Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 50:1-8

ರಚನೆಗಾರ: ಆಸಾಫ.

50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
    ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
    ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
    ಆತನ ಸುತ್ತಲೂ ಬಿರುಗಾಳಿ ಬೀಸುವುದು.
ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
    ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
    ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.

ದೇವರೊಬ್ಬನೇ ನ್ಯಾಯಾಧಿಪತಿ;
    ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.

ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
    ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
    ದೇವರಾದ ನಾನೇ ನಿಮ್ಮ ದೇವರು!
ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
    ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.

ಕೀರ್ತನೆಗಳು 50:22-23

22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

ಯೆಶಾಯ 9:8-17

ದೇವರು ಇಸ್ರೇಲನ್ನು ಶಿಕ್ಷಿಸುವನು

ಯಾಕೋಬನ ಜನರಿಗೆ, ನನ್ನ ದೇವರಾದ ಯೆಹೋವನು ಆಜ್ಞೆಯನ್ನು ಕೊಟ್ಟಿದ್ದಾನೆ. ಇಸ್ರೇಲರಿಗೆ ವಿರುದ್ಧವಾಗಿರುವ ಈ ಆಜ್ಞೆಯು ನೆರವೇರಲ್ಪಡುವುದು. ಆಗ ಎಫ್ರಾಯೀಮಿನಲ್ಲಿರುವ (ಇಸ್ರೇಲಿನಲ್ಲಿರುವ) ಪ್ರತಿಯೊಬ್ಬನೂ, ಸಮಾರ್ಯದ ನಾಯಕರೂ, ದೇವರು ತಮ್ಮನ್ನು ಶಿಕ್ಷಿಸಿದ್ದಾನೆಂದು ತಿಳಿದುಕೊಳ್ಳುವರು.

ಅವರು ಬಹು ಗರ್ವಿಷ್ಠರಾಗಿ ಹೆಚ್ಚಳಪಡುತ್ತಿದ್ದಾರೆ. ಅವರು ಹೇಳುವುದೇನೆಂದರೆ, 10 “ಈ ಇಟ್ಟಿಗೆಗಳು ಕೆಳಗೆ ಬಿದ್ದರೂ ನಾವು ಅವುಗಳನ್ನು ಮತ್ತೆ ಕಟ್ಟುತ್ತೇವೆ. ನಾವು ಅದನ್ನು ಬಲವಾದ ಕಲ್ಲುಗಳಿಂದ ಕಟ್ಟುವೆವು. ಈ ಸಣ್ಣಸಣ್ಣ ಮರಗಳು ಕಡಿದುಹಾಕಲ್ಪಟ್ಟರೂ ಆ ಸ್ಥಳದಲ್ಲಿ ನಾವು ದೇವದಾರು ಮರಗಳನ್ನು ನೆಡುವೆವು. ಆ ದೇವದಾರು ಮರಗಳು ಎತ್ತರವಾಗಿಯೂ ಬಲವಾಗಿಯೂ ಇರುತ್ತವೆ.”

11 ಹೀಗೆ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಯುದ್ಧ ಮಾಡುವವರನ್ನು ಕಂಡುಹಿಡಿಯುವನು. ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಎಬ್ಬಿಸುವನು. 12 ಯೆಹೋವನು ಪೂರ್ವದಿಂದ ಅರಾಮ್ಯರನ್ನೂ ಪಶ್ಚಿಮದಿಂದ ಫಿಲಿಷ್ಟಿಯರನ್ನೂ ಕರೆತರುವನು. ಆ ಶತ್ರುಗಳು ಇಸ್ರೇಲರನ್ನು ಅವರ ಸೈನ್ಯದೊಂದಿಗೆ ಸೋಲಿಸಿಬಿಡುವರು. ಆದರೆ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡಿರುವುದರಿಂದ ಅವರನ್ನು ಶಿಕ್ಷಿಸಲು ಇನ್ನೂ ಸಿದ್ಧನಾಗಿರುವನು.

13 ದೇವರು ಜನರನ್ನು ಶಿಕ್ಷಿಸಿದರೂ ಅವರು ಪಾಪ ಮಾಡುವದನ್ನು ನಿಲ್ಲಿಸುವದಿಲ್ಲ. ಅವರು ಆತನ ಬಳಿಗೆ ಹಿಂದಿರುಗಿಬರುವದಿಲ್ಲ. ಸರ್ವಶಕ್ತನಾದ ಯೆಹೋವನನ್ನು ಅವರು ಹಿಂಬಾಲಿಸುವುದಿಲ್ಲ. 14 ಆದ್ದರಿಂದ ಯೆಹೋವನು ಇಸ್ರೇಲರ ತಲೆಯನ್ನೂ ಬಾಲವನ್ನೂ ಕತ್ತರಿಸುವನು. ಒಂದೇ ದಿವಸದಲ್ಲಿ ಯೆಹೋವನು ಮರದ ಕಾಂಡವನ್ನೂ ಕೊಂಬೆಗಳನ್ನೂ ಕತ್ತರಿಸಿಬಿಡುವನು. 15 ತಲೆ ಅಂದರೆ ಹಿರಿಯರು ಮತ್ತು ಪ್ರಮುಖರು. ಬಾಲವೆಂದರೆ ಸುಳ್ಳುಪ್ರವಾದಿಗಳು.

16 ಜನರಿಗೆ ಮಾರ್ಗದರ್ಶನ ಮಾಡುವ ನಾಯಕರು ಜನರನ್ನು ತಪ್ಪುದಾರಿಯಲ್ಲಿ ನಡಿಸುತ್ತಿದ್ದಾರೆ. ಅವರನ್ನು ಹಿಂಬಾಲಿಸುವ ಜನರು ನಾಶವಾಗುವರು. 17 ಜನರೆಲ್ಲರೂ ದುಷ್ಟರಾಗಿದ್ದಾರೆ. ಆದ್ದರಿಂದ ಯೆಹೋವನು ಯುವಕರಲ್ಲಿ ಸಂತೋಷಿಸುವದಿಲ್ಲ. ಅವರ ವಿಧವೆಯರಿಗೆ ಮತ್ತು ಅನಾಥರಿಗೆ ದೇವರು ದಯೆ ತೋರಿಸುವುದಿಲ್ಲ; ಯಾಕೆಂದರೆ ಎಲ್ಲಾ ಜನರು ದುಷ್ಟರಾಗಿದ್ದಾರೆ. ಅವರು ದೇವರಿಗೆ ವಿರುದ್ಧವಾಗಿ ನಡೆಯುತ್ತಾರೆ. ಅವರು ಸುಳ್ಳಾಡುತ್ತಾರೆ.

ಆದ್ದರಿಂದ ದೇವರು ಅವರ ಮೇಲೆ ಕೋಪದಿಂದಲೇ ಇರುವನು; ಅವರನ್ನು ದಂಡಿಸುತ್ತಲೇ ಇರುವನು.

ರೋಮ್ನಗರದವರಿಗೆ 9:1-9

ದೇವರು ಮತ್ತು ಯೆಹೂದ್ಯರು

ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.

ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International