Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

ಯೆಹೋಶುವನು 10:16-27

16 ಯುದ್ಧ ನಡೆದಾಗ ಆ ಐದು ಮಂದಿ ಅರಸರು ಓಡಿಹೋದರು. ಅವರು ಮಕ್ಕೇದದ ಸಮೀಪದಲ್ಲಿದ್ದ ಗುಹೆಯಲ್ಲಿ ಅಡಗಿಕೊಂಡರು. 17 ಆ ಐದುಮಂದಿ ಅರಸರು ಆ ಗುಹೆಯಲ್ಲಿ ಅಡಗಿಕೊಂಡಿದ್ದನ್ನು ಯಾರೋ ನೋಡಿ ಯೆಹೋಶುವನಿಗೆ ತಿಳಿಸಿದರು. 18 ಯೆಹೋಶುವನು ತನ್ನ ಜನರಿಗೆ, “ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿರಿ. ಗುಹೆಯನ್ನು ಕಾಯುವುದಕ್ಕೆ ಕೆಲವು ಜನರು ಇಲ್ಲಿರಲಿ. 19 ಆದರೆ ನೀವು ಅಲ್ಲಿ ನಿಂತುಕೊಳ್ಳಬೇಡಿರಿ; ಶತ್ರುಗಳನ್ನು ಬೆನ್ನಟ್ಟಿ ಅವರ ಮೇಲೆ ಧಾಳಿಮಾಡಿ. ತಮ್ಮ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಲು ಅವರಿಗೆ ಅವಕಾಶಕೊಡಬೇಡಿ. ನಿಮ್ಮ ದೇವರಾದ ಯೆಹೋವನು ನಿಮಗೆ ಅವರ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆ” ಎಂದು ಆಜ್ಞಾಪಿಸಿದನು.

20 ಯೆಹೋಶುವನು ಮತ್ತು ಇಸ್ರೇಲಿನ ಜನರು ವೈರಿಗಳನ್ನು ಕೊಂದರು. ಆದರೆ ಕೆಲವು ಶತ್ರುಗಳು ಎತ್ತರವಾದ ಗೋಡೆಗಳುಳ್ಳ ತಮ್ಮ ಪಟ್ಟಣಗಳಿಗೆ ಹೋಗಿ ಅಡಗಿಕೊಳ್ಳಲು ಸಾಧ್ಯವಾಯಿತು. ಆ ಜನರು ಕೊಲ್ಲಲ್ಪಡಲಿಲ್ಲ. 21 ಯುದ್ಧದ ತರುವಾಯ ಯೆಹೋಶುವನ ಜನರು ಅವನ ಹತ್ತಿರ ಮಕ್ಕೇದಕ್ಕೆ ಬಂದರು. ಆ ದೇಶದಲ್ಲಿ ಇಸ್ರೇಲರ ವಿರುದ್ಧ ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ.

22 ಅನಂತರ ಯೆಹೋಶುವನು ಜನರಿಗೆ, “ಗುಹೆಯ ದ್ವಾರಕ್ಕೆ ಅಡ್ಡಲಾಗಿಟ್ಟ ಕಲ್ಲುಬಂಡೆಗಳನ್ನು ಸರಿಸಿ ಆ ಐದು ಮಂದಿ ಅರಸರನ್ನು ನನ್ನ ಹತ್ತಿರ ತನ್ನಿರಿ” ಎಂದು ಆಜ್ಞಾಪಿಸಿದನು. 23 ಯೆಹೋಶುವನ ಜನರು ಆ ಐದು ಮಂದಿ ಅರಸರನ್ನು ಗುಹೆಯ ಹೊರಗಡೆ ತಂದರು. ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ, ಎಗ್ಲೋನಿನ ಅರಸ ಇವರೇ ಆ ಐದು ಮಂದಿ. 24 ಅವರು ಆ ಐದು ಮಂದಿ ಅರಸರನ್ನು ಯೆಹೋಶುವನಲ್ಲಿಗೆ ತಂದರು. ಯೆಹೋಶುವನು ಇಸ್ರೇಲರನ್ನೆಲ್ಲ ಆ ಸ್ಥಳಕ್ಕೆ ಕರೆಸಿ ತನ್ನ ಸೈನ್ಯದ ಅಧಿಕಾರಿಗಳಿಗೆ “ಇಲ್ಲಿಗೆ ಬನ್ನಿ, ನಿಮ್ಮ ಪಾದಗಳನ್ನು ಈ ಅರಸರ ಕುತ್ತಿಗೆಗಳ ಮೇಲೆ ಇಡಿ” ಎಂದು ಹೇಳಿದನು. ಯೆಹೋಶುವನ ಸೈನ್ಯಾಧಿಕಾರಿಗಳು ಹತ್ತಿರಕ್ಕೆ ಬಂದು ತಮ್ಮ ಪಾದಗಳನ್ನು ಆ ಅರಸರ ಕುತ್ತಿಗೆಗಳ ಮೇಲೆ ಇಟ್ಟರು.

25 ಆಗ ಯೆಹೋಶುವನು ತನ್ನ ಜನರಿಗೆ, “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಅಂಜಬೇಡಿರಿ, ಇನ್ನು ಮುಂದೆ ನಮ್ಮ ಜೊತೆ ಹೋರಾಡುವ ಎಲ್ಲ ಶತ್ರುಗಳಿಗೆ ಯೆಹೋವನು ಏನು ಮಾಡುತ್ತಾನೆಂಬುದನ್ನು ನಿಮಗೆ ತೋರಿಸುತ್ತೇನೆ” ಎಂದು ಹೇಳಿದನು.

26 ಆಮೇಲೆ ಯೆಹೋಶುವನು ಆ ಐದು ಮಂದಿ ಅರಸರನ್ನು ಕೊಂದುಹಾಕಿದನು. ಅವರ ದೇಹಗಳನ್ನು ಐದು ಮರಗಳಿಗೆ ಸಾಯಂಕಾಲದವರೆಗೂ ನೇತುಹಾಕಿದನು. 27 ಸೂರ್ಯಾಸ್ತಮಾನದ ಹೊತ್ತಿಗೆ ಯೆಹೋಶುವನು ಆ ದೇಹಗಳನ್ನು ಮರದಿಂದ ಕೆಳಗಿಳಿಸಲು ಹೇಳಿದನು. ಆಮೇಲೆ ಅವರು ಎಲ್ಲಿ ಅಡಗಿಕೊಂಡಿದ್ದರೋ ಅದೇ ಗುಹೆಯಲ್ಲಿ ಆ ಶವಗಳನ್ನು ಬಿಸಾಡಿದರು. ಆ ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿದರು. ಆ ದೇಹಗಳು ಇಂದಿಗೂ ಆ ಗುಹೆಯಲ್ಲಿವೆ.

1 ಕೊರಿಂಥದವರಿಗೆ 5:6-8

ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ. ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ. ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International