Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 25-27

ಯೋಬನಿಗೆ ಬಿಲ್ದದನ ಉತ್ತರ

25 ಬಳಿಕ ಶೂಹ ದೇಶದ ಬಿಲ್ದದನು ಉತ್ತರಕೊಟ್ಟನು:

“ದೇವರು ಸರ್ವಾಧಿಪತಿ.
    ಎಲ್ಲರೂ ತನ್ನಲ್ಲಿ ಭಯಭಕ್ತಿಯುಳ್ಳವರಾಗುವಂತೆ ಆತನು ಮಾಡುತ್ತಾನೆ.
    ಆತನು ತನ್ನ ಪರಲೋಕರಾಜ್ಯದಲ್ಲಿ ಸಮಾಧಾನವನ್ನು ನೆಲೆಗೊಳಿಸುವನು.
ಯಾವನೂ ಆತನ ಸೈನ್ಯಗಳನ್ನು ಲೆಕ್ಕಿಸಲಾರನು.
    ಆತನ ಸೂರ್ಯನು ಜನರೆಲ್ಲರ ಮೇಲೆ ಉದಯಿಸುವನು.
ದೇವರಿಗೆ ಹೋಲಿಸಿದರೆ ಯಾವನೂ ನೀತಿವಂತನಲ್ಲ.
    ಯಾವ ಮನುಷ್ಯನೂ ಪರಿಶುದ್ಧನಾಗಿರಲು ಸಾಧ್ಯವಿಲ್ಲ.
ದೇವರ ದೃಷ್ಟಿಯಲ್ಲಿ ಚಂದ್ರನು ಸಹ ಪ್ರಕಾಶವಾಗಿಲ್ಲ;
    ನಕ್ಷತ್ರಗಳು ಸಹ ಪರಿಶುದ್ಧವಲ್ಲ.
ಹೀಗಿರಲು, ಮನುಷ್ಯನು ಎಷ್ಟೋ ಅಪರಿಶುದ್ಧನು!
    ಅವನು ಕೇವಲ ನಿಷ್ಪ್ರಯೋಜಕವಾದ ಹುಳವಿನಂತಿದ್ದಾನೆ!”

ಬಿಲ್ದದನಿಗೆ ಯೋಬನ ಉತ್ತರ

26 ಆಗ ಯೋಬನು ಹೀಗೆ ಉತ್ತರಕೊಟ್ಟನು:

“ನಿನ್ನಿಂದ ಬಲಹೀನನಿಗೆ ಎಷ್ಟೋ ಸಹಾಯವಾಯಿತು!
    ನೀನು ನನ್ನ ಬಲಹೀನವಾದ ತೋಳುಗಳನ್ನು ಮತ್ತೆ ಬಲಗೊಳಿಸಿದೆ!
ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ!
    ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ.[a]
ಇವುಗಳನ್ನು ತಿಳಿಸಲು ನಿನಗೆ ಯಾರು ಸಹಾಯ ಮಾಡಿದವರು?
    ಯಾರ ಆತ್ಮವು ನಿನ್ನನ್ನು ಪ್ರೇರೇಪಿಸಿತು?

