Old/New Testament
10 ಸತ್ತ ನೊಣಗಳಿಂದ ಉತ್ತಮವಾದ ಪರಿಮಳತೈಲವು ದುರ್ವಾಸನೆ ಬೀರುವುದು. ಅದೇರೀತಿಯಲ್ಲಿ ಚಿಕ್ಕ ಮೂಢತನವು ಬಹುಜ್ಞಾನವನ್ನೂ ಸನ್ಮಾನವನ್ನೂ ಹಾಳುಮಾಡಬಲ್ಲದು.
2 ಜ್ಞಾನಿಯ ಆಲೋಚನೆಗಳು ಅವನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ಆದರೆ ಮೂಢನ ಆಲೋಚನೆಗಳು ಅವನನ್ನು ತಪ್ಪಾದ ದಾರಿಯಲ್ಲಿ ನಡೆಸುತ್ತವೆ. 3 ಮೂಢನು ತನ್ನ ಮೂಢತನವನ್ನು ದಾರಿಯಲ್ಲಿ ನಡೆದುಹೋಗುತ್ತಿರುವಾಗಲೂ ತೋರಿಸುವನು. ಅವನು ತನ್ನ ವಿವೇಕಶೂನ್ಯವನ್ನು ಎಲ್ಲರಿಗೂ ಪ್ರಕಟಪಡಿಸುವನು.
4 ನಿನ್ನ ಯಜಮಾನನು ನಿನ್ನ ಮೇಲೆ ಕೋಪಗೊಂಡ ಮಾತ್ರಕ್ಕೆ ನಿನ್ನ ಉದ್ಯೋಗವನ್ನು ಬಿಡಬೇಡ. ನೀನು ತಾಳ್ಮೆಯಿಂದ ಸಹಾಯಕನಾಗಿದ್ದರೆ ದೊಡ್ಡ ತಪ್ಪುಗಳನ್ನು ಸಹ ನೀನು ಸರಿಪಡಿಸಲು ಸಾಧ್ಯ.
5 ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ನೋಡಿದ್ದೇನೆ. ಅದು ಅಧಿಪತಿಗಳು ಮಾಡುವ ತಪ್ಪಿನಂತೆ ಇದೆ. 6 ಘನವಂತರಿಗೆ ಹೀನವಾದ ಸ್ಥಾನ ದೊರೆಯುವುದು; ಮೂಢರಿಗೆ ಮುಖ್ಯವಾದ ಪದವಿಗಳು ದೊರೆಯುವವು. 7 ಸೇವಕರಾಗಿರಬೇಕಿದ್ದವರು ಕುದುರೆಸವಾರಿ ಮಾಡುವುದನ್ನೂ ಅಧಿಪತಿಗಳಾಗಬೇಕಿದ್ದವರು ಸೇವಕರಂತೆ ನಡೆದುಹೋಗುವುದನ್ನೂ ನಾನು ನೋಡಿದ್ದೇನೆ.
ಪ್ರತಿಯೊಂದು ಉದ್ಯೋಗವೂ ಅಪಾಯಕರ
8 ಗುಂಡಿತೋಡುವವನು ತಾನೇ ಅದರಲ್ಲಿ ಬೀಳಬಹುದು. ಗೋಡೆಯನ್ನು ಹೊಡೆದು ಉರುಳಿಸುವವನನ್ನು ಹಾವು ಕಚ್ಚುವುದು. 9 ಬಂಡೆಗಳನ್ನು ಉರುಳಿಸುವವನಿಗೆ ನೋವಾಗುವುದು; ಮರಗಳನ್ನು ಕಡಿಯುವವನಿಗೆ ಕೇಡಾಗುವುದು.
10 ಮೊಂಡಕತ್ತಿಯನ್ನು ಹರಿತಗೊಳಿಸಿದರೆ ಕೆಲಸ ಸುಲಭವಾಗುವಂತೆಯೇ ಜ್ಞಾನವು ಯಾವ ಕೆಲಸವನ್ನಾದರೂ ಸುಲಭಗೊಳಿಸಬಲ್ಲದು. 11 ಹಾವುಗಳನ್ನು ಹಿಡಿಯಬಲ್ಲವನು ಇಲ್ಲದಿರುವಾಗ ಹಾವು ಬೇರೊಬ್ಬನನ್ನು ಕಚ್ಚಿದರೆ ಹಾವು ಹಿಡಿಯುವವನಿಂದ ಪ್ರಯೋಜನವೇನು? ಜ್ಞಾನವು ಸಹ ಹಾಗೆಯೇ.
