Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಪರಮ ಗೀತ 4-5

ಪ್ರಿಯಕರನು ಪ್ರಿಯತಮೆಗೆ

ನನ್ನ ಪ್ರಿಯಳೇ, ನೀನು ಬಹಳ ಸುಂದರಿ!
    ನೀನು ರೂಪವತಿ!
ಮುಸುಕಿನೊಳಗಿರುವ ನಿನ್ನ ಕಣ್ಣುಗಳು
    ಕೋಮಲವಾದ ಪಾರಿವಾಳಗಳಂತಿವೆ.
ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ
    ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
ನಿನ್ನ ಹಲ್ಲುಗಳು
    ಉಣ್ಣೆ ಕತ್ತರಿಸಿದ ನಂತರ ಸ್ನಾನ ಮಾಡಿಕೊಂಡು
ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ
    ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.
ನಿನ್ನ ತುಟಿಗಳು ರೇಷ್ಮೆಯ ಕೆಂಪುದಾರದಂತಿವೆ.
    ನಿನ್ನ ಬಾಯಿ ಸುಂದರವಾಗಿದೆ.
ಮುಸುಕಿನೊಳಗಿರುವ ನಿನ್ನ ಕೆನ್ನೆಗಳು
    ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.
ನಿನ್ನ ಕೊರಳು ದಾವೀದನ ಗೋಪುರದಂತೆ
    ಉದ್ದವಾಗಿದೆ ಮತ್ತು ತೆಳುವಾಗಿದೆ.
ಆ ಗೋಪುರದ ಗೋಡೆಗಳು
    ಸಾವಿರ ಗುರಾಣಿಗಳಿಂದಲೂ
    ಬಲಿಷ್ಠ ಸೈನಿಕರ ಗುರಾಣಿಗಳಿಂದಲೂ ಅಲಂಕೃತವಾಗಿವೆ.[a]
ನಿನ್ನ ಎರಡು ಸ್ತನಗಳು ಅವಳಿಜವಳಿ ಜಿಂಕೆಮರಿಗಳಂತೆಯೂ
    ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ
    ಅವಳಿಜವಳಿ ಸಾರಂಗಗಳಂತೆಯೂ ಇವೆ.
ಹಗಲು ತನ್ನ ಕೊನೆ ಉಸಿರೆಳೆಯುವವರೆಗೆ
    ಮತ್ತು ನೆರಳುಗಳೆಲ್ಲಾ ಓಡಿಹೋಗುವವರೆಗೆ
ನಾನು ಗೋಲರಸದ ಬೆಟ್ಟಕ್ಕೂ
    ಧೂಪದ ಗುಡ್ಡಕ್ಕೂ ಹೋಗುವೆನು.
ನನ್ನ ಪ್ರಿಯೆ, ನೀನು ಸರ್ವಾಂಗಸುಂದರಿ.
    ನಿನಗೆ ಎಲ್ಲಿಯೂ ಕಲೆಗಳಿಲ್ಲ!
ನನ್ನ ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ!
    ಲೆಬನೋನಿನಿಂದ ನನ್ನೊಂದಿಗೆ ಬಾ!
ಅಮಾನದ ತುದಿಯಿಂದಲೂ
    ಶೆನೀರಿನ ತುದಿಯಿಂದಲೂ ಹೆರ್ಮೋನಿನ ತುದಿಯಿಂದಲೂ
    ಸಿಂಹದ ಗವಿಗಳಿಂದಲೂ ಚಿರತೆಗಳ ಬೆಟ್ಟಗಳಿಂದಲೂ ಬಾ!
ನನ್ನ ಪ್ರಿಯಳೇ, ನನ್ನ ವಧುವೇ, ನೀನು ನನ್ನ ಹೃದಯವನ್ನು ಅಪಹರಿಸಿರುವೆ.
    ನಿನ್ನ ನೋಟದಿಂದಲೂ ನಿನ್ನ ಮುತ್ತಿನಹಾರದಿಂದಲೂ ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದಿ.
10 ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ!
    ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಎಷ್ಟೋ ಉತ್ತಮ!
ನಿನ್ನ ತೈಲದ ಪರಿಮಳವು
    ಸಕಲ ಬಗೆಯ ಸುಗಂಧ ದ್ರವ್ಯಗಳಿಗಿಂತಲೂ ಉತ್ತಮ!
11 ನನ್ನ ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ;
    ಹಾಲೂ ಜೇನೂ ನಿನ್ನ ನಾಲಿಗೆಯೊಳಗಿವೆ.
ನಿನ್ನ ಬಟ್ಟೆಗಳು ಪರಿಮಳದ್ರವ್ಯದಂತೆ[b]
    ಸುವಾಸನೆಭರಿತವಾಗಿವೆ.
12 ನನ್ನ ಪ್ರಿಯಳೇ, ನನ್ನ ವಧುವೇ,
    ನೀನು ಕದಹಾಕಿದ ತೋಟದಂತಿರುವೆ;
ಬೇಲಿಯೊಳಗಿರುವ ಬುಗ್ಗೆಯಂತಿರುವೆ;
    ಮುಚ್ಚಿ ಮುದ್ರಿಸಿದ ಚಿಲುಮೆಯಂತಿರುವೆ.
13 ನಿನ್ನ ಅಂಗಾಂಗಗಳು ದಾಳಿಂಬೆ ಮರಗಳಿಂದಲೂ
    ರುಚಿಕರವಾದ ಹಣ್ಣಿನ ಮರಗಳಿಂದಲೂ ಗೋರಂಟಿ,
14 ನಾರ್ಡ್, ಜಟಾಮಾಂಸಿ, ಕೇಸರಿ, ಬಜೆ, ಲವಂಗಚಕ್ಕೆ, ರಕ್ತಬೋಳ, ಅಗುರು, ಸಾಂಬ್ರಾಣಿ ಗಿಡ ಮತ್ತು ದಾಲ್ಚಿನ್ನಿ
    ಎಂಬ ಸುಗಂಧದ ಸಸ್ಯಗಳಿಂದಲೂ ಕೂಡಿರುವ ತೋಟಗಳಂತಿವೆ.
15 ನೀನು ತೋಟದ ಬುಗ್ಗೆಯಂತಿರುವೆ;
    ಹೊಸ ನೀರಿನ ಬಾವಿಯಂತಿರುವೆ;
    ಲೆಬನೋನಿನ ಬೆಟ್ಟಗಳಿಂದ ಹರಿದುಬರುತ್ತಿರುವ ನೀರಿನಂತಿರುವೆ.

