Revised Common Lectionary (Semicontinuous)
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
7 ಯೆಹೋವನೇ ನಮ್ಮ ದೇವರು.
ಆತನು ಇಡೀ ಪ್ರಪಂಚವನ್ನು ಆಳುವನು.[a]
8 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
9 ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
12 ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ
ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ,
ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
13 ಅವರು ದೇಶದಿಂದ ದೇಶಕ್ಕೂ
ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
14 ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು.
ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
15 “ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ.
ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.
16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
ಹಿರಿಯರಿಗೆ ಉಪದೇಶಿಸಿದನು.
23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
27 ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು
ಮೋಶೆ ಆರೋನರ ಮೂಲಕವಾಗಿ ಮಾಡಿದನು.
28 ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು;
ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
29 ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು,
ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
30 ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು.
ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
31 ಆತನು ಆಜ್ಞಾಪಿಸಲು
ವಿಷದ ಹುಳಗಳೂ ಹೇನುಗಳೂ ಬಂದವು.
ಅವು ಎಲ್ಲೆಲ್ಲಿಯೂ ಹರಡಿಕೊಂಡವು.
32 ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು.
ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
33 ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು.
ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
34 ಆತನು ಆಜ್ಞಾಪಿಸಲು ಮಿಡತೆಗಳೂ
ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
35 ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು.
ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
36 ಬಳಿಕ ದೇವರು ಈಜಿಪ್ಟ್ ದೇಶದ
ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
ಯೆಹೋಷಾಫಾಟನು ಯುದ್ಧವನ್ನು ಎದುರಿಸಿದನು
20 ಕೆಲಕಾಲದನಂತರ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನೊಂದಿಗೆ ಯುದ್ಧಮಾಡಲು ಬಂದರು. 2 ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು. 3 ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು. 4 ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು. 5 ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,
6 “ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. 7 ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. 8 ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. 9 ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.
10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು.[a] 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.
13 ಯೆಹೂದದ ಎಲ್ಲಾ ಜನರು ತಮ್ಮ ಹೆಂಡತಿಮಕ್ಕಳೊಂದಿಗೆ ಯೆಹೋವನೆದುರು ನಿಂತಿದ್ದರು. 14 ಆಗ ಜೆಕರ್ಯನ ಮಗನಾದ ಯೆಹಜೀಯೇಲನ ಮೇಲೆ ಯೆಹೋವನ ಆತ್ಮನು ಬಂದನು. ಜೆಕರ್ಯನು ಬೆನಾಯನ ಮಗ. ಬೆನಾಯನು ಯೆಗೀಯೇಲನ ಮಗ. ಯೆಗೀಯೇಲನು ಮತ್ತನ್ಯನ ಮಗ. ಯೆಹಜೀಯೇಲನು ಲೇವಿಯನಾಗಿದ್ದನು ಮತ್ತು ಆಸಾಫನ ಸಂತತಿಯವನಾಗಿದ್ದನು. 15 ಸಭೆಯ ಮಧ್ಯದಲ್ಲಿ ನಿಂತುಕೊಂಡು ಯೆಹಜೀಯೇಲನು ಅವರಿಗೆ, “ರಾಜನಾದ ಯೆಹೋಷಾಫಾಟನೇ, ನನ್ನ ಮಾತನ್ನು ಕೇಳು. ಜೆರುಸಲೇಮಿನಲ್ಲಿಯೂ ಯೆಹೂದದ ರಾಜ್ಯದಲ್ಲಿಯೂ ವಾಸಿಸುವ ಸರ್ವಜನರೇ, ನನ್ನ ಮಾತನ್ನು ಕೇಳಿರಿ. ಯೆಹೋವನು ನಿಮಗೆ ಹೀಗೆನ್ನುತ್ತಾನೆ: ‘ಆ ದೊಡ್ಡ ಸೈನ್ಯಕ್ಕೆ ಹೆದರಿ ಚಿಂತೆಗೊಳಗಾಗಬೇಡಿ. ಯಾಕೆಂದರೆ ಯುದ್ಧವು ನಿಮ್ಮದಲ್ಲ, ಅದು ದೇವರದೇ! 16 ನಾಳೆ ಅವರ ವಿರುದ್ಧವಾಗಿ ಹೊರಟು ಅವರೊಂದಿಗೆ ಹೋರಾಡಿ. ಅವರು ಹಜ್ಜೀಜ್ ಕಣಿವೆಯಿಂದ ಬರುವರು. ನೀವು ಅವರನ್ನು ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ’” ಎಂದು ಹೇಳಿದನು.
