Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 10:34-43

ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ

34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!

37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.

39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.

42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.

ಯೆಶಾಯ 65:17-25

ಹೊಸ ಕಾಲ ಬರುತ್ತದೆ

17 “ನಾನು ಹೊಸ ಭೂಮ್ಯಾಕಾಶಗಳನ್ನು ಸೃಷ್ಟಿಸುವೆನು.
ಜನರು ಗತಿಸಿದ ದಿನಗಳನ್ನು ತಮ್ಮ ನೆನಪಿಗೆ ತರುವದಿಲ್ಲ.
    ಅವರು ಈ ಸಂಗತಿಗಳಲ್ಲಿ ಯಾವುದನ್ನೂ ಜ್ಞಾಪಿಸಿಕೊಳ್ಳುವದಿಲ್ಲ.
18 ನನ್ನ ಜನರು ಸಂತೋಷದಲ್ಲಿರುವರು.
    ಅವರು ನಿತ್ಯಕಾಲಕ್ಕೂ ಹರ್ಷಿಸುವರು.
ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು.
    ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.

19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು.
    ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು.
ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.
20 ಆ ಪಟ್ಟಣದಲ್ಲಿ ಹುಟ್ಟಿದ ಶಿಶುಗಳೆಲ್ಲಾ ಜೀವಿಸುವವು.
ಯಾವ ಮಗುವೇ ಆಗಲಿ ಹುಟ್ಟಿದ ಕೂಡಲೇ ಸಾಯುವದಿಲ್ಲ.
    ಆ ಪಟ್ಟಣದ ನಿವಾಸಿಗಳಲ್ಲಿ ಯಾರೂ ಕಡಿಮೆ ಆಯುಷ್ಯದಿಂದ ಸಾಯುವದಿಲ್ಲ.
ಪ್ರತಿಯೊಂದು ಮಗುವೂ ದೀರ್ಘಾಯುಷ್ಯವನ್ನು ಹೊಂದುವದು.
    ಪ್ರತಿಯೊಬ್ಬ ಯುವಕನೂ ಬಹಳ ಕಾಲ ಜೀವಿಸುವನು.
ಆಗ ನೂರು ವರ್ಷ ಪ್ರಾಯದವನು ಸಹ ಯೌವನಸ್ಥನೆಂದು ಕರೆಯಲ್ಪಡುವನು.
    ಒಬ್ಬನು ನೂರು ವರ್ಷವಾದರೂ ಬಾಳದಿದ್ದರೆ, ಜನರು ಅವನನ್ನು ಶಾಪ ಹೊಂದಿದವನೆಂದು ಹೇಳುವರು.

21 “ಆ ಪಟ್ಟಣದೊಳಗೆ ಒಬ್ಬನು ಮನೆಯನ್ನು ಕಟ್ಟಿದ್ದರೆ ಅದರಲ್ಲಿ ಅವನು ವಾಸಿಸುವನು.
    ಒಬ್ಬನು ದ್ರಾಕ್ಷಿತೋಟವನ್ನು ನೆಟ್ಟರೆ ಅವನು ಅದರ ಫಲಗಳನ್ನು ತಿನ್ನುವನು.
22 ಇನ್ನು ಮುಂದೆ ಯಾರಾದರೂ ಮನೆಯನ್ನು ಕಟ್ಟಿದರೆ,
    ಬೇರೆಯವರು ಅದನ್ನು ವಶಮಾಡಿಕೊಂಡು ಅದರಲ್ಲಿ ವಾಸಿಸುವದಿಲ್ಲ.
ಇನ್ನು ಮುಂದೆ ಯಾರಾದರೂ ದ್ರಾಕ್ಷಿತೋಟವನ್ನು ಮಾಡಿದರೆ
    ಅದರ ಫಲವನ್ನು ಇತರರು ತಿನ್ನುವದಿಲ್ಲ.
ಮರಗಳು ಎಷ್ಟು ಕಾಲ ಬೆಳೆಯುತ್ತವೋ
    ಅಷ್ಟುಕಾಲ ನನ್ನ ಜನರು ಜೀವಿಸುವರು.
ನಾನು ಆರಿಸಿಕೊಂಡ ಜನರು
    ತಾವು ಮಾಡಿದ ಕಾರ್ಯಗಳಲ್ಲಿ ಆನಂದಿಸುವರು.
23 ಇನ್ನು ಮುಂದೆ ಜನರು ಬಿಟ್ಟೀಕೆಲಸ ಮಾಡುವದಿಲ್ಲ.
    ಇನ್ನು ಮುಂದೆ ಮಕ್ಕಳನ್ನು ಹೆರುವಾಗ ಕೇಡಾಗುತ್ತದೆಯೆಂಬ ಭಯವಿರುವುದಿಲ್ಲ.
ನನ್ನ ಎಲ್ಲಾ ಜನರು ಮತ್ತು ಅವರ ಮಕ್ಕಳು ಯೆಹೋವನಿಂದ ಆಶೀರ್ವದಿಸಲ್ಪಡುವರು.
24 ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು.
    ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.
25 ತೋಳಗಳೂ ಕುರಿಮರಿಗಳೂ ಒಟ್ಟಾಗಿ ಮೇಯುವವು.
    ಸಿಂಹಗಳು ದನಕುರಿಗಳಂತೆ ಹುಲ್ಲನ್ನು ಮೇಯುತ್ತವೆ.
    ವಿಷದ ಹಾವುಗಳು ಕೇವಲ ಮಣ್ಣನ್ನೇ ತಿನ್ನುತ್ತವೆ.
ನನ್ನ ಪವಿತ್ರಪರ್ವತದಲ್ಲಿ ಅವು ಯಾರಿಗೂ ಕೇಡುಮಾಡುವುದಿಲ್ಲ; ಯಾರಿಗೂ ಭಯ ಹುಟ್ಟಿಸುವುದಿಲ್ಲ.”
ಇವು ಯೆಹೋವನ ನುಡಿಗಳು.

ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

1 ಕೊರಿಂಥದವರಿಗೆ 15:19-26

19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.

20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.

25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ.

ಅಪೊಸ್ತಲರ ಕಾರ್ಯಗಳು 10:34-43

ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ

34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!

37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.

39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.

42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.

ಯೋಹಾನ 20:1-18

ಬರಿದಾದ ಸಮಾಧಿ

(ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12)

20 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.

ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು. ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು. ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.

ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು. ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು. ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು. (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)

ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ

(ಮಾರ್ಕ 16:9-11)

10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು. 11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ, 12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.

13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು.

ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು. 14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.

15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು.

ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.

16 ಯೇಸು ಆಕೆಗೆ, “ಮರಿಯಳೇ” ಎಂದನು.

ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”.)

17 ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.

18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.

ಲೂಕ 24:1-12

ಯೇಸುವಿನ ಪುನರುತ್ಥಾನ

(ಮತ್ತಾಯ 28:1-10; ಮಾರ್ಕ 16:1-8; ಯೋಹಾನ 20:1-10)

24 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು. ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು. ಆದರೆ ಪ್ರಭು ಯೇಸುವಿನ ದೇಹವನ್ನು ಅವರು ಕಾಣಲಿಲ್ಲ. ಸ್ತ್ರೀಯರಿಗೆ ಇದು ಅರ್ಥವಾಗದೆ ಆಶ್ಚರ್ಯಪಡುತ್ತಿರಲು, ಹೊಳೆಯುವ ಉಡುಪುಗಳನ್ನು ಧರಿಸಿಕೊಂಡಿದ್ದ ಇಬ್ಬರು (ದೇವದೂತರು) ಅವರ ಬಳಿಯಲ್ಲಿ ನಿಂತರು. ಆ ಸ್ತ್ರೀಯರು ಬಹಳವಾಗಿ ಹೆದರಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡು ನಿಂತರು. ಆ ಮನುಷ್ಯರು, “ಬದುಕಿರುವ ವ್ಯಕ್ತಿಯನ್ನು ಇಲ್ಲಿ ಹುಡುಕುವುದೇಕೆ? ಇದು ಸತ್ತ ಜನರನ್ನು ಇಡುವ ಸ್ಥಳ! ಯೇಸು ಇಲ್ಲಿಲ್ಲ. ಆತನು ಜೀವಂತವಾಗಿ ಎದ್ದಿದ್ದಾನೆ! ಆತನು ಗಲಿಲಾಯದಲ್ಲಿದ್ದಾಗ ಹೇಳಿದ ವಿಷಯ ಜ್ಞಾಪಕವಿಲ್ಲವೋ? ಮನುಷ್ಯಕುಮಾರನು ಕೆಡುಕರ ವಶಕ್ಕೆ ಒಪ್ಪಿಸಲ್ಪಟ್ಟು; ಶಿಲುಬೆಯ ಮೇಲೆ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು ಎಂದು ಯೇಸು ತಿಳಿಸಲಿಲ್ಲವೇ!” ಎಂದು ಹೇಳಿದರು. ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡರು.

ಆ ಸ್ತ್ರೀಯರು ಸಮಾಧಿಯಿಂದ ಹೊರಟು ಹನ್ನೊಂದು ಮಂದಿ ಅಪೊಸ್ತಲರ ಮತ್ತು ಇತರ ಹಿಂಬಾಲಕರ ಬಳಿಗೆ ಹೋದರು. ಆ ಸ್ತ್ರೀಯರು ಸಮಾಧಿಯ ಬಳಿ ನಡೆದ ಸಂಗತಿಗಳನ್ನೆಲ್ಲಾ ಅವರಿಗೆ ಹೇಳಿದರು. 10 ಈ ಸ್ತ್ರೀಯರು ಯಾರೆಂದರೆ: ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಬೇರೆ ಕೆಲವು ಸ್ತ್ರೀಯರು. ನಡೆದ ಪ್ರತಿಯೊಂದನ್ನೂ ಈ ಸ್ತ್ರೀಯರು ಅಪೊಸ್ತಲರಿಗೆ ತಿಳಿಸಿದರು. 11 ಆದರೆ ಅಪೊಸ್ತಲರು ನಂಬಲಿಲ್ಲ. ಅವರಿಗೆ ಅದು ಹರಟೆಮಾತಾಗಿ ತೋರಿತು. 12 ಆದರೆ ಪೇತ್ರನು ಎದ್ದು ಇದು ನಿಜವೇ ಎಂದು ನೋಡಲು ಸಮಾಧಿಗೆ ಓಡಿಹೋದನು. ಅವನು ಒಳಗೆ ಹೋಗಿ ಬಗ್ಗಿ ನೋಡಿದಾಗ ಯೇಸುವಿನ ದೇಹಕ್ಕೆ ಸುತ್ತಿದ್ದ ಬಟ್ಟೆಯನ್ನು ಮಾತ್ರ ನೋಡಿದನು. ಕೇವಲ ಬಟ್ಟೆಯು ಅಲ್ಲಿ ಬಿದ್ದಿತ್ತು. ನಡೆದ ಈ ಸಂಗತಿಯ ಬಗ್ಗೆ ಪೇತ್ರನು ಆಶ್ಚರ್ಯಪಡುತ್ತಾ ಹೊರಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International