12 ಜ್ಞಾನಿಯ ಮಾತುಗಳು ಅವನಿಗೆ ಘನತೆಯನ್ನು ತರುತ್ತವೆ;
ಮೂಢನ ಮಾತುಗಳು ಅವನಿಗೆ ನಾಶನವನ್ನು ತರುತ್ತವೆ.
13 ಮೂಢನ ಮಾತು ಮೂರ್ಖತನದೊಡನೆ ಆರಂಭಗೊಂಡು ದುಷ್ಟಕರವಾದ ಹುಚ್ಚುತನದೊಡನೆ ಕೊನೆಗೊಳ್ಳುವುದು. 14 ಮೂಢನು ತಾನು ಮಾಡುವಂಥದ್ದರ ಬಗ್ಗೆ ಯಾವಾಗಲೂ ಮಾತಾಡುವನು. ಆದರೆ ಮುಂದೆ ಏನಾಗುವುದೋ ಯಾರಿಗೂ ತಿಳಿಯದು. ಮುಂದೆ ಸಂಭವಿಸುವುದನ್ನು ಯಾರೂ ಹೇಳಲಾರರು.
15 ಮೂಢನು ತನ್ನ ಮನೆದಾರಿಯನ್ನು ತಿಳಿದುಕೊಳ್ಳುವಷ್ಟು ಜಾಣನಲ್ಲ,
ಆದ್ದರಿಂದ ಅವನು ತನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕು.
ದುಡಿಮೆಯ ಮೌಲ್ಯ
16 ರಾಜನು ಮಗುವಿನಂತೆ ಇದ್ದರೆ ದೇಶವು ಹಾಳಾಗುವುದು. ಅಧಿಪತಿಗಳು ಮುಂಜಾನೆಯಲ್ಲಿಯೇ ಔತಣ ಮಾಡಿದರೆ ದೇಶವು ಹಾಳಾಗುವುದು. 17 ಆದರೆ ರಾಜನು ಒಳ್ಳೆಯ ಕುಟುಂಬದಿಂದ ಬಂದವನಾಗಿದ್ದರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು; ಅಧಿಪತಿಗಳು ತಿನ್ನುವುದನ್ನೂ ಕುಡಿಯುವುದನ್ನೂ ಹತೋಟಿಯಲ್ಲಿಟ್ಟುಕೊಂಡರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು. ಅಧಿಪತಿಗಳು ತಿನ್ನುವುದೂ ಕುಡಿಯುವುದೂ ಬಲಹೊಂದುವುದಕ್ಕಾಗಿಯೇ ಹೊರತು ಮತ್ತರಾಗುವುದಕ್ಕಾಗಿಯಲ್ಲ.
18 ಒಬ್ಬನು ಕೆಲಸಮಾಡಲಾರದಷ್ಟು ತುಂಬ ಸೋಮಾರಿಯಾಗಿದ್ದರೆ,
ಅವನ ಮನೆಯು ಸೋರಲಾರಂಭಿಸುವುದು; ಅದರ ಮೇಲ್ಛಾವಣಿಗೆಯು ಬೀಳತೊಡಗುವುದು.
19 ಊಟವು ಸಂತೋಷಗೊಳಿಸುವುದು; ದ್ರಾಕ್ಷಾರಸವು ಉಲ್ಲಾಸಗೊಳಿಸುವುದು; ಹಣವು ಅನೇಕ ಸಮಸ್ಯೆಗಳನ್ನು ಬಗೆಹರಿಸುವುದು.
ಹರಟೆ ಮಾತು
20 ರಾಜನನ್ನು ಮನಸ್ಸಿನಲ್ಲಿಯೂ ದೂಷಿಸಬೇಡ; ನಿನ್ನ ಮನೆಯಲ್ಲಿ ಒಬ್ಬಂಟಿಗನಾಗಿರುವಾಗಲೂ ಐಶ್ವರ್ಯವಂತರನ್ನು ದೂಷಿಸಬೇಡ. ಯಾಕೆಂದರೆ ಚಿಕ್ಕ ಪಕ್ಷಿಯೊಂದು ಹಾರಿಹೋಗಿ, ನೀನು ಹೇಳಿದ ಪ್ರತಿಯೊಂದನ್ನು ಅವರಿಗೆ ಹೇಳಬಹುದು.
