Revised Common Lectionary (Semicontinuous)
ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
ನಮ್ಮನ್ನು ನಾಶಗೊಳಿಸಿರುವೆ.
ನಮ್ಮನ್ನು ಪುನರ್ಸ್ಥಾಪಿಸು.
2 ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
ನಮ್ಮ ದೇಶವು ಕುಸಿದುಬೀಳುತ್ತಿದೆ;
ಅದನ್ನು ಸರಿಪಡಿಸು.
3 ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
4 ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
ಈಗ ಅವರು ಶತ್ರುಗಳಿಂದ ಪಾರಾಗಬಹುದು.
5 ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!
6 ದೇವರು ತನ್ನ ಆಲಯದೊಳಗೆ ಹೀಗೆಂದನು:
“ನಾನು ಅವರಿಗೆ ಶೆಕೆಮನ್ನು ಕೊಡುವೆನು;
ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
7 ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
ಎಫ್ರಾಯೀಮ್ ನನ್ನ ಶಿರಸ್ತ್ರಾಣ.
ಯೆಹೂದ ನನ್ನ ರಾಜದಂಡ.
8 ಮೋವಾಬ್ ನನ್ನ ಸ್ನಾನಪಾತ್ರೆ.
ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”
9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!
ಯೆಹೋವನ ಬಳಿಗೆ ಹಿಂದಿರುಗಿರಿ
14 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. 2 ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:
“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
ಕರುಣೆಯನ್ನು ತೋರಿಸುವವನು ನೀನೇ.”
ಯೆಹೋವನು ಇಸ್ರೇಲನ್ನು ಕ್ಷಮಿಸುವನು
4 ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
5 ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
ನೆಲದಾವರೆಯಂತೆ ಇಸ್ರೇಲ್ ಅರಳುವನು.
ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
6 ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
ಅವನು ಗಮಗಮಿಸುವನು.
7 ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”
ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ
8 “ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ.
ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
ನಿನ್ನ ಫಲಗಳು ನನ್ನಿಂದ ಬರುವದು.”
ಅಂತಿಮ ಸಲಹೆ
9 ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
ಪಾಪಿಗಳು ಅವುಗಳಿಂದ ಸಾಯುವರು.
ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ
(ಮತ್ತಾಯ 6:25-34,19-21)
22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?
27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!
29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.
Kannada Holy Bible: Easy-to-Read Version. All rights reserved. © 1997 Bible League International