Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.
10 ಆ ದುಷ್ಟರು ಗರ್ವಿಷ್ಠರಾಗಿದ್ದಾರೆ.
    ಅವರು ಜಂಬಕೊಚ್ಚಿಕೊಳ್ಳುತ್ತಾರೆ.
11 ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ;
    ಆಕ್ರಮಣಮಾಡಲು ಸಿದ್ಧರಾಗಿದ್ದಾರೆ.[a]
12 ಅವರು ಬೇಟೆಗಾಗಿ ಕಾಯುತ್ತಿರುವ ಸಿಂಹಗಳಂತಿದ್ದಾರೆ;
    ಅಡಗಿಕೊಂಡು ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಂತಿದ್ದಾರೆ.

13 ಯೆಹೋವನೇ, ಎದ್ದೇಳು,[b] ವೈರಿಗಳ ಬಳಿಗೆ ಹೋಗು.
    ಅವರನ್ನು ಶರಣಾಗತರನ್ನಾಗಿ ಮಾಡು.
    ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ
    ನನ್ನನ್ನು ತಪ್ಪಿಸಿ ಕಾಪಾಡು.
ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ.
    ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು.
    ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.

15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
    ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

1 ಪೂರ್ವಕಾಲವೃತ್ತಾಂತ 21:1-17

ಇಸ್ರೇಲರನ್ನು ಲೆಕ್ಕಿಸಿ ದಾವೀದನು ಪಾಪಮಾಡಿದನು

21 ಸೈತಾನನು ಇಸ್ರೇಲರಿಗೆ ವಿರುದ್ಧವಾಗಿದ್ದನು. ಅವನು ಇಸ್ರೇಲರನ್ನು ಲೆಕ್ಕಿಸುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು.

ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು.

ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು. ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು. ಯೋವಾಬನು ಲೇವಿ ಕುಲದವರನ್ನು ಮತ್ತು ಬೆನ್ಯಾಮೀನನ ಕುಲದವರನ್ನು ಜನಗಣತಿಯಲ್ಲಿ ಸೇರಿಸಲಿಲ್ಲ; ಯಾಕೆಂದರೆ ದಾವೀದನ ಆಜ್ಞೆಯು ಅವನಿಗೆ ಸರಿಕಾಣಲಿಲ್ಲ; ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು.

ಇಸ್ರೇಲಿಗೆ ದೇವರ ದಂಡನೆ

ದಾವೀದನು ದೇವರಿಗೆ, “ನಾನು ಕೇವಲ ಹುಚ್ಚು ಕೆಲಸ ಮಾಡಿದೆನು. ಇಸ್ರೇಲರ ಜನಗಣತಿ ಮಾಡಿ ಪಾಪಮಾಡಿದೆನು. ಈಗ ನಿನ್ನ ಸೇವಕನಾದ ನನ್ನ ಪಾಪವನ್ನು ನಿರ್ಮೂಲ ಮಾಡು” ಎಂದು ಬೇಡಿಕೊಂಡನು.

9-10 ಗಾದನು ದಾವೀದನ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳು: ‘ಇದು ಯೆಹೋವನ ನುಡಿ. ನಾನು ನಿನಗೆ ಕೊಡಲಿರುವ ಮೂರು ಶಿಕ್ಷೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನೀನು ಆರಿಸಿಕೊಂಡ ಪ್ರಕಾರವೇ ನಾನು ನಿನ್ನನ್ನು ಶಿಕ್ಷಿಸುವೆನು’” ಅಂದನು.

11-12 ಗಾದನು ದಾವೀದನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ: ‘ನೀನು ಸಹಿಸಿಕೊಳ್ಳಬಲ್ಲ ಶಿಕ್ಷೆಯನ್ನು ಆರಿಸಿಕೊ. ಮೂರು ವರ್ಷಗಳ ಬರಗಾಲ; ಅಥವಾ ನಿನ್ನ ವೈರಿಗಳಿಗೆ ಮೂರು ತಿಂಗಳು ಶರಣಾಗುವಿಕೆ; ಅಥವಾ ಮೂರು ದಿವಸ ಕಾಲ ಭಯಂಕರ ಕಾಯಿಲೆಯು ನಿನ್ನ ರಾಜ್ಯವೆಲ್ಲಾ ಹಬ್ಬುವದು; ಯೆಹೋವನ ದೂತನು ಇಡೀ ಇಸ್ರೇಲನ್ನು ದಾಟಿ ಸಿಕ್ಕಿದವರನ್ನೆಲ್ಲಾ ಹತಿಸಿಬಿಡುವನು.’ ದಾವೀದನೇ, ನನ್ನನ್ನು ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.”

13 ಆಗ ಗಾದನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನೆ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಬಾರದು. ಯೆಹೋವನು ಕರುಣೆಯುಳ್ಳವನು. ಆದ್ದರಿಂದ ಆತನೇ ನಿರ್ಧರಿಸಲಿ.”

14 ಆಗ ಯೆಹೋವನು ಇಸ್ರೇಲರ ಮೇಲೆ ಬಹು ಘೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು. 15 ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು.

16 ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು. 17 ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.

1 ಯೋಹಾನ 2:1-6

ಯೇಸು ನಮ್ಮ ಸಹಾಯಕ

ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.

ದೇವರ ಆಜ್ಞೆಗಳಿಗೆ ನಾವು ವಿಧೇಯರಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ. “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ. ಆದರೆ ಯಾವನಾದರೂ ದೇವರ ವಾಕ್ಯಕ್ಕೆ ವಿಧೇಯನಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇದರಿಂದಲೇ ತಿಳಿದುಕೊಳ್ಳುತ್ತೇವೆ. ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೇಸು ಜೀವಿಸಿದಂತೆಯೇ ಜೀವಿಸಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International