Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ಆದಿಕಾಂಡ 14:17-24

17 ಅಬ್ರಾಮನು ಕೆದೊರ್ಲಗೋಮರನನ್ನೂ ಮತ್ತು ಅವನೊಡನಿದ್ದ ರಾಜರುಗಳನ್ನೂ ಸೋಲಿಸಿದ ಮೇಲೆ ತನ್ನ ಮನೆಗೆ ಹಿಂತಿರುಗಿದನು. ಆಗ ಸೊದೋಮಿನ ರಾಜನು ಅಬ್ರಾಮನನ್ನು ಭೇಟಿಯಾಗಲು ಶಾವೆ ಕಣಿವೆಗೆ ಹೋದನು. (ಈಗ ಇದಕ್ಕೆ ರಾಜನ ಕಣಿವೆ ಎಂದು ಕರೆಯುತ್ತಾರೆ.)

ಮೆಲ್ಕೀಚೆದೆಕನು

18 ಸಾಲೇಮಿನ ರಾಜನಾದ ಮೆಲ್ಕೀಚೆದೆಕನು ಸಹ ಅಬ್ರಾಮನನ್ನು ಭೇಟಿಯಾಗಲು ಹೋದನು. ಮಹೋನ್ನತನಾದ ದೇವರ ಯಾಜಕನಾಗಿದ್ದ ಅವನು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಬಂದು, 19 ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:

“ಅಬ್ರಾಮನೇ, ಮಹೋನ್ನತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
    ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದಾತನು ಆತನೇ.
20 ನಿನ್ನ ಶತ್ರುಗಳನ್ನು ಸೋಲಿಸಲು
    ನಿನಗೆ ಸಹಾಯ ಮಾಡಿದ ಮಹೋನ್ನತನಾದ ದೇವರಿಗೆ ಕೊಂಡಾಟವಾಗಲಿ.”

ಅಬ್ರಾಮನು ಯುದ್ಧದಿಂದ ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು. 21 ಬಳಿಕ ಸೊದೋಮಿನ ರಾಜನು ಅಬ್ರಾಮನಿಗೆ, “ಈ ವಸ್ತುಗಳನ್ನೆಲ್ಲ ನೀನೇ ಇಟ್ಟುಕೊ. ಶತ್ರುಗಳು ವಶಪಡಿಸಿಕೊಂಡಿರುವ ನನ್ನ ಜನರನ್ನು ಮಾತ್ರ ನನಗೆ ಕೊಡು” ಎಂದು ಹೇಳಿದನು.

22 ಆದರೆ ಅಬ್ರಾಮನು ಅವನಿಗೆ, “ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಮಹೋನ್ನತನಾಗಿರುವ ದೇವರಾದ ಯೆಹೋವನಿಗೆ ಪ್ರಮಾಣಮಾಡಿ ಹೇಳುವುದೇನೆಂದರೆ, 23 ನಿನ್ನದಾಗಿರುವ ಯಾವುದನ್ನೂ ನಾನು ಇಟ್ಟುಕೊಳ್ಳುವುದಿಲ್ಲ; ಅದು ದಾರವಾಗಿದ್ದರೂ, ಪಾದರಕ್ಷೆಯ ಬಾರಾಗಿದ್ದರೂ, ನಾನಿಟ್ಟುಕೊಳ್ಳುವುದಿಲ್ಲ. ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದೆ’ ಎಂದು ನೀನು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ. 24 ನನ್ನ ಯೌವನಸ್ಥರು ತಿಂದ ಆಹಾರದ ಹೊರತು ಬೇರೆ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ. ಆದರೆ ಬೇರೆ ಜನರಿಗೆ ಅವರ ಪಾಲನ್ನು ಕೊಡು. ನಾವು ಯುದ್ಧದಲ್ಲಿ ಗೆದ್ದುತಂದ ವಸ್ತುಗಳನ್ನು ತೆಗೆದುಕೊ; ಆನೇರ್, ಎಷ್ಕೋಲ ಮತ್ತು ಮಮ್ರೆಯರಿಗೆ ಅವರ ಪಾಲನ್ನು ಕೊಡು. ಈ ಜನರು ಯುದ್ಧದಲ್ಲಿ ನನಗೆ ಸಹಾಯ ಮಾಡಿದರು” ಎಂದು ಹೇಳಿದನು.

ಫಿಲಿಪ್ಪಿಯವರಿಗೆ 3:17-20

17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International