Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 122

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

122 “ಯೆಹೋವನ ಆಲಯಕ್ಕೆ ಹೋಗೋಣ”
    ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
ಇದು ಹೊಸ ಜೆರುಸಲೇಮ್!
    ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
    ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
ದಾವೀದನ ಕುಟುಂಬದ ರಾಜರುಗಳು ಜನರಿಗೆ
    ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.

ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
    “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
    ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
    ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”

ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
    ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
    ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.

ಎಸ್ತೇರಳು 8

ಯೆಹೂದ್ಯರಿಗೆ ಸಹಾಯವಾಗುವ ರಾಜಾಜ್ಞೆ

ಅದೇ ದಿವಸದಲ್ಲಿ ರಾಜ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಆಸ್ತಿಪಾಸ್ತಿಗಳನ್ನೆಲ್ಲಾ ರಾಣಿ ಎಸ್ತೇರಳಿಗೆ ಕೊಟ್ಟನು. ಎಸ್ತೇರ್ ರಾಣಿಯು ಅರಸನಿಗೆ, “ಮೊರ್ದೆಕೈ ತನ್ನ ಸೋದರಣ್ಣನಾಗ ಬೇಕು” ಎಂದಳು. ನಂತರ ಮೊರ್ದೆಕೈಯು ಅರಸನನ್ನು ಕಾಣಲು ಬಂದನು. ಹಾಮಾನನಿಂದ ತಿರಿಗಿ ಪಡೆದುಕೊಂಡಿದ್ದ ತನ್ನ ಮುದ್ರೆಯುಂಗುರವನ್ನು ರಾಜನು ಮೊರ್ದೆಕೈಗೆ ಕೊಟ್ಟನು. ಎಸ್ತೇರ್ ರಾಣಿಯು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಗೆ ಕೊಡಿಸಿದಳು.

ಎಸ್ತೇರಳು ತಿರುಗಿ ರಾಜನನ್ನು ಮಾತಾಡಿಸುವುದಕ್ಕೆ ಹೋದಳು. ಎಸ್ತೇರಳು ಅರಸನ ಪಾದಗಳಿಗೆ ಅಡ್ಡಬಿದ್ದು ಅಳಲು ಪ್ರಾರಂಭಿಸಿದಳು. ಅವಳು ಹಾಮಾನನ ದುಷ್ಟ ಯೋಜನೆಯನ್ನು ರದ್ದುಮಾಡಬೇಕೆಂದು ಅರಸನನ್ನು ಬೇಡಿಕೊಂಡಳು. ಅಗಾಗನ ವಂಶಿಕನಾದ ಹಾಮಾನನು ಯೆಹೂದ್ಯರನ್ನು ನಿರ್ಮೂಲ ಮಾಡುವ ಹಂಚಿಕೆಯನ್ನು ಮಾಡಿದ್ದನು.

ಎಸ್ತೇರಳಿಗೆ ರಾಜನು ತನ್ನ ರಾಜದಂಡವನ್ನು ತೋರಿಸಿದಾಗ ಆಕೆಯು ಎದ್ದು ರಾಜನಿಗೆದುರಾಗಿ ನಿಂತುಕೊಂಡಳು. ಆಕೆ ಅರಸನಿಗೆ, “ನೀವು ನನ್ನನ್ನು ಇಷ್ಟಪಡುವುದಾದರೆ ಮತ್ತು ನಿಮಗೆ ಮೆಚ್ಚಿಕೆಯಾದರೆ ನೀವು ನನ್ನ ಈ ಬಿನ್ನಹವನ್ನು ಪೂರೈಸಬೇಕು. ಅದೇನೆಂದರೆ, ರಾಜನ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ನಾಶಮಾಡಬೇಕೆಂದು ಹಾಮಾನನು ಹೊರಡಿಸಿರುವ ಆಜ್ಞೆಯನ್ನು ರದ್ದುಮಾಡಲು ನೀವು ಇನ್ನೊಂದು ಆಜ್ಞೆಯನ್ನು ಹೊರಡಿಸಬೇಕು. ನನ್ನ ಜನರಿಗೆ ಭಯಂಕರವಾದ ಆ ಪರಿಸ್ಥತಿ ಉಂಟಾಗುವುದನ್ನಾಗಲಿ ನನ್ನ ಕುಟಂಬವು ಕೊಲ್ಲಲ್ಪಡುವುದನ್ನು ಕಣ್ಣಾರೆ ನೋಡುವುದಕ್ಕಾಗಲಿ ನನಗೆ ಸಾಧ್ಯವಿಲ್ಲದಿರುವುದರಿಂದ ರಾಜನಲ್ಲಿ ಬೇಡಿಕೊಳ್ಳುತ್ತಿದ್ದೇನೆ” ಎಂದಳು.