ಭವಿಷ್ಯತ್ತನ್ನು ಧೈರ್ಯವಾಗಿ ಎದುರಿಸಿ
11 ನೀನು ಹೋದಲ್ಲೆಲ್ಲಾ ಒಳ್ಳೆಯದನ್ನೇ ಮಾಡು. ಸ್ವಲ್ಪಕಾಲದ ಮೇಲೆ, ನಿನ್ನ ಸತ್ಕ್ರಿಯೆಗಳ ಫಲವನ್ನು ಹೊಂದಿಕೊಳ್ಳುವೆ.
2 ನಿನ್ನಲ್ಲಿರುವುದನ್ನೆಲ್ಲ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸು; ಲೋಕಕ್ಕೆ ಮುಂದೆ ಸಂಭವಿಸುವ ಕೇಡು ನಿನಗೆ ತಿಳಿಯದು.
3 ಮೋಡಗಳು ನೀರಿನಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತವೆ. ಮರವು ದಕ್ಷಿಣಕ್ಕಾಗಲಿ ಉತ್ತರಕ್ಕಾಗಲಿ ಬಿದ್ದರೆ, ಅದು ತಾನು ಬಿದ್ದಲ್ಲಿಯೇ ಇರುವುದು.
4 ಒಳ್ಳೆಯ ಹವಾಮಾನಕ್ಕಾಗಿ ಕಾದುಕೊಂಡಿರುವವನು ಬೀಜ ಬಿತ್ತುವುದಿಲ್ಲ; ಮಳೆ ಬರಬಹುದೆಂದು ಮೋಡವನ್ನು ನೋಡುತ್ತಿರುವವನು ಪೈರು ಕೊಯ್ಯನು.
5 ಗಾಳಿಯ ಬೀಸುವಿಕೆಯನ್ನೂ ತನ್ನ ತಾಯಿಯ ಗರ್ಭದಲ್ಲಿ ಮಗುವಿನ ಎಲುಬು ಬೆಳೆಯುವ ರೀತಿಯನ್ನೂ ನೀನು ಹೇಗೆ ತಿಳಿದಿಲ್ಲವೋ ಅದೇರೀತಿಯಲ್ಲಿ ಸೃಷ್ಟಿಕರ್ತನ ಕಾರ್ಯಗಳನ್ನು ನೀನು ಅರಿತುಕೊಳ್ಳಲಾರೆ.
6 ಆದ್ದರಿಂದ ಮುಂಜಾನೆಯಲ್ಲಿ ಬೀಜಬಿತ್ತಲು ಆರಂಭಿಸು; ಸಾಯಂಕಾಲದ ತನಕ ಕೆಲಸಮಾಡುವುದನ್ನು ನಿಲ್ಲಿಸಬೇಡ, ಯಾಕೆಂದರೆ ಇದು ಸಫಲವಾಗುವುದೋ ಅದು ಸಫಲವಾಗುವುದೋ ಒಂದುವೇಳೆ ಎರಡೂ ಸಫಲವಾಗುವುದೋ ನಿನಗೆ ತಿಳಿಯದು.
7 ಬೆಳಕು ಹಿತ! ಸೂರ್ಯನ ಬೆಳಕು ನೋಡಲು ಚೆಂದ. 8 ನಿನ್ನ ಜೀವನದ ಪ್ರತಿಯೊಂದು ದಿನದಲ್ಲಿಯೂ ಆನಂದಿಸು. ನೀನು ಎಷ್ಟುಕಾಲ ಬದುಕುವೆ ಎಂಬುದು ಮುಖ್ಯವಲ್ಲ. ಆದರೆ ಕತ್ತಲೆಯ ದಿನಗಳು ಬಹಳವೆಂದು ಜ್ಞಾಪಕದಲ್ಲಿಟ್ಟುಕೊ. ಮುಂದೆ ಸಂಭವಿಸುವುದೆಲ್ಲಾ ವ್ಯರ್ಥವೇ.
