Revised Common Lectionary (Semicontinuous)
ಕಾನಾನಿನಲ್ಲಿ ಮೊದಲನೆಯ ಪಸ್ಕಹಬ್ಬ
9 ಆಗ ಯೆಹೋವನು ಯೆಹೋಶುವನಿಗೆ, “ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವಮಾನಕ್ಕೆ ಗುರಿಯಾಗಿದ್ದಿರಿ. ಆದರೆ ಇಂದು ಆ ನಾಚಿಕೆಯನ್ನು ತೆಗೆದು ಹಾಕಿದ್ದೇನೆ” ಎಂದನು. ಆದ್ದರಿಂದ ಯೆಹೋಶುವನು ಆ ಸ್ಥಳಕ್ಕೆ “ಗಿಲ್ಗಾಲ್” ಎಂದು ಹೆಸರಿಟ್ಟನು. ಈಗಲೂ ಆ ಸ್ಥಳಕ್ಕೆ “ಗಿಲ್ಗಾಲ್” ಎಂಬ ಹೆಸರಿದೆ.
10 ಇಸ್ರೇಲರು ಇನ್ನೂ ಗಿಲ್ಗಾಲಿನಲ್ಲಿಯೇ ಇಳಿದುಕೊಂಡಿದ್ದಾಗ ಜೆರಿಕೊವಿನ ಮೈದಾನಗಳಲ್ಲಿ ಅವರು ಆ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಪಸ್ಕಹಬ್ಬವನ್ನು ಆಚರಿಸಿದರು. 11 ಪಸ್ಕಹಬ್ಬದ ಮರುದಿನ ಮುಂಜಾನೆಯಲ್ಲಿ ಅವರು ಆ ಭೂಮಿಯಲ್ಲಿ ಬೆಳೆದ ಆಹಾರವನ್ನು ಊಟಮಾಡಿದರು; ಅವರು ಹುಳಿ ರಹಿತವಾದ ರೊಟ್ಟಿಯನ್ನು ಮತ್ತು ಹುರಿದ ಕಾಳುಗಳನ್ನು ಊಟ ಮಾಡಿದರು. 12 ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು. 18 ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 19 ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.
ಸ್ವರ್ಗದಲ್ಲಿ ಆನಂದ
(ಮತ್ತಾಯ 18:12-14)
15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. 2 ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.
3 ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
ಮನೆ ಬಿಟ್ಟುಹೋದ ಮಗನು
11 ಬಳಿಕ ಯೇಸು ಹೀಗೆಂದನು: “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. 12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.
13 “ಆಗ ಕಿರಿಮಗನು ತನಗೆ ದೊರೆತ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟಿಂಗನಾಗಿ ಬದುಕಿ ತನ್ನ ಹಣವನ್ನೆಲ್ಲಾ ಹಾಳುಮಾಡಿಕೊಂಡನು. 14 ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ಷಾಮ ಉಂಟಾಯಿತು. ಆ ದೇಶದ ಯಾವ ಭಾಗದಲ್ಲಿಯೂ ಸಾಕಷ್ಟು ಆಹಾರವಿರಲಿಲ್ಲ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗತ್ಯತೆಯಿತ್ತು. 15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು. 16 ಆಗ ಅವನು ಬಹಳ ಹಸಿವೆಗೊಂಡಿದ್ದನು. ಆದ್ದರಿಂದ ಹಂದಿಗಳು ತಿನ್ನುತ್ತಿದ್ದ ಕಾಯಿಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
17 “ಆಗ ಅವನಿಗೆ ತಾನು ಮಾಡಿದ ಬುದ್ಧಿಹೀನ ಕಾರ್ಯದ ಅರಿವಾಯಿತು. ಅವನು ತನ್ನೊಳಗೆ, ‘ನನ್ನ ತಂದೆಯ ಬಳಿಯಲ್ಲಿರುವ ಸೇವಕರಿಗೆ ಬೇಕಾದಷ್ಟು ಆಹಾರವಿದೆ. ನಾನಾದರೋ ಇಲ್ಲಿ ಊಟವಿಲ್ಲದೆ ಸಾಯುತ್ತಿದ್ದೇನೆ. 18 ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟುಹೋಗುತ್ತೇನೆ. ನಾನು ನನ್ನ ತಂದೆಗೆ, ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. 19 ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನೀನು ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊ ಎಂದು ಹೇಳುವೆನು’ ಅಂದುಕೊಂಡನು. 20 ಅಂತೆಯೇ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.
