Revised Common Lectionary (Semicontinuous)
ರಚನೆಗಾರ: ದಾವೀದ.
53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
2 ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
3 ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!
4 ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”
5 ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.
6 ಚೀಯೋನ್ ಪರ್ವತದ ಮೇಲಿರುವಾತನು
ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
ಯಾಕೋಬನೇ ಉಲ್ಲಾಸಿಸು!
ಇಸ್ರೇಲೇ ಬಹು ಸಂತೋಷಪಡು.
ದೋಷಪರಿಹಾರಕ ದಿನ
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಏಳನೆಯ ತಿಂಗಳಿನ ಹತ್ತನೆಯ ದಿನವು ದೋಷಪರಿಹಾರಕ ದಿನವಾಗಿರುವುದು. ಆಗ ಪವಿತ್ರ ಸಭೆಯಾಗಿ ಸೇರಬೇಕು. ನೀವು ಆಹಾರವನ್ನು ತಿನ್ನಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಕಾಣಿಕೆಯನ್ನು ಸಲ್ಲಿಸಬೇಕು. 28 ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಯಾಕೆಂದರೆ ಅದು ದೋಷಪರಿಹಾರಕ ದಿನವಾಗಿರುತ್ತದೆ. ಆ ದಿನದಲ್ಲಿ ಯಾಜಕರು ಯೆಹೋವನ ಸನ್ನಿಧಿಗೆ ಹೋಗಿ ಆಚಾರವಿಧಿಗಳ ಪ್ರಕಾರ ನಿಮಗಾಗಿ ಪ್ರಾಯಶ್ಚಿತ್ತ ಮಾಡುವರು.
29 “ಈ ದಿನದಲ್ಲಿ ಯಾವನಾದರೂ ಉಪವಾಸ ಮಾಡದಿದ್ದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು. 30 ಈ ದಿನದಲ್ಲಿ ಕೆಲಸಮಾಡುವವನನ್ನು ಇಸ್ರೇಲರೊಂದಿಗೆ ಇರದಂತೆ ನಾಶಮಾಡುವೆ. 31 ನೀವು ಅಂದು ಯಾವ ಕೆಲಸವನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ ಈ ಕಟ್ಟಳೆ ನಿಮಗೆ ಶಾಶ್ವತವಾಗಿದೆ. 32 ಅದು ನಿಮಗಾಗಿ ವಿಶ್ರಾಂತಿಯ ವಿಶೇಷ ದಿನವಾಗಿರುವುದು. ನೀವು ಆಹಾರವನ್ನು ತಿನ್ನಬಾರದು.[a] ತಿಂಗಳಿನ ಒಂಭತ್ತನೆಯ ದಿನದ ನಂತರ ಸಾಯಂಕಾಲದಲ್ಲಿ ಈ ವಿಶ್ರಾಂತಿಯ ವಿಶೇಷ ದಿನವನ್ನು ಪ್ರಾರಂಭಿಸುವಿರಿ. ಈ ವಿಶ್ರಾಂತಿಯ ವಿಶೇಷ ದಿನವು ಆ ಸಾಯಂಕಾಲದಿಂದ ಹಿಡಿದು ಮರುದಿನ ಸಾಯಂಕಾಲದವರೆಗೆ ಮುಂದುವರಿಯುವುದು.”
ಪರ್ಣಶಾಲೆಗಳ ಹಬ್ಬ
33 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 34 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಹದಿನೈದನೆಯ ದಿನವು ಪರ್ಣಶಾಲೆಗಳ ಹಬ್ಬವಾಗಿರುತ್ತದೆ. ಯೆಹೋವನ ಈ ಹಬ್ಬದ ಕಾಲವು ಏಳು ದಿನಗಳವರೆಗೆ ಮುಂದುವರಿಯುವುದು. 35 ಮೊದಲನೆಯ ದಿನದಲ್ಲಿ ಪವಿತ್ರಸಭೆಯಾಗಿ ಸೇರಬೇಕು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. 36 ನೀವು ಏಳು ದಿನಗಳವರೆಗೆ ಅಗ್ನಿಯ ಮೂಲಕ ಯೆಹೋವನಿಗೆ ಯಜ್ಞವನ್ನು ಅರ್ಪಿಸಬೇಕು. ಎಂಟನೆಯ ದಿನದಲ್ಲಿ ಇನ್ನೊಂದು ಬಾರಿ ಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯಜ್ಞವನ್ನು ಅರ್ಪಿಸಬೇಕು. ಇದು ಪವಿತ್ರಸಭೆಯಾಗಿರುವುದು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು.
