Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 122

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

122 “ಯೆಹೋವನ ಆಲಯಕ್ಕೆ ಹೋಗೋಣ”
    ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
ಇದು ಹೊಸ ಜೆರುಸಲೇಮ್!
    ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
    ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
ದಾವೀದನ ಕುಟುಂಬದ ರಾಜರುಗಳು ಜನರಿಗೆ
    ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.

ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
    “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
    ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
    ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”

ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
    ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
    ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.

ಎಸ್ತೇರಳು 7

ಹಾಮಾನನು ಗಲ್ಲಿಗೇರಿಸಲ್ಪಟ್ಟನು

ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು. ಈ ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.

ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ. ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.

ಆಗ ರಾಜನು ಎಸ್ತೇರಳಿಗೆ, “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?” ಎಂದು ಕೇಳಿದನು.

ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಈ ಕೆಟ್ಟ ಹಾಮಾನನೇ” ಎಂದು ಹೇಳಿದಳು.

ಆಗ ಹಾಮಾನನು ಭಯದಿಂದ ನಡುಗಿದನು. ಅರಸನು ಕೋಪೋದ್ರಿಕ್ತನಾಗಿ, ಪಾನಪಾತ್ರೆಯನ್ನು ಅಲ್ಲಿಯೇ ಬಿಟ್ಟು ಎದ್ದು ಹೂತೋಟಕ್ಕೆ ಹೋದನು. ಹಾಮಾನನು ಕೋಣೆಯಲ್ಲಿಯೇ ಉಳಿದು ತನ್ನ ಪ್ರಾಣವನ್ನು ಉಳಿಸಬೇಕೆಂದು ಎಸ್ತೇರ್ ರಾಣಿಯನ್ನು ಬೇಡುತ್ತಿದ್ದನು. ಯಾಕೆಂದರೆ ರಾಜನು ತನ್ನನ್ನು ಕೊಲ್ಲಲು ತೀರ್ಮಾನಿಸಿರುವುದು ಅವನಿಗೆ ಅರಿವಾಯಿತು. ಅರಸನು ಹೂತೋಟದಿಂದ ಹಿಂದಿರುಗಿ ಕೋಣೆಯೊಳಗೆ ಬಂದಾಗ ಹಾಮಾನನು ಆಸನದ ಮೇಲೆ ಒರಗಿದ್ದ ಎಸ್ತೇರ್ ರಾಣಿಯ ಆಸನದ ಮೇಲೆ ಬೀಳುವದನ್ನು ಕಂಡನು. ಅರಸನು ಸಿಟ್ಟು ತುಂಬಿದವನಾಗಿ, “ನನ್ನ ಮುಂದೆಯೇ ನೀನು ರಾಣಿಯ ಮೇಲೆ ಕೈಮಾಡುತ್ತೀಯಾ?” ಎಂದು ಕೇಳಿದನು.

ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು.

ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.

10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.

ಪ್ರಕಟನೆ 1:9-20

ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10 ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು.

12 ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ[a] ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14 ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16 ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು.

17 ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18 ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. 19 ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International