Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 3-5

ಜ್ಞಾನದ ಆಶೀರ್ವಾದಗಳು

ನನ್ನ ಮಗನೇ, ನನ್ನ ಉಪದೇಶವನ್ನು ಮರೆಯಬೇಡ. ನನ್ನ ಆಜ್ಞೆಗಳನ್ನು ಜ್ಞಾಪಕದಲ್ಲಿಟ್ಟುಕೊ. ಅವು ನಿನಗೆ ದೀರ್ಘಾಯುಷ್ಯವನ್ನು ನೀಡಿ ಸಂತೋಷ ಸಮಾಧಾನಗಳಿಂದ ಕೂಡಿದ ಜೀವಿತವನ್ನು ಕೊಡುತ್ತವೆ.

ಪ್ರೀತಿಯೂ ನಂಬಿಗಸ್ತಿಕೆಯೂ ನಿನ್ನನ್ನು ಬಿಟ್ಟು ಹೋಗದಿರಲಿ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ. ಆಗ ನೀನು ದೇವರಿಂದಲೂ ಮನುಷ್ಯರಿಂದಲೂ ಮೆಚ್ಚಿಕೆಯನ್ನು ಮತ್ತು ಒಳ್ಳೆಯ ಹೆಸರನ್ನು ಸಂಪಾದಿಸಿಕೊಳ್ಳುವೆ.

ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆ ಇಡು. ನಿನ್ನ ಸ್ವಂತ ಜ್ಞಾನವನ್ನು ಅವಲಂಬಿಸಬೇಡ. ನಿನ್ನ ಎಲ್ಲಾ ಕಾರ್ಯಗಳಲ್ಲಿ ಆತನನ್ನು ಜ್ಞಾಪಿಸಿಕೊ. ಆಗ ಆತನು ನಿನಗೆ ಸಹಾಯ ಮಾಡುವನು. ನಿನ್ನನ್ನು ಜ್ಞಾನಿಯೆಂದು ಪರಿಗಣಿಸಿಕೊಳ್ಳದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದರಿಂದ ದೂರವಾಗಿರು. ನೀನು ಹೀಗೆ ಮಾಡುವುದಾದರೆ, ಅದು ನಿನ್ನ ದೇಹಕ್ಕೆ ಒಳ್ಳೆಯ ಆರೋಗ್ಯವನ್ನೂ ನಿನ್ನ ಎಲುಬುಗಳಿಗೆ ಹೊಸ ಶಕ್ತಿಯನ್ನೂ ಕೊಡುವುದು.

ನಿನಗೆ ಬರುವ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು. 10 ಆಗ ನಿನ್ನ ಕಣಜಗಳು ದವಸಧಾನ್ಯಗಳಿಂದ ತುಂಬಿರುತ್ತವೆ. ನಿನ್ನ ದ್ರಾಕ್ಷಾರಸದ ತೊಟ್ಟಿಗಳು ತುಂಬಿತುಳುಕುತ್ತವೆ.

11 ನನ್ನ ಮಗನೇ, ಯೆಹೋವನು ನಿನ್ನನ್ನು ಶಿಕ್ಷಿಸುವಾಗ ಕೋಪಗೊಳ್ಳಬೇಡ. ಆತನು ಗದರಿಸುವಾಗ ಬೇಸರಪಡಬೇಡ. 12 ತಂದೆಯು ತನ್ನ ಮಗನನ್ನು ಗದರಿಸುವಂತೆಯೇ ಯೆಹೋವನು ತಾನು ಪ್ರೀತಿಸುವವರನ್ನು ಶಿಕ್ಷಿಸುತ್ತಾನೆ.

13 ಜ್ಞಾನವನ್ನು ಕಂಡುಕೊಂಡು ವಿವೇಕವನ್ನು ಸಂಪಾದಿಸಿಕೊಳ್ಳುವವನೇ ಭಾಗ್ಯವಂತನು. 14 ಜ್ಞಾನವು ಬೆಳ್ಳಿಗಿಂತಲೂ ಲಾಭದಾಯಕ. ಅದರ ಆದಾಯವು ಬಂಗಾರಕ್ಕಿಂತಲೂ ಅಧಿಕ. 15 ಜ್ಞಾನವು ರತ್ನಕ್ಕಿಂತಲೂ ಅಮೂಲ್ಯವಾದದ್ದು. ನಿನ್ನ ಇಷ್ಟ ವಸ್ತುಗಳಲ್ಲಿ ಯಾವುದೂ ಅದಕ್ಕೆ ಸಮವಿಲ್ಲ.