ಅಹಷ್ವೇರೋಷನು ಎಸ್ತೇರ್ ರಾಣಿಗೆ ಮತ್ತು ಮೊರ್ದೆಕೈಗೆ, “ಹಾಮಾನನು ಯೆಹೂದ್ಯರನ್ನು ದ್ವೇಷಿಸಿದ ಕಾರಣ ಅವನನ್ನು ಗಲ್ಲಿಗೇರಿಸುವಂತೆ ನನ್ನ ಸಿಪಾಯಿಗಳಿಗೆ ಆಜ್ಞಾಪಿಸಿದೆನು; ಅವನ ಆಸ್ತಿಪಾಸ್ತಿಗಳನ್ನೆಲ್ಲಾ ಎಸ್ತೇರಳ ವಶಕ್ಕೆ ಕೊಟ್ಟೆನು. ಈಗ ಇನ್ನೊಂದು ರಾಜಾಜ್ಞೆಯನ್ನು ಬರೆಯಿಸಲು ನಾನು ನಿಮಗೆ ಅಧಿಕಾರ ಕೊಡುತ್ತೇನೆ. ನಿಮಗೆ ಸರಿತೋಚುವ ರೀತಿಯಲ್ಲಿ ಯೆಹೂದ್ಯರಿಗೆ ಸಹಾಯವಾಗುವಂತೆ ಆ ಆಜ್ಞೆಯನ್ನು ರಾಜನ ಅಧಿಕಾರದೊಡನೆ ಬರೆಯಿಸಿ, ರಾಜನ ಉಂಗುರದಿಂದ ಮುದ್ರೆ ಒತ್ತಿರಿ. ರಾಜ ಮುದ್ರೆಯುಳ್ಳ ಯಾವ ಆಜ್ಞೆಯೂ ರದ್ದಾಗಕೂಡದು” ಎಂದನು.

ಕೂಡಲೇ ರಾಜಲೇಖಕರನ್ನು ಕರೆಯಿಸಿ ಅವರಿಂದ ಮೊರ್ದೆಕೈ ಹೇಳಿದಂತೆ ರಾಜಾಜ್ಞೆಯನ್ನು ಸಾಮ್ರಾಜ್ಯದ ನಾನಾ ಭಾಷೆಗಳಲ್ಲಿ ಬರೆಯಿಸಲಾಯಿತು. ಹಿಂದೂಸ್ಥಾನದಿಂದ ಹಿಡಿದು ಇಥಿಯೋಪ್ಯದ ತನಕ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳ ಅಧಿಕಾರಿಗಳಿಗೆ, ಎಲ್ಲಾ ರಾಜ್ಯಪಾಲರಿಗೆ, ಜನನಾಯಕರಿಗೆ ಮತ್ತು ಯೆಹೂದ್ಯರಿಗೆ ಆಯಾ ಭಾಷೆಗಳ ಲಿಪಿಗಳಲ್ಲಿ ಮೂರನೇ ತಿಂಗಳಾದ ಸೀವಾನ್ ಮಾಸದ ಇಪ್ಪತ್ತಮೂರನೇ ದಿವಸದಲ್ಲಿ ಬರೆಯಿಸಲಾಯಿತು. 10 ರಾಜನ ಆಜ್ಞೆಯ ಪ್ರಕಾರ ಮೊರ್ದೆಕೈ ರಾಜಶಾಸನವನ್ನು ಬರೆಯಿಸಿದನು. ಅದಕ್ಕೆ ರಾಜಮುದ್ರೆಯನ್ನು ಒತ್ತಿಸಿ ರಾಜನಿಗಾಗಿ ವಿಶೇಷವಾಗಿ ಬೆಳೆಸಿದ ಅತ್ಯಂತ ವೇಗವಾಗಿ ಓಡುವ ಕುದುರೆಗಳ ಮೂಲಕ ಸಂದೇಶವಾಹಕರಿಂದ ರಾಜ್ಯದ ಮೂಲೆ ಮೂಲೆಗೆ ರಾಜಾಜ್ಞೆಯನ್ನು ಕಳುಹಿಸಿದನು.

11 ಆ ರಾಜಾಜ್ಞೆಯು ಹೀಗಿತ್ತು: “ಪ್ರತಿಯೊಂದು ನಗರಗಳಲ್ಲಿರುವ ಯೆಹೂದ್ಯರು ಸ್ವರಕ್ಷಣೆಗೋಸ್ಕರ ಒಟ್ಟಾಗಿ ಸೇರಿಬರಲು ಅವರಿಗೆ ಹಕ್ಕಿದೆ. ಅಲ್ಲದೆ ಅವರನ್ನು ಕೊಲ್ಲಲು, ಆಸ್ತಿ ಅಪಹರಿಸಲು ಅವರನ್ನು ನಿರ್ಮೂಲ ಮಾಡುವ ಉದ್ದೇಶದಿಂದ ಅವರ ಬಳಿಗೆ ಬರುವವರನ್ನು ಎದುರಿಸಿ, ಕೊಂದು ನಾಶಮಾಡುವ ಹಕ್ಕು ಅವರಿಗಿದೆ. ಯೆಹೂದ್ಯರಿಗೆ ತಮ್ಮನ್ನು ಹಗೆಮಾಡುವ ವೈರಿಗಳನ್ನು ಕೊಂದು ಅವರ ಆಸ್ತಿಪಾಸ್ತಿಗಳನ್ನು ಸೂರೆಮಾಡುವ ಹಕ್ಕಿದೆ.”

