Revised Common Lectionary (Semicontinuous)
91 ಮಹೋನ್ನತನ ಮೊರೆಹೊಕ್ಕಿರುವವನು
ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
2 ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
9 ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”
ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ
3 ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.
2 ಹುಟ್ಟುವ ಸಮಯ,
ಸಾಯುವ ಸಮಯ.
ನೆಡುವ ಸಮಯ,
ಸಸಿಗಳನ್ನು ಕೀಳುವ ಸಮಯ.
3 ಕೊಲ್ಲುವ ಸಮಯ,
ವಾಸಿಮಾಡುವ ಸಮಯ.
ನಾಶಮಾಡುವ ಸಮಯ,
ಕಟ್ಟುವ ಸಮಯ.
4 ಅಳುವ ಸಮಯ,
ನಗುವ ಸಮಯ.
ಗೋಳಾಡುವ ಸಮಯ,
ಕುಣಿದಾಡುವ ಸಮಯ.
5 ಆಯುಧಗಳನ್ನು ಬಿಸಾಡುವ ಸಮಯ,
ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ,
ಅಪ್ಪಿಕೊಳ್ಳದಿರುವ ಸಮಯ.
6 ಹುಡುಕುವ ಸಮಯ,
ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ,
ವಸ್ತುಗಳನ್ನು ಬಿಸಾಡುವ ಸಮಯ.
7 ಬಟ್ಟೆಯನ್ನು ಹರಿಯುವ ಸಮಯ,
ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ,
ಮಾತಾಡುವ ಸಮಯ.
8 ಪ್ರೀತಿ ಮಾಡುವ ಸಮಯ,
ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ,
ಶಾಂತಿಯಿಂದಿರುವ ಸಮಯ.
ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ
27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.
ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.
29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.
ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.
30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.
34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.
35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.
Kannada Holy Bible: Easy-to-Read Version. All rights reserved. © 1997 Bible League International