Revised Common Lectionary (Semicontinuous)
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
ಯೋತಾಮನ ಕಥೆ
7 ಶೆಕೆಮಿನ ಹಿರಿಯರು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ ಸಮಾಚಾರವನ್ನು ಯೋತಾಮನು ಕೇಳಿದನು. ಕೂಡಲೇ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ಯೋತಾಮನು ಜನರಿಗೆ ಈ ಕಥೆಯನ್ನು ಕೂಗಿಕೂಗಿ ಹೇಳಿದನು:
“ಶೆಕೆಮಿನ ಹಿರಿಯರೇ, ನನ್ನ ಮಾತನ್ನು ಕೇಳಿರಿ; ಆಗ ಯೆಹೋವನು ನಿಮ್ಮ ಮಾತನ್ನು ಕೇಳುವನು.
8 “ಒಮ್ಮೆ ಮರಗಳು ತಮ್ಮನ್ನು ಆಳುವುದಕ್ಕೆ ಒಬ್ಬ ಅರಸನನ್ನು ಆರಿಸಬೇಕೆಂದು ನಿರ್ಧರಿಸಿದವು. ಆ ಮರಗಳು ಆಲಿವ್ ಮರಕ್ಕೆ, ‘ನೀನು ನಮ್ಮ ಅರಸನಾಗಿ ಆಳು’ ಎಂದು ಕೇಳಿಕೊಂಡವು.
9 “ಆದರೆ ಆಲಿವ್ ಮರವು, ‘ಜನರು ಮತ್ತು ದೇವತೆಗಳು ನನ್ನ ಎಣ್ಣೆಗಾಗಿ ನನ್ನನ್ನು ತುಂಬ ಹೊಗಳುತ್ತಾರೆ; ಬೇರೆ ಮರಗಳ ಮೇಲೆ ಆಳುವುದಕ್ಕಾಗಿ ನಾನು ಎಣ್ಣೆ ಮಾಡುವುದನ್ನು ಬಿಡಬೇಕೇ?’ ಎಂದು ಕೇಳಿತು.
10 “ಆಗ ಆ ಮರಗಳು ಅಂಜೂರದ ಮರದ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.
11 “ಆದರೆ ಅಂಜೂರದ ಮರವು, ‘ನಾನು ಕೇವಲ ಬೇರೆ ಮರಗಳ ಮೇಲೆ ಆಳ್ವಿಕೆ ಮಾಡುವುದಕ್ಕಾಗಿ ಉತ್ತಮವಾದ ಮತ್ತು ರುಚಿಕರವಾದ ಹಣ್ಣುಗಳು ಫಲಿಸುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.
12 “ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದವು.
13 “ಆದರೆ ದ್ರಾಕ್ಷಾಲತೆಯು, ‘ನನ್ನ ರಸವು ಎಲ್ಲ ಜನರಿಗೂ ಮತ್ತು ರಾಜರುಗಳಿಗೂ ಸಂತೋಷವನ್ನು ಉಂಟುಮಾಡುತ್ತದೆ. ಕೇವಲ ಬೇರೆ ಮರಗಳ ಮೇಲೆ ಅಧಿಕಾರ ನಡೆಸುವುದಕ್ಕಾಗಿ ನಾನು ನನ್ನ ರಸ ಕೊಡುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.
14 “ಕೊನೆಗೆ ಎಲ್ಲ ಮರಗಳು ಮುಳ್ಳುಪೊದೆಗೆ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.
15 “ಆ ಮುಳ್ಳುಪೊದೆಯು, ‘ನೀವು ನಿಜವಾಗಿಯೂ ನನ್ನನ್ನು ನಿಮ್ಮ ಅರಸನನ್ನಾಗಿ ಮಾಡಬೇಕೆಂದು ಇಚ್ಛೆಪಟ್ಟರೆ, ನೀವು ಬಂದು ನನ್ನ ನೆರಳಿನಲ್ಲಿ ಆಶ್ರಯಪಡೆಯಿರಿ; ನೀವು ಹೀಗೆ ಮಾಡಲು ಒಪ್ಪದಿದ್ದರೆ ನನ್ನಿಂದ ಬೆಂಕಿ ಹೊರಡಲಿ. ಆ ಬೆಂಕಿಯು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡಲಿ’ ಎಂದಿತು.
ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ
18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ. 19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.
20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ. 21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.
22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ. 23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.
24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ. 25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.
26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.
28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International