Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 8-9

ಜ್ಞಾನ—ಒಳ್ಳೆಯ ಸ್ತ್ರೀ

ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ
    “ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ.
ರಸ್ತೆಗಳ ಚೌಕಗಳ ಬಳಿಯಿರುವ
    ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ.
ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ
    ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.

“ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ;
    ಎಲ್ಲಾ ಜನರನ್ನು ಕರೆಯುತ್ತೇನೆ.
ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ;
    ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
ಕೇಳಿರಿ! ಶ್ರೇಷ್ಠವಾದವುಗಳನ್ನೂ
    ಯಥಾರ್ಥವಾದವುಗಳನ್ನೂ ನಿಮಗೆ ತಿಳಿಸುವೆನು.
ನನ್ನ ಮಾತುಗಳು ಸತ್ಯ.
    ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ.
ನನ್ನ ಮಾತುಗಳು ನೀತಿಯ ಮಾತುಗಳಾಗಿವೆ.
    ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ.
ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ;
    ವಿವೇಕಿಗೆ ಯಥಾರ್ಥವಾಗಿವೆ.
10 ನನ್ನ ಉಪದೇಶವನ್ನು ಬೆಳ್ಳಿಗಿಂತಲೂ
    ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ.
11 ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ,
    ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”

ಜ್ಞಾನವು ಮಾಡುವುದೇನು

12 “ನಾನೇ ಜ್ಞಾನ.
    ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ.
    ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು.
13 ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ.
    ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ
    ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ.
14 ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ.
    ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ.
15 ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು;
    ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು.
16 ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು;
    ನಾಯಕರು ದೊರೆತನ ಮಾಡುವರು.
17 ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು;
    ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ.
    ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು.
19 ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ.
    ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ.
20 ನಾನು ನೀತಿಮಾರ್ಗದಲ್ಲಿಯೂ
    ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ.
21 ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು.
    ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.

22 “ಯೆಹೋವನು ‘ಜ್ಞಾನ’ವೆಂಬ ನನ್ನನ್ನು
    ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು.
23 ನಾನು ಆದಿಯಲ್ಲಿ ನಿರ್ಮಾಣಗೊಂಡೆನು.
    ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು.
24 ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು;
    ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು.
25 ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು.
26     ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು.
    ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು.
27 ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ
    ಜ್ಞಾನವೆಂಬ ನಾನು ಅಲ್ಲಿದ್ದೆನು.
    ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು.
28 ಆತನು ಆಕಾಶದಲ್ಲಿ ಮೋಡಗಳನ್ನೂ
    ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು.
29 ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ
    ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.
30 ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು.
    ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು.
31 ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ
    ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.

32 “ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ!
    ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ.
33 ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ.
    ಕಿವಿಗೊಡದಿರಬೇಡಿ!
34 ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ.
    ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ.
35 ನನ್ನನ್ನು ಕಂಡುಕೊಂಡಂಥವನು ಜೀವವನ್ನು ಕಂಡುಕೊಳ್ಳುತ್ತಾನೆ.
    ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ.
36 ಆದರೆ ನನ್ನನ್ನು ಕಂಡುಕೊಳ್ಳಲಾರದವನು
    ತನಗೇ ಕೇಡುಮಾಡಿಕೊಳ್ಳುವನು.
ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.”

ಜ್ಞಾನ ಮತ್ತು ಮೂರ್ಖತನ

ಜ್ಞಾನವೆಂಬಾಕೆ ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಆಕೆ ಅದಕ್ಕೆ ಏಳು ಕಂಬಗಳನ್ನು ಹಾಕಿದ್ದಾಳೆ. ಜ್ಞಾನವೆಂಬಾಕೆ ಮಾಂಸದ ಅಡಿಗೆಯನ್ನೂ ದ್ರಾಕ್ಷಾರಸವನ್ನೂ ತಯಾರಿಸಿದ್ದಾಳೆ. ಆಕೆ ತನ್ನ ಮೇಜಿನ ಮೇಲೆ ಆಹಾರವನ್ನು ಇಟ್ಟಿದ್ದಾಳೆ. ಆಮೇಲೆ ಆಕೆ, ತನ್ನ ಸೇವಕಿಯರನ್ನು ಕಳುಹಿಸಿ ನಗರದ ಎತ್ತರವಾದ ಸ್ಥಳದಿಂದ, “ಕಲಿತುಕೊಳ್ಳಬೇಕಾಗಿರುವ ಜನರೇ, ಬನ್ನಿರಿ” ಎಂದು ಕೂಗುತ್ತಾಳೆ. ಆಕೆಯು ಬುದ್ಧಿಹೀನರಿಗೆ, “ಬನ್ನಿರಿ, ನನ್ನ ಜ್ಞಾನದ ಆಹಾರವನ್ನು ತಿನ್ನಿರಿ. ನಾನು ತಯಾರಿಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. ನಿಮ್ಮ ಮೂರ್ಖ ಮಾರ್ಗಗಳನ್ನು ತೊರೆದುಬಿಡಿ. ಆಗ ನಿಮಗೆ ಜೀವವು ದೊರೆಯುವುದು. ವಿವೇಕಮಾರ್ಗದಲ್ಲಿ ಮುಂದೆ ಸಾಗಿರಿ” ಎಂದು ಆಕೆ ಹೇಳಿದಳು.