37 “ಯೆಹೋವನಿಗೆ ವಿಶೇಷ ಹಬ್ಬದ ದಿನಗಳು ಇವುಗಳೇ. ಈ ವಿಶೇಷ ದಿನಗಳಲ್ಲಿ ನೀವು ಪವಿತ್ರಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾಗುವ ಸರ್ವಾಂಗಹೋಮ, ಧಾನ್ಯಸಮರ್ಪಣೆ, ಯಜ್ಞಗಳು ಮತ್ತು ಪಾನದ್ರವ್ಯಗಳನ್ನು ಅರ್ಪಿಸಬೇಕು. ನೀವು ಆ ಕಾಣಿಕೆಗಳನ್ನು ಸರಿಯಾದ ಸಮಯದಲ್ಲಿ ಅರ್ಪಿಸಬೇಕು. 38 ಯೆಹೋವನನ್ನು ಜ್ಞಾಪಕಮಾಡುವ ಸಬ್ಬತ್ ದಿನಗಳ ಜೊತೆಗೆ ನೀವು ಆ ಹಬ್ಬದ ದಿನಗಳನ್ನು ಆಚರಿಸಬೇಕು. ನೀವು ಆ ಕಾಣಿಕೆಗಳನ್ನು ನಿಮ್ಮ ಇತರ ಕಾಣಿಕೆಗಳ ಜೊತೆಗೆ ಅರ್ಪಿಸಬೇಕು. ನೀವು ಮಾಡಿದ ಹರಕೆಗಳನ್ನು ನೆರವೇರಿಸುವುದಕ್ಕಾಗಿ ಯೆಹೋವನಿಗೆ ಅರ್ಪಿಸುವ ಕಾಣಿಕೆಗಳ ಜೊತೆಗೆ ಅವುಗಳನ್ನು ಅರ್ಪಿಸಬೇಕು. ನೀವು ಯೆಹೋವನಿಗೆ ಅರ್ಪಿಸುವ ಯಾವುದೇ ವಿಶೇಷ ಸಮರ್ಪಣೆಗಳೊಂದಿಗೆ ಅವುಗಳನ್ನು ಸಮರ್ಪಿಸಬೇಕು.
39 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ನಿಮ್ಮ ದೇಶದಲ್ಲಿ ಪೈರುಗಳನ್ನು ಸಂಗ್ರಹಿಸಿದ ನಂತರ, ಏಳು ದಿನಗಳವರೆಗೆ ನೀವು ಯೆಹೋವನ ಹಬ್ಬವನ್ನು ಆಚರಿಸಬೇಕು. ನೀವು ಮೊದಲನೆಯ ಮತ್ತು ಎಂಟನೆಯ ದಿನದಲ್ಲಿ ವಿಶ್ರಮಿಸಬೇಕು. 40 ಪ್ರಥಮ ದಿನದಲ್ಲಿ ನೀವು ಮರಗಳಿಂದ ಉತ್ತಮ ಹಣ್ಣುಗಳನ್ನೂ ಖರ್ಜೂರಮರದ ಗರಿಗಳನ್ನೂ ಎಲೆತುಂಬಿದ ಕೊಂಬೆಗಳನ್ನೂ ವಿಲೋಸಸ್ಯಗಳನ್ನೂ ತೆಗೆದುಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈ ಹಬ್ಬದ ದಿನವನ್ನು ಏಳು ದಿನಗಳವರೆಗೆ ಆಚರಿಸಬೇಕು. 41 ನೀವು ಪ್ರತಿ ವರ್ಷ ಏಳು ದಿನಗಳವರೆಗೆ ಈ ಹಬ್ಬದ ದಿನವನ್ನು ಆಚರಿಸಬೇಕು. ಈ ನಿಯಮ ಶಾಶ್ವತವಾಗಿದೆ. ಏಳನೆಯ ತಿಂಗಳಲ್ಲಿ ಈ ಹಬ್ಬದ ದಿನವನ್ನು ನೀವು ಆಚರಿಸಬೇಕು.
ಪರಲೋಕದಲ್ಲಿ ದೇವರಿಗೆ ಸ್ತೋತ್ರ
19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
7 ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
Kannada Holy Bible: Easy-to-Read Version. All rights reserved. © 1997 Bible League International