Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 43:16-21

ದೇವರು ತನ್ನ ಜನರಾದ ಇಸ್ರೇಲನ್ನು ಮತ್ತೆ ರಕ್ಷಿಸುವನು

16 ಯೆಹೋವನು ಸಮುದ್ರದ ಮೂಲಕ ಮಾರ್ಗವನ್ನು ನಿರ್ಮಿಸುವನು. ಅಲ್ಲೋಲಕಲ್ಲೋಲವಾಗಿರುವ ನೀರಿನ ಮೂಲಕ ತನ್ನ ಜನರಿಗೆ ಮಾರ್ಗವನ್ನು ಮಾಡುವನು. ಯೆಹೋವನು ಹೇಳುವುದೇನೆಂದರೆ, 17 “ನನ್ನ ವಿರುದ್ಧವಾಗಿ ಯುದ್ಧಮಾಡುವ ಅಶ್ವದಳ, ರಥಬಲ ಮತ್ತು ಭೂದಳವು ಸೋತುಹೋಗುವವು. ಮತ್ತೆ ಅವರು ಏಳುವದೇ ಇಲ್ಲ. ಅವರೆಲ್ಲರೂ ನಾಶವಾಗುವರು. ಮೇಣದ ಬತ್ತಿಯ ಬೆಂಕಿಯು ಆರಿಸಲ್ಪಡುವಂತೆಯೇ ಅವರು ನಂದಿಸಲ್ಪಡುವರು. 18 ಆದ್ದರಿಂದ ಆದಿಯಲ್ಲಿ ನಡೆದ ಸಂಗತಿಗಳನ್ನು ಜ್ಞಾಪಕಮಾಡಿಕೊಳ್ಳಬೇಡ. ಬಹಳ ಕಾಲದ ಹಿಂದೆ ನಡೆದ ಸಂಗತಿಗಳನ್ನು ನೆನೆಸಬೇಡ. 19 ಯಾಕೆಂದರೆ, ನಾನು ಹೊಸ ಕಾರ್ಯಗಳನ್ನು ಮಾಡುವೆನು. ನೀವು ಹೊಸ ಸಸಿಯ ರೀತಿಯಲ್ಲಿ ಬೆಳೆಯುವಿರಿ. ಇದು ಸತ್ಯವೆಂದು ನಿಮಗೆ ಗೊತ್ತಿದೆ. ನಾನು ಮರುಭೂಮಿಯಲ್ಲಿ ಖಂಡಿತವಾಗಿಯೂ ರಸ್ತೆಯನ್ನು ಮಾಡುತ್ತೇನೆ; ಒಣನೆಲದಲ್ಲಿ ನದಿ ಹರಿಯುವಂತೆ ಮಾಡುತ್ತೇನೆ. 20 ವನ್ಯಜೀವಿಗಳೂ ನನಗೆ ಕೃತಜ್ಞತೆಯಿಂದ ಇರುತ್ತವೆ. ದೊಡ್ಡ ಗಾತ್ರದ ಪ್ರಾಣಿಗಳೂ ಪಕ್ಷಿಗಳೂ ನನ್ನನ್ನು ಗೌರವಿಸುವವು. ನಾನು ಮರುಭೂಮಿಯಲ್ಲಿ ನೀರನ್ನು ಬರಮಾಡುವಾಗ ಅವು ನನ್ನನ್ನು ಗೌರವಿಸುವವು. ನಾನು ಆರಿಸಿಕೊಂಡ ನನ್ನ ಜನರಿಗೆ ನೀರನ್ನು ಕೊಡುವುದಕ್ಕಾಗಿ ನಾನು ಇದನ್ನು ಮಾಡುವೆನು. 21 ನಾನು ನಿರ್ಮಿಸಿದ ಈ ಜನರು ನನಗೆ ಸ್ತೋತ್ರಗಾನ ಹಾಡುವರು.

ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ಫಿಲಿಪ್ಪಿಯವರಿಗೆ 3:4-14

ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ. ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು. ನಾನು ಇಸ್ರೇಲ್ ವಂಶದವನು ಮತ್ತು ಬೆನ್ಯಾಮೀನನ ಕುಲದವನು. ನಾನು ಇಬ್ರಿಯನು ಮತ್ತು ನನ್ನ ತಂದೆತಾಯಿಗಳು ಸಹ ಇಬ್ರಿಯರು. ನಾನು ಮೋಶೆಯ ಧರ್ಮಶಾಸ್ತ್ರವನ್ನು ಮುಖ್ಯವಾದದ್ದೆಂದು ಪರಿಗಣಿಸಿ ಫರಿಸಾಯನಾದೆನು; ಯೆಹೂದ್ಯ ಧರ್ಮದಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು ಕ್ರೈಸ್ತಸಭೆಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದೆನು. ಮೋಶೆಯ ಧರ್ಮಶಾಸ್ತ್ರಕ್ಕೆ ಯಾವಾಗಲೂ ವಿಧೇಯನಾಗಿದ್ದುದರಿಂದ ಯಾರೂ ನನ್ನ ವಿಷಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ.

ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.

ಗುರಿಮುಟ್ಟಲು ಪ್ರಯತ್ನ

12 ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು. 13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.

ಯೋಹಾನ 12:1-8

ಬೆಥಾನಿಯಲ್ಲಿ ಯೇಸು

(ಮತ್ತಾಯ 26:6-13; ಮಾರ್ಕ 14:3-9)

12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.

ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.

ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International