ಯೌವನದಲ್ಲಿ ದೇವರ ಸೇವೆ ಮಾಡಿ
9 ಆದ್ದರಿಂದ ಯೌವನಸ್ಥರೇ, ನಿಮ್ಮ ಯೌವನ ಕಾಲದಲ್ಲಿ ಆನಂದಿಸಿರಿ! ಸಂತೋಷವಾಗಿರಿ! ನಿಮ್ಮ ಹೃದಯವು ನಿಮ್ಮನ್ನು ನಡೆಸಿದಂತೆ ಮಾಡಿರಿ. ನೀವು ಬಯಸುವುದನ್ನೆಲ್ಲಾ ಮಾಡಿರಿ. ಆದರೆ ನೀವು ಮಾಡುವ ಪ್ರತಿಯೊಂದಕ್ಕೂ ದೇವರು ನಿಮಗೆ ನ್ಯಾಯತೀರಿಸುವನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. 10 ನಿಮ್ಮ ಕೋಪವು ನಿಮ್ಮನ್ನು ಹತೋಟಿಯಲ್ಲಿಡದಂತೆ ನೋಡಿಕೊಳ್ಳಿರಿ. ನಿಮ್ಮ ದೇಹವು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿರಿ. ಜನರು ಯೌವನಪ್ರಾಯದಲ್ಲಿರುವಾಗ, ಜೀವನದ ಆರಂಭದಲ್ಲಿಯೇ ಮೂಢಕಾರ್ಯಗಳನ್ನು ಮಾಡುವರು.
ಮುಪ್ಪಿನ ಸಮಸ್ಯೆಗಳು
12 ಕಷ್ಟಕಾಲಗಳು ಬರುವುದಕ್ಕಿಂತ ಮೊದಲೇ, ವರ್ಷಗಳು ಮುಗಿದು, “ನನಗೆ ಅವುಗಳಲ್ಲಿ ಸುಖವಿಲ್ಲ” ಎಂದು ಹೇಳುವ ಕಾಲಬರುವುದಕ್ಕಿಂತ ಮೊದಲೇ ಯೌವನಪ್ರಾಯದಲ್ಲಿ ನಿನ್ನ ಸೃಷ್ಟಿಕರ್ತನನ್ನು ಜ್ಞಾಪಿಸಿಕೊ.
2 ನೀನು ಮುದುಕನಾದಾಗ, ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ನಿನಗೆ ಕತ್ತಲೆಯಂತೆ ಕಾಣುತ್ತದೆ. ಮಳೆಯಾದ ಮೇಲೆಯೂ ಮತ್ತೆಮತ್ತೆ ಮೋಡಗಳಂತೆ ನಿನ್ನ ಜೀವನದಲ್ಲಿ ಕಷ್ಟಗಳು ತುಂಬಿರುತ್ತವೆ.
3 ಆ ಸಮಯದಲ್ಲಿ, ನಿನ್ನ ಬಲಿಷ್ಠವಾದ ತೋಳುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ; ನಿನ್ನ ಬಲಿಷ್ಠವಾದ ಕಾಲುಗಳು ಬಲಹೀನವಾಗಿ ಬಗ್ಗಿಹೋಗುತ್ತವೆ; ನಿನ್ನ ಹಲ್ಲುಗಳು ಬಿದ್ದುಹೋಗುತ್ತವೆ; ಆಗ ನೀನು ಆಹಾರವನ್ನು ಅಗಿದು ತಿನ್ನಲಾರೆ. ನಿನ್ನ ಕಣ್ಣುಗಳು ಮೊಬ್ಬಾಗುತ್ತವೆ. 4 ನಿನ್ನ ಕಿವಿ ಮಂದವಾಗುತ್ತದೆ. ನೀನು ಮಾರುಕಟ್ಟೆಯ ಶಬ್ದವನ್ನೂ ಕೇಳಲಾರೆ. ಅರೆಯುವ ಕಲ್ಲು ಸಹ ನಿನಗೆ ತುಂಬ ಮೌನವಾಗಿದೆಯೋ ಎಂಬಂತೆ ತೋರುವುದು. ಗಾಯನವೂ ನಿನಗೆ ಕೇಳುವುದಿಲ್ಲ. ನಿನಗೆ ನಿದ್ರೆಬಾರದಿರುವುದರಿಂದ ಕೇವಲ ಒಂದು ಹಕ್ಕಿಯ ಧ್ವನಿಯು ನಿನ್ನನ್ನು ಹೊತ್ತಾರೆಯಲ್ಲಿ ಎಬ್ಬಿಸುವುದು.
