Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 5:27-32

27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.

29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.

ಕೀರ್ತನೆಗಳು 118:14-29

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

25 “ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನಮ್ಮನ್ನು ರಕ್ಷಿಸಿದ್ದಾನೆ.
26     ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”

“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
    ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
    ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.

28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
    ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 150

150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
    ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
    ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
    ಹಾರ್ಪ್‌ವಾದ್ಯಗಳನ್ನೂ ಲೈರ್‌ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
    ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
ತಾಳಗಳಿಂದ ಆತನನ್ನು ಸ್ತುತಿಸಿರಿ!
    ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!

ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!

ಯೆಹೋವನಿಗೆ ಸ್ತೋತ್ರವಾಗಲಿ!

ಪ್ರಕಟನೆ 1:4-8

ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ

ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:

ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.

ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.

ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.

ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”

ಯೋಹಾನ 20:19-31

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)

19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.

21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.

ತೋಮನಿಗೆ ಯೇಸುವಿನ ದರ್ಶನ

24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.

26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.

28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.

29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.

ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ

30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International