16 ಜ್ಞಾನವೆಂಬಾಕೆಯ ಬಲಗೈಯಿಂದ ದೀರ್ಘಾಯುಷ್ಯವೂ ಎಡಗೈಯಿಂದ ಐಶ್ವರ್ಯವೂ ಘನತೆಯೂ ಬರುವವು. 17 ಜ್ಞಾನವು ನಿನ್ನ ಜೀವನವನ್ನು ಸುಖಕರವನ್ನಾಗಿ ಮಾಡುತ್ತದೆ; ಸಮಾಧಾನವನ್ನು ಬರಮಾಡುತ್ತದೆ. 18 ಜ್ಞಾನವು ತನ್ನನ್ನು ಅವಲಂಬಿಸಿಕೊಳ್ಳುವವರಿಗೆ ಜೀವದಾಯಕ ಮರದಂತಿದೆ. ಅದನ್ನು ಹೊಂದಿರುವವರು ಧನ್ಯರಾಗಿದ್ದಾರೆ.

19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸೃಷ್ಟಿಸಿದನು. ಆತನು ವಿವೇಕದ ಮೂಲಕ ಆಕಾಶವನ್ನು ಸೃಷ್ಟಿಸಿದನು. 20 ಯೆಹೋವನು ತನ್ನ ತಿಳುವಳಿಕೆಯಿಂದ ಸಮುದ್ರಗಳನ್ನು ವಿಭಜಿಸಿದನು. ಮೋಡವು ಮಳೆಸುರಿಸುವುದಕ್ಕೆ ಆತನ ತಿಳುವಳಿಕೆಯೇ ಕಾರಣ.

21 ನನ್ನ ಮಗನೇ, ಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ. ನಿನ್ನ ದೃಷ್ಟಿಯು ಅವುಗಳ ಮೇಲೇ ಇರಲಿ. 22 ಜ್ಞಾನವಿವೇಕಗಳು ನಿನಗೆ ಜೀವವನ್ನೂ ನಿನ್ನ ಜೀವಿತಕ್ಕೆ ಸೌಂದರ್ಯವನ್ನೂ ನೀಡುತ್ತವೆ. 23 ಆಗ ನೀನು ಎಡವಿಬೀಳದೆ ಸುರಕ್ಷಿತವಾಗಿ ನಡೆಯುವೆ. 24 ಆಗ ನೀನು ನಿರ್ಭಯದಿಂದ ಮಲಗಿಕೊಂಡು ಸುಖವಾಗಿ ನಿದ್ರಿಸುವೆ. 25 ದುಷ್ಟರ ಮೇಲೆ ಇದ್ದಕ್ಕಿದ್ದಂತೆ ಬರುವ ಅಪಾಯಕ್ಕಾಗಲಿ ನಾಶನಕ್ಕಾಗಲಿ ಹೆದರಿಕೊಳ್ಳಬೇಡ. 26 ಯೆಹೋವನು ನಿನ್ನೊಂದಿಗಿದ್ದಾನೆ. ನೀನು ಬಲೆಗೆ ಸಿಕ್ಕಿಬೀಳದಂತೆ ಆತನು ನಿನ್ನನ್ನು ಕಾಪಾಡುತ್ತಾನೆ.

27 ನಿನಗೆ ಸಾಧ್ಯವಾದಾಗಲೆಲ್ಲಾ ಉಪಕಾರಮಾಡು. 28 ನಿನ್ನ ನೆರೆಯವನಿಗೆ ಕೊಡತಕ್ಕದ್ದು ನಿನ್ನಲ್ಲಿರುವಾಗ, “ನಾಳೆ ಬಾ, ಕೊಡುತ್ತೇನೆ” ಎಂದು ಹೇಳಬೇಡ.

