Old/New Testament
36 ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:
2 “ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು.
ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
3 ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ.
ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
4 ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ.
ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
5 “ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ.
ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
6 ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ.
ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
7 ನೀತಿವಂತರನ್ನು ದೇವರು ಪರಿಪಾಲಿಸುವನು;
ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು;
ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
8 ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು
ಸಂಕಟಪಡುತ್ತಿದ್ದರೆ,
9 ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ
ಅವರಿಗೆ ತಿಳಿಯಪಡಿಸುವನು.
10 ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು;
ಪಾಪಮಾಡಕೂಡದೆಂದು ಆಜ್ಞಾಪಿಸುವನು.
11 ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ, ಆತನು ಅವರನ್ನು ಅಭಿವೃದ್ಧಿಪಡಿಸುವನು;
ಆಗ ಅವರ ಜೀವನವು ಸುಖಕರವಾಗುವುದು.
12 ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು;
ಮೂಢರಂತೆ ಸಾಯುವರು.
13 “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು.
ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
14 ಅವರು ಯೌವನ ಪ್ರಾಯದಲ್ಲೇ
ಪುರುಷಗಾಮಿಗಳಂತೆ ಸಾಯುವರು.
15 ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು.
ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.
16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ
ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು
ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
17 ಯೋಬನೇ, ಈಗಲಾದರೋ ನೀನು ದೋಷಿಯೆಂದು ನಿರ್ಣಯಿಸಲ್ಪಟ್ಟಿರುವೆ; ದುಷ್ಟನಂತೆ ದಂಡಿಸಲ್ಪಟ್ಟಿರುವೆ.
18 ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ;
ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.
19 ನಿನ್ನ ಎಲ್ಲಾ ಹಣವು ಈಗ ನಿನಗೆ ಸಹಾಯ ಮಾಡಲಾರದು;
ನಿನ್ನಲ್ಲಿರುವ ಶಕ್ತಿಸಾಮರ್ಥವು ಸಹ ನಿನಗೆ ಸಹಾಯ ಮಾಡಲಾರದು.
20 ಜನಾಂಗಗಳು ಇದ್ದಕ್ಕಿದ್ದಂತೆ
ಕಾಣೆಯಾಗುವ ರಾತ್ರಿಗಾಗಿ ಬಯಸಬೇಡ.
21 ಯೋಬನೇ, ನೀನು ಬಹಳ ಸಂಕಟಪಟ್ಟಿರುವೆ.
ಆದ್ದರಿಂದ ಕೆಡುಕನ್ನು ಆರಿಸಿಕೊಳ್ಳಬೇಡ; ತಪ್ಪು ಮಾಡದಂತೆ ಎಚ್ಚರಿಕೆಯಾಗಿರು.
22 “ಇಗೋ, ದೇವರು ತನ್ನ ಶಕ್ತಿಯಿಂದ ಮಹಾಕಾರ್ಯವನ್ನು ಮಾಡುವನು!
ಆತನು ಎಲ್ಲರಿಗೂ ಅತ್ಯಂತ ದೊಡ್ಡ ಉಪದೇಶಕನಾಗಿದ್ದಾನೆ.
23 ದೇವರಿಗೆ ಕೆಲಸವನ್ನು ನೇಮಿಸಲು ಯಾರಿಗೆ ಸಾಧ್ಯ?
ಆತನಿಗೆ, ‘ನೀನು ತಪ್ಪನ್ನು ಮಾಡಿರುವೆ’ ಎಂದು ಹೇಳಲು ಯಾರಿಗೆ ಸಾಧ್ಯ?
24 ದೇವರನ್ನು ಆತನ ಕಾರ್ಯಗಳಿಗಾಗಿ ಕೊಂಡಾಡಲು ಮರೆಯಬೇಡ.
ಜನರು ಆತನನ್ನು ಕುರಿತು ಅನೇಕ ಸುತ್ತಿಗೀತೆಗಳನ್ನು ಬರೆದಿದ್ದಾರೆ.
25 ಪ್ರತಿಯೊಬ್ಬನೂ ದೇವರ ಕಾರ್ಯವನ್ನು ನೋಡಬಲ್ಲನು.
ದೂರದೇಶಗಳ ಜನರು ಸಹ ಆತನು ಕಾರ್ಯವನ್ನು ನೋಡಬಲ್ಲರು.
26 ಹೌದು, ದೇವರೇ ಮಹೋನ್ನತನು.
ಆತನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಲಾರೆವು.
