Revised Common Lectionary (Semicontinuous)
150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
2 ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
3 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
ಹಾರ್ಪ್ವಾದ್ಯಗಳನ್ನೂ ಲೈರ್ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
4 ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
5 ತಾಳಗಳಿಂದ ಆತನನ್ನು ಸ್ತುತಿಸಿರಿ!
ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!
6 ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಯೆಹೋವನಿಗೆ ಸ್ತೋತ್ರವಾಗಲಿ!
19 ನಿನ್ನ ಸಹೋದರರು ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೊತೆಯಲ್ಲಿ ಏಲಾ ಕಣಿವೆಯಲ್ಲಿದ್ದಾರೆ. ಅವರು ಫಿಲಿಷ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.
20 ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. 21 ಇಸ್ರೇಲರು ಮತ್ತು ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾಗಲು ಸಾಲುಸಾಲಾಗಿ ನಿಲ್ಲುತ್ತಿದ್ದರು.
22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು. 23 ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.
24 ಇಸ್ರೇಲ್ ಸೈನಿಕರು ಗೊಲ್ಯಾತನನ್ನು ಕಂಡು ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು. 25 ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ನೋಡಿದಿರಾ! ಅವನನ್ನು ನೋಡಿ! ಆ ಗೊಲ್ಯಾತನು ಪ್ರತಿನಿತ್ಯ ಹೊರಗೆ ಬಂದು ಇಸ್ರೇಲರನ್ನು ಮತ್ತೆಮತ್ತೆ ಹಾಸ್ಯಮಾಡುತ್ತಿದ್ದಾನೆ. ಅವನನ್ನು ಕೊಂದವನಿಗೆ ಸೌಲನು ಅಪಾರ ಐಶ್ವರ್ಯವನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಅವನಿಗೆ ಕೊಟ್ಟು ಮದುವೆ ಮಾಡುತ್ತಾನೆ; ಅಲ್ಲದೆ ಅವನ ವಂಶವನ್ನು ಇಸ್ರೇಲಿನಲ್ಲಿ ಸ್ವತಂತ್ರಗೊಳಿಸುತ್ತಾನೆ” ಎಂದು ಹೇಳಿದನು.
26 ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು.
27 ಗೊಲ್ಯಾತನನ್ನು ಕೊಲ್ಲುವದರಿಂದ ಸಿಗುವ ಬಹುಮಾನವನ್ನು ಇಸ್ರೇಲರು ದಾವೀದನಿಗೆ ತಿಳಿಸಿದರು. 28 ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು.
29 ಅದಕ್ಕೆ ದಾವೀದನು, “ನಾನೇನು ಮಾಡಿದೆ? ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನಾನು ಕೇವಲ ಮಾತನಾಡುತ್ತಿದ್ದೆ” ಎಂದು ಹೇಳಿದನು. 30 ದಾವೀದನು ಬೇರೆ ಜನರ ಕಡೆಗೆ ತಿರುಗಿ, ಅವರಿಗೂ ಅದೇ ಪ್ರಶ್ನೆಗಳನ್ನು ಕೇಳಿದನು. ಅವರು ಸಹ ಅದೇ ಉತ್ತರಗಳನ್ನು ದಾವೀದನಿಗೆ ಕೊಟ್ಟರು.
31 ದಾವೀದನು ಮಾತನಾಡುತ್ತಿರುವುದನ್ನು ಕೆಲವು ಜನರು ಕೇಳಿಸಿಕೊಂಡರು. ಅವರು ಸೌಲನಿಗೆ ದಾವೀದನ ಬಗ್ಗೆ ಹೇಳಿದರು. ಸೌಲನು ದಾವೀದನನ್ನು ಅವನ ಹತ್ತಿರ ಕರೆತರಲು ಅಪ್ಪಣೆ ಮಾಡಿದನು. 32 ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.
ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ
17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.
ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು. 22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.
25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.
Kannada Holy Bible: Easy-to-Read Version. All rights reserved. © 1997 Bible League International