5 ನೀನು ಎತ್ತರವಾದ ಸ್ಥಳಗಳ ಬಗ್ಗೆ ಭಯದಿಂದಿರುವೆ; ನಿನ್ನ ಹಾದಿಯಲ್ಲಿರುವ ಪ್ರತಿಯೊಂದು ಚಿಕ್ಕ ವಸ್ತುವಿಗೂ ಹೆದರಿಕೊಂಡು ನಡೆದಾಡುವೆ. ನಿನ್ನ ಕೂದಲು ಬಾದಾಮಿ ಮರದ ಹೂವುಗಳಂತೆ ಬಿಳುಪಾಗುವುದು. ನೀನು ನಡೆಯುವಾಗ ಮಿಡತೆಯಂತೆ ನಿನ್ನನ್ನು ಎಳೆದಾಡಿಕೊಂಡು ನಡೆಯುವೆ; ಮಗುವನ್ನು ಪಡೆಯಲಾರದಷ್ಟು ವಯಸ್ಸಾಗುವುದು. ಆಮೇಲೆ ನೀನು ನಿನ್ನ ಹೊಸ ಮನೆಗೆ (ಸಮಾಧಿಗೆ) ಹೋಗುವೆ. ನಿನ್ನ ಶವಸಂಸ್ಕಾರಕ್ಕೆ ಹೋಗಲು ಜನರು ಬೀದಿಗಳಲ್ಲಿ ತುಂಬಿರುವರು.
ಮರಣ
6 ನಿನ್ನ ಜೀವನ ಮುಖ್ಯವಾದದ್ದು.
ನಿನ್ನ ಜೀವನ ಬೆಳ್ಳಿಬಂಗಾರಗಳಂತೆ ಬೆಲೆಬಾಳುವಂಥದ್ದು.
ಆದರೆ, ಅದು ಬಹುಬೇಗನೆ ತುಂಡಾದ ದಾರದಂತೆಯೂ ಮುರಿದುಹೋದ ಪಾತ್ರೆಯಂತೆಯೂ ಆಗುವುದು.
ನಿನ್ನ ಜೀವನ ಬಾವಿಯಲ್ಲಿ ಒಡೆದುಹೋದ ಬಿಂದಿಗೆಯಂತೆ ನಿಷ್ಟ್ರಯೋಜಕವಾಗುವುದು.
ನಿನ್ನ ಜೀವನವು, ಬಾವಿಯ ಕಟ್ಟೆಯ ಮೇಲೆ ಮುಚ್ಚಿದ್ದ ಚಪ್ಪಡಿಕಲ್ಲು ತಾನೇ ಒಡೆದು ಬಾವಿಯೊಳಗೆ ಬಿದ್ದು ಹೋದಂತೆ ನಿಷ್ಪ್ರಯೋಜಕವಾಗುವುದು.
ಆದ್ದರಿಂದಲೇ ಯೌವನ ಪ್ರಾಯದಲ್ಲಿರುವಾಗಲೇ
ನೀನು ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.
7 ನಿನ್ನ ದೇಹ ಭೂಮಿಯಿಂದ ಬಂದಿದೆ.
ನೀನು ಸತ್ತಾಗ ಅದು ಮತ್ತೆ ಭೂಮಿಯ ಪಾಲಾಗುವುದು.
ಆದರೆ ನಿನ್ನ ಆತ್ಮವು ದೇವರಿಂದ ಬಂದಿದೆ.
ನಿನ್ನ ದೇಹವು ಸತ್ತ ಮೇಲೆ, ನಿನ್ನ ಆತ್ಮವು ಮತ್ತೆ ದೇವರ ಬಳಿಗೆ ಹೋಗುವುದು.
8 ಪ್ರತಿಯೊಂದು ಉಪಯೋಗವಿಲ್ಲದ್ದು! ಪ್ರಸಂಗಿಯು ಹೇಳುವುದೇನೆಂದರೆ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.
