Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 53

ರಚನೆಗಾರ: ದಾವೀದ.

53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
    ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
    ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
    ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
    ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
    ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!

ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
    ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
    ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”

ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
    ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
    ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.

ಚೀಯೋನ್ ಪರ್ವತದ ಮೇಲಿರುವಾತನು
    ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
    ಯಾಕೋಬನೇ ಉಲ್ಲಾಸಿಸು!
    ಇಸ್ರೇಲೇ ಬಹು ಸಂತೋಷಪಡು.

ಯಾಜಕಕಾಂಡ 25:1-19

ಭೂಮಿಗೆ ವಿಶ್ರಾಂತಿಯ ಸಮಯ

25 ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುತ್ತಿರುವ ದೇಶಕ್ಕೆ ನೀವು ಪ್ರವೇಶಿಸುವಿರಿ. ಆ ಸಮಯದಲ್ಲಿ ನೀವು ಭೂಮಿಗೆ ವಿಶ್ರಾಂತಿಯ ಸಮಯವಿರುವುದಕ್ಕೆ ಬಿಡಬೇಕು. ಇದು ಯೆಹೋವನನ್ನು ಸನ್ಮಾನಿಸುವುದಕ್ಕಾಗಿರುವ ವಿಶೇಷವಾದ ವಿಶ್ರಾಂತಿಯ ಸಮಯವಾಗಿರುವುದು. ನೀವು ಆರು ವರ್ಷಗಳು ನಿಮ್ಮ ಹೊಲದಲ್ಲಿ ಬೀಜಬಿತ್ತುವಿರಿ. ಆರು ವರ್ಷಗಳು ನಿಮ್ಮ ದ್ರಾಕ್ಷಿತೋಟಗಳಲ್ಲಿ ಕೆಲಸಮಾಡುವಿರಿ. ಅದರ ಫಲಗಳನ್ನು ಒಟ್ಟುಗೂಡಿಸುವಿರಿ. ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು. ಕೊಯ್ಲಿನ ನಂತರ ತನ್ನಷ್ಟಕ್ಕೆ ತಾನೇ ಬೆಳೆದ ಪೈರನ್ನೂ ಕೊಯ್ಯಬಾರದು. ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ದ್ರಾಕ್ಷಿಯನ್ನು ಸಂಗ್ರಹಿಸಬಾರದು. ಭೂಮಿಗೆ ಒಂದು ವರ್ಷದ ವಿಶ್ರಾಂತಿಯಿರುವುದು.

“ಸಬ್ಬತ್ ವರ್ಷದಲ್ಲಿ ಭೂಮಿಯು ತಾನಾಗಿ ಫಲಿಸುವ ಬೆಳೆಯಿಂದ ನಿಮಗೆ ಸಾಕಷ್ಟು ಆಹಾರವಿರುವುದು. ನಿಮ್ಮ ದಾಸದಾಸಿಯರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದೇಶದಲ್ಲಿ ವಾಸವಾಗಿರುವ ಕೂಲಿಯಾಳುಗಳಿಗೂ ಪರದೇಶಸ್ಥರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದನಗಳಿಗೂ ಇತರ ಪ್ರಾಣಿಗಳಿಗೂ ತಿನ್ನುವುದಕ್ಕೆ ಸಾಕಷ್ಟು ಆಹಾರವಿರುವುದು.