“ಸತ್ತವರ ಆತ್ಮಗಳು
    ಭೂಗರ್ಭದಲ್ಲಿರುವ ಜಲರಾಶಿಗಳಲ್ಲಿ ನಡುಗುತ್ತವೆ.
ದೇವರಿಗೆ ಪಾತಾಳವೂ ಸ್ಪಷ್ಟವಾಗಿ ಕಾಣುತ್ತದೆ;
    ಮರಣವು ಆತನಿಗೆ ಮರೆಯಾಗಿಲ್ಲ.
ದೇವರು ಶೂನ್ಯದ ಮೇಲೆ ಉತ್ತರದಿಕ್ಕಿನ ಆಕಾಶವನ್ನು ವಿಸ್ತರಿಸಿದನು.
    ಆತನು ಭೂಮಿಯನ್ನು ಯಾವ ಆಧಾರವೂ ಇಲ್ಲದೆ ತೂಗುಹಾಕಿದ್ದಾನೆ.
ದೇವರು ಮೋಡಗಳನ್ನು ನೀರಿನಿಂದ ತುಂಬಿಸುವನು.
    ಆದರೆ ಮೋಡಗಳು ನೀರಿನ ಭಾರದಿಂದ ಒಡೆದುಹೋಗದಂತೆ ನೋಡಿಕೊಳ್ಳುವನು.
ದೇವರು ತನ್ನ ಮೋಡಗಳನ್ನು ಹರಡಿ
    ಪೂರ್ಣಚಂದ್ರನನ್ನು ಮರೆಮಾಡುವನು.
10 ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ
    ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.
11 ದೇವರು ಗದರಿಸುವಾಗ
    ಆಕಾಶಮಂಡಲದ ಸ್ತಂಭಗಳು ಭಯದಿಂದ ನಡುಗುತ್ತವೆ.
12 ದೇವರ ಶಕ್ತಿಯು ಸಮುದ್ರವನ್ನು ಪ್ರಶಾಂತಗೊಳಿಸುವುದು.
    ದೇವರ ಶಕ್ತಿಯು ರಹಬನ[b] ಸಹಾಯಕರನ್ನು ನಾಶಮಾಡುವುದು.
13 ಆತನ ಉಸಿರು ಆಕಾಶಮಂಡಲವನ್ನು ಶುಭ್ರಗೊಳಿಸುವುದು.
    ಆತನ ಜ್ಞಾನವು ಓಡಿಹೋಗಲು ಪ್ರಯತ್ನಿಸಿದ ರಹಬನನ್ನು ನಾಶಮಾಡುವುದು.
14 ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ.
    ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ.
    ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”

27 ಬಳಿಕ ಯೋಬನು ತನ್ನ ಮಾತನ್ನು ಮುಂದುವರಿಸಿದನು:

“ದೇವರ ಮೇಲೆ ಆಣೆಯಿಟ್ಟು ಹೇಳುವೆ.
    ಆತನು ನನಗೆ ನ್ಯಾಯವನ್ನು ದೊರಕಿಸದೆ ನನ್ನ ಜೀವನವನ್ನು ಕಹಿಯನ್ನಾಗಿ ಮಾಡಿದನು.
ಆದರೆ ಜೀವವು ನನ್ನೊಳಗಿರುವ ತನಕ,
    ದೇವರ ಜೀವಶ್ವಾಸವು ನನ್ನ ಮೂಗಿನಲ್ಲಿ ಇರುವವರೆಗೆ,
ನನ್ನ ತುಟಿಗಳು ಕೆಟ್ಟ ಮಾತುಗಳನ್ನು ಆಡುವುದಿಲ್ಲ;
    ನನ್ನ ನಾಲಿಗೆಯು ಸುಳ್ಳಾಡುವುದಿಲ್ಲ.
ನೀವು ನ್ಯಾಯವಂತರೆಂದು ನಾನು ಒಪ್ಪಿಕೊಳ್ಳುವುದಿಲ್ಲ.
    ನಾನು ನಿರಪರಾಧಿಯೆಂದು ನನ್ನ ಮರಣದ ದಿನದವರೆಗೂ ಹೇಳುತ್ತಲೇ ಇರುವೆನು.
ನನ್ನ ನೀತಿಯನ್ನು ಬಲವಾಗಿ ಹಿಡಿದುಕೊಳ್ಳುವೆನು; ಅದನ್ನೆಂದಿಗೂ ಬಿಟ್ಟುಕೊಡೆನು.
    ನಾನು ಜೀವದಿಂದಿರುವತನಕ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುವುದೇ ಇಲ್ಲ.
ನನ್ನ ವೈರಿಗಳಿಗೆ ದುಷ್ಟರ ಗತಿಯಾಗಲಿ.
    ನನ್ನ ವಿರೋಧಿಗಳಿಗೆ ಅನೀತಿವಂತರ ಗತಿಯಾಗಲಿ.
ದೈವಿಕನಲ್ಲದವನ ಜೀವವನ್ನು ದೇವರು ತೆಗೆದುಹಾಕುವಾಗ
    ಅವನಿಗೆ ನಿರೀಕ್ಷೆಯೇ ಇರುವುದಿಲ್ಲ.
ಆ ದುಷ್ಟನು ಆಪತ್ತುಗಳಲ್ಲಿರುವಾಗ ದೇವರಿಗೆ ಮೊರೆಯಿಡುವನು;
    ಆದರೆ ದೇವರು ಅವನಿಗೆ ಕಿವಿಗೊಡುವುದಿಲ್ಲ.
10 ಅವನು ಸರ್ವಶಕ್ತನಾದ ದೇವರಲ್ಲಿ ಆನಂದಿಸಬೇಕಿತ್ತು;
    ಯಾವಾಗಲೂ ಆತನಿಗೆ ಪ್ರಾರ್ಥಿಸಬೇಕಿತ್ತು.