ಪ್ರಿಯತಮೆ

16 ಉತ್ತರದ ಗಾಳಿಯೇ, ಎಚ್ಚರವಾಗು!
    ದಕ್ಷಿಣದ ಗಾಳಿಯೇ, ಬಾ!
ನನ್ನ ತೋಟದ ಮೇಲೆ ಬೀಸು.
    ಅದರ ಸುವಾಸನೆಯು ಹರಡಿಕೊಳ್ಳಲಿ.
ನನ್ನ ಪ್ರಿಯನು ನನ್ನ ತೋಟವನ್ನು ಪ್ರವೇಶಿಸಲಿ.
    ಅವನು ಅದರ ರುಚಿಕರವಾದ ಹಣ್ಣನ್ನು ತಿನ್ನಲಿ.

ಪ್ರಿಯಕರ

ನನ್ನ ಪ್ರಿಯೇ, ನನ್ನ ವಧುವೇ, ನನ್ನ ತೋಟವನ್ನು ಪ್ರವೇಶಿಸಿದ್ದೇನೆ.
    ನನ್ನ ಸುಗಂಧದ್ರವ್ಯದೊಡನೆ ಗೋಲರಸವನ್ನು ಶೇಖರಿಸಿದ್ದೇನೆ.
ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೇನೆ.
    ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ.

ಪ್ರಿಯತಮೆಯು ಸ್ನೇಹಿತರಿಗೆ

ಸ್ನೇಹಿತರೇ, ತಿನ್ನಿರಿ, ಕುಡಿಯಿರಿ!
    ಪ್ರೀತಿಯಿಂದ ಮತ್ತರಾಗಿ!

ಪ್ರಿಯತಮೆ

ನಾನು ನಿದ್ರೆಮಾಡುತ್ತಿರುವಾಗಲೂ
    ಹೃದಯ ಎಚ್ಚರವಾಗಿರುವುದು.
ನನ್ನ ಪ್ರಿಯನು ಬಾಗಿಲು ತಟ್ಟುತ್ತಿರುವುದು ನನಗೆ ಕೇಳುತ್ತಿದೆ.
    “ನನ್ನ ಪ್ರಿಯಳೇ, ನನ್ನ ಕಾಂತಳೇ,
ನನ್ನ ಪಾರಿವಾಳವೇ, ನನ್ನ ನಿರ್ಮಲೆಯೇ, ಬಾಗಿಲು ತೆರೆ!
    ನನ್ನ ತಲೆಯು ಇಬ್ಬನಿಯಿಂದ ತೇವವಾಗಿದೆ;
ನನ್ನ ಕೂದಲು ರಾತ್ರಿ ಬೀಳುವ
    ಹನಿಗಳಿಂದ ತೇವವಾಗಿದೆ.”

