Revised Common Lectionary (Semicontinuous)
ರಚನೆಗಾರ: ದಾವೀದ.
39 “ನಾನು ಜಾಗರೂಕನಾಗಿ ಮಾತಾಡುವೆ.
ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.
2 ನಾನು ಮೌನವಾಗಿದ್ದೆನು.
ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
ಆದರೆ ನನ್ನ ವೇದನೆಯು ಹೆಚ್ಚಾಯಿತು.
3 ನಾನು ಬಹುಕೋಪಗೊಂಡಿದ್ದೆ.
ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
ಆಗ ನಾನು ಬಾಯಿತೆರೆದು,
4 ಯೆಹೋವನೇ, ನನ್ನ ಗತಿಯನ್ನು ತಿಳಿಸು!
ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
ನಾನೆಷ್ಟು ಕಾಲ ಬದುಕುವೆ?
5 ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
ಯಾವನೂ ಸದಾಕಾಲ ಬದುಕುವುದಿಲ್ಲ!
6 ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.
7 ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
ನನ್ನ ನಿರೀಕ್ಷೆಯು ನೀನೇ.
8 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
9 ನಾನು ಬಾಯಿತೆರೆದು ಮಾತಾಡುವುದಿಲ್ಲ.
ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.
12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
ನನ್ನ ಮೊರೆಗೆ ಕಿವಿಗೊಡು!
ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!
17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)
21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತುತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.
25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ.
ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ?
(ಮತ್ತಾಯ 13:31-33; ಮಾರ್ಕ 4:30-32)
18 ಬಳಿಕ ಯೇಸು, “ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19 ದೇವರ ರಾಜ್ಯ ಸಾಸಿವೆಕಾಳಿನಂತಿದೆ. ಒಬ್ಬನು ತನ್ನ ತೋಟದಲ್ಲಿ ಈ ಬೀಜವನ್ನು ಹಾಕುತ್ತಾನೆ. ಅದು ಬೆಳೆದು ಮರವಾಗುತ್ತದೆ. ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ” ಎಂದು ಹೇಳಿದನು.
20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21 ಅದು, ಸ್ತ್ರೀಯೊಬ್ಬಳು ರೊಟ್ಟಿಮಾಡುವುದಕ್ಕಾಗಿ ದೊಡ್ಡ ಪಾತ್ರೆಯೊಂದರಲ್ಲಿರುವ ಹಿಟ್ಟಿಗೆ ಬೆರೆಸುವ ಹುಳಿಯಂತಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲ ಉಬ್ಬಿಸುತ್ತದೆ.”
Kannada Holy Bible: Easy-to-Read Version. All rights reserved. © 1997 Bible League International