11 “ನಾನು ನಿಮಗೆ ದೇವರ ಶಕ್ತಿಯ ಬಗ್ಗೆ ಉಪದೇಶಿಸುವೆನು.
    ಸರ್ವಶಕ್ತನಾದ ದೇವರ ಆಲೋಚನೆಗಳನ್ನು ನಾನು ನಿಮಗೆ ಮರೆಮಾಡುವುದಿಲ್ಲ.
12 ನೀವೆಲ್ಲರೂ ಇವುಗಳನ್ನು ಕಣ್ಣಾರೆ ನೋಡಿದ್ದೀರಿ.
    ಹೀಗಿರಲು ಅಂಥ ನಿಷ್ಪ್ರಯೋಜಕ ಸಂಗತಿಗಳನ್ನು ಯಾಕೆ ಹೇಳುವಿರಿ?

13 “ದೇವರು ದುಷ್ಟರಿಗೋಸ್ಕರ ಮಾಡಿರುವ ಯೋಜನೆಯೂ
    ಸರ್ವಶಕ್ತನಾದ ದೇವರಿಂದ ಹಿಂಸಕನಿಗೆ ದೊರೆಯುವ ಸ್ವಾಸ್ತ್ಯವೂ ಹೀಗಿವೆ:
14 ದುಷ್ಟನು ಅನೇಕ ಮಕ್ಕಳನ್ನು ಪಡೆದುಕೊಂಡರೂ ಅವರು ಯುದ್ಧದಲ್ಲಿ ಕೊಲ್ಲಲ್ಪಡುವರು;
    ಅವರಿಗೆ ಊಟಕ್ಕೂ ಇರುವುದಿಲ್ಲ.
15 ದುಷ್ಟನ ಮಕ್ಕಳೂ ಇನ್ನೂ ಉಳಿದುಕೊಂಡಿದ್ದರೆ ಭಯಂಕರವಾದ ರೋಗಗಳಿಂದ ಸಾಯುವರು;
    ಅವರ ವಿಧವೆಯರು ಅವರಿಗೋಸ್ಕರ ದುಃಖಿಸುವುದಿಲ್ಲ.
16 ದುಷ್ಟನು ಬೆಳ್ಳಿಯನ್ನು ಧೂಳಿನಂತೆ ರಾಶಿಮಾಡಿಕೊಂಡರೂ
    ಬಟ್ಟೆಗಳನ್ನು ಮಣ್ಣಿನ ರಾಶಿಗಳಂತೆ ಪಡೆದುಕೊಂಡರೂ
17 ಆ ಬಟ್ಟೆಗಳನ್ನು ನೀತಿವಂತರು ಧರಿಸಿಕೊಳ್ಳುವರು;
    ಅವನ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
18 ದುಷ್ಟನು ಕಟ್ಟುವ ಮನೆಯು ಜೇಡರ ಬಲೆಯಂತೆಯೂ
    ಕಾವಲುಗಾರನ ಗುಡಾರದಂತೆಯೂ ಕ್ಷಣಿಕವಾಗಿರುವುದು.
19 ದುಷ್ಟನು ಮಲಗಿಕೊಳ್ಳುವಾಗ ಐಶ್ವರ್ಯವಂತನಾಗಿದ್ದರೂ
    ನಿದ್ರೆಯಿಂದ ಎಚ್ಚೆತ್ತಾಗ ಅವನ ಐಶ್ವರ್ಯವೆಲ್ಲಾ ಹೊರಟುಹೋಗಿರುವುದು.
20 ಆಪತ್ತುಗಳು ಇದ್ದಕ್ಕಿದ್ದಂತೆ ಬರುವ ಪ್ರವಾಹದಂತೆ ಅವನನ್ನು ಆವರಿಸಿಕೊಳ್ಳುತ್ತವೆ.
    ಬಿರುಗಾಳಿಯು ಅವನನ್ನು ರಾತ್ರಿಯಲ್ಲಿ ಹೊತ್ತುಕೊಂಡು ಹೋಗುವುದು.
21 ಪೂರ್ವದ ಗಾಳಿಯು ಅವನನ್ನು ಹೊತ್ತುಕೊಂಡು ಹೋಗುವುದರಿಂದ ಅವನು ಇಲ್ಲವಾಗುವನು.
    ಬಿರುಗಾಳಿಯು ಅವನನ್ನು ಮನೆಯೊಳಗಿಂದ ಹೊತ್ತುಕೊಂಡುಹೋಗುವುದು.
22 ದುಷ್ಟನು ಬಿರುಗಾಳಿಯ ಶಕ್ತಿಯಿಂದ ಓಡಿಹೋಗಲು ಪ್ರಯತ್ನಿಸುವನು.
    ಆದರೆ ಬಿರುಗಾಳಿಯು ಕರುಣೆಯಿಲ್ಲದೆ ಅವನಿಗೆ ಬಡಿಯುವುದು.
23 ದುಷ್ಟನು ಓಡಿಹೋಗುತ್ತಿರಲು ಜನರು ಚಪ್ಪಾಳೆ ತಟ್ಟುವರು;
    ಅವನ ಮನೆಯೊಳಗಿಂದ ಓಡಿಹೋಗುತ್ತಿರಲು ಜನರು ಸೀಟಿ ಹೊಡೆಯುವರು.”