ನೀನು ಅಹಂಕಾರಿಗೆ ಅವನ ತಪ್ಪನ್ನು ತಿಳಿಸಲು ಪ್ರಯತ್ನಿಸಿದರೆ ಅವನು ನಿನ್ನನ್ನೇ ಖಂಡಿಸುವನು. ನೀನು ಕೆಡುಕನಿಗೆ ಅವನ ತಪ್ಪನ್ನು ತಿಳಿಸಿದರೆ ಅವನು ನಿನ್ನನ್ನೇ ಗೇಲಿಮಾಡುವನು. ದುರಾಭಿಮಾನಿಯನ್ನು ಗದರಿಸಬೇಡ; ಅವನು ನಿನ್ನನ್ನೇ ದ್ವೇಷ ಮಾಡುವನು. ಆದರೆ ನೀನು ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿಸುವನು. ನೀನು ಜ್ಞಾನಿಗೆ ಉಪದೇಶಿಸಿದರೆ ಅವನು ಮತ್ತಷ್ಟು ಜ್ಞಾನಿಯಾಗುವನು. ನೀನು ನೀತಿವಂತನಿಗೆ ಬೋಧಿಸಿದರೆ, ಅವನು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳುವನು.

10 ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನದ ಮೂಲ. ಯೆಹೋವನ ತಿಳುವಳಿಕೆಯನ್ನು ಪಡೆದುಕೊಳ್ಳುವುದೇ ವಿವೇಕದ ಮೂಲ. 11 ನೀನು ಜ್ಞಾನಿಯಾಗಿದ್ದರೆ, ಬಹುಕಾಲ ಬದುಕುವೆ. 12 ನೀನು ಜ್ಞಾನಿಯಾಗಿದ್ದರೆ ನಿನ್ನ ಜ್ಞಾನವು ನಿನಗೇ ಲಾಭಕರ. ಆದರೆ ನೀನು ದುರಾಭಿಮಾನದಿಂದ ಬೇರೆಯವರನ್ನು ಗೇಲಿಮಾಡಿದರೆ ನಿನ್ನನ್ನೇ ಕಷ್ಟಕ್ಕೆ ಗುರಿಮಾಡಿಕೊಳ್ಳುವೆ.

ಅಜ್ಞಾನಿಯೆಂಬ ಹೆಂಗಸು

13 ಅಜ್ಞಾನವೆಂಬಾಕೆಯು ಬಾಯಿಬಡುಕಿ; ಮಂದಮತಿ ಮತ್ತು ಮೂಢಳು, 14 ಅವಳು ತನ್ನ ಮನೆಯ ಬಾಗಿಲ ಬಳಿಯಲ್ಲಿ ನಗರದ ಎತ್ತರವಾದ ಸ್ಥಳಗಳಲ್ಲಿ ಕುಳಿತಿದ್ದಾಳೆ. 15 ತಮ್ಮ ಕೆಲಸಕಾರ್ಯಗಳ ನಿಮಿತ್ತ ಹಾದುಹೋಗುವ ಜನರನ್ನು, 16 “ಕಲಿತುಕೊಳ್ಳಬೇಕಾಗಿರುವ ಜನರೇ ಬನ್ನಿ” ಎಂದು ಕೂಗಿಕರೆಯುತ್ತಾಳೆ. ಅವಳು ಮೂಢರನ್ನು ಸಹ ಕರೆದು, 17 “ನೀವು ಕದ್ದ ನೀರು ಸ್ವಂತ ನೀರಿಗಿಂತಲೂ ಹೆಚ್ಚು ರುಚಿಯಾಗಿರುವುದು. ನೀವು ಕದ್ದ ರೊಟ್ಟಿ ತಯಾರಿಸಿದ ರೊಟ್ಟಿಗಿಂತಲೂ ಹೆಚ್ಚು ರುಚಿಯಾಗಿರುವುದು” ಎಂದು ಹೇಳುವಳು. 18 ಆದರೆ ಆ ಮೂಢರಿಗೆ, ಅವಳ ಮನೆ ಕೇವಲ ದೆವ್ವಗಳಿಂದ ತುಂಬಿರುವುದಾಗಲಿ ಆಕೆಯ ಅತಿಥಿಗಳು ಅಗಾಧವಾದ ಪಾತಾಳದಲ್ಲಿ ಬಿದ್ದಿರುವುದಾಗಲಿ ತಿಳಿದಿಲ್ಲ.

2 ಕೊರಿಂಥದವರಿಗೆ 3

ದೇವರ ಸೇವಕರ ಹೊಸ ಒಪ್ಪಂದ

ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ. ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.

ನಾವು ಈ ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ. ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ. ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.

ಹೊಸ ಒಡಂಬಡಿಕೆಯು ಹೆಚ್ಚಿನ ಮಹಿಮೆಯನ್ನು ತರುತ್ತದೆ

ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು. ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ. ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ. 10 ಆ ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು. 11 ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

12 ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ. 13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. 14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ. 15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ. 16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು. 17 ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ. 18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International