Revised Common Lectionary (Semicontinuous)
ರಚನೆಗಾರ: ಆಸಾಫ.
74 ದೇವರೇ, ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವೆಯಾ?
ನಿನ್ನ ಜನರ ಮೇಲೆ ಇನ್ನೂ ಕೋಪದಿಂದಿರುವೆಯಾ?
2 ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ.
ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ.
ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.
3 ಬಹುಕಾಲದಿಂದ ಹಾಳುಬಿದ್ದಿರುವ ಕಟ್ಟಡಗಳ ಬಳಿಗೆ ಆಗಮಿಸು.
ಶತ್ರುವು ನಾಶಮಾಡಿದ ನಿನ್ನ ಪವಿತ್ರ ಸ್ಥಳಕ್ಕೆ ಹಿಂತಿರುಗಿ ಬಾ.
4 ಆಲಯದಲ್ಲಿ ಶತ್ರುಗಳು ಯುದ್ಧಾರ್ಭಟ ಮಾಡಿದರು.
ಆಲಯದಲ್ಲಿ ತಮ್ಮ ಧ್ವಜಾರೋಹಣ ಮಾಡಿ ತಮ್ಮ ಜಯವನ್ನು ಸೂಚಿಸಿದರು.
5 ಶತ್ರು ಸೈನಿಕರಾದರೋ ಕಳೆಗುದ್ದಲಿಯಿಂದ
ಕಳೆ ಕೀಳುತ್ತಿರುವ ಜನರಂತಿದ್ದಾರೆ.
6 ನಿನ್ನ ಆಲಯದ ಕೆತ್ತನೆ ಕೆಲಸಗಳನ್ನು ಅವರು ಕೊಡಲಿಗಳಿಂದಲೂ
ಮಚ್ಚುಗತ್ತಿಗಳಿಂದಲೂ ಕತ್ತರಿಸಿ ಹಾಕಿದರು.
7 ಆ ಸೈನಿಕರು ನಿನ್ನ ಪವಿತ್ರ ಸ್ಥಳವನ್ನು ಸುಟ್ಟು ನೆಲಸಮಮಾಡಿದರು.
ಆ ಆಲಯವು ನಿನ್ನ ನಾಮ ಘನತೆಗಾಗಿ ಕಟ್ಟಲ್ಪಟ್ಟಿತ್ತಲ್ಲಾ!
8 ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ
ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.
9 ನಮ್ಮ ಯಾವ ಚಿಹ್ನೆಗಳೂ ನಮಗೆ ಕಾಣಲಿಲ್ಲ.
ಪ್ರವಾದಿಗಳಲ್ಲಿ ಯಾರೂ ಉಳಿದಿಲ್ಲ.
ಯಾರಿಗೂ ದಿಕ್ಕೇ ತೋಚುತ್ತಿಲ್ಲ.
10 ದೇವರೇ, ಇನ್ನೆಷ್ಟರವರೆಗೆ ಶತ್ರುಗಳು ನಮ್ಮನ್ನು ಗೇಲಿಮಾಡುತ್ತಿರಬೇಕು?
ನಿನ್ನ ಹೆಸರಿಗೆ ಅವರು ಅವಮಾನ ಮಾಡುತ್ತಲೇ ಇರಬೇಕೇ?
11 ನೀನು ನಮ್ಮನ್ನು ಬಹು ಕಠಿಣವಾಗಿ ದಂಡಿಸಿದ್ದೇಕೆ?
ನಿನ್ನ ಮಹಾಶಕ್ತಿಯಿಂದ ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿರುವಿಯಲ್ಲಾ!
12 ದೇವರೇ, ಬಹುಕಾಲದಿಂದ ನೀನು ನಮ್ಮರಾಜ.
ಈ ದೇಶದಲ್ಲಿ ಅನೇಕ ಯುದ್ಧಗಳನ್ನು ಗೆಲ್ಲಲು ನೀನು ನಮಗೆ ಸಹಾಯಮಾಡಿದೆ.
13 ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ.
ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.
14 ಲಿವ್ಯಾತಾನನ ತಲೆಗಳನ್ನು ಜಜ್ಜಿಹಾಕಿ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡಿದಾತನು ನೀನೇ.
15 ತೊರೆಗಳೂ ನದಿಗಳೂ ಹರಿಯುವಂತೆ ಮಾಡುವಾತನು ನೀನೇ.
ನದಿಗಳನ್ನು ಒಣಗಿಸುವಾತನೂ ನೀನೇ.
16 ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ.
ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
17 ಭೂಮಿಯ ಮೇಲೆ ಮೇರೆಗಳನ್ನು ಹಾಕಿರುವಾತನು ನೀನೇ.
ಬೇಸಿಗೆಕಾಲವನ್ನೂ ಚಳಿಗಾಲವನ್ನೂ ನಿರ್ಮಿಸಿದಾತನು ನೀನೇ.
18 ದೇವರೇ, ಇವುಗಳನ್ನೆಲ್ಲಾ ಜ್ಞಾಪಿಸಿಕೊ.
ವೈರಿಯು ನಿನಗೆ ಮಾಡಿದ ಅವಮಾನವನ್ನು ನೆನಸಿಕೊ!
ಆ ಮೂರ್ಖರು ನಿನ್ನ ನಾಮವನ್ನು ದ್ವೇಷಿಸುತ್ತಾರೆ.
19 ದೇವರೇ, ನಿನ್ನ ಪಾರಿವಾಳವನ್ನು ಆ ದುಷ್ಟ ಪ್ರಾಣಿಗಳು ತೆಗೆದುಕೊಳ್ಳದಿರಲಿ.
ನಿನ್ನ ಬಡಜನರನ್ನು ಮರೆತುಬಿಡಬೇಡ.
20 ನಿನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊ.
ಈ ದೇಶದ ಕತ್ತಲೆಯ ಸ್ಥಳಗಳಲ್ಲೆಲ್ಲಾ ಹಿಂಸೆಯೂ ತುಂಬಿಕೊಂಡಿದೆ.
21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ.
ಅವರಿಗೆ ಕೇಡಾಗಲು ಬಿಡಬೇಡ.
ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.
22 ದೇವರೇ, ಎದ್ದು ಹೋರಾಡು!
ನಿನಗೆ ಸವಾಲೊಡ್ಡಿದ ಆ ನಿಂದಕರನ್ನು ಜ್ಞಾಪಿಸಿಕೊ!
23 ನಿನ್ನ ವೈರಿಗಳ ಆರ್ಭಟವನ್ನು ಮರೆತುಬಿಡಬೇಡ.
ಅವರು ನಿನಗೆ ಪದೇಪದೇ ಅವಮಾನಮಾಡಿದರು.
27 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.
2 ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
3 “ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
4 ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
5 ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
6 ಜನರು ನನ್ನ ಬಳಿಗೆ ಬರುವರು.
ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”
ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು
7 ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?
8 ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.
9 ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.
10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು. 11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.
ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.
12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.
ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ. 13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.
ದೇವಾಲಯಕ್ಕೆ ಯೇಸುವಿನ ಪ್ರವೇಶ
(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)
45 ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ, 46 ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’”(B) ಎಂದನು.
47 ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು. 48 ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International