ಅಪೊಸ್ತಲರ ಕಾರ್ಯಗಳು 12

ಹೆರೋದ ಅಗ್ರಿಪ್ಪನಿಂದ ಸಭೆಗೆ ಹಿಂಸೆ

12 ಆ ಕಾಲದಲ್ಲಿ ರಾಜ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸಿಸತೊಡಗಿ, ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಯಾಕೋಬನು ಯೋಹಾನನ ಅಣ್ಣ. ಯೆಹೂದ್ಯರು ಇದನ್ನು ಮೆಚ್ಚಿಕೊಂಡರೆಂಬುದು ಹೆರೋದನಿಗೆ ತಿಳಿಯಿತು. ಆದ್ದರಿಂದ ಅವನು ಪೇತ್ರನನ್ನು ಬಂಧಿಸಿ (ಇದು ನಡೆದದ್ದು ಯೆಹೂದ್ಯರ ಪಸ್ಕಹಬ್ಬದ ಕಾಲದಲ್ಲಿ) ಸೆರೆಮನೆಗೆ ಹಾಕಿಸಿದನು. ಹದಿನಾರು ಮಂದಿ ಸಿಪಾಯಿಗಳು ಪೇತ್ರನನ್ನು ಕಾಯುತ್ತಿದ್ದರು. ಪಸ್ಕಹಬ್ಬದ ಕಾಲ ಮುಗಿದೊಡನೆ ಪೇತ್ರನನ್ನು ಜನರ ಮುಂದೆ ನಿಲ್ಲಿಸಬೇಕೆಂದಿದ್ದನು. ಹೀಗೆ ಪೇತ್ರನು ಸೆರೆಮನೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ಎಡಬಿಡದೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಪೇತ್ರನಿಗೆ ಸೆರೆಮನೆಯಿಂದ ಬಿಡುಗಡೆ

