Revised Common Lectionary (Semicontinuous)
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
4 ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
5 ಅವರು ಹಸಿವೆಯಿಂದಲೂ
ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
6 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
7 ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
8 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
9 ಆತನು ಬಾಯರಿದವರನ್ನು ನೀರಿನಿಂದಲೂ
ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.
ಇಸ್ರೇಲರು ಧನಿಕರಾದುದರಿಂದ ವಿಗ್ರಹಾರಾಧನೆಗೆ ನಡಿಸಲ್ಪಟ್ಟರು
10 ಇಸ್ರೇಲ್ ಅಧಿಕ ಹಣ್ಣುಗಳನ್ನು
ಕೊಡುವ ದ್ರಾಕ್ಷಿಬಳ್ಳಿಯಂತಿದೆ.
ಆದರೆ ಇಸ್ರೇಲ್ ಅಭಿವೃದ್ಧಿ ಹೊಂದಿದ ಹಾಗೆ
ಅವರು ಸುಳ್ಳುದೇವರುಗಳನ್ನು ಪೂಜಿಸಲು ಹೆಚ್ಚುಹೆಚ್ಚು ವೇದಿಕೆಗಳನ್ನು ಕಟ್ಟಿದರು.
ಅವರ ದೇಶವು ಉತ್ತಮವಾಗುತ್ತಾ ಬರುತ್ತಿರುವಾಗ
ಅವರು ತಮ್ಮ ಸುಳ್ಳುದೇವರುಗಳಿಗೆ ಉತ್ತಮ ಕಲ್ಲುಗಳಿಂದ ವೇದಿಕೆಗಳನ್ನು ಕಟ್ಟಲು ಪ್ರಾರಂಭಿಸಿದರು.
2 ಇಸ್ರೇಲ್ ಜನರು ದೇವರನ್ನು ಮೋಸಪಡಿಸಲು ನೋಡಿದರು.
ಆದರೆ ಈಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಯೆಹೋವನು ಅವರು ಯಜ್ಞವೇದಿಕೆಗಳನ್ನು ನಾಶಮಾಡುವನು.
ಅವರ ಸ್ಮಾರಕಕಲ್ಲುಗಳನ್ನು ಆತನು ಪುಡಿ ಮಾಡುವನು.
ಇಸ್ರೇಲರ ದುಷ್ಟ ಯೋಜನೆಗಳು
3 ಈಗ ಇಸ್ರೇಲರು ಹೇಳುವುದೇನೆಂದರೆ, “ನಮಗೆ ರಾಜನಿಲ್ಲ, ನಾವು ಯೆಹೋವನನ್ನು ಗೌರವಿಸುವದಿಲ್ಲ. ಆತನ ಅರಸನು ನಮಗೇನೂ ಮಾಡಲು ಸಾಧ್ಯವಿಲ್ಲ.”
4 ಅವರು ವಾಗ್ದಾನ ಮಾಡುತ್ತಾರೆ. ಆದರೆ ಅದು ಕೇವಲ ಸುಳ್ಳು, ಅವರು ಕೊಟ್ಟ ಮಾತನ್ನು ನಡಿಸುವದಿಲ್ಲ. ಬೇರೆ ದೇಶಗಳವರೊಂದಿಗೆ ಅವರು ಒಪ್ಪಂದ ಮಾಡುತ್ತಾರೆ. ದೇವರು ಆ ಒಪ್ಪಂದವನ್ನು ಒಪ್ಪುವುದಿಲ್ಲ. ಅವರ ನ್ಯಾಯಾಧೀಶರು ಉತ್ತ ಹೊಲದಲ್ಲಿ ಬೆಳೆಯುವ ವಿಷದ ಹಣಜಿಯಂತಿದ್ದಾರೆ.
5 ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು. 6 ಅಶ್ಶೂರದ ಅರಸನಿಗೆ ಬಹುಮಾನವಾಗಿ ಅದು ಒಯ್ಯಲ್ಪಡುವುದು; ಅವನು ಇಸ್ರೇಲರ ನಾಚಿಕೆಗೆಟ್ಟ ವಿಗ್ರಹವನ್ನು ಇಟ್ಟುಕೊಳ್ಳುವನು. ಇಸ್ರೇಲ್ ತನ್ನ ವಿಗ್ರಹಕ್ಕಾಗಿ ನಾಚಿಕೆಪಡುವದು. 7 ಸಮಾರ್ಯದ ಸುಳ್ಳುದೇವರು ನಾಶಮಾಡಲ್ಪಡುವದು. ಅದು ಮರದ ಹಲಗೆಯ ತುಂಡೊಂದು ನೀರಿನ ಮೇಲೆ ತೇಲುವಂತಿರುವದು.
