Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 65

ರಚನೆಗಾರ: ದಾವೀದ.

65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
    ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
ಪ್ರಾರ್ಥನೆಯನ್ನು ಕೇಳುವಾತನೇ,
    ಜನರೆಲ್ಲರೂ ನಿನ್ನ ಬಳಿಗೆ ಬರುವರು.
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
    ನಮ್ಮನ್ನು ಆ ಪಾಪಗಳಿಂದ ಬಿಡಿಸು.
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
    ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
    ನಾವು ಉಲ್ಲಾಸಗೊಂಡಿದ್ದೇವೆ.
ನಮ್ಮ ರಕ್ಷಕನಾದ ದೇವರೇ,
    ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
    ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
    ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
ಭೋರ್ಗರೆಯುವ ಸಮುದ್ರಗಳನ್ನೂ
    ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
    ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
ದೇವರೇ, ಭೂಪಾಲಕನು ನೀನೇ.
    ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
    ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
    ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
    ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
    ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
    ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
    ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ವಿಮೋಚನಕಾಂಡ 9:13-35

ಆಲಿಕಲ್ಲು

13 ಬಳಿಕ ಯೆಹೋವನು ಮೋಶೆಗೆ, “ಮುಂಜಾನೆ ಎದ್ದು ಫರೋಹನ ಬಳಿಗೆ ಹೋಗಿ, ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನನ್ನನ್ನು ಆರಾಧಿಸಲು ನನ್ನ ಜನರು ಹೋಗಲಿ! 14 ಇಲ್ಲವಾದರೆ, ನಾನು ನಿನ್ನ ವಿರುದ್ಧವಾಗಿಯೂ ನಿನ್ನ ಅಧಿಕಾರಿಗಳ ವಿರುದ್ಧವಾಗಿಯೂ ನಿನ್ನ ಜನರ ವಿರುದ್ಧವಾಗಿಯೂ ನನ್ನ ಪೂರ್ಣಶಕ್ತಿಯಿಂದ ಉಪದ್ರವಗಳನ್ನು ಕಳುಹಿಸುವೆನು. ಆಗ ನನ್ನಂಥ ದೇವರು ಲೋಕದಲ್ಲಿ ಇಲ್ಲವೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 15 ನಾನು ನನ್ನ ಶಕ್ತಿಯಿಂದ ನಿನಗೂ ನಿನ್ನ ಜನರಿಗೂ ವ್ಯಾಧಿಯನ್ನು ಬರಮಾಡಿ ನಿಮ್ಮನ್ನು ನಿರ್ಮೂಲ ಮಾಡಬಹುದಿತ್ತು. 16 ಆದರೆ, ನನ್ನ ಶಕ್ತಿಯನ್ನು ನಿನಗೆ ತೋರಿಸಬೇಕೆಂದೂ ಲೋಕದ ಜನರೆಲ್ಲರು ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದೂ ನಾನು ನಿನ್ನನ್ನು ಇನ್ನೂ ಉಳಿಸಿದ್ದೇನೆ. 17 ಆದರೂ ನೀನು ನನ್ನ ಜನರಿಗೆ ವಿರುದ್ಧವಾಗಿರುವೆ; ಅವರಿಗೆ ಸ್ವತಂತ್ರವನ್ನು ಕೊಡದಿರುವೆ. 18 ಆದ್ದರಿಂದ ನಾಳೆ ಇದೇ ಸಮಯಕ್ಕೆ ಸರಿಯಾಗಿ ಭೀಕರವಾದ ಆಲಿಕಲ್ಲಿನ ಮಳೆಯನ್ನು ಸುರಿಸುವೆನು. ಈಜಿಪ್ಟ್ ರಾಜ್ಯವು ಸ್ಥಾಪನೆಯಾದಂದಿನಿಂದ ಇಂಥ ಆಲಿಕಲ್ಲಿನ ಮಳೆ ಬಿದ್ದಿಲ್ಲ. 19 ಈಗ ನೀನು ನಿನ್ನ ಪಶುಗಳನ್ನೂ ನಿನ್ನ ಹೊಲದಲ್ಲಿರುವ ನಿನ್ನ ಪ್ರತಿಯೊಂದನ್ನೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಬೇಕು. ಮನೆಯೊಳಗಿರದೆ ಹೊಲದಲ್ಲಿರುವ ಮನುಷ್ಯರೂ ಪಶುಗಳೂ ಆಲಿಕಲ್ಲಿನ ಮಳೆಗೆ ಸಿಕ್ಕಿಕೊಂಡು ಸಾಯುವರು’ ಎಂದು ಹೇಳಬೇಕು” ಅಂದನು.