ಅಂತಿಮ ನುಡಿಗಳು
9 ಪ್ರಸಂಗಿಯು ತುಂಬ ಜ್ಞಾನಿಯಾಗಿದ್ದನು. ಪ್ರಸಂಗಿಯು ಅನೇಕ ಜ್ಞಾನೋಪದೇಶಗಳನ್ನು ತುಂಬ ಎಚ್ಚರಿಕೆಯಿಂದ ಅಧ್ಯಯನ ಮಾಡಿ ಕ್ರಮಪಡಿಸಿದನು. 10 ಪ್ರಸಂಗಿಯು ಸರಿಯಾದ ಪದಗಳನ್ನು ಪ್ರಯಾಸದಿಂದ ಕಂಡುಹಿಡಿದು ಬಳಸಿದನು; ಸತ್ಯವೂ ಭರವಸೆಗೆ ಯೋಗ್ಯವೂ ಆದ ಉಪದೇಶಗಳನ್ನು ಬರೆದನು.
11 ಜ್ಞಾನಿಯ ನುಡಿಗಳು ಪ್ರಾಣಿಗಳನ್ನು ಮುನ್ನಡೆಸುವ ಚಾವಟಿಗಳಂತಿವೆ. ಅವನ ಉಪದೇಶಗಳು ಮುರಿಯದ ಮೊಳೆಗಳಂತಿವೆ. ಅವುಗಳೆಲ್ಲ ಒಬ್ಬನೇ ಕುರುಬನಿಂದ (ದೇವರಿಂದ) ಬಂದಿವೆ. 12 ಆದ್ದರಿಂದ ಮಗನೇ, ಆ ಉಪದೇಶಗಳನ್ನು ಅಧ್ಯಯನ ಮಾಡು, ಆದರೆ ಬೇರೆ ಪುಸ್ತಕಗಳ ಬಗ್ಗೆ ಎಚ್ಚರಿಕೆಯಿಂದಿರು. ಜನರು ಯಾವಾಗಲೂ ಪುಸ್ತಕಗಳನ್ನು ಬರೆಯುತ್ತಿರುತ್ತಾರೆ; ಅತಿಯಾದ ಅಧ್ಯಯನವು ನಿನ್ನನ್ನು ತುಂಬ ಆಯಾಸಗೊಳಿಸುತ್ತದೆ.
13-14 ಈ ಪುಸ್ತಕದಲ್ಲಿ ಬರೆಯಲಾಗಿರುವ ಎಲ್ಲಾ ವಿಷಯಗಳಿಂದ ನಾವು ಕಲಿತುಕೊಳ್ಳತಕ್ಕದ್ದೇನು? ಒಬ್ಬನು ಮಾಡಬಹುದಾದ ಅತ್ಯಂತ ಮುಖ್ಯವಾದ ಕಾರ್ಯವೆಂದರೆ, ದೇವರಲ್ಲಿ ಭಯಭಕ್ತಿಯಿಂದಿದ್ದು ಆತನ ಆಜ್ಞೆಗಳಿಗೆ ವಿಧೇಯನಾಗರುವುದೇ. ಯಾಕೆಂದರೆ ಜನರ ಎಲ್ಲಾ ಕಾರ್ಯಗಳೂ ರಹಸ್ಯಗಳೂ ದೇವರಿಗೆ ಗೊತ್ತಿವೆ. ಆತನು ಪ್ರತಿಯೊಂದು ಕಾರ್ಯವನ್ನೂ ತಿಳಿದಿರುವುದರಿಂದ ಪ್ರತಿಯೊಂದಕ್ಕೂ ನ್ಯಾಯತೀರ್ಪು ನೀಡುವನು.
1 ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನನ್ನನ್ನು ಅಪೊಸ್ತಲನನ್ನಾಗಿ ಆರಿಸಿದವರು ಮನುಷ್ಯರಲ್ಲ. ನಾನು ಮನುಷ್ಯರಿಂದ ಕಳುಹಿಸಲ್ಪಟ್ಟವನಲ್ಲ. ನನ್ನನ್ನು ಅಪೊಸ್ತಲನನ್ನಾಗಿ ಮಾಡಿದವರು ಯಾರೆಂದರೆ, ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು. ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ದೇವರೇ. 2 ನಾನು ಮತ್ತು ನನ್ನೊಂದಿಗಿರುವ ಎಲ್ಲಾ ಸಹೋದರರು ಈ ಪತ್ರವನ್ನು ಗಲಾತ್ಯದಲ್ಲಿರುವ ಸಭೆಗಳವರಿಗೆ ಬರೆದಿದ್ದೇವೆ.