29 ನಿನ್ನ ನೆರೆಯವನಿಗೆ ಕೇಡನ್ನು ಕಲ್ಪಿಸಬೇಡ. ನಿನ್ನ ಸುರಕ್ಷತೆಗಾಗಿಯೇ ನಿನ್ನ ನೆರೆಯವನ ಸಮೀಪದಲ್ಲಿ ವಾಸಿಸುತ್ತಿದ್ದೀಯಲ್ಲಾ!

30 ನಿನಗೆ ಕೇಡನ್ನು ಮಾಡಿಲ್ಲದಿರುವವನನ್ನು ನಿಷ್ಕಾರಣವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯಬೇಡ.

31 ಬಲಾತ್ಕಾರಿಯನ್ನು ಕಂಡು ಹೊಟ್ಟೆಕಿಚ್ಚುಪಡಬೇಡ; ಅವನ ನಡತೆಯನ್ನು ಅನುಸರಿಸಬೇಡ. 32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.

33 ದುಷ್ಟರ ಮನೆಯ ಮೇಲೆ ಯೆಹೋವನ ಶಾಪವಿರುವುದು; ಆದರೆ ನೀತಿವಂತರ ಮನೆಯ ಮೇಲೆ ಆತನ ಆಶೀರ್ವಾದವಿರುವುದು.

34 ಯಾರು ಗರ್ವದಿಂದ ಬೇರೆಯವರನ್ನು ಗೇಲಿಮಾಡುತ್ತಾರೋ ಅವರನ್ನು ಯೆಹೋವನೂ ಗೇಲಿಮಾಡುತ್ತಾನೆ. ದೀನರಿಗಾದರೋ ಆತನ ಕರುಣೆ ದೊರೆಯುವುದು.

35 ಜ್ಞಾನಿಗಳು ಸನ್ಮಾನ ಹೊಂದುವರು; ಮೂಢರಿಗೆ ಅವಮಾನವಾಗುವುದು.

ಜ್ಞಾನ ವಿವೇಕಗಳ ಪ್ರಾಮುಖ್ಯತೆ

ಮಕ್ಕಳೇ, ನಿಮ್ಮ ತಂದೆಯ ಉಪದೇಶಗಳಿಗೆ ಕಿವಿಗೊಡಿ, ಗಮನವಿಟ್ಟು ಅರ್ಥಮಾಡಿಕೊಳ್ಳಿರಿ. ನನ್ನ ಉಪದೇಶಗಳು ಸದುಪದೇಶಗಳಾಗಿರುವುದರಿಂದ ಅವುಗಳನ್ನು ಎಂದಿಗೂ ಮರೆಯಬೇಡಿ.

ನಾನು ನನ್ನ ತಂದೆಗೆ ಚಿಕ್ಕ ಮಗನಾಗಿದ್ದೆ. ನನ್ನ ತಾಯಿಗೆ ನಾನೊಬ್ಬನೇ ಮಗನು. ನನ್ನ ತಂದೆ ನನಗೆ ಉಪದೇಶ ಮಾಡಿದ್ದೇನೆಂದರೆ: “ನನ್ನ ಮಾತುಗಳನ್ನು ನೆನಪುಮಾಡಿಕೊ; ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಬದುಕುವೆ. ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು. ಜ್ಞಾನವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಕೊಳ್ಳಬೇಡ. ಆಗ ಅದು ನಿನ್ನನ್ನು ಕಾಪಾಡುವುದು. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಕಾಪಾಡುವುದು.”

“ಜ್ಞಾನವನ್ನು ಪಡೆಯಲು ನೀನು ನಿರ್ಧರಿಸಿದಾಗಲೇ ಜ್ಞಾನವು ನಿನ್ನಲ್ಲಿ ಆರಂಭವಾಗುತ್ತದೆ. ಆದ್ದರಿಂದ ವಿವೇಕವನ್ನು ಪಡೆಯಲು ನಿನಗಿರುವದನ್ನೆಲ್ಲಾ ಉಪಯೋಗಿಸು. ಆಗ ನೀನು ವಿವೇಕಿಯಾಗುವೆ. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಉನ್ನತಸ್ಥಾನಕ್ಕೆ ತರುವುದು. ಜ್ಞಾನವನ್ನು ಅಪ್ಪಿಕೊ; ಆಗ ಅದು ನಿನಗೆ ಸನ್ಮಾನವನ್ನು ತರುವುದು. ಅದು ನಿನಗೆ ಅಂದವಾದ ಪುಷ್ಪಮಾಲೆಯಂತೆಯೂ ಸುಂದರವಾದ ಕಿರೀಟದಂತೆಯೂ ಇರುವುದು.”