18 ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.
20 ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.
21 ಯೆಹೋಷಾಫಾಟನು ಜನರ ಸಲಹೆಗಳನ್ನು ಕೇಳಿದನು; ಯೆಹೋವನನ್ನು ಸ್ತುತಿಸಲು ಗಾಯಕರನ್ನು ಆರಿಸಿದನು; ಯಾಕೆಂದರೆ ಆತನು ಪರಿಶುದ್ಧನು ಮತ್ತು ಅದ್ಭುತಸ್ವರೂಪನು. ಅವರು ಸೈನ್ಯದ ಮುಂದುಗಡೆಯಲ್ಲಿ ಹೋಗುತ್ತಾ ಆತನಿಗೆ ಸ್ತುತಿಗೀತೆಯನ್ನು ಹಾಡಿದರು. ಆ ಗಾಯಕರು,
“ಯೆಹೋವನಿಗೆ ಸ್ತೋತ್ರಮಾಡಿರಿ.
ಆತನ ಕರುಣೆಯು ನಿರಂತರವಾದದ್ದು”
ಎಂದು ಹಾಡಿದರು. 22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು.
ಕಿರಿದಾದ ಬಾಗಿಲು
(ಮತ್ತಾಯ 7:13-14,21-23)
22 ಯೇಸು ಪ್ರತಿಯೊಂದು ಊರಿನಲ್ಲಿಯೂ ಹಳ್ಳಿಯಲ್ಲಿಯೂ ಉಪದೇಶಿಸುತ್ತಾ ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. 23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು.
ಅದಕ್ಕೆ ಯೇಸು, 24 “ಸ್ವರ್ಗಕ್ಕೆ ನಡೆಸುವ ಕಿರಿದಾದ ಬಾಗಿಲಿನ ಮೂಲಕ ಹೋಗಲು ಪ್ರಯಾಸಪಡಿರಿ! ಅನೇಕ ಜನರು ಅದರ ಮೂಲಕ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಆಗುವುದಿಲ್ಲ. 25 ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಬೇಕಷ್ಟೇ, ಆದರೂ ಅವನು ತೆರೆಯುವುದಿಲ್ಲ. ‘ಸ್ವಾಮೀ, ನಮಗೆ ಬಾಗಿಲು ತೆರೆ!’ ಎಂದು ನೀವು ಕೇಳುವಿರಿ. ಅವನು ನಿಮಗೆ, ‘ನೀವು ಯಾರೋ ನನಗೆ ತಿಳಿಯದು. ನೀವು ಎಲ್ಲಿಯವರು?’ ಎಂದು ಉತ್ತರಿಸುವನು. 26 ಆಗ ನೀವು, ‘ನಾವು ನಿನ್ನೊಡನೆ ಊಟಮಾಡಿದೆವು, ಪಾನಮಾಡಿದೆವು. ನೀನು ನಮ್ಮ ಬೀದಿಗಳಲ್ಲಿ ನಮಗೆ ಉಪದೇಶಿಸಿದೆ’ ಎಂದು ಹೇಳುವಿರಿ. 27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನು ನೀವು ನೋಡುವಿರಿ. ಆದರೆ ನಿಮ್ಮನ್ನು ಹೊರಗೆ ಹಾಕಲಾಗುವುದು. ಆಗ ನೀವು ಭಯದಿಂದಲೂ ಕೋಪದಿಂದಲೂ ಕೂಗಿಕೊಳ್ಳುವಿರಿ. 29 ಜನರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಿಕ್ಕುಗಳಿಂದ ಬರುವರು. ಅವರು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 30 ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು, ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು.”
ಜೆರುಸಲೇಮಿನಲ್ಲಿ ಯೇಸುವಿನ ಮರಣ
(ಮತ್ತಾಯ 23:37-39)
31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International