3 ನಮ್ಮ ತಂದೆಯಾದ ದೇವರೂ ಪ್ರಭುವಾದ ಯೇಸು ಕ್ರಿಸ್ತನೂ ನಿಮಗೆ ಕೃಪೆ ತೋರಲಿ ಮತ್ತು ಶಾಂತಿಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. 4 ನಾವು ವಾಸಿಸುತ್ತಿರುವ ಈ ಕೆಟ್ಟ ಲೋಕದೊಳಗಿಂದ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಯೇಸು ನಮ್ಮ ಪಾಪಗಳಿಗಾಗಿ ತನ್ನನ್ನೇ ಕೊಟ್ಟುಬಿಟ್ಟನು. ಇದು ತಂದೆಯಾದ ದೇವರ ಚಿತ್ತವಾಗಿತ್ತು. 5 ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ. ಆಮೆನ್.
ಸತ್ಯಸುವಾರ್ತೆ ಒಂದೇ ಒಂದು
6 ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ. 7 ನಿಜವಾಗಿ ಹೇಳಬೇಕಾದರೆ, ಬೇರೊಂದು ಸತ್ಯಸುವಾರ್ತೆಯು ಇಲ್ಲವೇ ಇಲ್ಲ. ಆದರೆ ಕೆಲವು ಜನರು ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾರೆ. ಅವರು ಕ್ರಿಸ್ತನ ಸುವಾರ್ತೆಯನ್ನು ಬದಲಾಯಿಸಬೇಕೆಂದಿದ್ದಾರೆ. 8 ನಾವು ನಿಮಗೆ ಸತ್ಯಸುವಾರ್ತೆಯನ್ನು ತಿಳಿಸಿದೆವು. ಆದ್ದರಿಂದ ನಾವೇ ಆಗಲಿ, ಪರಲೋಕದ ದೇವದೂತರೇ ಆಗಲಿ ಮತ್ತೊಂದು ಸುವಾರ್ತೆಯನ್ನು ತಿಳಿಸಿದರೆ ಶಾಪಗ್ರಸ್ತರಾಗಲಿ. 9 ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ.
10 ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ.
ಪೌಲನ ಅಧಿಕಾರ ದೇವರಿಂದ ಬಂದದ್ದು
11 ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ. 12 ನನಗೆ ಸುವಾರ್ತೆ ದೊರೆತದ್ದು ಮನುಷ್ಯರಿಂದಲ್ಲ. ಯಾವನೂ ನನಗೆ ಸುವಾರ್ತೆಯನ್ನು ಉಪದೇಶಿಸಲಿಲ್ಲ. ನಾನು ಜನರಿಗೆ ಉಪದೇಶಿಸಬೇಕಾದ ಸುವಾರ್ತೆಯನ್ನು ಯೇಸು ಕ್ರಿಸ್ತನೇ ನನಗೆ ಪ್ರಕಟಿಸಿದನು.
13 ನನ್ನ ಹಿಂದಿನ ಜೀವಿತದ ಬಗ್ಗೆ ನೀವು ಕೇಳಿದ್ದೀರಿ. ನಾನು ಯೆಹೂದ್ಯಧರ್ಮಕ್ಕೆ ಸೇರಿದವನಾಗಿದ್ದೆನು. ದೇವರ ಸಭೆಯನ್ನು ಬಹಳವಾಗಿ ಹಿಂಸಿಸಿದೆನು. ಕ್ರೈಸ್ತ ಸಭೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೆನು. 14 ಯೆಹೂದ್ಯಧರ್ಮದ ನಾಯಕನಾಗಲು ನನ್ನ ಸಮವಯಸ್ಕರರಿಗಿಂತ ಎಷ್ಟೋ ಕಾರ್ಯಗಳನ್ನು ಮಾಡಿದೆನು. ನಮ್ಮ ಪೂರ್ವಿಕರ ಸಂಪ್ರದಾಯಗಳನ್ನು ಬೇರೆಲ್ಲರಿಗಿಂತಲೂ ಅತ್ಯಧಿಕ ನಿಷ್ಠೆಯಿಂದ ಅನುಸರಿಸಿದೆನು.
