವನ ಸುತ್ತಲೂ ನೆರೆದು ಬಂದಾಗ ಅವನು ಎದ್ದು ಪಟ್ಟಣದೊಳಗೆ ಹೋದನು. ಮರುದಿನ ಅವನು ಮತ್ತು ಬಾರ್ನಬನು ದರ್ಬೆಪಟ್ಟಣಕ್ಕೆ ಹೋದರು.

ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ಪೌಲ ಬಾರ್ನಬರು ದರ್ಬೆ ಪಟ್ಟಣದಲ್ಲೂ ಸುವಾರ್ತೆಯನ್ನು ತಿಳಿಸಿದರು. ಅನೇಕ ಜನರು ಯೇಸುವಿನ ಶಿಷ್ಯರಾದರು. ಪೌಲಬಾರ್ನಬರು ಲುಸ್ತ್ರ, ಇಕೋನಿಯ ಮತ್ತು ಅಂತಿಯೋಕ್ಯ ಪಟ್ಟಣಗಳಿಗೆ ಹಿಂತಿರುಗಿ, 22 ಯೇಸುವಿನ ಶಿಷ್ಯರನ್ನು ಬಲಗೊಳಿಸಿ, ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಪ್ರೋತ್ಸಾಹಿಸಿದರು, “ನಾವು ದೇವರ ರಾಜ್ಯಕ್ಕೆ ಅನೇಕ ಕಷ್ಟಗಳ ಮೂಲಕ ಹೋಗಬೇಕಾಗಿದೆ” ಎಂದು ಬೋಧಿಸಿದರು. 23 ಪೌಲ ಬಾರ್ನಬರು ಪ್ರತಿಯೊಂದು ಸಭೆಗೂ ಹಿರಿಯರನ್ನು ಆಯ್ಕೆ ಮಾಡಿದರು. ಅವರು ಈ ಹಿರಿಯರಿಗೋಸ್ಕರ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರನ್ನು ಪ್ರಭುವಿನ ಕೈಗೆ ಒಪ್ಪಿಸಿಕೊಟ್ಟರು.

24 ಪೌಲ ಬಾರ್ನಬರು ಪಿಸಿದಿಯ ನಾಡಿನ ಮೂಲಕವಾಗಿ ಪಾಂಫೀಲಿಯ ನಾಡಿಗೆ ಬಂದರು. 25 ಅವರು ದೇವರ ಸಂದೇಶವನ್ನು ಪೆರ್ಗ ಪಟ್ಟಣದಲ್ಲಿ ಬೋಧಿಸಿ, ಅಲ್ಲಿಂದ ಅತ್ತಾಲಿಯ ಪಟ್ಟಣಕ್ಕೆ ಬಂದರು. 26 ಅಲ್ಲಿಂದ ಅವರು ಸಿರಿಯಾದ ಅಂತಿಯೋಕ್ಯಕ್ಕೆ ನೌಕಾಯಾನ ಮಾಡಿದರು. ಈವರೆಗೆ ಮಾಡಿಮುಗಿಸಿದ್ದ ಸೇವಾಕಾರ್ಯಕ್ಕಾಗಿ ದೇವರ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದವರು ಈ ಪಟ್ಟಣದ ವಿಶ್ವಾಸಿಗಳೇ.

27 ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು. 28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International