“ನಾನು ನನ್ನ ಮೇಲಂಗಿಯನ್ನು ತೆಗೆದಿದ್ದೇನೆ;
    ಅದನ್ನು ಮತ್ತೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ.
ನಾನು ನನ್ನ ಪಾದಗಳನ್ನು ತೊಳೆದಿದ್ದೇನೆ.
    ಅವುಗಳನ್ನು ಮತ್ತೆ ಕೊಳೆಮಾಡಲು ನನಗೆ ಇಷ್ಟವಿಲ್ಲ.”

ನನ್ನ ಪ್ರಿಯನು ಬಾಗಿಲ ಚಿಲಕದ ರಂಧ್ರದಲ್ಲಿ ಕೈ ನೀಡಿದಾಗ
    ಅವನ ಮೇಲೆ ನನಗೆ ಮರುಕವಾಯಿತು.
ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ನಾನು ಎದ್ದಾಗ
    ಅಗುಳಿಯ ಹಿಡಿಗಳ ಮೇಲೆ ನನ್ನ ಕೈಗಳಿಂದ ಗೋಲರಸವೂ
ನನ್ನ ಬೆರಳುಗಳಿಂದ ಸುವಾಸನೆಯ ಗೋಲರಸವೂ
    ತೊಟ್ಟಿಕ್ಕಿದವು.
ನಾನು ನನ್ನ ಪ್ರಿಯನಿಗಾಗಿ ಬಾಗಿಲನ್ನು ತೆರೆಯುವಷ್ಟರಲ್ಲಿ
    ನನ್ನ ಪ್ರಿಯನು ಹೊರಟುಹೋಗಿದ್ದನು!
ಅವನು ಇಲ್ಲದಿರುವುದನ್ನು ಕಂಡು
    ನನ್ನ ಹೃದಯವು ಕುಸಿದುಹೋಯಿತು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
    ನಾನು ಅವನಿಗಾಗಿ ಕೂಗಿದರೂ ಅವನು ಉತ್ತರಿಸಲಿಲ್ಲ.
ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರು ನನ್ನನ್ನು ಕಂಡು
    ಹೊಡೆದು ಗಾಯಮಾಡಿದರು.
ಕೋಟೆಯ ಕಾವಲುಗಾರರು ನನ್ನ ಮೇಲ್ಹೋದಿಕೆಯನ್ನು
    ತೆಗೆದುಕೊಂಡರು.

ಜೆರುಸಲೇಮಿನ ಸ್ತ್ರೀಯರೇ,
    ನೀವು ನನ್ನ ಪ್ರಿಯನನ್ನು ಕಂಡರೆ, ಅವನಿಗೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ತಿಳಿಸಿರಿ.

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿಯೇ,
    ನಿನ್ನ ಪ್ರಿಯನ ಅತಿಶಯವೇನು?
ನೀನು ಹೀಗೆ ನಮ್ಮಿಂದ ಪ್ರಮಾಣ ಮಾಡಿಸಲು
    ನಿನ್ನ ಪ್ರಿಯನ ಅತಿಶಯವೇನು?

