Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 50:4-9

ದೇವರ ಸೇವಕನು ದೇವರ ಮೇಲೆ ಅವಲಂಬಿಸಿರುವನು

ನನ್ನ ಒಡೆಯನಾದ ಯೆಹೋವನು ನನಗೆ ಬೋಧಿಸುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ. ಈಗ ನಾನು ದುಃಖದಲ್ಲಿರುವ ಈ ಜನರಿಗೆ ಬೋಧಿಸುತ್ತಿದ್ದೇನೆ. ಪ್ರತೀ ಮುಂಜಾನೆ ವಿದ್ಯಾರ್ಥಿಯೋ ಎಂಬಂತೆ ಆತನು ನನ್ನನ್ನು ಎಬ್ಬಿಸಿ ನನಗೆ ಬೋಧಿಸುತ್ತಾನೆ. ನನ್ನ ಒಡೆಯನಾದ ಯೆಹೋವನು ನನಗೆ ಕಲಿಯಲು ಸಹಾಯ ಮಾಡುತ್ತಾನೆ. ನಾನು ಆತನಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ. ಆತನನ್ನು ಹಿಂಬಾಲಿಸುವದನ್ನು ನಿಲ್ಲಿಸುವದಿಲ್ಲ. ನನ್ನ ಬೆನ್ನಿಗೆ ಹೊಡೆಯಲೂ ನನ್ನ ಗಡ್ಡವನ್ನು ಕೀಳಲೂ ಅವರಿಗೆ ನನ್ನನ್ನು ಒಪ್ಪಿಸಿಕೊಡುತ್ತೇನೆ. ಅವರು ನನ್ನನ್ನು ಬೈದು ನನ್ನ ಮುಖಕ್ಕೆ ಉಗುಳಿದರೂ ನಾನು ನನ್ನ ಮುಖವನ್ನು ಅಡಗಿಸುವದಿಲ್ಲ. ನನ್ನ ಒಡೆಯನಾದ ಯೆಹೋವನು ನನಗೆ ಸಹಾಯ ಮಾಡುವನು. ಆದ್ದರಿಂದ ಅವರ ಶಾಪಗಳು ನನಗೆ ಯಾವ ಹಾನಿಯನ್ನು ಮಾಡುವದಿಲ್ಲ. ನಾನು ಬಲವಾಗಿರುವೆನು. ನಾನು ನಿರಾಶನಾಗುವದಿಲ್ಲವೆಂದು ನನಗೆ ಗೊತ್ತಿದೆ.

ಯೆಹೋವನು ನನ್ನೊಂದಿಗಿದ್ದಾನೆ. ನಾನು ತಪ್ಪಿತಸ್ಥನಲ್ಲವೆಂದು ಆತನು ತೋರಿಸುವನು. ಆದ್ದರಿಂದ ಯಾರೂ ನನ್ನನ್ನು ಅಪರಾಧಿ ಎಂದು ಹೇಳಲಾಗುವದಿಲ್ಲ. ಯಾರಾದರೂ ನನ್ನನ್ನು ತಪ್ಪಿತಸ್ಥನೆಂದು ದೃಢಪಡಿಸಬೇಕೆಂದಿದ್ದರೆ ಅವರು ಮೊದಲು ನನ್ನ ಬಳಿಗೆ ಬರಲಿ, ನಮಗೆ ವಿಚಾರಣೆಯಾಗಲಿ! ಆದರೆ ನನ್ನ ಒಡೆಯನು ಸಹಾಯ ಮಾಡುತ್ತಾನೆ. ಯಾರೂ ನನ್ನ ಮೇಲೆ ದೋಷಾರೋಪಣೆ ಹೊರಿಸಲಾಗದು. ಈ ಜನರೆಲ್ಲರೂ ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವರು, ನುಸಿಯು ಅವುಗಳನ್ನು ತಿಂದುಬಿಡುವವು.

ಕೀರ್ತನೆಗಳು 70

ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.

70 ದೇವರೇ, ನನ್ನನ್ನು ರಕ್ಷಿಸು!
    ದೇವರೇ, ಬೇಗನೆ ನನಗೆ ಸಹಾಯಮಾಡು!
ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
    ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
    ಅವಮಾನಗೊಂಡು ಓಡಿಹೋಗಲಿ.
ನನ್ನನ್ನು ಗೇಲಿಮಾಡುವವರು
    ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.

ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
    ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
    ಯೆಹೋವನೇ ತಡಮಾಡಬೇಡ!