8 ಇಸ್ರೇಲ್ ಪಾಪ ಮಾಡುತ್ತಾ ಇನ್ನೂ ಹೆಚ್ಚಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿತು. ಆವೆನ್‌ನಲ್ಲಿರುವ ಎತ್ತರವಾದ ಸ್ಥಳ ನಾಶಮಾಡಲ್ಪಡುವದು. ಅದರ ಮೇಲೆ ಮುಳ್ಳುಗಿಡಗಳೂ ಹಣಜಿಗಳೂ ಬೆಳೆಯುವವು. ಆಗ ಅವರು ಪರ್ವತಗಳಿಗೆ, “ನಮ್ಮನ್ನು ಮುಚ್ಚಿರಿ” ಎಂದೂ ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ” ಎಂದೂ ಹೇಳುವರು.
ಇಸ್ರೇಲ್ ತನ್ನ ಪಾಪದ ಪ್ರತಿಫಲವನ್ನು ಅನುಭವಿಸುವದು
9 “ಇಸ್ರೇಲೇ, ನೀನು ಗಿಬ್ಯದವರ ಕಾಲದಿಂದಲೂ ಪಾಪ ಮಾಡುತ್ತಲೇ ಬಂದಿರುವೆ. (ಆ ಜನರು ಅಲ್ಲಿ ಪಾಪವನ್ನು ಮಾಡುತ್ತಲೇ ಇದ್ದಾರೆ.) ಗಿಬ್ಯದ ಆ ದುಷ್ಟ ಜನರನ್ನು ಯುದ್ಧವು ಹಿಡಿದುಕೊಳ್ಳುವುದು. 10 ಅವರನ್ನು ಶಿಕ್ಷಿಸಲು ನಾನು ಬರುವೆನು. ಸೈನ್ಯಗಳು ಒಟ್ಟಾಗಿ ಅವರಿಗೆ ವಿರುದ್ಧವಾಗಿ ಬರುವವು. ಅವರು ಬಂದು ಇಸ್ರೇಲರನ್ನು ಅವರಿಬ್ಬರ ಪಾಪಗಳಿಗಾಗಿ ಶಿಕ್ಷಿಸುವರು.
11 “ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”
12 ನೀನು ಒಳ್ಳೆಯತನವನ್ನು ಬಿತ್ತಿದರೆ ಪ್ರೀತಿಯೆಂಬ ಬೆಳೆಯನ್ನು ಕೊಯ್ಯುವೆ. ನಿನ್ನ ನೆಲವನ್ನು ಉಳುಮೆ ಮಾಡು. ಆಗ ನೀನು ಯೆಹೋವನೊಂದಿಗೆ ಬೆಳೆಯನ್ನು ಕೊಯ್ಯುವೆ. ಆತನು ಬರುವನು. ಮತ್ತು ಆತನ ಒಳ್ಳೆಯತನವು ನಿನ್ನ ಮೇಲೆ ಮಳೆಯಂತೆ ಸುರಿಯುವದು.
13 ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ. 14 ನಿನ್ನ ಸೈನ್ಯಕ್ಕೆ ರಣರಂಗದ ಸ್ವರವು ಕೇಳಿಸುವದು. ನಿನ್ನ ಕೋಟೆಗಳೆಲ್ಲವೂ ಕೆಡವಲ್ಪಡುವದು. ಬೇತ್‌ಅರ್ಬೇಲನ್ನು ಶಲ್ಮಾನನು ಕೆಡವಿದಂತೆ ಆಗುವದು. ಆ ಯುದ್ಧದ ಸಮಯದಲ್ಲಿ ತಾಯಿಯು ತನ್ನ ಮಕ್ಕಳೊಂದಿಗೆ ಕೊಲ್ಲಲ್ಪಡುವಳು. 15 ಆ ದಿನದಲ್ಲಿ ಬೇತೇಲು ನಿನಗೆ ಆ ದುರ್ಗತಿಯನ್ನು ತರುವದು. ಯಾಕೆಂದರೆ ನೀನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ. ಅದು ಪ್ರಾರಂಭವಾದಾಗ ಇಸ್ರೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International