12 ಹೀಗೆ ಮಾಡಲು ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆ ಹನ್ನೆರಡನೆಯ ತಿಂಗಳಾದ ಅದಾರ್ ಮಾಸದ ಹದಿಮೂರನೆ ದಿನವನ್ನು ಗೊತ್ತುಪಡಿಸಲಾಯಿತು. 13 ಈ ರಾಜಾಜ್ಞೆಯು ದೇಶದ ಶಾಸನವಾಯಿತು. ಇದನ್ನು ರಾಜ್ಯದ ಎಲ್ಲಾ ಸಂಸ್ಥಾನಗಳ ಎಲ್ಲಾ ಜನರಿಗೆ ಪ್ರಕಟಿಸಲಾಯಿತು. ಯಾವ ದಿವಸದಲ್ಲಿ ಯೆಹೂದ್ಯರನ್ನು ನಿರ್ಮೂಲ ಮಾಡಲು ಆಜ್ಞೆ ಹೊರಡಿತ್ತೋ ಆ ದಿವಸದಲ್ಲಿಯೆ ಯೆಹೂದ್ಯರು ತಮ್ಮ ವೈರಿಗಳನ್ನು ಎದುರಿಸಿ ಅವರನ್ನು ಕೊಲ್ಲುವುದಕ್ಕೆ ತಯಾರಿರಬೇಕೆಂದು ಈ ಆಜ್ಞೆಯನ್ನು ಹೊರಡಿಸಿದ್ದು. 14 ಈ ಆಜ್ಞೆಯನ್ನು ಜನರಿಗೆ ತಲುಪಿಸಲು ಅರಸನು ಸಂದೇಶ ವಾಹಕರನ್ನು ಅವಸರಪಡಿಸಿದನು. ಶೂಷನ್ ನಗರದಲ್ಲೂ ಇದು ಪ್ರಕಟವಾಯಿತು.

15 ರಾಜಸನ್ನಿಧಿಯಿಂದ ಮೊರ್ದೆಕೈ ಹೊರಟಾಗ, ಅರಸನು ಕೊಟ್ಟ ವಿಶೇಷ ವಸ್ತ್ರಗಳನ್ನು ಮೊರ್ದೆಕೈಯು ಧರಿಸಿದ್ದನು. ಅದು ನೀಲಿ ಮತ್ತು ಬಿಳಿ ಬಣ್ಣದಾಗಿತ್ತು. ತಲೆಗೆ ಬಂಗಾರದ ಕಿರೀಟವನ್ನು ತೊಟ್ಟಿದ್ದನು. ಅಲ್ಲದೆ ನೇರಳೇ ಬಣ್ಣದ ವಸ್ತ್ರವೂ ಕೂಡಾ ಅವನಲ್ಲಿದ್ದವು. ರಾಜಧಾನಿಯಾದ ಶೂಷನ್ ನಗರದಲ್ಲಿ ವಿಶೇಷ ಸಮಾರಂಭವಿತ್ತು. ಜನರು ಸಂತೋಷದಿಂದ ನಲಿದಾಡಿದರು. 16 ಯೆಹೂದ್ಯರಿಗೆ ಆ ದಿನ ಅತ್ಯಂತ ಸಂತೋಷದ ದಿನವಾಗಿತ್ತು. ಆ ದಿನ ಅವರಿಗೆ ಬಹಳ ಆನಂದ ಮತ್ತು ಹರ್ಷದ ದಿನವಾಗಿತ್ತು.

17 ರಾಜನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿ ಎಲ್ಲೆಲ್ಲಿ ರಾಜಶಾಸನವು ತಲಪಿತೋ ಅಲ್ಲಲ್ಲಿ ಯೆಹೂದ್ಯರೆಲ್ಲರೂ ಆನಂದದಿಂದ ನಲಿದಾಡಿದರು. ಅದು ಅವರಿಗೆ ಅತ್ಯಂತ ಸಂತಸದ ದಿವಸವಾಗಿತ್ತು. ತಮ್ಮತಮ್ಮ ಮನೆಗಳಲ್ಲಿ ಔತಣ ಸಿದ್ಧಪಡಿಸಿದರು. ಸಾಮಾನ್ಯ ಜನರಲ್ಲಿ ಎಷ್ಟೋ ಮಂದಿ ಯೆಹೂದ್ಯ ಮತಾವಲಂಭಿಗಳಾದರು. ಯಾಕೆಂದರೆ ಅವರು ಯೆಹೂದ್ಯರಿಗೆ ತುಂಬಾ ಹೆದರಿ ಆ ರೀತಿಯಾಗಿ ಮಾಡಿದರು.

ಪ್ರಕಟನೆ 2:8-11

ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.

“ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.

11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International