Revised Common Lectionary (Semicontinuous)
ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
63 ದೇವರೇ, ನೀನೇ ನನ್ನ ದೇವರು.
ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
ನನ್ನ ದೇಹವು ನಿನಗಾಗಿ ಬಯಸಿದೆ.
2 ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
3 ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
4 ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
5 ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
6 ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
7 ನಿಜವಾಗಿಯೂ ನೀನೇ ನನಗೆ ಸಹಾಯಕ.
ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.
ಇಸ್ರೇಲು ದೇವರ ವಿಶೇಷವಾದ ತೋಟ
5 ನನ್ನ ಪ್ರಿಯನನ್ನೂ ಆತನ ತೋಟವನ್ನೂ ಕುರಿತು ಗೀತೆಯೊಂದನ್ನು ಹಾಡುವೆ.
ಫಲವತ್ತಾದ ಪ್ರದೇಶದಲ್ಲಿ
ನನ್ನ ಪ್ರಿಯನಿಗೆ ದ್ರಾಕ್ಷಿತೋಟವಿತ್ತು.
2 ಆತನು ಭೂಮಿಯನ್ನು ಅಗೆದು ಹಸನು ಮಾಡಿದನು;
ಅದರಲ್ಲಿ ಉತ್ತಮವಾದ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.
ತೋಟದ ಮಧ್ಯದಲ್ಲಿ ಒಂದು ಗೋಪುರವನ್ನು ಕಟ್ಟಿಸಿ
ದ್ರಾಕ್ಷಿಯ ತೊಟ್ಟಿಯನ್ನು ಮಾಡಿಸಿದನು.
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡತೊಡಗಿದನು.
ಆದರೆ ಅದು ಹೊಲಸು ಹಣ್ಣನ್ನು ಬಿಟ್ಟಿತು.
3 ಆಗ ಆತನು, “ಜೆರುಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ನನ್ನ ವಿಚಾರವಾಗಿಯೂ
ನನ್ನ ದ್ರಾಕ್ಷಿತೋಟದ ವಿಚಾರವಾಗಿಯೂ ಯೋಚಿಸಿರಿ.
4 ನನ್ನ ದ್ರಾಕ್ಷಿತೋಟಕ್ಕೆ ನಾನು ಇನ್ನೇನು ಮಾಡಬೇಕಿತ್ತು.
ನಾನು ಮಾಡಬೇಕಿದ್ದನ್ನೆಲ್ಲಾ ಮಾಡಿದೆನು.
ಒಳ್ಳೆಯ ದ್ರಾಕ್ಷಿಹಣ್ಣು ಬಿಡುವುದೆಂದು ಆಶಿಸಿದ್ದೆನು.
ಆದರೆ ಅದು ಹೊಲಸು ದ್ರಾಕ್ಷಿಗಳನ್ನೇ ಬಿಟ್ಟಿತು.
ಹೀಗೆ ಆದದ್ದೇಕೆ?
5 “ನಾನೀಗ ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡುವೆನೆಂದು ತಿಳಿಸುವೆನು:
ಅದರ ಸುತ್ತಲೂ ರಕ್ಷಣೆಗಾಗಿ ಹಾಕಿದ್ದ ಮುಳ್ಳಿನ ಬೇಲಿಯನ್ನು
ಕಿತ್ತು ಸುಟ್ಟುಬಿಡುವೆನು.
ಅದರ ಕಲ್ಲಿನ ಗೋಡೆಯನ್ನು ಕೆಡವಿ
ತುಳಿದಾಟಕ್ಕೆ ಈಡುಮಾಡುವೆನು.
6 ನಾನು ಅದನ್ನು ಬೆಂಗಾಡಾಗಿ ಮಾಡುವೆನು.
ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು.
ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ.
ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು.
ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”
7 ಸರ್ವಶಕ್ತನಾದ ಯೆಹೋವನ ದ್ರಾಕ್ಷಿತೋಟವೇ ಇಸ್ರೇಲ್ ದೇಶ. ಯೆಹೋವನು ಪ್ರೀತಿಸುವ ದ್ರಾಕ್ಷಿಬಳ್ಳಿಯೇ ಯೆಹೂದದ ಪ್ರಜೆ.
ಯೆಹೋವನು ನ್ಯಾಯವನ್ನು ಅಪೇಕ್ಷಿಸಿದರೂ
ಸಿಕ್ಕಿದ್ದು ನರಹತ್ಯವೇ.
ಯೆಹೋವನು ಧರ್ಮವನ್ನು ಅಪೇಕ್ಷಿಸಿದರೂ
ದೊರಕಿದ್ದು ಗೋಳಾಟವೇ.
ಎರಡು ವಿಧವಾದ ಫಲ
(ಮತ್ತಾಯ 7:17-20; 12:34-35)
43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.
Kannada Holy Bible: Easy-to-Read Version. All rights reserved. © 1997 Bible League International