ಆತನು ಎಂದಿನಿಂದ ಜೀವಿಸಿರುವನೋ ನಮಗೆ ತಿಳಿಯದು.
27 “ದೇವರು ಭೂಮಿಯ ನೀರನ್ನು ಹಬೆಯ ರೂಪದಲ್ಲಿ ಮೇಲಕ್ಕೆ ಕೊಂಡೊಯ್ದು
ಅದನ್ನು ಮಂಜನ್ನಾಗಿಯೂ ಮಳೆಯನ್ನಾಗಿಯೂ ಪರಿವರ್ತಿಸುತ್ತಾನೆ.
28 ಆದ್ದರಿಂದ ಮೋಡಗಳು ನೀರನ್ನು ಸುರಿಯಮಾಡುತ್ತವೆ;
ಅನೇಕರ ಮೇಲೆ ಮಳೆಯು ಸುರಿಯುತ್ತದೆ.
29 ದೇವರು ಮೋಡಗಳನ್ನು ಹರಡುವ ಬಗೆಯನ್ನಾಗಲಿ
ಆಕಾಶದಲ್ಲಿ ಗುಡುಗು ಗರ್ಜಿಸುವ ಬಗೆಯನ್ನಾಗಲಿ ಯಾವನೂ ಅರ್ಥಮಾಡಿಕೊಳ್ಳಲಾರನು.
30 ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ
ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
31 ಜನಾಂಗಗಳನ್ನು ಹತೋಟಿಯಲ್ಲಿಡುವುದಕ್ಕಾಗಿಯೂ
ಬೇಕಾದಷ್ಟು ಆಹಾರವನ್ನು ಕೊಡುವುದಕ್ಕಾಗಿಯೂ ದೇವರು ಅವುಗಳನ್ನು ಉಪಯೋಗಿಸುವನು.
32 ದೇವರು ತನ್ನ ಕೈಗಳಲ್ಲಿ ಸಿಡಿಲನ್ನು ಹಿಡಿದುಕೊಂಡು ಅದಕ್ಕೆ ಆಜ್ಞಾಪಿಸಲು
ಅದು ಆತನ ಚಿತ್ತಕ್ಕನುಸಾರವಾಗಿ ಹೊಡೆಯುವುದು.
33 ಬಿರುಗಾಳಿಯು ಬರುತ್ತಿದೆಯೆಂದು ಗುಡುಗು ಎಚ್ಚರಿಕೆ ನೀಡುತ್ತದೆ;
ಬಿರುಗಾಳಿ ಬರುತ್ತಿರುವುದು ದನಕರುಗಳಿಗೂ ಸಹ ಗೊತ್ತಾಗುವುದು.
37 “ಗುಡುಗು ಮಿಂಚುಗಳು ನನ್ನನ್ನು ಭಯಗೊಳಿಸಿವೆ.
ನನ್ನ ಹೃದಯವು ಢವಢವನೆ ಬಡಿದುಕೊಳ್ಳುತ್ತಿದೆ.
2 ಪ್ರತಿಯೊಬ್ಬರೂ ಕೇಳಿರಿ! ದೇವರ ಧ್ವನಿಯು ಗುಡುಗಿನ ಧ್ವನಿಯಂತಿದೆ.
ಆತನ ಬಾಯಿಂದ ಬರುವ ಗುಡುಗುಟ್ಟುವ ಧ್ವನಿಯನ್ನು ಕೇಳಿರಿ.
3 ಇಡೀ ಆಕಾಶಮಂಡಲದಲ್ಲೆಲ್ಲಾ ಪ್ರಕಾಶಿಸಲೆಂದು ದೇವರು ತನ್ನ ಸಿಡಿಲನ್ನು ಕಳುಹಿಸುವನು.
ಅದು ಭೂಮಿಯ ಮೇಲೆಲ್ಲಾ ಪ್ರಕಾಶಿಸುವುದು.
4 ಸಿಡಿಲು ಪ್ರಕಾಶಿಸಿದ ನಂತರ ದೇವರ ಗರ್ಜನೆಯು ಕೇಳಿಬರುವುದು.
ಆತನು ತನ್ನ ಆಶ್ಚರ್ಯಕರವಾದ ಧ್ವನಿಯಿಂದ ಗುಡುಗುಟ್ಟುವನು!
ಸಿಡಿಲು ಪ್ರಕಾಶಿಸುವಾಗ ಆತನ ಧ್ವನಿಯು ಗುಡುಗುಟ್ಟುವುದು!