ಪೇತ್ರನು ಇಬ್ಬರು ಸೈನಿಕರ ಮಧ್ಯೆ ನಿದ್ರೆಮಾಡುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಅನೇಕ ಸೈನಿಕರು ಸೆರೆಮನೆಯ ಬಾಗಿಲನ್ನು ಕಾಯುತ್ತಿದ್ದರು. ಆಗ ರಾತ್ರಿಯಾಗಿತ್ತು. ಮರುದಿನ ಪೇತ್ರನನ್ನು ಜನರ ಮುಂದೆ ತರಬೇಕೆಂದು ಹೆರೋದನು ಯೋಚಿಸಿಕೊಂಡಿದ್ದನು. ಇದ್ದಕ್ಕಿದ್ದಂತೆ, ಪ್ರಭುವಿನ ದೂತನೊಬ್ಬನು ಅಲ್ಲಿ ನಿಂತುಕೊಂಡನು. ಬೆಳಕು ಕೋಣೆಯಲ್ಲಿ ಪ್ರಕಾಶಿಸಿತು. ದೇವದೂತನು ಪೇತ್ರನ ಪಕ್ಕೆಯನ್ನು ಮುಟ್ಟಿ ಅವನನ್ನು ಎಬ್ಬಿಸಿ, “ಬೇಗನೆ ಎದ್ದೇಳು!” ಎಂದನು. ಆ ಕೂಡಲೆ ಸರಪಣಿಗಳು ಪೇತ್ರನ ಕೈಗಳಿಂದ ಕಳಚಿಬಿದ್ದವು. ದೇವದೂತನು ಪೇತ್ರನಿಗೆ, “ಬಟ್ಟೆ ಧರಿಸಿಕೊ, ಪಾದರಕ್ಷೆಗಳನ್ನು ಮೆಟ್ಟಿಕೊ” ಎಂದು ಹೇಳಿದನು. ಅಂತೆಯೇ ಪೇತ್ರನು ಮಾಡಿದನು. ಬಳಿಕ ದೇವದೂತನು, “ನಿನ್ನ ಮೇಲಂಗಿಯನ್ನು ಧರಿಸಿಕೊಂಡು ನನ್ನನ್ನು ಹಿಂಬಾಲಿಸು” ಎಂದನು.

ದೇವದೂತನು ಹೊರಗೆ ಹೋದನು. ಪೇತ್ರನು ಅವನನ್ನು ಹಿಂಬಾಲಿಸಿದನು. ದೇವದೂತನು ನಿಜವಾಗಿಯೂ ಹೀಗೆ ಮಾಡುತ್ತಿದ್ದಾನೆಂಬುದು ಪೇತ್ರನಿಗೆ ತಿಳಿದಿರಲಿಲ್ಲ. ತಾನು ಕನಸು ಕಾಣುತ್ತಿರಬಹುದೆಂದು ಅವನು ಯೋಚಿಸಿಕೊಂಡನು. 10 ಪೇತ್ರನು ಮತ್ತು ದೇವದೂತನು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿಹೋದರು. ಬಳಿಕ ಅವರು ತಮ್ಮನ್ನು ಪಟ್ಟಣದತ್ತ ನಡೆಸುವ ಕಬ್ಬಿಣದ ಬಾಗಿಲಿಗೆ ಬಂದರು. ಆ ಬಾಗಿಲು ಅವರಿಗಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಂಡಿತು. ಪೇತ್ರ ಮತ್ತು ಆ ದೇವದೂತನು ಬಾಗಿಲ ಮೂಲಕ ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು. ಆಗ ಇದ್ದಕ್ಕಿದ್ದಂತೆ ಆ ದೇವದೂತನು ಅವನನ್ನು ಬಿಟ್ಟುಹೋದನು.

11 ನಡೆದ ಸಂಗತಿಯನ್ನು ಆಗ ಅರಿತುಕೊಂಡ ಪೇತ್ರನು, “ಪ್ರಭುವು ನನ್ನ ಬಳಿಗೆ ತನ್ನ ದೇವದೂತನನ್ನು ನಿಜವಾಗಿಯೂ ಕಳುಹಿಸಿದನೆಂದು ಈಗ ನನಗೆ ತಿಳಿಯಿತು. ಆತನು ನನ್ನನ್ನು ಹೆರೋದನ ಕೈಯಿಂದ ಪಾರುಮಾಡಿದನು. ನನಗೆ ಕೇಡು ಸಂಭವಿಸುತ್ತದೆಯೆಂದು ಯೆಹೂದ್ಯರು ಯೋಚಿಸಿಕೊಂಡಿದ್ದರು. ಆದರೆ ಪ್ರಭುವು ನನ್ನನ್ನು ಆ ಕೇಡಿನಿಂದ ರಕ್ಷಿಸಿದನು” ಎಂದುಕೊಂಡನು.

