Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆರೆಮೀಯ 2:4-13

ಯಾಕೋಬನ ಮನೆತನದವರೇ, ಯೆಹೋವನ ಸಂದೇಶವನ್ನು ಕೇಳಿರಿ.
    ಇಸ್ರೇಲಿನ ಎಲ್ಲಾ ಕುಲದವರೇ, ಯೆಹೋವನ ಸಂದೇಶವನ್ನು ಕೇಳಿರಿ.

ಯೆಹೋವನು ಹೀಗೆನ್ನುತ್ತಾನೆ:
“ನಾನು ನಿಮ್ಮ ಪೂರ್ವಿಕರಿಗೆ ಅನ್ಯಾಯ ಮಾಡಿದೆನೇ?
    ಅದಕ್ಕಾಗಿ ಅವರು ನನ್ನನ್ನು ತಿರಸ್ಕರಿಸಿದರೇ?
ನಿಮ್ಮ ಪೂರ್ವಿಕರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿ
    ತಾವು ಸಹ ನಿಷ್ಪ್ರಯೋಜಕರಾದರು.
‘ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
    ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ?
    ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ.
ಯೆಹೋವನು ನಮ್ಮನ್ನು ಅಂಧಕಾರಮಯವಾದ
    ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು.
ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ.
    ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ.
ಈಗ ಆ ಯೆಹೋವನು ಎಲ್ಲಿದ್ದಾನೆ?’”
    ನಿಮ್ಮ ಪೂರ್ವಿಕರು ಆ ಪ್ರಶ್ನೆಗಳನ್ನು ಕೇಳಲೇ ಇಲ್ಲ.

“ನಾನು ನಿಮ್ಮನ್ನು ಅನೇಕ ಅಮೂಲ್ಯವಸ್ತುಗಳಿಂದ ಕೂಡಿದ
    ಫಲವತ್ತಾದ ಭೂಮಿಗೆ ಕರೆದುತಂದೆ.
ಅಲ್ಲಿ ಬೆಳೆಯುವ ಫಲಗಳನ್ನು ತಿನ್ನಲಿ ಎಂಬ ಉದ್ದೇಶದಿಂದ ನಾನು ಕರೆದುತಂದೆ.
    ಆದರೆ ನೀವು ಬಂದು ನನ್ನ ಭೂಮಿಯನ್ನು ಹೊಲಸು ಮಾಡಿದಿರಿ.
ನಾನು ಆ ಭೂಮಿಯನ್ನು ನಿಮಗೆ ಕೊಟ್ಟೆ,
    ಆದರೆ ನೀವು ಅದನ್ನು ಕೆಟ್ಟ ಸ್ಥಳವನ್ನಾಗಿ ಮಾಡಿದಿರಿ.

“‘ಯೆಹೋವನು ಎಲ್ಲಿ?’
    ಎಂದು ಯಾಜಕರು ಕೇಳಲಿಲ್ಲ.
ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ.
    ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು.
ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು.
    ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”

“ಆದ್ದರಿಂದ ನಾನು ನಿಮ್ಮನ್ನು ಮತ್ತೊಮ್ಮೆ ಆಪಾದಿಸುವೆನು.
    ನಾನು ನಿಮ್ಮ ಮೊಮ್ಮಕ್ಕಳ ಮೇಲೂ ಆಪಾದಿಸುವೆನು” ಎನ್ನುತ್ತಾನೆ ಯೆಹೋವನು.
10 ಸಮುದ್ರದ ಆಚೆಗಿದ್ದ ಕಿತ್ತೀಮ್ ದಿಬಪಗಳಿಗೆ ಹೋಗಿ ನೋಡಿರಿ.
    ಸೂಕ್ಷ್ಮವಾಗಿ ಪರಿಶೀಲಿಸಲು ಯಾರನ್ನಾದರೂ ಕೇದಾರಿಗೆ ಕಳುಹಿಸಿರಿ.
ಯಾರಾದರೂ ಎಂದಾದರೂ
    ಇಂಥ ಕೆಲಸ ಮಾಡಿರುವರೇ, ನೋಡಿರಿ.
11 ಯಾವ ಜನಾಂಗವಾದರೂ ಎಂದಾದರೂ
    ತಮ್ಮ ಹಳೆಯ ದೇವರುಗಳನ್ನು ಬದಲಾಯಿಸಿ ಹೊಸ ದೇವರುಗಳನ್ನು ಪಡೆಯಿತೇ?
ಇಲ್ಲ. (ಅವರ ದೇವರುಗಳು ನಿಜವಾದ ದೇವರುಗಳೇ ಅಲ್ಲ.)
ಆದರೆ ನನ್ನ ಜನರು ತಮ್ಮ ಮಹಿಮಾಶಾಲಿಯಾದ ದೇವರನ್ನು
    ಅಪ್ರಯೋಜಕವಾದ ವಿಗ್ರಹಗಳೊಂದಿಗೆ ಬದಲಾಯಿಸಿಕೊಂಡಿದ್ದಾರೆ.

