Revised Common Lectionary (Semicontinuous)
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು
6 ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
ಬೇತ್ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
2 ಚೀಯೋನ್ ಕುಮಾರಿಯೇ,[a] ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
3 ಕುರುಬರು ಜೆರುಸಲೇಮಿಗೆ ಬರುತ್ತಾರೆ.
ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.
4 “ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
5 ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”
6 ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
“ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
7 ಬಾವಿಯಲ್ಲಿ ಹೊಸ ನೀರು ಬರುವಂತೆ
ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
8 ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
9 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
11 ಯೆಹೋವನ ರೋಷವು ನನ್ನಲ್ಲಿ ತುಂಬಿತುಳುಕುತ್ತಿದೆ,
ತಡೆದುತಡೆದು ನನಗೆ ಸಾಕಾಗಿದೆ.
“ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನ್ನು ಹೊಯ್ದುಬಿಡಬೇಕು.
ಒಂದೆಡೆ ಸೇರುವ ತರುಣರ ಮೇಲೆ ಅದನ್ನು ಹೊಯ್ದುಬಿಡಬೇಕು.
ಗಂಡಹೆಂಡತಿಯರಿಬ್ಬರನ್ನು ಅಪಹರಿಸಲಾಗುವುದು.
ಮುದುಕರನ್ನೂ ಮುಪ್ಪಿನ ಮುದುಕರನ್ನೂ ಅಪಹರಿಸಲಾಗುವುದು.
12 ಅವರ ಮನೆಗಳನ್ನು ಬೇರೆಯವರಿಗೆ ಕೊಡಲಾಗುವುದು.
ಅವರ ಹೊಲಗಳನ್ನೂ ಅವರ ಹೆಂಡಂದಿರನ್ನೂ ಬೇರೆಯವರಿಗೆ ಕೊಡಲಾಗುವುದು.
ನಾನು ನನ್ನ ಕೈ ಎತ್ತಿ ಯೆಹೂದದ ಜನರನ್ನು ದಂಡಿಸುವೆನು.”
ಇದು ಯೆಹೋವನ ಸಂದೇಶ.
13 “ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಲಾಭಕ್ಕಾಗಿ ಆಸೆಪಡುತ್ತಾರೆ.
ಪ್ರವಾದಿಗಳು ಮತ್ತು ಯಾಜಕರು ಸಹ ಮೋಸಗಾರರಾಗಿದ್ದಾರೆ.
14 ಪ್ರವಾದಿಗಳು ಮತ್ತು ಯಾಜಕರು
ನನ್ನ ಜನರಿಗಾದ ದೊಡ್ಡ ಗಾಯಗಳಿಗೆ ಚಿಕ್ಕಗಾಯಗಳಿಗೋ ಎಂಬಂತೆ ಚಿಕಿತ್ಸೆ ಮಾಡುತ್ತಾರೆ.
ವಾಸಿಯಾಗಿಲ್ಲದಿದ್ದರೂ ‘ವಾಸಿಯಾಗಿದೆ’ ಎನ್ನುತ್ತಾರೆ.
15 ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ನಾಚಿಕೆಪಡುವದೇ ಇಲ್ಲ.
ತಮ್ಮ ಪಾಪಕಾರ್ಯಗಳಿಗಾಗಿ ಸಂಕೋಚಪಡುವುದು ಸಹ ಅವರಿಗೆ ಗೊತ್ತಿಲ್ಲ.
ಆದ್ದರಿಂದ ಬೇರೆಯವರಂತೆ ಅವರನ್ನೂ ಶಿಕ್ಷಿಸಲಾಗುವುದು.
ನಾನು ಅವರನ್ನು ಶಿಕ್ಷಿಸಿದಾಗ ಅವರನ್ನು ನೆಲಕ್ಕೆ ಎಸೆಯಲಾಗುವದು”
ಎಂದು ಯೆಹೋವನು ಅನ್ನುತ್ತಾನೆ.
16 ಯೆಹೋವನು ಹೀಗೆ ಹೇಳುತ್ತಾನೆ:
“ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ.
‘ಒಳ್ಳೆಯ ರಸ್ತೆ ಎಲ್ಲಿದೆ?’ ಎಂದು ಕೇಳಿರಿ.
