Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೋಬನು 14:1-14

14 ಯೋಬನು ಹೇಳಿದನು:

“ನಾವು ಮನುಷ್ಯರಷ್ಟೇ.
    ನಮ್ಮ ಅಲ್ಪಜೀವಿತವು ಕಷ್ಟಗಳಿಂದ ತುಂಬಿಕೊಂಡಿದೆ.
ಮನುಷ್ಯನ ಜೀವಿತವು ಹೂವಿನಂತೆ ಬೇಗನೆ ಬೆಳೆದು ಒಣಗಿಹೋಗುವುದು.
    ಮನುಷ್ಯನ ಜೀವಿತವು ನೆರಳಿನಂತೆ ಕ್ಷಣಿಕವಾದದ್ದು.
ದೇವರೇ, ಇಂಥವನಾದ ನನ್ನ ಮೇಲೆ ಕಣ್ಣಿಟ್ಟು
    ನ್ಯಾಯಾಲಯಕ್ಕೆ ಎಳೆದುಕೊಂಡು ಹೋಗುವಿಯಾ?

“ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
ಮನುಷ್ಯನ ದಿನಗಳು ಇಷ್ಟೇ ಎಂದು ನಿರ್ಣಯವಾಗಿದೆ;
    ಅವನ ತಿಂಗಳುಗಳನ್ನು ನೀನು ನಿರ್ಣಯಿಸಿರುವೆ.
    ಅವನ ಆಯುಷ್ಯಕ್ಕೆ ದಾಟಲಾರದ ಮೇರೆಯನ್ನು ಹಾಕಿರುವೆ.
ದೇವರೇ, ನಿನ್ನ ದೃಷ್ಟಿಯನ್ನು ಮನುಷ್ಯನ ಕಡೆಯಿಂದ ತಿರುಗಿಸು.
    ಅವನನ್ನು ಅವನ ಪಾಡಿಗೆ ಬಿಟ್ಟುಬಿಡು.
    ಅವನು ಕೂಲಿಯವನಂತಾದರೂ ಜೀವಿಸಲಿ.

“ಮರಕ್ಕೆ ನಿರೀಕ್ಷೆಯಿದೆ.
    ಕಡಿದುಹಾಕಲ್ಪಟ್ಟರೂ ಅದು ಮತ್ತೆ ಚಿಗುರಬಹುದು;
    ಹೊಸ ಕವಲುಗಳನ್ನು ಮೊಳೆಯಿಸುತ್ತಲೇ ಇರುವುದು.
ಅದರ ಬೇರುಗಳು ನೆಲದೊಳಗೆ ಮುದಿಯಾದರೂ
    ಅದರ ಬುಡವು ನೆಲದಲ್ಲಿ ಸತ್ತುಹೋದರೂ,
ಅದು ನೀರಿನಿಂದ ಮತ್ತೆ ಹೊಸದಾಗಿ ಬೆಳೆಯುವುದು;
    ಎಳೆ ಗಿಡದಂತೆ ಕವಲೊಡೆಯುವುದು.
10 ಮನುಷ್ಯನಾದರೋ ಸತ್ತು ಕೊನೆಗೊಳ್ಳುವನು.
    ಪ್ರಾಣ ಹೋದಾಗ ಇಲ್ಲವಾಗುವನು.
11 ಸರೋವರದಿಂದ ನೀರು ಕಾಣೆಯಾಗುವವರೆಗೂ
    ನದಿಯ ನೀರು ಒಣಗಿಹೋಗುವವರೆಗೂ
12 ಸತ್ತ ಮನುಷ್ಯನು ಮಲಗಿಕೊಂಡೇ ಇರುವನು.
    ಅವನು ಮತ್ತೆ ಮೇಲೇಳುವುದಿಲ್ಲ.
ಆಕಾಶವು ಅಳಿದುಹೋಗುವವರೆಗೆ
    ಅವನು ನಿದ್ರೆಯಿಂದ ಎಬ್ಬಿಸಲ್ಪಡುವುದಿಲ್ಲ.

13 “ನಿನ್ನ ಕೋಪವು ಇಳಿಯುವ ತನಕ ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟಿದ್ದು,
    ನೀನು ಗೊತ್ತುಪಡಿಸಿದ ಸಮಯದಲ್ಲಿ ನನ್ನನ್ನು ಜ್ಞಾಪಿಸಿಕೊಂಡಿದ್ದರೆ
    ಎಷ್ಟೋ ಒಳ್ಳೆಯದಾಗುತ್ತಿತ್ತು.
14 ಸತ್ತ ಮನುಷ್ಯನು ಮತ್ತೆ ಬದುಕುವನೇ?
    ಬದುಕುವುದಾಗಿದ್ದರೆ, ನನಗೆ ಬಿಡುಗಡೆಯಾಗುವ ತನಕ ನನ್ನ ಎಲ್ಲಾ ಕಷ್ಟದ ದಿನಗಳಲ್ಲಿಯೂ ಕಾದುಕೊಂಡಿರುವೆ.

ಪ್ರಲಾಪಗಳು 3:1-9

ಸಂಕಟದ ಅರ್ಥ

ಯೆಹೋವನ ರೌದ್ರ ದಂಡದಿಂದ
    ಸಂಕಟವನ್ನು ಅನುಭವಿಸಿರುವವನು ನಾನೇ!
ಯೆಹೋವನು ನನ್ನನ್ನು ಬೆಳಕೇ ಇಲ್ಲದ
    ಕತ್ತಲೆಗೆ ನಡೆಸಿಕೊಂಡು ಬಂದನು.
ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು.
    ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು.
ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ.
    ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು.
ಆತನು ನನ್ನನ್ನು ಕಠೋರತೆಯಿಂದಲೂ
    ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.
ಬಹುಕಾಲದ ಹಿಂದೆಯೇ ಸತ್ತಿರುವವರಂತೆ
    ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ.
ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು.
    ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು.
ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ
    ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ.
ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ.
    ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ.