15 ಆದರೆ ನಾನು ಹುಟ್ಟುವುದಕ್ಕಿಂತ ಮೊದಲೇ ನನ್ನ ವಿಷಯದಲ್ಲಿ ದೇವರಿಗೆ ವಿಶೇಷವಾದ ಯೋಜನೆಯಿತ್ತು. ಆದ್ದರಿಂದ ದೇವರು ತನ್ನ ಕೃಪೆಯಿಂದ ನನ್ನನ್ನು ಕರೆದನು. 16 ಆತನ ಮಗನ ವಿಷಯವಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂಬುದು ದೇವರ ಚಿತ್ತವಾಗಿತ್ತು. ಆದ್ದರಿಂದ ದೇವರು ತನ್ನ ಮಗನನ್ನು ನನಗೆ ತೋರಿಸಿದನು. ಆತನು ನನ್ನನ್ನು ಕರೆದಾಗ ನಾನು ಯಾರಿಂದಲೂ ಸಲಹೆಯನ್ನಾಗಲಿ ಸಹಾಯವನ್ನಾಗಲಿ ತೆಗೆದುಕೊಳ್ಳಲಿಲ್ಲ. 17 ಅಪೊಸ್ತಲರನ್ನು ನೋಡುವುದಕ್ಕಾಗಿ ಜೆರುಸಲೇಮಿಗೂ ಹೋಗಲಿಲ್ಲ. ಅವರು ನನಗಿಂತ ಮೊದಲೇ ಅಪೊಸ್ತಲರಾಗಿದ್ದರು. ಆದರೆ, ನಾನು ತಡಮಾಡದೆ ಅರೇಬಿಯಾಕ್ಕೆ ಹೋದೆನು. ಆ ಬಳಿಕ ದಮಸ್ಕ ಪಟ್ಟಣಕ್ಕೆ ಹಿಂತಿರುಗಿದೆನು.
18 ಮೂರು ವರ್ಷಗಳ ನಂತರ ಪೇತ್ರನನ್ನು ಭೇಟಿಯಾಗಲು ಜೆರುಸಲೇಮಿಗೆ ಹೋದೆನು. ಅವನೊಂದಿಗೆ ಹದಿನೈದು ದಿನಗಳ ಕಾಲ ಇದ್ದೆನು. 19 ಪ್ರಭುವಿನ (ಯೇಸು) ಸಹೋದರನಾದ ಯಾಕೋಬನನ್ನು ಹೊರತು ಬೇರೆ ಯಾವ ಅಪೊಸ್ತಲರನ್ನೂ ನಾನು ಭೇಟಿಯಾಗಲಿಲ್ಲ. 20 ನಾನು ಬರೆಯುತ್ತಿರುವ ಈ ಸಂಗತಿಗಳು ಸುಳ್ಳಲ್ಲವೆಂದು ದೇವರಿಗೆ ಗೊತ್ತಿದೆ. 21 ತರುವಾಯ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು.
22 ಕ್ರಿಸ್ತನಲ್ಲಿರುವ ಜುದೇಯದ ಸಭೆಗಳವರು ನನ್ನನ್ನು ಹಿಂದೆಂದೂ ಭೇಟಿಯಾಗಿರಲಿಲ್ಲ. 23 “ಈ ಮನುಷ್ಯನು ನಮ್ಮನ್ನು ಹಿಂಸಿಸುತ್ತಿದ್ದನು. ಆದರೆ ಈಗ ಇವನು ತಾನು ಮೊದಲೊಮ್ಮೆ ನಾಶಮಾಡಲು ಪ್ರಯತ್ನಿಸಿದ ನಂಬಿಕೆಯ ಬಗ್ಗೆ ಜನರಿಗೆ ಹೇಳುತ್ತಿದ್ದಾನೆ” ಎಂಬುದನ್ನು ಮಾತ್ರ ಅವರು ಕೇಳಿದ್ದರು. 24 ಅವರು ನನ್ನ ನಿಮಿತ್ತ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International