5 ದೇವರ ಗುಡುಗುಟ್ಟುವ ಧ್ವನಿಯು ಆಶ್ಚರ್ಯಕರವಾಗಿದೆ!
ನಾವು ಅರ್ಥಮಾಡಿಕೊಳ್ಳಲಾಗದ ಮಹಾಕಾರ್ಯಗಳನ್ನು ಆತನು ಮಾಡುತ್ತಾನೆ.
6 ಆತನು ಹಿಮಕ್ಕೆ,
‘ಭೂಮಿಯ ಮೇಲೆ ಬೀಳು’ ಎಂತಲೂ
ಮಳೆಗೆ,
‘ಭೂಮಿಯ ಮೇಲೆ ಸುರಿ’ ಎಂತಲೂ ಆಜ್ಞಾಪಿಸುವನು.
7 ದೇವರು ತನ್ನ ಕಾರ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು
ಪ್ರತಿಯೊಬ್ಬರನ್ನು ಮನೆಯೊಳಗೆ ಕೂಡಿಹಾಕುತ್ತಾನೆ.[a]
8 ಪ್ರಾಣಿಗಳು ಓಡಿಹೋಗಿ ತಮ್ಮ ಗುಹೆಗಳಲ್ಲಿ ಸೇರಿಕೊಳ್ಳುತ್ತವೆ.
9 ದಕ್ಷಿಣ ದಿಕ್ಕಿನಿಂದ ಬಿರುಗಾಳಿಯೂ
ಉತ್ತರ ದಿಕ್ಕಿನಿಂದ ಚಳಿಗಾಳಿಯೂ ಬರುತ್ತವೆ.
10 ದೇವರ ಉಸಿರು ನೀರನ್ನು ಮಂಜನ್ನಾಗಿ ಮಾಡಿ
ಸಾಗರಗಳನ್ನು ಹೆಪ್ಪುಗಟ್ಟಿಸುವುದು.
11 ದೇವರು ಮೋಡಗಳಲ್ಲಿ ನೀರು ತುಂಬಿಸುವನು.
ಆತನು ತನ್ನ ಮಿಂಚನ್ನು ಮೋಡಗಳಲ್ಲೆಲ್ಲಾ ಹರಡುವನು.
12 ಭೂಮಂಡಲದಲ್ಲೆಲ್ಲಾ ಚಲಿಸಲು ದೇವರು ಮೋಡಗಳಿಗೆ ಆಜ್ಞಾಪಿಸುವನು.
ಮೋಡಗಳು ಆತನ ಆಜ್ಞೆಗನುಸಾರವಾಗಿ ಮಾಡುತ್ತವೆ.
13 ದೇವರು ಜನರನ್ನು ದಂಡಿಸುವುದಕ್ಕಾಗಲಿ
ನೀರನ್ನು ಒದಗಿಸುವ ಮೂಲಕ ತನ್ನ ನಿರಂತರ ಪ್ರೀತಿಯನ್ನು ತೋರಿಸುವುದಕ್ಕಾಗಲಿ ಮೋಡಗಳನ್ನು ಬರಮಾಡುವನು.
14 “ಯೋಬನೇ, ಒಂದು ನಿಮಿಷ ಮೌನವಾಗಿದ್ದು ಕೇಳು.
ದೇವರ ಅದ್ಭುತಕಾರ್ಯಗಳ ಬಗ್ಗೆ ಮೌನವಾಗಿದ್ದು ಆಲೋಚಿಸು.
15 ಯೋಬನೇ, ದೇವರು ಮೋಡಗಳನ್ನು ಹೇಗೆ ಹತೋಟಿಯಲ್ಲಿಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
ದೇವರು ಸಿಡಿಲನ್ನು ಹೇಗೆ ಹೊಳೆಯ ಮಾಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
16 ಆಕಾಶದಲ್ಲಿ ಮೋಡಗಳು ಹೇಗೆ ತೂಗಾಡುತ್ತಿವೆ ಎಂಬುದು ನಿನಗೆ ಗೊತ್ತಿದೆಯೋ?
ದೇವರ ಆಶ್ಚರ್ಯಕಾರ್ಯಗಳಲ್ಲಿ ಮೋಡಗಳು ಒಂದು ಉದಾಹರಣೆಯಷ್ಟೇ.
ಅವುಗಳ ಬಗ್ಗೆ ದೇವರಿಗೆ ಸಂಪೂರ್ಣವಾಗಿ ತಿಳಿದಿದೆ.