ಕಿರಿಮಗನು ಹಿಂತಿರುಗಿದನು
“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗಲೇ ತಂದೆಯು ಅವನನ್ನು ಗುರುತಿಸಿ ಕನಿಕರದಿಂದ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. 21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
22 “ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆಮಾಡಿರಿ! ಉತ್ತಮವಾದ ಉಡುಪುಗಳನ್ನು ತಂದು ಇವನಿಗೆ ತೊಡಿಸಿರಿ. ಇವನ ಬೆರಳಿಗೆ ಉಂಗುರವನ್ನು ಹಾಕಿರಿ. ಪಾದಗಳಿಗೆ ಒಳ್ಳೆಯ ಪಾದರಕ್ಷೆಗಳನ್ನು ತೊಡಿಸಿರಿ. 23 ಕೊಬ್ಬಿದ ಕರುವನ್ನು ಕೊಯ್ದು ಉಲ್ಲಾಸಪಡೋಣ. 24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು.
ಹಿರಿಮಗನು ಬಂದನು
25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು. 26 ಆದ್ದರಿಂದ ಅವನು ತನ್ನ ಸೇವಕರಲ್ಲಿ ಒಬ್ಬನನ್ನು ಕರೆದು, ‘ಇದೇನು?’ ಎಂದು ವಿಚಾರಿಸಿದನು. 27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.
28 “ಆಗ ಹಿರಿಯ ಮಗನು ಕೋಪಗೊಂಡು ಔತಣಕೂಟಕ್ಕೆ ಹೋಗಲಿಲ್ಲ. ಆಗ ಅವನ ತಂದೆ ಹೊರಗೆ ಬಂದು ಅವನನ್ನು ಒಳಗೆ ಕರೆದನು. 29 ಹಿರಿಮಗನು ತಂದೆಗೆ, ‘ನಾನು ಗುಲಾಮನಂತೆ ನಿನಗೆ ಅನೇಕ ವರ್ಷಗಳವರೆಗೆ ಸೇವೆಮಾಡಿದೆನು! ನಾನು ಯಾವಾಗಲೂ ನಿನ್ನ ಅಪ್ಪಣೆಗಳಿಗೆ ವಿಧೇಯನಾದೆನು. ಆದರೆ ನೀನು ನನಗೋಸ್ಕರ ಎಂದೂ ಒಂದು ಆಡನ್ನಾಗಲಿ ಕೊಯ್ಯಲಿಲ್ಲ. ನನಗಾಗಿ ಮತ್ತು ನನ್ನ ಸ್ನೇಹಿತರಿಗಾಗಿ ನೀನೆಂದೂ ಒಂದು ಔತಣಕೂಟವನ್ನು ಏರ್ಪಡಿಸಲಿಲ್ಲ. 30 ಆದರೆ ನಿನ್ನ ಕಿರಿಯ ಮಗನು ನಿನ್ನ ಎಲ್ಲ ಹಣವನ್ನು ಸೂಳೆಯರಿಗೆ ಖರ್ಚುಮಾಡಿ ಮನೆಗೆ ಹಿಂತಿರುಗಿ ಬಂದಾಗ ನೀನು ಅವನಿಗಾಗಿ ಕೊಬ್ಬಿದ ಕರುವನ್ನು ಕೊಯ್ಸಿದ್ದಿ!’ ಅಂದನು.
31 “ಆದರೆ ತಂದೆಯು ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನೊಂದಿಗೆ ಇರುತ್ತೀ. ನನಗಿರುವುದೆಲ್ಲಾ ನಿನ್ನದೇ. 32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”
Kannada Holy Bible: Easy-to-Read Version. All rights reserved. © 1997 Bible League International