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

10 ನನ್ನ ಪ್ರಿಯನದು ಹೊಳಪಾದ ಕಂದುಬಣ್ಣ.
    ಹತ್ತು ಸಾವಿರ ಪುರುಷರಲ್ಲಿ ಅವನೇ ಆಕರ್ಷಕ ಪುರುಷ.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ;
    ಅವನ ಗುಂಗುರು ಕೂದಲು ಕಾಗೆಯಷ್ಟೇ ಕಪ್ಪಾಗಿದೆ.
12 ಅವನ ಕಣ್ಣುಗಳು
    ಹಾಲಿನಲ್ಲಿ ಸ್ನಾನಮಾಡಿದ ಪಾರಿವಾಳಗಳಂತೆಯೂ
    ಆಭರಣದಲ್ಲಿ ಜೋಡಿಸಿರುವ ಮುತ್ತಿನಂತೆಯೂ ಇವೆ.
13 ಅವನ ಕೆನ್ನೆಗಳು ಸುಗಂಧಸಸ್ಯಗಳ ದಿಬ್ಬಗಳಂತೆಯೂ
    ಸುವಾಸನೆಯುಳ್ಳ ಹೂವುಗಳಂತೆಯೂ ಇವೆ.
ಅವನ ತುಟಿಗಳು ಕೆಂದಾವರೆಗಳಂತಿವೆ;
    ಅವನ ತುಟಿಗಳಲ್ಲಿ ಗೋಲರಸವು ತೊಟ್ಟಿಕ್ಕುತ್ತದೆ.
14 ಅವನ ಕೈಗಳು ಪೀತರತ್ನದಿಂದ ಕೂಡಿದ
    ಬಂಗಾರದ ಸಲಾಕೆಯಂತಿವೆ;
ಅವನ ದೇಹವು ನೀಲಿಬಣ್ಣದ ಕಲ್ಲುಗಳಿಂದ ಕೂಡಿದ
    ನಯವಾದ ದಂತದಂತಿದೆ.
15 ಅವನ ಕಾಲುಗಳು ಬಂಗಾರದ ಪಾದಗಳುಳ್ಳ
    ಅಮೃತ ಶಿಲೆಯ ಕಂಬಗಳಂತಿವೆ.
ಅವನು ಲೆಬನೋನಿನ
    ದೇವದಾರು ವೃಕ್ಷದಂತೆ ಎತ್ತರವಾಗಿದ್ದಾನೆ.
16 ಹೌದು, ಜೆರುಸಲೇಮಿನ ಸ್ತ್ರೀಯರೇ,
    ನನ್ನ ಪ್ರಿಯನು ಅತ್ಯಂತ ಮನೋಹರನು;
ಅವನ ನುಡಿ ಬಹು ಇಂಪು.
    ಅವನೇ ನನ್ನ ಪ್ರಿಯನು; ಅವನೇ ನನ್ನ ಕಾಂತನು.

ಗಲಾತ್ಯದವರಿಗೆ 3

ನಂಬಿಕೆಯ ಮೂಲಕ ದೇವರಾಶೀರ್ವಾದ

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದ್ದರ ಬಗ್ಗೆ ಗಲಾತ್ಯದಲ್ಲಿರುವ ನಿಮಗೆ ಬಹು ಸ್ಪಷ್ಟವಾಗಿ ತಿಳಿಸಲಾಯಿತು. ಆದರೆ ನೀವು ಬಹು ಬುದ್ಧಿಹೀನರಾಗಿದ್ದೀರಿ. ನಿಮ್ಮನ್ನು ಮೋಸಗೊಳಿಸಲು ಬೇರೊಬ್ಬನಿಗೆ ಅವಕಾಶ ಮಾಡಿಕೊಟ್ಟಿರಿ. ಈ ವಿಷಯವೊಂದನ್ನು ನನಗೆ ತಿಳಿಸಿರಿ: ನೀವು ಪವಿತ್ರಾತ್ಮನನ್ನು ಹೊಂದಿಕೊಂಡದ್ದು ಹೇಗೆ? ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದ ಹೊಂದಿಕೊಂಡಿರೊ? ಇಲ್ಲ! ಸುವಾರ್ತೆಯನ್ನು ಕೇಳಿ ಅದರಲ್ಲಿ ನಂಬಿಕೆಯಿಟ್ಟದ್ದರಿಂದಲೇ ಪವಿತ್ರಾತ್ಮನನ್ನು ಹೊಂದಿಕೊಂಡಿರಿ. ಕ್ರಿಸ್ತನಲ್ಲಿಯ ನಿಮ್ಮ ಜೀವಿತವನ್ನು ಪವಿತ್ರಾತ್ಮನೊಂದಿಗೆ ಆರಂಭಿಸಿದಿರಿ. ಈಗ ಅದನ್ನು ನಿಮ್ಮ ಸ್ವಂತ ಶಕ್ತಿಯೊಂದಿಗೆ ಮುಂದುವರಿಸಲು ಪ್ರಯತ್ನಿಸುತ್ತೀರೋ? ಅದು ಬುದ್ಧಿಹೀನತೆ! ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ? ದೇವರು ಪವಿತ್ರಾತ್ಮನನ್ನು ಕೊಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ದೇವರು ಮಹತ್ಕಾರ್ಯಗಳನ್ನು ಮಾಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ಇಲ್ಲ! ಸುವಾರ್ತೆಯನ್ನು ಕೇಳಿ ಅದನ್ನು ನಂಬಿಕೊಂಡದ್ದರಿಂದ ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ ಮತ್ತು ಮಹತ್ಕಾರ್ಯಗಳನ್ನು ಮಾಡುತ್ತಾನೆ.

ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.

10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(C) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(D) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.

ಧರ್ಮಶಾಸ್ತ್ರ ಮತ್ತು ವಾಗ್ದಾನ

15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[b] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.

18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.

19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.

ಮೋಶೆಯ ಧರ್ಮಶಾಸ್ತ್ರದ ಉದ್ದೇಶ

21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International