ಜ್ಯೂಬಿಲಿ-ಬಿಡುಗಡೆಯ ವರ್ಷ

“ಅದಲ್ಲದೆ, ಏಳು ವರ್ಷಗಳ ಏಳು ಗುಂಪುಗಳನ್ನು ಲೆಕ್ಕಿಸಬೇಕು. ಈ ಏಳು ಗುಂಪುಗಳು ಸೇರಿ ನಲವತ್ತೊಂಭತ್ತು ವರ್ಷಗಳಾಗಿರುವವು. ಆ ಸಮಯದಲ್ಲಿ ಭೂಮಿಗೆ ಏಳು ವರ್ಷಗಳ ವಿಶ್ರಾಂತಿಯಿರುವುದು. ದೋಷಪರಿಹಾರಕ ದಿನದಲ್ಲಿ ಅಂದರೆ ಐವತ್ತನೆಯ ವರ್ಷದ ಏಳನೆಯ ತಿಂಗಳ ಹತ್ತನೆಯ ದಿನದಲ್ಲಿ ದೇಶದಲ್ಲೆಲ್ಲಾ ಕೊಂಬನ್ನೂದಿಸಬೇಕು. 10 ಐವತ್ತನೆಯ ವರ್ಷವನ್ನು ನೀವು ವಿಶೇಷ ವರ್ಷವನ್ನಾಗಿ ಮಾಡಬೇಕು. ನಿಮ್ಮ ದೇಶದಲ್ಲಿ ವಾಸಿಸುವ ಜನರೆಲ್ಲರಿಗೆ ನೀವು ಸ್ವಾತಂತ್ರ್ಯವನ್ನು ಘೋಷಿಸಬೇಕು. ಈ ಸಮಯವು ‘ಜ್ಯೂಬಿಲಿ’ ಎಂಬುದಾಗಿ ಕರೆಯಲ್ಪಡುವುದು. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹಿಂತಿರುಗಿ ಹೋಗುವನು; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಕುಟುಂಬಕ್ಕೆ ಹಿಂತಿರುಗುವನು. 11 ಐವತ್ತನೆಯ ವರ್ಷವು ನಿಮಗೆ ವಿಶೇಷವಾದ ಆಚರಣೆಯಾಗಿರುವುದು. ಬೀಜವನ್ನು ಬಿತ್ತಬೇಡಿರಿ. ತನ್ನಷ್ಟಕ್ಕೆ ತಾನೇ ಬೆಳೆದ ಪೈರುಗಳನ್ನು ಕೊಯ್ಯಬೇಡಿರಿ. ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಿಂದ ದ್ರಾಕ್ಷಿಯನ್ನು ಸಂಗ್ರಹಿಸಬೇಡಿರಿ. 12 ಆ ವರ್ಷ ಜ್ಯೂಬಿಲಿಯಾಗಿದೆ. ಅದು ನಿಮಗೆ ಪವಿತ್ರ ಸಮಯವಾಗಿರುವುದು. ಹೊಲದಿಂದ ದೊರಕುವ ಪೈರುಗಳು ನಿಮಗೆ ಆಹಾರವಾಗಿರುವುದು. 13 ಜ್ಯೂಬಿಲಿ ವರ್ಷದಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹೋಗುವನು.

14 “ಭೂಮಿಯನ್ನು ನೆರೆಯವನಿಗೆ ಮಾರುವಾಗ ಅಥವಾ ಅವನಿಂದ ಭೂಮಿಯನ್ನು ಕೊಂಡುಕೊಳ್ಳುವಾಗ ಮೋಸ ಮಾಡಬೇಡಿ. 15 ನಿಮ್ಮ ನೆರೆಯವನ ಭೂಮಿಯನ್ನು ಕೊಂಡುಕೊಳ್ಳಲು ನೀವು ಬಯಸುವುದಾದರೆ, ಆಗ ಕಳೆದ ಜ್ಯೂಬಿಲಿ ವರ್ಷದಿಂದ ಈಗ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. ನೀವು ಭೂಮಿಯನ್ನು ಮಾರುವುದಾದರೆ, ಪೈರುಗಳನ್ನು ಕೊಯ್ಯುವುದಕ್ಕಿರುವ ವರ್ಷಗಳನ್ನು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. 16 ಇನ್ನೂ ಅನೇಕ ವರ್ಷಗಳು ಇದ್ದರೆ, ಬೆಲೆ ಹೆಚ್ಚಾಗಿರುವುದು. ವರ್ಷಗಳು ಕಡಿಮೆಯಾಗಿದ್ದರೆ, ಬೆಲೆ ಕಡಿಮೆಯಾಗಿರುವುದು. ಯಾಕೆಂದರೆ ನಿಮ್ಮ ನೆರೆಯವನು ನಿಜವಾಗಿ ಕೇವಲ ಕೆಲವೇ ಪೈರುಗಳನ್ನು ನಿಮಗೆ ಮಾರುತ್ತಿದ್ದಾನೆ. ಮುಂದಿನ ಜ್ಯೂಬಿಲಿ ವರ್ಷದಲ್ಲಿ ಭೂಮಿಯು ತಿರುಗಿ ಅವನ ಕುಟುಂಬಕ್ಕೆ ಸೇರುವುದು. 17 ನೀವು ಒಬ್ಬರಿಗೊಬ್ಬರು ಮೋಸ ಮಾಡಬಾರದು. ನೀವು ದೇವರಿಗೆ ಭಯಪಡಬೇಕು! ನಾನೇ ನಿಮ್ಮ ದೇವರಾದ ಯೆಹೋವನು!

18 “ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಅವುಗಳಿಗೆ ವಿಧೇಯರಾಗಿರಿ. ಆಗ ನೀವು ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ. 19 ಮತ್ತು ಭೂಮಿಯು ಒಳ್ಳೆಯ ಪೈರುಗಳನ್ನು ಕೊಡುವುದು. ಆಗ ನಿಮಗೆ ಬೇಕಾದಷ್ಟು ಆಹಾರವಿರುವುದು ಮತ್ತು ನೀವು ದೇಶದಲ್ಲಿ ಸುರಕ್ಷಿತವಾಗಿ ಜೀವಿಸುವಿರಿ.

ಪ್ರಕಟನೆ 19:9-10

ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.

10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International