12 “ಆಕಾಶಮಂಡಲವೇ, ನಡೆದ ಸಂಗತಿಗಳಿಗಾಗಿ ಬೆಚ್ಚಿಬೆರಗಾಗು!
    ಭಯದಿಂದ ನಡುಗು!”
ಎಂದು ಯೆಹೋವನು ನುಡಿಯುತ್ತಾನೆ.
13 “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ.
    ಅವರು ನನ್ನಿಂದ ಮುಖ ತಿರುವಿದ್ದಾರೆ.
ನಾನು ಜೀವಜಲದ ಬುಗ್ಗೆಯಾಗಿದ್ದೇನೆ.
    ಅವರು ತಮ್ಮದೇ ಆದ ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ಅವರು ಇತರ ದೇವರುಗಳ ಕಡೆಗೆ ತಿರುಗಿಕೊಂಡಿದ್ದಾರೆ.
    ಅವರ ತೊಟ್ಟಿಗಳು ಒಡೆದಿವೆ.
    ಅವುಗಳಲ್ಲಿ ನೀರು ತುಂಬಿಡಲು ಸಾಧ್ಯವಿಲ್ಲ.

ಕೀರ್ತನೆಗಳು 81:1

ರಚನೆಗಾರ: ಆಸಾಫ.

81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
    ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.

ಕೀರ್ತನೆಗಳು 81:10-16

10 ಯೆಹೋವನಾದ ನಾನೇ ನಿನ್ನ ದೇವರು.
    ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
    ಆಗ ನಾನು ನಿನಗೆ ತಿನ್ನಿಸುವೆನು.

11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
    ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
    ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14     ಅವರ ಶತ್ರುಗಳನ್ನು ಸೋಲಿಸುವೆನು;
    ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
    ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
    ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”

ಇಬ್ರಿಯರಿಗೆ 13:1-8

ದೇವರಿಗೆ ಮೆಚ್ಚಿಕೆಯಾದ ಆರಾಧನೆ

13 ನೀವು ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿರುವುದರಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ಅತಿಥಿಸತ್ಕಾರ ಮಾಡಿರಿ. ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. ಸೆರೆಮನೆಯಲ್ಲಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸೆರೆಮನೆಯಲ್ಲಿದ್ದೀರೋ ಎಂಬಂತೆ ನೆನಪುಮಾಡಿಕೊಳ್ಳಿ ಮತ್ತು ಸಂಕಟಕ್ಕೊಳಗಾಗಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸಂಕಟಪಡುತ್ತಿರುವಿರೋ ಎಂಬಂತೆ ನೆನಪು ಮಾಡಿಕೊಳ್ಳಿ.

ಮದುವೆಯನ್ನು ಜನರೆಲ್ಲರೂ ಗೌರವಿಸಬೇಕು. ಗಂಡ ಹೆಂಡತಿಯರ ಸಂಬಂಧ ಪರಿಶುದ್ಧವಾಗಿರಬೇಕು. ಲೈಂಗಿಕ ಪಾಪಗಳನ್ನು ಮಾಡುವವರು ಮತ್ತು ವ್ಯಭಿಚಾರವನ್ನು ಮಾಡುವವರು ದೇವರ ತೀರ್ಪಿಗೆ ಒಳಗಾಗಿದ್ದಾರೆ. ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ:

“ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ.
ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.”(A)

ಆದ್ದರಿಂದ ನಾವು ಖಚಿತವಾಗಿ ಹೀಗೆ ಹೇಳಬಹುದು:

“ಪ್ರಭುವೇ ನನ್ನ ಸಹಾಯಕನು;
    ನಾನು ಹೆದರುವುದಿಲ್ಲ.
ಜನರು ನನಗೆ ಏನೂ ಮಾಡಲಾರರು.”(B)

ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು.

ಇಬ್ರಿಯರಿಗೆ 13:15-16

15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.

ಲೂಕ 14:1

ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ?

14 ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು.

ಲೂಕ 14:7-14

ನಿನ್ನನ್ನು ಪ್ರಮುಖನನ್ನಾಗಿ ಮಾಡಿಕೊಳ್ಳಬೇಡ

ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು. ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.

10 “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು. 11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

ನಿಮಗೆ ಪ್ರತಿಫಲ ದೊರೆಯುವುದು

12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International