17 ಯೋಬನೇ, ನಿನಗೆ ಇವುಗಳ ಬಗ್ಗೆ ಗೊತ್ತಿಲ್ಲ.
ದಕ್ಷಿಣ ದಿಕ್ಕಿನ ಬಿಸಿಗಾಳಿಯಿಂದ ಭೂಮಿಯು ಸ್ತಬ್ಧವಾದಾಗ, ನೀನು ಬೆವತು ಬಟ್ಟೆಗಳು ಒದ್ದೆಯಾಗುವುದಷ್ಟೇ ನಿನಗೆ ತಿಳಿದಿದೆ.
18 ಯೋಬನೇ, ಆಕಾಶಮಂಡಲವನ್ನು ಹರಡುವುದಕ್ಕಾಗಲಿ
ಅದಕ್ಕೆ ಕಂಚಿನ ದರ್ಪಣದಂತೆ ಮೆರಗು ನೀಡುವುದಕ್ಕಾಗಲಿ ನೀನು ದೇವರಿಗೆ ಸಹಾಯಮಾಡಬಲ್ಲೆಯಾ?[b]
19 “ಯೋಬನೇ, ನಾವು ದೇವರಿಗೆ ಹೇಳಬೇಕಾದುದನ್ನು ನಮಗೆ ತಿಳಿಸು!
ನಮಗೆ ಸಾಕಷ್ಟು ಗೊತ್ತಿಲ್ಲದಿರುವುದರಿಂದ ಏನು ಹೇಳಬೇಕೋ ನಮಗೆ ತಿಳಿಯದು.
20 ನಾನು ದೇವರಿಗೆ, ‘ನಿನ್ನೊಂದಿಗೆ ಮಾತಾಡಬೇಕಾಗಿದೆ’ ಎಂದು ಹೇಳಲಾರೆ.
ಯಾಕೆಂದರೆ ಅದು ನಾಶನವನ್ನೇ ಕೇಳಿಕೊಂಡಂತಾಗುವುದು.
21 ಯಾವನೂ ಪ್ರಕಾಶಮಾನವಾದ ಸೂರ್ಯನನ್ನು ನೋಡಲಾರನು.
ಗಾಳಿಯು ಮೋಡಗಳನ್ನು ಬಡಿದುಕೊಂಡು ಹೋದಮೇಲೆ ಆಕಾಶದಲ್ಲಿ ಸೂರ್ಯನು ಬಹು ಪ್ರಕಾಶಮಾನವಾಗಿ ಹೊಳೆಯುತ್ತಿರುವನು.
22 ದೇವರ ಹೊನ್ನಿನ ಮಹಿಮೆಯು ಪವಿತ್ರ ಪರ್ವತದಿಂದ ಹೊಳೆಯುವುದು.
ದೇವರ ಸುತ್ತಲೂ ಪ್ರಕಾಶಮಾನವಾದ ಬೆಳಕು ಸುತ್ತುವರಿದಿದೆ.
23 “ಸರ್ವಶಕ್ತನಾದ ದೇವರು ಮಹೋನ್ನತನೇ ಸರಿ! ನಾವು ಆತನನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ.
ದೇವರು ಮಹಾ ಬಲಿಷ್ಠನಾಗಿದ್ದರೂ ನಮಗೆ ಒಳ್ಳೆಯವನೂ ನ್ಯಾಯವಂತನೂ ಆಗಿದ್ದಾನೆ; ಆತನು ನಮ್ಮನ್ನು ಹಿಂಸಿಸಲು ಇಷ್ಟಪಡುವುದಿಲ್ಲ.
24 ಆದಕಾರಣವೇ ಜನರು ದೇವರಲ್ಲಿ ಭಯಭಕ್ತಿಯಿಂದಿರುವರು.
ದೇವರಾದರೋ ತಮ್ಮನ್ನು ಜ್ಞಾನಿಗಳೆಂದು ಭಾವಿಸಿಕೊಂಡಿರುವ ಗರ್ವಿಷ್ಠರನ್ನು ಗೌರವಿಸುವುದಿಲ್ಲ.”
ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ
22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:
ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:
ಪ್ರಿಯ ಸಹೋದರರೇ,
24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:
29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.
ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.
ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.
ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!
30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [a]
35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.
ಪೌಲ ಬಾರ್ನಬರು ಬೇರ್ಪಡುವರು
36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.
37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್‌ಗೆ ನೌಕಾಯಾನ ಮಾಡಿದನು.
40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.
Kannada Holy Bible: Easy-to-Read Version. All rights reserved. © 1997 Bible League International