Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ವಿಮೋಚನಕಾಂಡ 12:21-27

21 ಆದ್ದರಿಂದ ಮೋಶೆಯು ಹಿರಿಯರ ಸಭೆ ಸೇರಿಸಿ, “ನಿಮ್ಮ ಕುಟುಂಬಗಳಿಗೆ ಬೇಕಾದ ಪಶುಗಳನ್ನು ತೆಗೆದುಕೊಂಡು ಪಸ್ಕಕ್ಕಾಗಿ ಅವುಗಳನ್ನು ಕೊಯ್ಯಿರಿ. 22 ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ರಕ್ತ ತುಂಬಿರುವ ಪಾತ್ರೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗಬಾರದು. 23 ಆ ಸಮಯದಲ್ಲಿ ಚೊಚ್ಚಲಾದವುಗಳನ್ನು ಸಂಹರಿಸಲು ಯೆಹೋವನು ಈಜಿಪ್ಟಿನ ಮೂಲಕ ಹಾದುಹೋಗುವನು. ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿದ ರಕ್ತವನ್ನು ಯೆಹೋವನು ನೋಡಿ ಆ ಮನೆಯನ್ನು ಸಂರಕ್ಷಿಸುವನು.[a] ಸಂಹಾರಕನು ನಿಮ್ಮ ಮನೆಯೊಳಗೆ ಬಂದು ಸಂಹರಿಸಲು ಯೆಹೋವನು ಬಿಡುವುದಿಲ್ಲ. 24 ನೀವು ಈ ಆಜ್ಞೆಯನ್ನು ಜ್ಞಾಪಕದಲ್ಲಿಡಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ. 25 ಯೆಹೋವನು ನಿಮಗೆ ಕೊಡಲಿರುವ ದೇಶಕ್ಕೆ ನೀವು ಹೋದಾಗಲೂ ಈ ಹಬ್ಬವನ್ನು ಆಚರಿಸಬೇಕು. 26 ‘ಈ ಹಬ್ಬವನ್ನು ಮಾಡುವುದೇಕೆ?’ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ, 27 ‘ಇದು ಯೆಹೋವನನ್ನು ಸನ್ಮಾನಿಸಲು ಮಾಡುವ ಪಸ್ಕಹಬ್ಬವಾಗಿದೆ. ಯಾಕೆಂದರೆ ನಾವು ಈಜಿಪ್ಟಿನಲ್ಲಿದ್ದಾಗ ಯೆಹೋವನು ಇಸ್ರೇಲರ ಮನೆಗಳನ್ನು ಬಿಟ್ಟು ದಾಟಿಹೋದನು; ಈಜಿಪ್ಟಿನವರನ್ನು ಸಂಹರಿಸಿದನು; ಆದರೆ ಆತನು ನಮ್ಮ ಮನೆಗಳಲ್ಲಿದ್ದವರನ್ನು ರಕ್ಷಿಸಿದನು’ ಎಂದು ಹೇಳಬೇಕು.

“ಆಗ ಮೋಶೆಯ ಮಾತನ್ನು ಕೇಳುತ್ತಿದ್ದ ಇಸ್ರೇಲರು ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದರು.”

ಯೋಹಾನ 11:45-57

ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು

(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)

45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.

49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.

51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.

53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.

55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International