20 ಫರೋಹನ ಅಧಿಕಾರಿಗಳಲ್ಲಿ ಕೆಲವರು ಯೆಹೋವನ ಸಂದೇಶಕ್ಕೆ ಕಿವಿಗೊಟ್ಟು ತಮ್ಮ ಎಲ್ಲಾ ಪಶುಗಳನ್ನೂ ಗುಲಾಮರನ್ನೂ ಮನೆಯೊಳಗೆ ಸೇರಿಸಿಕೊಂಡರು. 21 ಆದರೆ ಇತರರು ಯೆಹೋವನ ಸಂದೇಶವನ್ನು ನಿರ್ಲಕ್ಷ್ಯಮಾಡಿ ತಮ್ಮ ಎಲ್ಲಾ ಗುಲಾಮರನ್ನೂ ಪಶುಗಳನ್ನೂ ಹೊಲಗಳಲ್ಲಿಯೇ ಬಿಟ್ಟರು.

22 ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು; ಆಗ ಈಜಿಪ್ಟಿನಲ್ಲೆಲ್ಲಾ ಆಲಿಕಲ್ಲಿನ ಮಳೆ ಬೀಳತೊಡಗುವುದು. ಆಲಿಕಲ್ಲಿನ ಮಳೆಯು ಜನರ, ಪ್ರಾಣಿಗಳ ಮತ್ತು ಈಜಿಪ್ಟಿನ ಹೊಲಗಳಲ್ಲಿರುವ ಎಲ್ಲಾ ಸಸ್ಯಗಳ ಮೇಲೆ ಬೀಳುವುದು” ಎಂದು ಹೇಳಿದನು.

23 ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು. 24 ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ. 25 ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು. 26 ಇಸ್ರೇಲರು ವಾಸವಾಗಿದ್ದ ಗೋಷೆನ್ ಪ್ರದೇಶದಲ್ಲಿ ಮಾತ್ರ ಆಲಿಕಲ್ಲಿನ ಮಳೆಯಾಗಲಿಲ್ಲ.

27 ಫರೋಹನು ಮೋಶೆ ಆರೋನರನ್ನು ಕರೆಸಿ ಅವರಿಗೆ, “ಈ ಸಾರಿ ನಾನು ಪಾಪಮಾಡಿದ್ದೇನೆ. ಯೆಹೋವನೇ ನೀತಿವಂತನು. ನಾನೂ ನನ್ನ ಜನರೂ ದೋಷಿಗಳಾಗಿದ್ದೇವೆ. 28 ಭಯಂಕರವಾದ ಗುಡುಗೂ ಆಲಿಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸಬೇಕೆಂದು ದೇವರನ್ನು ಪ್ರಾರ್ಥಿಸಿರಿ; ನಿಮ್ಮನ್ನು ಈ ದೇಶದಿಂದ ಕಳುಹಿಸಿಕೊಡುತ್ತೇನೆ; ತಡೆಯುವುದಿಲ್ಲ” ಎಂದು ಹೇಳಿದನು.