12 ಬಳಿಕ ಪೇತ್ರನು ಮರಿಯಳ ಮನೆಗೆ ಹೋದನು. ಆಕೆಯು ಯೋಹಾನನ ತಾಯಿ. (ಯೋಹಾನನನ್ನು ಮಾರ್ಕನೆಂದು ಕರೆಯುತ್ತಿದ್ದರು.) ಅನೇಕ ಜನರು ಅಲ್ಲಿ ಸೇರಿದ್ದರು. ಅವರೆಲ್ಲರೂ ಪ್ರಾರ್ಥಿಸುತ್ತಿದ್ದರು. 13 ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು. 14 ರೋದೆಯು ಪೇತ್ರನ ಧ್ವನಿಯನ್ನು ಗುರುತಿಸಿದಳು. ಆಕೆಗೆ ತುಂಬಾ ಸಂತೋಷವಾಯಿತು. ಬಾಗಿಲು ತೆರೆಯುವುದನ್ನು ಆಕೆ ಮರೆತು, ನೆರೆದು ಬಂದಿದ್ದ ಜನರ ಬಳಿಗೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿ ನಿಂತಿದ್ದಾನೆ!” ಎಂದು ಹೇಳಿದಳು. 15 ಆ ವಿಶ್ವಾಸಿಗಳು ಆಕೆಗೆ, “ನಿನಗೆ ಹುಚ್ಚು ಹಿಡಿದಿದೆ!” ಎಂದರು. ಆದರೆ ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿಹೇಳಿದಳು. ಆದ್ದರಿಂದ ಅವರು, “ಅವನು ಪೇತ್ರನ ದೂತನಿರಬೇಕು” ಎಂದು ಹೇಳಿದರು.

16 ಆದರೆ ಪೇತ್ರನು ಬಾಗಿಲನ್ನು ತಟ್ಟುತ್ತಲೇ ಇದ್ದನು. ಆ ವಿಶ್ವಾಸಿಗಳು ಬಾಗಿಲನ್ನು ತೆರೆದಾಗ ಅವರು ಪೇತ್ರನನ್ನು ಕಂಡು ವಿಸ್ಮಿತರಾದರು. 17 ಪೇತ್ರನು ಅವರಿಗೆ ಸುಮ್ಮನಿರಬೇಕೆಂದು ಸನ್ನೆ ಮಾಡಿದನು. ಪ್ರಭುವು ತನ್ನನ್ನು ಸೆರೆಮನೆಯಿಂದ ಬಿಡಿಸಿದ ರೀತಿಯನ್ನು ಅವನು ಅವರಿಗೆ ವಿವರಿಸಿ, “ಯಾಕೋಬನಿಗೂ ಮತ್ತು ಸಹೋದರರಿಗೂ ಈ ಸಂಗತಿಯನ್ನು ತಿಳಿಸಿರಿ” ಎಂದು ಹೇಳಿದನು. ಬಳಿಕ ಪೇತ್ರನು ಬೇರೊಂದು ಸ್ಥಳಕ್ಕೆ ಅಲ್ಲಿಂದ ಹೊರಟುಹೋದನು.

18 ಮರುದಿನ, ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು. 19 ಹೆರೋದನು ಎಲ್ಲೆಲ್ಲಿ ಹುಡುಕಿದರೂ ಪೇತ್ರನನ್ನು ಕಂಡುಹಿಡಿಯಲಾಗಲಿಲ್ಲ. ಆದ್ದರಿಂದ ಹೆರೋದನು ಕಾವಲುಗಾರರನ್ನು ವಿಚಾರಿಸಿ ಅವರಿಗೇ ಮರಣದಂಡನೆ ವಿಧಿಸಿದನು.

ಹೆರೋದ ಅಗ್ರಿಪ್ಪನ ಮರಣ

ತರುವಾಯ ಹೆರೋದನು ಜುದೇಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಬಂದು ಅಲ್ಲೇ ಸ್ವಲ್ಪಕಾಲ ನೆಲೆಸಿದ್ದನು. 20 ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.

21 ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22 ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23 ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.

24 ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.

25 ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International