Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 32

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.

ಯೆಹೋಶುವನು 4:1-13

ಜನರಿಗೆ ನೆನಪನ್ನು ತರುವ ಕಲ್ಲುಗಳು

ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. ಆಗ ಯೆಹೋವನು ಯೆಹೋಶುವನಿಗೆ, “ಪ್ರತಿಯೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸು. ನದಿಯಲ್ಲಿ ಯಾಜಕರು ನಿಂತುಕೊಂಡಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಹುಡುಕಿ ತೆಗೆದುಕೊಂಡು ಬರುವುದಕ್ಕೆ ಅವರಿಗೆ ಹೇಳು. ನೀವು ಈ ರಾತ್ರಿ ಇಳಿದುಕೊಳ್ಳುವ ಸ್ಥಳದಲ್ಲಿ ಆ ಕಲ್ಲುಗಳನ್ನು ನಿಲ್ಲಿಸಿರಿ” ಎಂದು ಹೇಳಿದನು.

ಆದ್ದರಿಂದ ಯೆಹೋಶುವನು ಪ್ರತಿಯೊಂದು ಕುಲದಿಂದ ಒಬ್ಬೊಬ್ಬನನ್ನು ಆರಿಸಿದನು. ಆಮೇಲೆ ಆ ಹನ್ನೆರಡು ಜನರನ್ನು ಒಟ್ಟಿಗೆ ಕರೆದು ಅವರಿಗೆ, “ನದಿಯಲ್ಲಿ ನಿಮ್ಮ ದೇವರಾದ ಯೆಹೋವನ ಪವಿತ್ರ ಪೆಟ್ಟಿಗೆ ಇರುವ ಸ್ಥಳಕ್ಕೆ ಹೋಗಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ. ಈ ಕಲ್ಲುಗಳು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುತ್ತಾರೆ. ಅದಕ್ಕೆ ನೀವು, ‘ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಜೋರ್ಡನ್ ನದಿಯನ್ನು ದಾಟುತ್ತಿರುವಾಗ ಹರಿಯುವ ನೀರು ನಿಂತುಹೋಯಿತು’ ಎಂದು ಹೇಳಿರಿ. ಆ ಕಲ್ಲುಗಳು ಇಸ್ರೇಲರಿಗೆ ಸದಾಕಾಲ ಸಾಕ್ಷಿಗಳಾಗಿರುತ್ತವೆ” ಎಂದು ಹೇಳಿದನು.

ಇಸ್ರೇಲರು ಯೆಹೋಶುವನ ಆಜ್ಞೆಯಂತೆ ಜೋರ್ಡನ್ ನದಿಯ ಮಧ್ಯಭಾಗದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಬಂದರು. ಇಸ್ರೇಲಿನ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲುಗಳಿದ್ದವು. ಯೆಹೋವನು ಯೆಹೋಶುವನಿಗೆ ಹೇಳಿದಂತೆಯೇ ಅವರು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಬಂದು ತಾವು ಇಳಿದುಕೊಂಡಿದ್ದ ಸ್ಥಳದಲ್ಲಿ ಆ ಕಲ್ಲುಗಳನ್ನು ಇಟ್ಟರು. (ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ಜೋರ್ಡನ್ ನದಿಯ ಮಧ್ಯದಲ್ಲಿ ಅಂದರೆ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುವಾಗ ಯಾಜಕರು ನಿಂತಿದ್ದ ಸ್ಥಳದಲ್ಲಿ ಇಟ್ಟನು. ಆ ಕಲ್ಲುಗಳು ಇಂದಿಗೂ ಆ ಸ್ಥಳದಲ್ಲಿವೆ.)

10 ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ. ಯೆಹೋವನ ಅಪ್ಪಣೆಗಳನ್ನೆಲ್ಲ ಅವರು ಕೈಗೊಳ್ಳುವವರೆಗೆ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ಮಧ್ಯದಲ್ಲಿ ನಿಂತುಕೊಂಡೇ ಇದ್ದರು. ಜನರು ತ್ವರಿತಗತಿಯಿಂದ ನದಿಯನ್ನು ದಾಟಿದರು. 11 ಜನರು ನದಿ ದಾಟಿದ ಮೇಲೆ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಜನರ ಮುಂದಗಡೆಯಲ್ಲಿ ತೆಗೆದುಕೊಂಡು ಹೋದರು.

12 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ಮೋಶೆಯ ಆಜ್ಞೆಯನ್ನು ಪಾಲಿಸಿದರು. ಇವರು ಬೇರೆಯವರಿಗಿಂತ ಮುಂಚೆಯೇ ನದಿಯನ್ನು ದಾಟಿದರು. ಯೆಹೋವನು ವಾಗ್ದಾನ ಮಾಡಿದ ದೇಶವನ್ನು ಪಡೆಯಲು ಇಸ್ರೇಲರಿಗೆ ಸಹಾಯ ಮಾಡಲು ಇವರು ಯುದ್ಧಸನ್ನದ್ಧರಾಗಿ ಹೋಗುತ್ತಿದ್ದರು. 13 ಯುದ್ಧಸನ್ನದ್ಧರಾದ ಸುಮಾರು ನಲವತ್ತು ಸಾವಿರ ಭಟರು ಯೆಹೋವನ ಮುಂದೆ ಜೆರಿಕೊವಿನ ಬಯಲಿನ ಕಡೆಗೆ ಹೋದರು.

2 ಕೊರಿಂಥದವರಿಗೆ 4:16-5:5

ನಂಬಿಕೆಯ ಜೀವನ

16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.

ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ. ಆದರೆ ಈಗ ನಾವು ಈ ದೇಹದಲ್ಲಿ ಬಳಲಿ ಹೋಗಿದ್ದೇವೆ. ಪರಲೋಕದಲ್ಲಿರುವ ನಮ್ಮ ಮನೆಯನ್ನು ದೇವರು ನಮಗೆ ಯಾವಾಗ ಕೊಡುವನೊ ಎಂದು ಹಾತೊರೆಯುತ್ತಿದ್ದೇವೆ. ನಾವು ಅದನ್ನು ಧರಿಸಿಕೊಂಡಾಗ ಬೆತ್ತಲೆಯಾಗಿರುವುದಿಲ್ಲ. ಈ ಗುಡಾರದಲ್ಲಿರುವ ತನಕ ನಮಗೆ ಭಾರವಾದ ಹೊರೆಗಳಿವೆ ಮತ್ತು ನಾವು ನರಳುತ್ತೇವೆ. ಬೆತ್ತಲೆಯಾಗಿರಲು ನಾವು ಇಷ್ಟಪಡದೆ ಪರಲೋಕದ ಮನೆಯನ್ನು ಧರಿಸಿಕೊಳ್ಳಲು ಇಷ್ಟಪಡುತ್ತೇವೆ. ಸತ್ತುಹೋಗುವ ಈ ದೇಹವನ್ನು ಜೀವವು ಪೂರ್ಣವಾಗಿ ಆವರಿಸಿಕೊಳ್ಳುವುದು. ಇದಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾನೆ ಮತ್ತು ಇದನ್ನು ಖಚಿತಪಡಿಸಲು ಪವಿತ್ರಾತ್ಮನನ್ನೇ ನಮಗೆ ಅನುಗ್ರಹಿಸಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International