ಪ್ರಲಾಪಗಳು 3:19-24

19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
    ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
    ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
    ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
    ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
    ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
    ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.

ಕೀರ್ತನೆಗಳು 31:1-4

ರಚನೆಗಾರ: ದಾವೀದ.

31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ಕರುಣೆತೋರಿ ನನ್ನನ್ನು ರಕ್ಷಿಸು.
    ನನಗೆ ಕಿವಿಗೊಡು.
    ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
    ನನ್ನನ್ನು ಕಾಪಾಡು!
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
    ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
    ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
    ನೀನೇ ನನ್ನ ಆಶ್ರಯಸ್ಥಾನವಾಗಿರುವೆ.

ಕೀರ್ತನೆಗಳು 31:15-16

15 ನನ್ನ ಜೀವವು ನಿನ್ನ ಕೈಯಲ್ಲಿದೆ.
    ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[a] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
    ಕರುಣೆಯಿಂದ ನನ್ನನ್ನು ರಕ್ಷಿಸು!

1 ಪೇತ್ರನು 4:1-8

ಮಾರ್ಪಾಟಾದ ಜೀವಿತ

ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ. ಆದ್ದರಿಂದ ಈ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.

ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದ್ದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು. ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು. ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.

ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ

ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ.

ಮತ್ತಾಯ 27:57-66

ಯೇಸುವಿನ ಸಮಾಧಿ

(ಮಾರ್ಕ 15:42-47; ಲೂಕ 23:50-56; ಯೋಹಾನ 19:38-42)

57 ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು. 58 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಕೇಳಿದನು. ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡುವಂತೆ ಪಿಲಾತನು ಸೈನಿಕರಿಗೆ ಅಪ್ಪಣೆ ಮಾಡಿದನು. 59 ಯೋಸೇಫನು ಆತನ ದೇಹವನ್ನು ತೆಗೆದುಕೊಂಡು, ಅದನ್ನು ಹೊಸ ನಾರುಮಡಿಯ ಬಟ್ಟೆಯಿಂದ ಸುತ್ತಿ 60 ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯ ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು. 61 ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಯ ಹತ್ತಿರ ಕುಳಿತುಕೊಂಡಿದ್ದರು.

ಯೇಸುವಿನ ಸಮಾಧಿಗೆ ಕಾವಲು

62 ಶುಕ್ರವಾರ ಮುಗಿದ ಮೇಲೆ ಮಹಾಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, 63 “ಸ್ವಾಮೀ, ಆ ಸುಳ್ಳುಗಾರನು ಬದುಕಿದ್ದಾಗ, ‘ಮೂರು ದಿನಗಳ ಬಳಿಕ ನಾನು ಪುನರುತ್ಥಾನ ಹೊಂದುತ್ತೇನೆ’ ಎಂದು ಹೇಳಿದ್ದು ನಮಗಿನ್ನೂ ನೆನಪಿದೆ. 64 ಆದ್ದರಿಂದ ಮೂರು ದಿನಗಳವರೆಗೆ ಆ ಸಮಾಧಿಯನ್ನು ಭದ್ರವಾಗಿ ಕಾಯಲು ಆಜ್ಞಾಪಿಸಿರಿ. ಅವನ ಶಿಷ್ಯರು ಬಂದು, ಅವನ ದೇಹವನ್ನು ಕದ್ದುಕೊಂಡು ಹೋಗಿ, ಅವನು ಸಮಾಧಿಯಿಂದ ಮೇಲೆದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದೀತು” ಎಂದು ಹೇಳಿದರು.

65 ಪಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು. 66 ಅವರು ಹೋಗಿ, ಸಮಾಧಿಗೆ ಮುದ್ರೆ ಹಾಕಿ, ಸೈನಿಕರನ್ನು ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.

ಯೋಹಾನ 19:38-42

ಯೇಸುವಿನ ಶವಸಂಸ್ಕಾರ

(ಮತ್ತಾಯ 27:57-61; ಮಾರ್ಕ 15:42-47; ಲೂಕ 23:50-56)

38 ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.

39 ನಿಕೊದೇಮನೂ ಯೋಸೇಫನೊಂದಿಗೆ ಹೋದನು. ಹಿಂದೊಮ್ಮೆ, ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನೊಂದಿಗೆ ಮಾತಾಡಿದ್ದವನೇ ನಿಕೊದೇಮನು. ಅವನು ಸುಮಾರು ಐವತ್ತು ಕಿಲೋಗ್ರಾಮಿನಷ್ಟು ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಬಂದನು. ಆ ಸುಗಂಧದ್ರವ್ಯವು ರಕ್ತ ಬೋಳ ಮತ್ತು ಅಗರುಗಳ ಮಿಶ್ರಣವಾಗಿತ್ತು. 40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.) 41 ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳದಲ್ಲೇ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿಯಿತ್ತು. ಅದರಲ್ಲಿ ಹಿಂದೆಂದೂ ಯಾರನ್ನೂ ಸಮಾಧಿ ಮಾಡಿರಲಿಲ್ಲ. 42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International