ಆ ರಸ್ತೆಯನ್ನು ಹಿಡಿದು ನಡೆಯಿರಿ.
ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು.
ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ’ ಎಂದು ನೀವು ಹೇಳಿದ್ದೀರಿ.
17 ನಾನು ನಿಮ್ಮನ್ನು ನೋಡಿಕೊಳ್ಳುವುದಕ್ಕೆ ಕಾವಲುಗಾರರನ್ನು ನೇಮಿಸಿದೆ.
ನಾನು ಅವರಿಗೆ ‘ಯುದ್ಧದ ತುತ್ತೂರಿಯ ನಾದವನ್ನು ಕೇಳಿರಿ’ ಎಂದು ಹೇಳಿದೆ.
ಆದರೆ ಅವರು ‘ನಾವು ಕೇಳುವುದಿಲ್ಲ’ ಅಂದರು.
18 ಆದಕಾರಣ ಸರ್ವಜನಾಂಗಗಳೇ ಕೇಳಿರಿ,
ಜನಸಮೂಹಗಳೇ ಗಮನಿಸಿರಿ.
ಯೆಹೂದದ ಜನರಿಗೆ ನಾನು ಮಾಡುವುದನ್ನು ಕೇಳಿರಿ.
19 ಭೂಲೋಕದ ಜನರೇ, ಕೇಳಿರಿ,
ಆ ಜನರು ಮಾಡಿದ ಎಲ್ಲಾ ಕುಯುಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನ್ನು ತರುವೆನು.
ಅವರು ನನ್ನ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ,
ಅವರು ನನ್ನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”
3 ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
4 ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. 5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
6 ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)
7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. 8 ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. 9 ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
14 ಎಲ್ಲಾ ಜನರೊಂದಿಗೆ ಸಮಾಧಾನದಿಂದಲೂ ಪರಿಶುದ್ಧರಾಗಿಯೂ ಜೀವಿಸಲು ಪ್ರಯತ್ನಿಸಿರಿ. ಯಾವನ ಜೀವಿತವು ಪರಿಶುದ್ಧವಾಗಿರುವುದಿಲ್ಲವೋ ಅವನೆಂದಿಗೂ ಪ್ರಭುವನ್ನು ನೋಡುವುದಿಲ್ಲ. 15 ನಿಮ್ಮಲ್ಲಿ ಯಾರೂ ದೇವರ ಕೃಪೆಯನ್ನು ಕಳೆದುಕೊಳ್ಳದಂತೆ ಎಚ್ಚರದಿಂದಿರಿ. ನಿಮ್ಮಲ್ಲಿ ಯಾವನೂ ಚಿಗುರಿ ಬೆಳೆಯುವ ವಿಷದ ಬೇರಿನಂತಾಗದಂತೆ ಎಚ್ಚರಿಕೆಯಿಂದಿರಿ. ಅಂಥವನಿಂದ ನಿಮ್ಮ ಇಡೀ ಗುಂಪೇ ಹಾಳಾಗುವುದು. 16 ನಿಮ್ಮಲ್ಲಿ ಯಾರೂ ಮಾಡದಂತೆ ಜಾಗ್ರತೆಯಿಂದಿರಿ; ಪ್ರಾಪಂಚಿಕನಾದ ಏಸಾವನಂತೆ ಆಗದಿರಲು ಎಚ್ಚರದಿಂದಿರಿ. ಹಿರಿಯ ಮಗನಾದ ಏಸಾವನು ತನ್ನ ತಂದೆಯ ಸಮಸ್ತಕ್ಕೂ ವಾರಸುದಾರನಾಗುತ್ತಿದ್ದನು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಎಲ್ಲವನ್ನೂ ಮಾರಿದನು. 17 ನಿಮಗೇ ತಿಳಿದಿರುವಂತೆ, ಆ ಬಳಿಕ ಅವನು ತನ್ನ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಹಳವಾಗಿ ಗೋಳಾಡಿದನು. ಏಸಾವನು ತಾನು ಮಾಡಿದ್ದನ್ನು ಬದಲಾಯಿಸಲಾಗದ್ದರಿಂದ ತಂದೆಯ ಆಶೀರ್ವಾದವು ಅವನಿಗೆ ದೊರೆಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International