10 ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ. 11 ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು. 12 ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ. 13 ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ!

14 ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ. 15 ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು. 16 ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು. 17 ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ.

18 ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು. 19 ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.

20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೋ. 22 ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ. 23 ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.

24 ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನು ಹೇಳದಿರು. 25 ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು. 26 ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು. 27 ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು.

ವ್ಯಭಿಚಾರಕ್ಕೆ ದೂರವಾಗಿರು

ನನ್ನ ಮಗನೇ, ನನ್ನ ಜ್ಞಾನೋಪದೇಶವನ್ನು ಕೇಳು. ನನ್ನ ವಿವೇಕದ ಮಾತುಗಳಿಗೆ ಗಮನಕೊಡು. ಆಗ ನೀನು ಯೋಗ್ಯವಾಗಿ ನಡೆದುಕೊಳ್ಳುವೆ; ತಿಳುವಳಿಕೆಯಿಂದ ಮಾತಾಡುವೆ. ಮತ್ತೊಬ್ಬನ ಹೆಂಡತಿಯ ಮಾತುಗಳು ಜೇನಿನಂತೆ ಸಿಹಿಯಾಗಿವೆ; ಎಣ್ಣೆಗಿಂತ ನಯವಾಗಿವೆ. ಆದರೆ ಕೊನೆಗೆ ಆಕೆಯು ವಿಷದಂತೆ ಕಹಿಯಾಗುವಳು; ಖಡ್ಗದಂತೆ ತೀಕ್ಷ್ಣವಾಗುವಳು. ಆಕೆಯ ಹೆಜ್ಜೆಗಳು ಮರಣದ ಕಡೆಗೆ ಹೋಗುತ್ತವೆ. ಆಕೆ ನಿನ್ನನ್ನು ನೇರವಾಗಿ ಪಾತಾಳಕ್ಕೆ ನಡೆಸುತ್ತಾಳೆ! ಆಕೆಯನ್ನು ಹಿಂಬಾಲಿಸಬೇಡ! ಆಕೆ ನೀತಿಮಾರ್ಗವನ್ನು ಬಿಟ್ಟುಹೋಗಿದ್ದಾಳೆ; ಅದು ಆಕೆಗೆ ಗೊತ್ತೇ ಇಲ್ಲ. ಎಚ್ಚರಿಕೆಯಿಂದಿರು! ಜೀವ ಮಾರ್ಗವನ್ನು ಹಿಂಬಾಲಿಸು!

ಹೀಗಿರಲು, ನನ್ನ ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಮರೆಯಬೇಡ. ವ್ಯಭಿಚಾರಿಣಿಯಿಂದ ದೂರವಾಗಿರು. ಅವಳ ಮನೆಯ ಬಾಗಿಲ ಸಮೀಪಕ್ಕೂ ಹೋಗಬೇಡ. ಒಂದುವೇಳೆ ನೀನು ಹೋದರೆ, ನಿನ್ನ ಮೇಲೆ ಜನರಿಗಿರುವ ಗೌರವವನ್ನು ಕಳೆದುಕೊಳ್ಳುವಿ; ಕ್ರೂರಿಗಳಿಂದ ಯೌವನದಲ್ಲಿಯೇ ಸಾವಿಗೀಡಾಗುವಿ. 10 ನಿನಗೆ ಗೊತ್ತಿಲ್ಲದವರು ನಿನ್ನ ಐಶ್ವರ್ಯವನ್ನೆಲ್ಲಾ ತೆಗೆದುಕೊಳ್ಳುವರು; ನೀನು ದುಡಿದು ಸಂಪಾದಿಸಿದ್ದನ್ನು ಬೇರೆಯವರು ಪಡೆದುಕೊಳ್ಳುವರು. 11 ಕೊನೆಯಲ್ಲಿ, ನಿನ್ನ ಆರೋಗ್ಯವೆಲ್ಲಾ ಕೆಟ್ಟುಹೋಗಿ ನಿನ್ನಲ್ಲಿರುವುದನ್ನೆಲ್ಲಾ ಕಳೆದುಕೊಂಡು ನೀನು ಗೋಳಾಡುವಿ. 12-13 ಆಗ ನೀನು, “ನಾನೇಕೆ ನನ್ನ ತಂದೆತಾಯಿಗಳ ಮಾತನ್ನು ಕೇಳಲಿಲ್ಲ? ನಾನೇಕೆ ನನ್ನ ಉಪದೇಶಕರ ಮಾತಿಗೆ ಕಿವಿಗೊಡಲಿಲ್ಲ? ನಾನು ಅವರ ಸದುಪದೇಶವನ್ನು ದ್ವೇಷಿಸಿದ್ದರಿಂದಲೂ ಅವರ ಬುದ್ಧಿಮಾತನ್ನು ತಳ್ಳಿಬಿಟ್ಟಿದ್ದರಿಂದಲೂ 14 ನಾನು ಜನರೆಲ್ಲರ ಎದುರಿನಲ್ಲಿ ನಾಚಿಕೆಗೀಡಾಗಿದ್ದೇನೆ” ಎಂದು ಹೇಳುವಿ.

