Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 11

ರಚನೆಗಾರ: ದಾವೀದ.

11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
    ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?

ದುಷ್ಟರು ಬೇಟೆಗಾರರಂತಿದ್ದಾರೆ;
    ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
    ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
ಅಸ್ತಿವಾರಗಳೇ ನಾಶವಾಗುತ್ತಿದ್ದರೆ
    ನೀತಿವಂತನು ಏನು ಮಾಡಲಾದೀತು?

ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
    ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
    ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
ಯೆಹೋವನು ನೀತಿವಂತರಿಗಾಗಿ ಹುಡುಕುವನು.
    ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
    ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
    ನೀತಿವಂತರು ಆತನ ಮುಖವನ್ನು ನೋಡುವರು.

ಯೆಶಾಯ 24:1-13

ದೇವರು ಇಸ್ರೇಲನ್ನು ಶಿಕ್ಷಿಸುವನು

24 ಇಗೋ, ಯೆಹೋವನು ಈ ದೇಶವನ್ನು ನಾಶಮಾಡುವನು. ಆತನು ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವನು. ಜನರನ್ನು ಅತಿದೂರಕ್ಕೆ ಚದರಿಸಿಬಿಡುವನು. ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು. ಎಲ್ಲಾ ಜನರು ದೇಶದಿಂದ ಹೊರಕ್ಕೆ ಹಾಕಲ್ಪಡುವರು. ದೇಶದ ಸಂಪತ್ತನ್ನು ಕಿತ್ತುಕೊಳ್ಳಲಾಗುವದು. ಇದು ಯೆಹೋವನ ಆಜ್ಞೆಯಾಗಿರುವದರಿಂದ ನೆರವೇರುವದು. ದೇಶವು ನಿರ್ಜನವಾಗಿ ಶೋಕಿಸುವದು. ಇಡೀ ಪ್ರಪಂಚವೇ ನಿರ್ಜನವಾಗಿ ಬಲಹೀನವಾಗುವದು. ಈ ಪ್ರಪಂಚದ ಪ್ರಸಿದ್ಧ ಜನರೂ ಬಲಹೀನರಾಗುವರು.

ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು. ಆ ದೇಶದಲ್ಲಿ ವಾಸಿಸುವ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಆದ್ದರಿಂದ ದೇವರು ಈ ದೇಶವನ್ನು ನಾಶಮಾಡಲು ತೀರ್ಮಾನಿಸಿದನು. ಜನರು ಶಿಕ್ಷಿಸಲ್ಪಡುವರು. ಕೆಲವೇ ಮಂದಿ ಮಾತ್ರ ಉಳಿಯುವರು.

ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವದಿಲ್ಲ. ಸಂತಸದ ಗದ್ದಲವು ಕೇಳಿಸುವದಿಲ್ಲ. ಆ ಶಬ್ದಗಳೆಲ್ಲಾ ನಿಂತುಹೋಗಿವೆ. ಹಾರ್ಪ್‌ವಾದ್ಯದ ಮತ್ತು ದಮ್ಮಡಿಗಳ ಶಬ್ದವು ನಿಂತಿದೆ. ಜನರು ದ್ರಾಕ್ಷಾರಸ ಕುಡಿಯುತ್ತಿರುವಾಗ ಹಾಡು ಹಾಡುವುದಿಲ್ಲ. ಅವರು ಕುಡಿಯುವ ಮದ್ಯವು ಅವರಿಗೆ ಕಹಿಯಾಗಿದೆ.

10 ಈ ನಗರಕ್ಕೆ “ಪೂರ್ಣ ಗಲಿಬಿಲಿ” ಎಂಬುದೇ ತಕ್ಕ ಹೆಸರು. ನಗರವು ಕೆಡವಲ್ಪಟ್ಟಿತು. ಜನರು ಮನೆಗಳಿಗೆ ಪ್ರವೇಶಿಸಲಿಕ್ಕಾಗದು. ಕದಗಳನ್ನು ತೆರೆಯಲು ಸಾಧ್ಯವಾಗದು. 11 ಮಾರುಕಟ್ಟೆಗಳಲ್ಲಿ ಜನರು ಈಗಲೂ ದ್ರಾಕ್ಷಾರಸವನ್ನು ಕೇಳುವರು. ಆದರೆ ಸಂತೋಷವೇ ಹೋಗಿಬಿಟ್ಟಿದೆ. ಹರ್ಷವು ಬಹುದೂರ ಒಯ್ಯಲ್ಪಟ್ಟಿದೆ. 12 ನಗರಕ್ಕೆ ನಾಶನವು ಕಾದಿದೆ; ಪುರದ್ವಾರವು ನಜ್ಜುಗುಜ್ಜಾಗಿದೆ.

13 ಕೊಯ್ಯುವ ಕಾಲದಲ್ಲಿ ಜನರು ಆಲೀವ್ ಮರಗಳನ್ನು ಹೊಡೆದು ಕಾಯಿಗಳನ್ನು ಉದುರಿಸುವರು.
    ಆದರೆ ಕೆಲವು ಕಾಯಿಗಳು ಮರದಲ್ಲಿ ಉಳಿಯುವವು.
ಜನಾಂಗಗಳ ಮಧ್ಯದಲ್ಲಿ ದೇಶವೂ ಹೀಗೆಯೇ ಇರುವದು.

ಇಬ್ರಿಯರಿಗೆ 11:17-28

17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.

20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.

22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.

23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.

24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.

27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International