ಇಬ್ರಿಯರಿಗೆ 12:1-3

ಯೇಸುವನ್ನೇ ಅನುಸರಿಸಿರಿ

12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು. ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.

ಯೋಹಾನ 13:21-32

ಯೇಸುವಿನ ಶಿಷ್ಯನ ದ್ರೋಹ

(ಮತ್ತಾಯ 26:20-25; ಮಾರ್ಕ 14:17-21; ಲೂಕ 22:21-23)

21 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತ್ಮದಲ್ಲಿ ತತ್ತರಗೊಂಡು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಬಹಿರಂಗವಾಗಿ ಹೇಳಿದನು.

22 ಯೇಸುವಿನ ಶಿಷ್ಯರೆಲ್ಲಾ ಒಬ್ಬರನ್ನೊಬ್ಬರು ನೋಡತೊಡಗಿದರು. ಆತನು ಯಾರ ಬಗ್ಗೆ ಮಾತಾಡುತ್ತಿದ್ದಾನೆಂದು ಅವರಿಗೆ ಅರ್ಥವಾಗಲಿಲ್ಲ. 23 ಶಿಷ್ಯರಲ್ಲಿ ಒಬ್ಬನು ಯೇಸುವಿನ ಸಮೀಪದಲ್ಲಿ ಒರಗಿಕೊಂಡಿದ್ದನು. ಯೇಸು ಪ್ರೀತಿಸುತ್ತಿದ್ದ ಶಿಷ್ಯನೇ ಅವನು. 24 ಸೀಮೋನ್ ಪೇತ್ರನು ಈ ಶಿಷ್ಯನಿಗೆ, ಯಾರನ್ನು ಕುರಿತು ಯೇಸು ಹೇಳುತ್ತಿದ್ದಾನೆಂದು ಕೇಳಿ ತಿಳಿದುಕೊಳ್ಳಲು ಸನ್ನೆ ಮಾಡಿದನು.

25 ಆ ಶಿಷ್ಯನು ಯೇಸುವಿನ ಸಮೀಪಕ್ಕೆ ಬಾಗಿಕೊಂಡು, “ಪ್ರಭುವೇ, ಅವನು ಯಾರು?” ಎಂದು ಕೇಳಿದನು.

26 ಯೇಸು, “ನಾನು ಈ ರೊಟ್ಟಿಯನ್ನು ಬಟ್ಟಲಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ ನನಗೆ ದ್ರೋಹ ಮಾಡುವನು” ಎಂದು ಹೇಳಿ ರೊಟ್ಟಿಯ ತುಂಡೊಂದನ್ನು ತೆಗೆದುಕೊಂಡು ಅದನ್ನು ಬಟ್ಟಲಲ್ಲಿ ಅದ್ದಿ ಸಿಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. 27 ಯೂದನು ಆ ರೊಟ್ಟಿಯನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸು ಯೂದನಿಗೆ, “ನೀನು ಮಾಡುವ ಕೆಲಸವನ್ನು ಬೇಗನೆ ಮಾಡು!” ಎಂದು ಹೇಳಿದನು. 28 ಯೇಸು ಯೂದನಿಗೆ ಏಕೆ ಹಾಗೆ ಹೇಳಿದನೆಂದು ಊಟಕ್ಕೆ ಕುಳಿತಿದ್ದವರಲ್ಲಿ ಯಾರಿಗೂ ಅರ್ಥವಾಗಲಿಲ್ಲ. 29 ಶಿಷ್ಯಸಮುದಾಯದ ಹಣದ ಪೆಟ್ಟಿಗೆಯು ಯೂದನ ವಶದಲ್ಲಿತ್ತು. ಆದ್ದರಿಂದ ಹಬ್ಬಕ್ಕೆ ಅಗತ್ಯವಾದ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಲಿ ಬಡಜನರಿಗೆ ಏನಾದರೂ ಕೊಡುವುದಕ್ಕಾಗಲಿ ಯೇಸು ಅವನಿಗೆ ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿಕೊಂಡರು.

30 ಯೇಸು ಕೊಟ್ಟ ರೊಟ್ಟಿಯನ್ನು ತೆಗೆದುಕೊಂಡ ನಂತರ ಯೂದನು ಅಲ್ಲಿಂದ ಹೊರಟುಹೋದನು. ಆಗ ರಾತ್ರಿಯಾಗಿತ್ತು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International