15 ನಿನ್ನ ಸ್ವಂತ ಹೆಂಡತಿಗೆ ನಂಬಿಗಸ್ತನಾಗಿರು; ನಿನ್ನ ಪ್ರೀತಿಯು ಆಕೆಗೆ ಮಾತ್ರ ಸಲ್ಲಲಿ. 16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ. 17 ನಿನ್ನ ಮಕ್ಕಳು ನಿನ್ನವರೇ ಆಗಿರಲಿ; ಪರರು ನಿನ್ನೊಂದಿಗೆ ಪಾಲುಗಾರರಾಗದಿರಲಿ. 18 ಆದ್ದರಿಂದ ಯೌವನಪ್ರಾಯದಲ್ಲಿ ನೀನು ಮದುವೆಮಾಡಿಕೊಂಡ ಸ್ತ್ರೀಯೊಡನೆ ಸಂತೋಷಿಸು. 19 ಆಕೆ ಸುಂದರವಾದ ಜಿಂಕೆಯಂತೆಯೂ ಅಂದವಾದ ಕಾಡುಮೇಕೆಯಂತೆಯೂ ಇದ್ದಾಳೆ. ಆಕೆಯ ಸ್ತನಗಳು ನಿನ್ನನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಿ. ಆಕೆಯ ಪ್ರೀತಿಯಲ್ಲೇ ಲೀನವಾಗಿರು. 20 ಪರಸ್ತ್ರೀಯಲ್ಲಿ ಮೋಹಗೊಂಡು ಆಕೆಯನ್ನು ಅಪ್ಪಿಕೊಳ್ಳಬೇಡ.

21 ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ; ಯೆಹೋವನು ಅವುಗಳನ್ನು ಪರೀಕ್ಷಿಸುತ್ತಾನೆ. 22 ಕೆಡುಕನ ದುಷ್ಕೃತ್ಯಗಳು ಅವನನ್ನೇ ಹಿಡಿಯುತ್ತವೆ. ಅವನ ಪಾಪಗಳು ಹಗ್ಗದಂತೆ ಅವನನ್ನೇ ಬಂಧಿಸುತ್ತವೆ. 23 ಅವನು ಬುದ್ಧಿವಾದವನ್ನು ತಿರಸ್ಕರಿಸಿದ್ದರಿಂದ ಸಾಯುವನು; ತನ್ನ ಅತಿಮೂರ್ಖತನದಿಂದ ದಾರಿತಪ್ಪುವನು.

2 ಕೊರಿಂಥದವರಿಗೆ 1

ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನಾನು ದೇವರ ಚಿತ್ತಾನುಸಾರ ಅಪೊಸ್ತಲನಾಗಿದ್ದೇನೆ. ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಇಡೀ ಅಖಾಯ ಸೀಮೆಯಲ್ಲಿರುವ ದೇವಜನರೆಲ್ಲರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ತಿಮೊಥೆಯನೊಡನೆ ಸೇರಿ ಬರೆಯುತ್ತಿದ್ದೇನೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ

ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ದೇವರು ಕನಿಕರದಿಂದ ತುಂಬಿರುವ ತಂದೆಯಾಗಿದ್ದಾನೆ. ಆತನು ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆ. ನಮಗೆ ಸಂಕಷ್ಟವಿರುವಾಗಲೆಲ್ಲಾ ಆತನು ನಮ್ಮನ್ನು ಸಂತೈಸುತ್ತಾನೆ; ಸಂಕಷ್ಟಗಳಲ್ಲಿರುವ ಇತರ ಜನರನ್ನು ಸಂತೈಸಲು ಇದರ ಮೂಲಕ ನಾವು ಸಹ ಶಕ್ತರಾಗುತ್ತೇವೆ. ದೇವರು ನಮ್ಮನ್ನು ಸಂತೈಸುವಂತೆಯೇ ನಾವು ಸಹ ಅವರನ್ನು ಸಂತೈಸಬಲ್ಲವರಾಗುತ್ತೇವೆ. ನಾವು ಕ್ರಿಸ್ತನ ಅನೇಕ ಬಾಧೆಗಳಲ್ಲಿ ಪಾಲುಗಾರರಾಗುತ್ತೇವೆ. ಅದೇ ರೀತಿಯಲ್ಲಿ, ಕ್ರಿಸ್ತನ ಮೂಲಕ ಹೇರಳವಾದ ಆದರಣೆಯು ನಮಗೆ ಬರುತ್ತದೆ. ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.

ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. ನಿಜವಾಗಿಯೂ ನಾವು ಸಾಯುತ್ತೇವೆಂದು ನಮ್ಮ ಹೃದಯಗಳಲ್ಲಿ ನಂಬಿಕೊಂಡೆವು. ನಾವು ನಮ್ಮಲ್ಲಿ ಭರವಸೆ ಇಡದಂತೆಯೂ ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡಬೇಕೆಂತಲೂ ಇದಾಯಿತು. 10 ಮರಣದ ಈ ಮಹಾ ಅಪಾಯಗಳಿಂದ ದೇವರು ನಮ್ಮನ್ನು ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಆತನಲ್ಲಿ ಭರವಸೆ ಇಟ್ಟಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. 11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.

ಪೌಲನ ಯೋಜನೆಗಳಲ್ಲಿ ಬದಲಾವಣೆ

12 ನಾವು ಈ ವಿಷಯದಲ್ಲಿ ಹೆಮ್ಮೆಪಡುತ್ತೇವೆ ಮತ್ತು ಇದು ಸತ್ಯವೆಂದು ನಾನು ಹೃದಯಪೂರ್ವಕವಾಗಿ ಹೇಳಬಲ್ಲೆನು. ಅದೇನೆಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಡಲ್ಪಟ್ಟ ಯಥಾರ್ಥವಾದ ಮತ್ತು ಪರಿಶುದ್ಧವಾದ ಹೃದಯದಿಂದ ಮಾಡಿದೆವು. ನಾವು ನಿಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳಲ್ಲಂತೂ ಇದು ಮತ್ತಷ್ಟು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಪೆಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ. 13-14 ನೀವು ಓದಿ ಅರ್ಥಮಾಡಿಕೊಳ್ಳಬಲ್ಲ ಸಂಗತಿಗಳನ್ನು ಮಾತ್ರ ನಾನು ನಿಮಗೆ ಬರೆಯುತ್ತೇನೆ. ನಮ್ಮ ವಿಷಯವಾದ ಕೆಲವು ಸಂಗತಿಗಳನ್ನು ನೀವು ಈಗಾಗಲೇ ಸ್ಪಲ್ಪ ಅರ್ಥಮಾಡಿಕೊಂಡಂತೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೀರೆಂಬ ನಿರೀಕ್ಷೆ ನನಗಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಮ್ಮೆಪಡುವಂತೆ ನೀವೂ ನಮ್ಮ ವಿಷಯದಲ್ಲಿ ಹೆಮ್ಮೆಪಡಲಾಗುವಂತೆ ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ.