29 ಮೋಶೆಯು ಫರೋಹನಿಗೆ, “ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸುವೆನು, ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋಗುವವು. ಭೂಲೋಕವು ಯೆಹೋವನ ಅಧೀನದಲ್ಲಿದೆಯೆಂದು ಆಗ ನೀನು ತಿಳಿದುಕೊಳ್ಳುವೆ. 30 ಆದರೆ ನೀನಾಗಲಿ ನಿನ್ನ ಅಧಿಕಾರಿಗಳಾಗಲಿ ಇನ್ನೂ ದೇವರಿಗೆ ಭಯಪಡುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಹೇಳಿದನು.

31 ಅಗಸೆಗೆ ಮೊಗ್ಗೆಯೂ ಬಾರ್ಲಿಗೆ ತೆನೆಯೂ ಬಂದಿದ್ದರಿಂದ ಈ ಎರಡು ಬೆಳೆಗಳು ನಾಶವಾದವು. 32 ಆದರೆ ಗೋಧಿಯೂ ಕಡಲೆಯೂ ಬೇರೆ ಧಾನ್ಯಗಳ ನಂತರ ಆಗುವ ಬೆಳೆಗಳಾಗಿದ್ದವು. ಆದ್ದರಿಂದ ಈ ಪೈರುಗಳು ನಾಶವಾಗಲಿಲ್ಲ.

33 ಮೋಶೆಯು ಫರೋಹನ ಬಳಿಯಿಂದ ಹೊರಟು ಪಟ್ಟಣದಾಚೆಗೆ ಹೋದಾಗ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋದವು; ಮಳೆಯೂ ನಿಂತುಹೋಯಿತು.

34 ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು. 35 ಇಸ್ರೇಲರು ಸ್ವತಂತ್ರರಾಗಿ ಹೋಗಲು ಫರೋಹನು ಬಿಡಲಿಲ್ಲ. ಯೆಹೋವನು ಮೋಶೆಯ ಮೂಲಕ ಹೇಳಿಸಿದಂತೆಯೇ ಇದಾಯಿತು.

ಅಪೊಸ್ತಲರ ಕಾರ್ಯಗಳು 27:39-44

ನೌಕೆಯ ನಾಶ

39 ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು. 40 ಆದ್ದರಿಂದ ಅವರು ಚುಕ್ಕಾಣಿಗಳನ್ನು[a] ಬಿಗಿಯಾಗಿ ಹಿಡಿದುಕೊಂಡಿದ್ದ ಹಗ್ಗಗಳನ್ನು ಕತ್ತರಿಸಿಹಾಕಿದರು. ಬಳಿಕ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ನಡೆಸತೊಡಗಿದರು. 41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.

42 ಕೈದಿಗಳಲ್ಲಿ ಯಾರೂ ಈಜಿಕೊಂಡು ಹೋಗಿ ತಪ್ಪಿಸಿಕೊಳ್ಳಬಾರದೆಂದು ಸೈನಿಕರು ಕೈದಿಗಳನ್ನು ಕೊಲ್ಲಲು ನಿರ್ಧರಿಸಿದರು. 43 ಆದರೆ ಸೇನಾಧಿಕಾರಿಯಾದ ಜೂಲಿಯಸನು ಪೌಲನನ್ನು ಉಳಿಸಲಪೇಕ್ಷಿಸಿ ಕೈದಿಗಳನ್ನು ಕೊಲ್ಲಲು ಸೈನಿಕರಿಗೆ ಅಪ್ಪಣೆ ಕೊಡಲಿಲ್ಲ. ಈಜು ಬಲ್ಲವರೆಲ್ಲರು ನೀರಿಗೆ ಧುಮುಕಿ ಈಜಿಕೊಂಡು ದಡಕ್ಕೆ ಹೋಗಬೇಕೆಂದು ಜೂಲಿಯಸನು ಹೇಳಿದನು. 44 ಉಳಿದ ಜನರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ಹೋಗಬೇಕೆಂದು ತಿಳಿಸಿದನು. ಹೀಗೆ ಜನರೆಲ್ಲರೂ ದಡವನ್ನು ಸೇರಿದರು. ಅವರಲ್ಲಿ ಒಬ್ಬರೂ ಸಾಯಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International