15 ನಾನು ಈ ಎಲ್ಲಾ ವಿಷಯಗಳಲ್ಲಿ ಬಹು ಭರವಸೆ ಉಳ್ಳವನಾಗಿದ್ದೆನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಎರಡು ಸಲ ಆಶೀರ್ವಾದವಾಗಬಹುದಿತ್ತು. 16 ನಾನು ಮಕೆದೋನಿಯಕ್ಕೆ ಹೋಗುವಾಗಲೂ ಬಳಿಕ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಜುದೇಯಕ್ಕೆ ಪ್ರವಾಸ ಕೈಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ. 17 ನಾನು ಆ ಯೋಜನೆಗಳನ್ನು ಮಾಡಿದಾಗ ನಿಮ್ಮ ಬಳಿಗೆ ಬರುವ ಉದ್ದೇಶ ನಿಜವಾಗಿಯೂ ನನಗಿರಲಿಲ್ಲವೆಂದು ಯೋಚಿಸುತ್ತೀರಾ? ನಾನು ಪ್ರಾಪಂಚಿಕರಂತೆ ಯೋಜನೆಗಳನ್ನು ಮಾಡಿದೆನೋ? ಅವರಾದರೋ ಯೋಜನೆಗಳನ್ನು ಮಾಡುವಾಗ “ಹೌದು, ಹೌದು” ಎಂತಲೂ ಅದೇ ಸಮಯದಲ್ಲಿ “ಇಲ್ಲ, ಇಲ್ಲ” ಎಂತಲೂ ಹೇಳುತ್ತಾರೆ.

18 ನೀವು ದೇವರನ್ನು ನಂಬಬಲ್ಲವರಾಗಿದ್ದರೆ, ನಾವು ನಿಮಗೆ ಏಕಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಲಿಲ್ಲವೆಂದು ನೀವು ನಂಬಬಲ್ಲಿರಿ. 19 ಸೀಲನು, ತಿಮೊಥೆಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೇಸುಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ರೀತಿಯಲ್ಲಿರಲಿಲ್ಲ. ಕ್ರಿಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ. 20 ದೇವರು ಮಾಡಿದ ವಾಗ್ದಾನಗಳಿಗೆಲ್ಲ “ಹೌದು” ಎಂಬ ಉತ್ತರ ಕ್ರಿಸ್ತನೇ ಆಗಿದ್ದಾನೆ. ಆದ್ದರಿಂದಲೇ ನಾವು ದೇವರ ಮಹಿಮೆಗಾಗಿ ಕ್ರಿಸ್ತನ ಮೂಲಕ “ಆಮೆನ್” ಎಂದು ಹೇಳುತ್ತೇವೆ. 21 ನಿಮ್ಮನ್ನು ಮತ್ತು ನಮ್ಮನ್ನು ಕ್ರಿಸ್ತನಲ್ಲಿ ದೃಢಗೊಳಿಸುವಾತನು ದೇವರೇ. ದೇವರು ತನ್ನ ವಿಶೇಷವಾದ ಆಶೀರ್ವಾದವನ್ನು ನಮಗೆ ಕೊಟ್ಟಿದ್ದಾನೆ. 22 ನಾವು ಆತನವರೆಂಬುದನ್ನು ತೋರಿಸುವುದಕ್ಕಾಗಿ ಆತನು ನಮ್ಮ ಮೇಲೆ ಮುದ್ರೆಯನ್ನು ಹಾಕಿದ್ದಾನೆ. ಆತನು ತನ್ನ ಪವಿತ್ರಾತ್ಮನನ್ನು ನಮ್ಮ ಹೃದಯಗಳಲ್ಲಿ ನೆಲೆಗೊಳಿಸಿದ್ದಾನೆ. ಆತನು ನಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಪವಿತ್ರಾತ್ಮನೇ ನಮಗೆ ಆಧಾರವಾಗಿದ್ದಾನೆ.

23 ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿಸುವುದಕ್ಕಾಗಲಿ ನನಗೆ ಇಷ್ಟವಿರಲಿಲ್ಲ. ಆದಕಾರಣ ನಾನು ನಿಮ್ಮ ಬಳಿಗೆ ಹಿಂತಿರುಗಿ ಬರಲಿಲ್ಲ. ಇದು ಸತ್ಯ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಂದು ನಾನು ಹೇಳುತ್ತಿಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿದ್ದೀರಿ. ಆದರೆ ನಾವು ನಿಮ್ಮ ಸಂತೋಷಕ್ಕಾಗಿ ನಿಮ್ಮ ಜೊತೆಕೆಲಸದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International